Site icon Vistara News

Wayanad Landslide: ಮೇಪ್ಪಾಡಿಯಲ್ಲಿ ಸಾಲು ಶವಗಳಿಗೆ ಪುಷ್ಪಾರ್ಚನೆಯ ಭಾವನಮನ

wayanad landslide pushpa

ಚಾಮರಾಜನಗರ: ವೈನಾಡ್‌ ಭೂಕುಸಿತದ (Wayanad Landslide, Kerala Landslide) ದಾರುಣ ದುರಂತದಲ್ಲಿ ಮೃತಪಟ್ಟವರ ಶವಗಳನ್ನು ಪುಷ್ಪಾರ್ಚನೆಯ ಮೂಲಕ ಮೇಪ್ಪಾಡಿಯ ಗ್ರಾಮಸ್ಥರು ಕಳಿಸಿಕೊಟ್ಟಿದ್ದಾರೆ. ತಮ್ಮ ಊರಿನಲ್ಲಿ ನಡೆದ ಈ ದುರಂತಕ್ಕೆ ಸ್ಥಳೀಯರು ಮನಮಿಡಿಯುವ ರೀತಿಯಲ್ಲಿ ಸ್ಪಂದಿಸಿದ್ದಾರೆ.

ಮೇಪ್ಪಾಡಿಯಲ್ಲಿ ನಾಶವಾಗಿಹೋದ ಭೂಕುಸಿತದ ಸ್ಥಳದಿಂದ ಎತ್ತಿ ತೆಗೆಯಲಾದವರ ದೇಹಗಳನ್ನು ಅಂತಿಮ ಸಂಸ್ಕಾರಕ್ಕೆ ಸಾಲಾಗಿ ಕೊಂಡೊಯ್ಯಲಾಗುತ್ತಿದ್ದು, ಮೃತಪಟ್ಟವರ ಶವಗಳಿಗೆ ಸ್ಥಳೀಯರು ರಸ್ತೆಯಲ್ಲಿ ಸಾಲಾಗಿ ನಿಂತು ಪುಷ್ಪಾರ್ಚನೆ ಮಾಡಿದರು. ಸಾಲು ಸಾಲು ಆಂಬ್ಯುಲೆನ್ಸ್‌ಗಳಲ್ಲಿ ಸಾಗಿ ಬಂದ ಶವಗಳಿಗೆ ನೂರಾರು ಮಂದಿ ಮೇಪ್ಪಾಡಿ ವೃತ್ತದಲ್ಲಿ ಸಾಲಾಗಿ ನಿಂತು ಪುಷ್ಪಾರ್ಚನೆಗೈದು ನಮಿಸಿದರು. ಕಳೆದೆರಡು ದಿನಗಳಿಂದ ಇಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳಲ್ಲೂ ರಕ್ಷಣಾ ಪಡೆಗಳ ಜೊತೆಗೆ ಸ್ಥಳೀಯರು ಕೈಜೋಡಿಸಿದ್ದಾರೆ.

ಮೆಪ್ಪಾಡಿಯ ಸರ್ಕಾರಿ ಜಾಗದಲ್ಲಿ ಅಂತ್ಯಕ್ರಿಯೆ ಮೃತರ ಸಾಮೂಹಿಕ ಅಂತ್ಯಕ್ರಿಯೆ ನಿನ್ನೆ ನಡೆಯಿತು. ಇನ್ನೂ ಕೆಲವರ ಹೆಣಗಳ ಸಿಗುತ್ತಿದ್ದು, ಇಂದು ಕೂಡ ಅದು ಮುಂದುವರಿದಿದೆ. ಗ್ಯಾಸ್ ಬರ್ನರ್, ಸೌದೆಗಳನ್ನು ಬಳಸಿಕೊಂಡು ಅಂತ್ಯ ಸಂಸ್ಕಾರ ನಡೆಯುತ್ತಿದ್ದು, ಈವರೆಗೂ ಸುಮಾರು 26 ಮೃತದೇಹಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ. ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿ ಚಿತಾ ಭಸ್ಮ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಇದೇ ಮಾದರಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಮೃತ ದೇಹಗಳ ಅಂತ್ಯಕ್ರಿಯೆಗೂ ವಯನಾಡು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ಹಲವರ ಶವಗಳ ಗುರುತು ಸಿಗುತ್ತಿಲ್ಲ. ಮುಖ ಮೈಕೈಗಳು ಬಂಡೆಗಳು ಮಣ್ಣಿನಡಿ ಸಿಲುಕಿ ಜಜ್ಜಿಹೋಗಿ ವಿರೂಪಗೊಂಡಿವೆ. ಹೀಗಾಗಿ ಅವುಗಳ ಫೋಟೋ ದಾಖಲೆ ತೆಗೆದಿಟ್ಟುಕೊಂಡು ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ.

5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

ಬೆಂಗಳೂರು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ (Wayanad Landslide) ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿಎಂ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

Exit mobile version