Site icon Vistara News

Water Crisis: ಮಾ. 7ರೊಳಗೆ ನೋಂದಣಿ ಮಾಡಿಸದಿದ್ರೆ ನೀರಿನ ಟ್ಯಾಂಕರ್‌ ಸೀಜ್, ಸರ್ಕಾರದಿಂದಲೇ ದರ ನಿಗದಿ: ಡಿಕೆಶಿ

Water tanker to be seized if not registered by March 7‌ says DK Shivakumar

ಬೆಂಗಳೂರು: ನಗರದ ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ಮಾ. 7ರೊಳಗೆ ವೇಳೆಗೆ ನೋಂದಣಿ ಮಾಡಿಸದಿದ್ದರೆ ಸೀಜ್ ಮಾಡಲಾಗುವುದು. ಇನ್ನು ಟ್ಯಾಂಕರ್ ನೀರು (Water Crisis) ಪೂರೈಕೆಗೆ 500 ರಿಂದ 2 ಸಾವಿರದವರೆಗೂ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ನೀರಿನ ದರವನ್ನು ಸರ್ಕಾರದಿಂದಲೇ ನಿಗದಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 3,500 ಟ್ಯಾಂಕರ್‌ಗಳು ಇದ್ದು, ಕೇವಲ 219 ಟ್ಯಾಂಕರ್‌ಗಳು ಅಂದರೆ ಕೇವಲ ಶೇ 10 ರಷ್ಟು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಚಿಕ್ಕ, ದೊಡ್ಡ, ಹಾಲಿನ ಟ್ಯಾಂಕರ್‌ಗಳನ್ನು ಶೀಘ್ರ ಸರ್ಕಾರದ ವಶಕ್ಕೆ ಪಡೆಯಲಾಗುವುದು. ಬಿಡಬ್ಲ್ಯೂ ಎಸ್‌ಎಸ್‌ಬಿ ಅವರು 210 ಟ್ಯಾಂಕರ್‌ಗಳನ್ನು ಈಗಾಗಲೇ ನೀರಿನ ಪೂರೈಕೆಗೆ ಬಳಸುತ್ತಿದ್ದಾರೆ ಎಂದು ತಿಳಿಸಿದರು.

ನೀರು ಸರ್ಕಾರಕ್ಕೆ ಸೇರಿದ್ದು

ನೀರು ಸರ್ಕಾರಕ್ಕೆ ಸೇರಿದ್ದು. ಯಾವುದೇ ವೈಯಕ್ತಿಕ ವ್ಯಕ್ತಿಗೆ ಸೇರಿದ್ದಲ್ಲ. ಯಾವ ನೀರನ್ನು ಬೇಕಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ. ಬೆಂಗಳೂರು ಹೊರವಲಯದಲ್ಲಿ ಅಂತರ್ಜಲ ನೀರಿನ ಮಟ್ಟ ಹೆಚ್ಚಿರುವ ಕಡೆಯಿಂದಲೂ ನೀರಿನ ಪೂರೈಕೆ ಮಾಡಲು ಸಿದ್ಧರಾಗಿ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ | HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

ಸಮಸ್ಯೆ ಬಗೆಹರಿಸಲು 556 ಕೋಟಿ ಮೀಸಲು

ಬೆಂಗಳೂರು ನಗರದ ಎಲ್ಲಾ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು 10 ಕೋಟಿ ಅನುದಾನ ನೀಡಲಾಗಿದೆ. ಬಿಬಿಎಂಪಿಗೆ 148 ಕೋಟಿ, ಬಿಡಬ್ಲ್ಯೂ ಎಸ್‌ಎಸ್‌ಬಿ ಯಿಂದ 128 ಕೋಟಿ ಒಟ್ಟು 556 ಕೋಟಿ ಹಣವನ್ನು ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿ ಮತ್ತು ವಾರ್ಡ್ ವಾರು ದೂರು ಕೇಂದ್ರಗಳನ್ನು ತೆರೆಯಲಾಗುವುದು. ಸಮಸ್ಯೆ ಆಲಿಸಲು ವಾರ್ ರೂಂಗಳು ಕೆಲಸ ನಿರ್ವಹಿಸಲಿವೆ. ಹಿರಿಯ ಅಧಿಕಾರಿಗಳು ಸೇರಿದಂತೆ ನಾನು ಸಹ ಪದೇ,‌ ಪದೇ ಪರಿಶೀಲನೆ ನಡೆಸುತ್ತೇನೆ. ಕುಡಿಯುವ ನೀರನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಬೆಂಗಳೂರಿನ ಜನತೆ ಗಾಬರಿಯಾಗುವುದು ಬೇಡ. ಪ್ರತಿಯೊಬ್ಬರಿಗೂ ನೀರು ನೀಡುವುದು ನಮ್ಮ ಕರ್ತವ್ಯ ಎಂದು ಭರವಸೆ ನೀಡಿದರು.

ನಗರದಲ್ಲಿವೆ 15 ಸಾವಿರ ಕೊಳವೆಬಾವಿಗಳು

ಪ್ರಸ್ತುತ ನಗರದಲ್ಲಿ 15 ಸಾವಿರ ಕೊಳವೆ ಬಾವಿಗಳಿವೆ. ದಾಖಲೆಗಳ ಪ್ರಕಾರ 16,781 ಕೊಳವೆ ಬಾವಿಗಳಿವೆ. ಇದರಲ್ಲಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಹೊಸ ಕೊಳವೆ ಬಾವಿ ಕೊರೆಸಲು ಸ್ಥಳೀಯ ಗುತ್ತಿಗೆದಾರರು ಮತ್ತು ತಮಿಳುನಾಡಿನ ಕೊಳವೆಬಾವಿ ಕೊರೆಯುವವರ ನಡುವೆ ದರದ ವಿಚಾರವಾಗಿ ಒಂದಷ್ಟು ಗೊಂದಲಗಳಿದ್ದು ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ತಿಳಿಸಿದರು.

ನೀರು ಪೂರೈಕೆಗೆ ಹಾಲಿನ ಟ್ಯಾಂಕರ್‌ಗಳು

ನಿರುಪಯುಕ್ತ ಹಾಲಿನ ಟ್ಯಾಂಕರ್‌ಗಳನ್ನು ನೀರು ಸರಬರಾಜಿಗೆ ಬಳಕೆ ಮಾಡಲು ಸೂಚಿಸಲಾಗಿದೆ. ಕೆಎಂಎಫ್ ವ್ಯಾಪ್ತಿಯ ಎಲ್ಲಾ ಘಟಕಗಳಿಂದ ಟ್ಯಾಂಕರ್‌ಗಳನ್ನು ತರಿಸಿ ಸ್ವಚ್ಛಗೊಳಿಸಿ ಬಳಸಬೇಕು ಎಂದು ಹೇಳಲಾಗಿದೆ. ಈ ಟ್ಯಾಂಕರ್‌ಗಳನ್ನು ನೀರಿನ ಸಮಸ್ಯೆ ಬಗೆಹರಿಯುವ ತನಕ ಬಳಸಬೇಕು ಎಂದು ಸೂಚಿಸಲಾಗಿದೆ. ಟ್ಯಾಂಕರ್ ನೀರು ಪೂರೈಕೆಗೆ 500 ರಿಂದ 2 ಸಾವಿರದವರೆಗೂ ವಸೂಲಿ ಮಾಡುತ್ತಿದ್ದಾರೆ. ಈ ಗೊಂದಲವನ್ನು ಅಸೋಸಿಯೇಷನ್ ಬಳಿ ಮಾತನಾಡಿ ನೀರಿನ ದರವನ್ನು ಕಿ.ಮೀಗೆ ಇಂತಿಷ್ಟು ಎಂದು ನಿಗದಿ ಮಾಡಲಾಗುವುದು ಎಂದು ಹೇಳಿದರು.

110 ಹಳ್ಳಿಗಳಿಗೆ ಮೇ ಅಂತ್ಯದ ವೇಳೆಗೆ ಕಾವೇರಿ ನೀರು ಪೂರೈಕೆ ಮಾಡಲಾಗುವುಸು. 775 ಎಂಎಲ್ ಡಿ ನೀರು ಆದಷ್ಟು ಬೇಗ ಜನರಿಗೆ ಪೂರೈಸಲಾಗುವುದು. ನಿಷ್ಕ್ರಿಯವಾಗಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲನೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಮಸ್ಯೆ ನಿವಾರಣೆಗೆ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಬಂಧಪಟ್ಟ ಎಲ್ಲಾ ಇಲಾಖೆಯವರಿಗೆ ಮುಖ್ಯವಾಗಿ ಬೆಸ್ಕಾಂ ಅವರಿಗೆ ನಗರದಲ್ಲಿ ಚಾಲನೆಯಲ್ಲಿ ಇರುವ ಕೃಷಿ, ವಾಣಿಜ್ಯ ಬಳಕೆಯ ಕೊಳವೆ ಬಾವಿಗಳನ್ನು ದಾಖಲಿಸಬೇಕು ಎಂದು ಸೂಚನೆ ನೀಡಲಾಗಿದೆ. ನಾಗರಿಕರು ಸಹ ಅನಗತ್ಯವಾಗಿ ನೀರನ್ನು ಬಳಕೆ ಮಾಡಬಾರದು. ಉದ್ಯಾನಗಳಿಗೆ, ಇತರೇ ಬಳಕೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು. ಬೀಕರ ಬರಗಾಲದಲ್ಲಿ ನೀರಿನ ಮಿತ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ | Nisha Yogeshwar : ಮತ್ತೆ ಕಾಂಗ್ರೆಸ್‌ ಪಾಳಯದಲ್ಲಿ ಕಾಣಿಸಿಕೊಂಡ ಸಿ.ಪಿ ಯೋಗೇಶ್ವರ್‌ ಪುತ್ರಿ

ಪ್ರಶ್ನೋತ್ತರಗಳು

ಟ್ಯಾಂಕರ್ ದರ ನಿಗದಿ ವಿಚಾರವಾಗಿ ಕೇಳಿದಾಗ “ಟ್ಯಾಂಕರ್ ನೀರು ಪೂರೈಕೆ ಮಾಲೀಕರ ಸಭೆಯನ್ನು ಮಾ. 7 ರಂದು ನಿಗದಿ ಮಾಡಿದ್ದು, ಅಂದು ದರ ನಿಗದಿ ಮಾಡಲಾಗುವುದು”. ಎಂದು ಹೇಳಿದರು.

ಕಾವೇರಿ 5 ನೇ ಹಂತಕ್ಕೆ ತೊಡಕು ಉಂಟಾಗಿದೆಯೇ ಎಂದಾಗ “2 ಕಿಮೀ ನಷ್ಟು ಸಮಸ್ಯೆ ಇದೆ. ಅರಣ್ಯ ಭೂಮಿ ಮತ್ತು ಒಂದು ಕಡೆ ಕಲ್ಲು ಅಡ್ಡ ಬಂದಿರುವ ಕಾರಣ ಸಮಸ್ಯೆ ಉಂಟಾಗಿದೆ. ಶೀಘ್ರ ಈ ತೊಡಕು ನಿವಾರಣೆಯಾಗುವುದು. ಮೇ ಅತ್ಯಂತ ವೇಳೆಗೆ ಪೂರೈಕೆಯಾಗುವುದು” ಎಂದು ಡಿಸಿಎಂ ತಿಳಿಸಿದರು.

ನೀರಿನ ಸಮಸ್ಯೆ ಬಗೆಹರಿಸಲು ನೋಡಲ್ ಅಧಿಕಾರಿಗಳ ನಿಯೋಜನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊರ ವಲಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ಶೀಘ್ರ ಕುಡಿಯುವ ನೀರಿನ ಸಮಸ್ಯೆ ಆಲಿಸುವ ಸಲುವಾಗಿ ಪ್ರತ್ಯೇಕ ಮೇಲುಸ್ತುವಾರಿಗಾಗಿ ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರರು(ದಾಸರಹಳ್ಳಿ) ಧರಣೇಂದ್ರ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಯಾದ 1533ಗೆ ಕರೆ ಮಾಡಿ ಸಮಸ್ಯೆ ಕುರಿತು ಮಾಹಿತಿ ನೀಡಬಹುದು.

ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯ ಇನ್ನುಳಿದ ವಾರ್ಡ್‌ಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯವಾಣಿ ಸಂಖ್ಯೆಯಾದ 1916 ಗೆ ಕರೆ ಮಾಡಬಹುದು.

ಇದನ್ನೂ ಓದಿ | Water Crisis: ಬೆಂಗಳೂರಿನ ಕೊಳವೆಬಾವಿ ನೀರು ಪೂರೈಕೆ ಟ್ಯಾಂಕರ್‌ಗಳಿನ್ನು ಸರ್ಕಾರದ ಸುಪರ್ದಿಗೆ: ಡಿ.ಕೆ. ಶಿವಕುಮಾರ್

ಹೊರ ವಲಯಗಳಲ್ಲಿ ಬರುವ 35 ವಾರ್ಡ್‌ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪಾಲಿಕೆಯು 35 ವಾರ್ಡ್‌ಗಳಿಗೆ ಪ್ರತ್ಯೇಕವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

Exit mobile version