ಬೆಂಗಳೂರು: ತ್ರಿವಳಿ ರಾಜ್ಯಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯ (Tungabhadra Dam) ಈ ವರ್ಷದ ನೀರಿನ ಕೊರತೆಯಿಂದ (water crisis) ಬಹುತೇಕ ಖಾಲಿಯಾಗಿದ್ದು, ಈ ಬೇಸಿಗೆ (Summer) ಇನ್ನಷ್ಟು ಬರ್ಬರವಾಗುವ ಆತಂಕ ತಲೆದೋರಿದೆ. 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 4 ಟಿಎಂಸಿ ನೀರು ಸಂಗ್ರಹವಾಗಿದ್ದು, ಡೆಡ್ ಸ್ಟೋರೇಜ್ (Dead storage) ಹಂತಕ್ಕೆ ಬಂದು ತಲುಪಿದೆ.
ಜಲಾಶಯದಲ್ಲಿ ತಳದಲ್ಲಿರುವ ಮೂರು ಟಿಎಂಸಿ ನೀರನ್ನು ಡೆಡ್ ಸ್ಟೋರೇಜ್ ಎಂದು ಪರಿಗಣಿಸಲಾಗುತ್ತದೆ. ಇದು ಸಾಮಾನ್ಯವಾಗಿ ಬಳಕೆಗೆ ಸಿಗುವುದಿಲ್ಲ. ಉಳಿದ ಒಂದು ಟಿಎಂಸಿ ನೀರಲ್ಲೇ ಹೊಸಪೇಟೆ ಜನ ಕಾಲ ಕಳೆಯುವ ದುಃಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿದೆ. ಉಳಿದ ಒಂದು ಟಿಎಂಸಿ ನೀರನ್ನು ಮಳೆಗಾಲ ಬರುವವರೆಗೂ ಹೊಸಪೇಟೆ ನಗರದ ಜನ ಕಾಯ್ದುಕೊಳ್ಳಬೇಕಿದೆ.
ಆದರೆ ಒಂದು ಟಿಎಂಸಿ ನೀರನ್ನು ಜೂನ್ ತಿಂಗಳ ವರೆಗೆ ಕುಡಿಯುವುದಕ್ಕೆ ಮಾತ್ರ ಬಳಸಬಹುದಾಗಿದೆ. ಇತರೆ ಉದ್ದೇಶಗಳಿಗೆ ಬಳಸಿದರೆ ಈ ನೀರು ಕೂಡ ಸಾಕಾಗುವುದಿಲ್ಲ. ಈ ವರ್ಷ ಹಿಂಗಾರು, ಮುಂಗಾರು ಮಳೆ ಬಾರದೇ ಇರುವುದರಿಂದ ಜಲಾಶಯ ಭರ್ತಿ ಆಗಿಲ್ಲ. 90 ಟಿಎಂಸಿ ವರೆಗೆ ಮಾತ್ರ ನೀರು ಸಂಗ್ರಹಣೆ ಆಗಿತ್ತು.
ಇದರ ಜತೆಗೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸುತ್ತಮುತ್ತ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿತವಾಗಿದೆ. ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿತಗೊಂಡಿದೆ. ಶಾಸಕ ಶ್ರೀನಿವಾಸ್, ಡಿಸಿ ದಿವಾಕರ್ ಮನವಿ ಮೇರೆಗೆ ಎರಡು ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ.
ಭದ್ರಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಇದೀಗ ಹರಪನಹಳ್ಳಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ತಾಲೂಕಿನ ನೂರಾರು ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ. ಕೊರ್ಲಹಳ್ಳಿ, ಸಿಂಗಟಾಲೂರು, ಬನ್ನಿಗೋಳ, ನಿಲೋಗಿ ಜಾಕ್ ವೆಲ್‌ಗಳ ಮೂಲಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಸದ್ಯಕ್ಕೆ ಭದ್ರಾ ಡ್ಯಾಂನಿಂದ ಬಿಟ್ಟ ನೀರು ನಾಲ್ಕು ತಾಲೂಕುಗಳ ಜನರಿಗೆ ಕುಡಿಯುವುದಕ್ಕೆ ಬಳಕೆಯಾಗುತ್ತಿದೆ.
ಆದರೆ ರೈತರ ಪಂಪ್ ಸೆಟ್‌ಗಳಿಗೆ ಸಂಪರ್ಕಿತ ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದೆ. ಬೆಳೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸುವುದನ್ನು ನಿಷೇಧಿಸಲಾಗಿದೆ. ತುಂಗಭದ್ರಾ ನದಿ ಪಾತ್ರದ ಜನರು ನದಿಯಿಂದ ನೀರು ಎತ್ತುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರಿಂದ ಬೆಳೆಗಳು ಒಣಗುವ ಭೀತಿ ಎದುರಿಸುತ್ತಿವೆ.
ಇದನ್ನೂ ಓದಿ: ಭೂಮಿಯ ಒಳಗೊಂದು ಬೃಹತ್ ಜಲಾಶಯ ಪತ್ತೆ! ಇದರ ಗಾತ್ರ ನೀವು ಊಹಿಸಲಾರಿರಿ!