ಬೆಂಗಳೂರು: ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ಬೆಂಗಳೂರಿಗೆ (Bangalore) ಸದ್ಯದಲ್ಲೇ ಕುಡಿಯುವ ನೀರಿನ (Drinking Water) ಬೆಲೆ ಏರಿಕೆ ಬಿಸಿ (Water Price Hike) ಮುಟ್ಟಿಸುವುದಾಗಿ ಹೇಳಿದ್ದರು. ಬಳಿಕ ನೀರಿನ ದರ ಏರಿಕೆ ಕುರಿತು ಚುರುಕಾಗಿರುವ ಜಲಮಂಡಳಿ (BWSSB), ಏರಿಕೆ ಪ್ರಸ್ತಾವವನ್ನು ಸರ್ಕಾರದ ಮುಂದಿಡಲು ಸಿದ್ಧಪಡಿಸಿದೆ. ಆದರೆ ವಾಸ್ತವ ಏನೆಂದರೆ, ಸ್ವತಃ ಸರ್ಕಾರವೇ ಜಲಮಂಡಳಿಗೆ ಕೋಟಿಗಟ್ಟಲೆ ಬಾಕಿ ಉಳಿಸಿಕೊಂಡಿದೆ! ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವೂ ಹಲವು ಕೋಟಿ ಬಾಕಿ ಉಳಿಸಿಕೊಂಡಿದೆ!
ಭಾರತೀಯ ಸೈನ್ಯ ಸೇರಿದಂತೆ ಅನೇಕ ದೊಡ್ಡ ದೊಡ್ಡ ಸರ್ಕಾರಿ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು ಕೋಟಿಗಟ್ಟಲೆ ಹಣ ಜಲಮಂಡಳಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿವೆ. “ಜಲಮಂಡಳಿಯಲ್ಲಿ ನೌಕಕರಿಗೆ ಸಂಬಳ ನೀಡಲು ಹಣವಿಲ್ಲ” ಎಂದು ಡಿಕೆಶಿ ಹೇಳಿದ್ದರು. ಹಣವಿಲ್ಲ ಯಾಕೆಂದರೆ ಇದೇ ಕಾರಣಕ್ಕೆ! ಇದೀಗ, ಈ ಭಾರವನ್ನೆಲ್ಲ ಶ್ರೀಸಾಮಾನ್ಯನ ತಲೆಯ ಮೇಲೆ ಹಾಕಿ ನಿರಾಳವಾಗಲು ಸರ್ಕಾರ ಚಿಂತನೆ ನಡೆಸಿರುವುದು ಕಂಡುಬಂದಿದೆ.
ಕೋಟಿ ಕೋಟಿ ಕರೆಂಟ್ ಬಿಲ್ ಕಟ್ಟದೇ ಕಂಗಾಲಾದ ಜಲಮಂಡಳಿ ಇದರ ಹೊರೆ ತಪ್ಪಿಸಲು ಶ್ರೀಸಾಮಾನ್ಯರ ಮೇಲೆ ಹೇರಿಕೆ ಮಾಡಲು ಮುಂದಾಗಿರುವುದಂತೂ ಖಚಿತ. ಇದು ಬೆಲೆ ಏರಿಕೆ ಬಿಸಿಯಲ್ಲಿರುವ ಬೆಂಗಳೂರಿಗರಿಗೆ ಇನ್ನೊಂದು ಬಿಗ್ ಶಾಕ್.
ಯಾರ್ಯಾರ ಬಿಲ್ ಬಾಕಿ ಎಷ್ಟೆಷ್ಟು?
ಇಲ್ಲಿಯವರೆಗೆ ಜಲಮಂಡಳಿಗೆ ಬರಬೇಕಿರುವ ಬರೋಬ್ಬರಿ ₹663 ಕೋಟಿ ಹಣ ಪಾವತಿಯಾಗಿಲ್ಲ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ₹87.91 ಕೋಟಿ. ಕೇಂದ್ರ ಸರ್ಕಾರ ₹25.70 ಕೋಟಿ ಹಣ ಉಳಿಸಿಕೊಂಡಿದೆ. ಬಿಬಿಎಂಪಿ ₹23.14 ಕೋಟಿ ಬಿಲ್ ಪಾವತಿ ಮಾಡದೆ ಉಳಿಸಿಕೊಂಡಿದೆ. ಭಾರತೀಯ ಸೇನೆ ಇಲಾಖೆ ₹35.99 ಕೋಟಿ ಪಾವತಿ ಮಾಡಿಲ್ಲ. ಸ್ಥಳೀಯ ಸಂಸ್ಥೆಗಳಿಂದ ₹10.48 ಕೋಟಿ ಹಣ ಚುಕ್ತಾ ಆಗಿಲ್ಲ. ಇನ್ನು ಗೃಹ, ವಾಣಿಜ್ಯ, ಕೈಗಾರಿಕೆ ಮತ್ತಿತರೆ ಬಾಕಿ ₹480.07 ಕೋಟಿಯಷ್ಟಿದೆ.
ಈ ಹಿಂದೆ ಎಚ್‌ಡಿ ದೇವೇಗೌಡರು ಸಿಎಂ ಆಗಿದ್ದಾಗ ರಾಜ್ಯ ಸರ್ಕಾರ ₹100 ಕೋಟಿ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಹಣವನ್ನೇ ನೀಡಿಲ್ಲ. ಇಷ್ಟೊಂದು ಹಣ ಬಾಕಿ ಉಳಿಸಿಕೊಂಡಿರುವವರ ಬಳಿ ವಸೂಲಿ ಮಾಡುವುದು ಬಿಟ್ಟು ನಮ್ಮ ಜೇಬಿಗೆ ಕೈ ಹಾಕುವುದೇಕೆ ಎಂದು ಶ್ರೀಸಾಮಾನ್ಯ ಪ್ರಶ್ನಿಸುತ್ತಿದ್ದಾನೆ. ಬಿಬಿಎಂಪಿ ಇದೀಗ ನೀಡಿರುವ ಆಸ್ತಿ ತೆರಿಗೆ ರಿಯಾಯಿತಿ, ಒನ್ ಟೈಮ್ ಸೆಟಲ್‌ಮೆಂಟ್ ರೀತಿಯಲ್ಲಿಯೇ ಜಲಮಂಡಳಿಯೂ ರಿಯಾಯಿತಿ ಕೊಟ್ಟು ವಸೂಲಿ ಮಾಡಲಿ ಎಂದು ಸಾಮಾನ್ಯ ಜನ ಹೇಳುತ್ತಿದ್ದಾರೆ.
ಎಷ್ಟು ನೀರು ಪೋಲಾಗುತ್ತಿದೆ?
ಬೆಂಗಳೂರು ನಗರಕ್ಕೆ ಪ್ರತಿದಿನ 1475 ಎಂಎಲ್‌ಡಿ ನೀರು ಪೈಪ್‌ಲೈನ್ ಮೂಲಕ ಪೂರೈಕೆಯಾಗುತ್ತಿದೆ. ಇದರಲ್ಲಿ ಶೇ.30ರಷ್ಟು ಕಾವೇರಿ ನೀರು ಪೋಲಾಗುತ್ತಿದೆ. ಇದರಲ್ಲಿ ಶೇ.13ರಷ್ಟು ಪೋಲು ಕಡಿಮೆ ಮಾಡಲು ಅವಕಾಶವಿದ್ದರೂ ಜಲಮಂಡಳಿ ನಿರ್ಲಕ್ಷ್ಯ ವಹಿಸಿದೆ. ನೀರು ಪೂರೈಕೆಗೆ ಬೆಸ್ಕಾಂನಿಂದ ಪ್ರತಿ ತಿಂಗಳು ₹80-85 ಕೋಟಿ ಕರೆಂಟ್ ಬಿಲ್ ಬರುತ್ತದೆ. ಇದರಲ್ಲಿ ಅನಗತ್ಯವಾಗಿ ಶೇ.20ರಷ್ಟು ವಿದ್ಯುತ್ ಬಳಕೆಯಾಗುತ್ತದೆ.
ನಗರದ 40ಕ್ಕೂ ಹೆಚ್ಚು ಓವರ್ ಹೆಡ್ ಟ್ಯಾಂಕ್‌ಗಳು ಬಳಕೆ ಆಗುತ್ತಿಲ್ಲ. ಇದಕ್ಕಾಗಿ ಅನಗತ್ಯ ಮೋಟರ್ ಬಳಕೆಯಾಗುತ್ತಿದೆ. ಸೋಲಾರ್ ಬಳಕೆಗೆ ಆದ್ಯತೆ ನೀಡಿಲ್ಲ. ಹೀಗೆ ಹಲವು ಕಡೆ ನೀರು, ಕರೆಂಟ್ ಬಿಲ್ ಉಳಿತಾಯ ಮಾಡುವ ಸಾಧ್ಯತೆ ಇದ್ದರೂ ಅದನ್ನು ಬಳಸಿಕೊಳ್ಳದ ಜಲಮಂಡಳಿ, ಈ ಹೊರೆಯನ್ನು ಸಾಮಾನ್ಯರ ಮೇಲೆ ವರ್ಗಾಯಿಸುತ್ತಿದೆ ಎಂದು ಜನ ಆಕ್ಷೇಪಿಸುತ್ತಿದ್ದಾರೆ.
ಇದನ್ನೂ ಓದಿ: Water Price Hike: ಬೆಂಗಳೂರಿನಲ್ಲಿ ನೀರಿನ ದರ ಏರಿಕೆಗೆ ವೇಗ; ನಿಮಗೆ ಎಷ್ಟಾಗುತ್ತೆ ಚೆಕ್ ಮಾಡಿ