Site icon Vistara News

Wayanad Landslide: ವಯನಾಡ್‌ನಲ್ಲಿ ಕರ್ತವ್ಯಪರತೆ ಮೆರೆದ ಕನ್ನಡತಿ ಜಿಲ್ಲಾಧಿಕಾರಿ, ಭೂಕುಸಿತ ಸ್ಥಳದಲ್ಲೇ ಮೊಕ್ಕಾಂ

meghashree DC Wayanad landslide 2

ಬೆಂಗಳೂರು: ವಯನಾಡ್ ಜಿಲ್ಲಾಧಿಕಾರಿ (Wayanad District Commissioner) ಮೇಘಶ್ರೀ ಡಿ.ಆರ್ (Meghashree DR) ಭೂಕುಸಿತ (Wayanad Landslide, Kerala Landslide) ಸಂಭವಿಸಿದ ದಿನದಿಂದಲೂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಾರ್ಯಾಚರಣೆಯ (Rescue Operation) ಸಂಪೂರ್ಣ ಉಸ್ತುವಾರಿ ವಹಿಸಿದ್ದು, ರಕ್ಷಣೆ ಹಾಗೂ ಕಾಳಜಿ ವ್ಯವಸ್ಥೆಗಳ ಮೇಲೆ ಇಡೀ ದಿನ ನಿಗಾ ಇಟ್ಟಿರುತ್ತಾರೆ. ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ಅವರ ಕರ್ತವ್ಯ ನಡುರಾತ್ರಿಯವರೆಗೂ ಮುಂದುವರಿಯುತ್ತದೆ. ಸ್ಥಳೀಯ, ಕೇರಳಿಗರ ಮೆಚ್ಚುಗೆ ಪಡೆದಿರುವ ಈ ಜಿಲ್ಲಾಧಿಕಾರಿ ಕನ್ನಡತಿ, ಚಿತ್ರದುರ್ಗದವರು ಎಂಬುದು ವಿಶೇಷ.

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಮೇಘಶ್ರೀ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾರ್ಯಾಚರಣೆಯ ಪ್ರತಿ ನಿಮಿಷವೂ ಅತ್ಯಂತ ಅಮೂಲ್ಯವಾದುದು ಎನ್ನುತ್ತಾರೆ. ದಣಿವರಿಯದೆ ಕೆಲಸ ಮಾಡುತ್ತಿರುವ ಅವರು ಭೂಕುಸಿತಕ್ಕೆ ಬಲಿಯಾದವರ ಶವಗಳನ್ನು ವಯನಾಡ್ ಸ್ಮಶಾನದಲ್ಲಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡುವಾಗಲೂ ಅಲ್ಲಿದ್ದರು.

ಮೇಘಶ್ರೀ ಅವರ ತಂದೆ ರುದ್ರಮುನಿ ಎಸ್‌ಬಿಐನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತರಾದವರು. ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದವರು. “ಸೋಮವಾರದವರೆಗೂ ನಾನು ವಯನಾಡಿನಲ್ಲಿದ್ದೆ. ಆ ಮಧ್ಯಾಹ್ನ ವಯನಾಡನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ಘಟನೆ ಮಧ್ಯರಾತ್ರಿ ನಡೆದಿದೆ. ಕೆಲವೇ ಗಂಟೆಗಳಲ್ಲಿ ಮೇಘಶ್ರೀ ಸ್ಥಳಕ್ಕೆ ಧಾವಿಸಿದ್ದಳು. ಈ ತುರ್ತು ಪರಿಸ್ಥಿತಿಯ ಸಮಯದಲ್ಲಿ, ನನ್ನ ಮಗಳು ವಯನಾಡಿನ ಜನರನ್ನು ರಕ್ಷಿಸುವ ಅತ್ಯಂತ ಕಷ್ಟಕರವಾದ ಕೆಲಸವನ್ನು ಮಾಡುತ್ತಿರುವುದು ನನಗೆ ಅತ್ಯಂತ ಹೆಮ್ಮೆ ತಂದಿದೆ” ಎಂದು ತಂದೆ ಹೇಳಿದ್ದಾರೆ.

“ವಯನಾಡಿನ ಪರಿಸ್ಥಿತಿ ಮತ್ತು ಒಬ್ಬ ತಂದೆಯಾಗಿ ನನ್ನ ಮಗಳ ಬಿಡುವಿಲ್ಲದ ಕೆಲಸದ ಬಗ್ಗೆ ನಾನು ಉದ್ವಿಗ್ನಗೊಂಡಿದ್ದೇನೆ. ಆದರೆ ನಾನು ಮೊದಲು ದೇಶದ ಪ್ರಜೆ; ತನ್ನ ಕರ್ತವ್ಯಕ್ಕೆ ಹಾಜರಾಗಲು ಮತ್ತು ಕಷ್ಟದಲ್ಲಿರುವ ಜನರಿಗೆ ಸೇವೆ ಸಲ್ಲಿಸಲು ಆಕೆಗೆ ಹೇಳಿದ್ದೇನೆ. ಏಕೆಂದರೆ ಜನರಿಗೆ ಸೇವೆ ಮಾಡುವುದು ಹೆಚ್ಚು ಮುಖ್ಯ” ಎಂದು ಅವರು ಹೇಳಿದ್ದಾರೆ.

ಮೇಘಶ್ರೀ ಅವರು ಎರಡೂವರೆ ವರ್ಷ ಪ್ರಾಯದ ವಿಸ್ಮಯಾ ಮತ್ತು 6 ತಿಂಗಳ ಹಸುಳೆ ಧೃತಿ ಎಂಬ ಎರಡು ಮಕ್ಕಳ ತಾಯಿ. ಮೇಘಶ್ರೀ ಅವರ ಪತಿ ಡಾ.ವಿಕ್ರಂ ಸಿಂಹ ಅವರು ಕರ್ನಾಟಕ ಕೃಷಿ ವಿವಿಯ ಸಹಾಯಕ ಪ್ರಾಚಾರ್ಯರಾಗಿದ್ದಾರೆ. ತಮ್ಮ ಕುಟುಂಬದ ಪೂರ್ಣ ಬೆಂಬಲವೇ ತಮ್ಮ ಯಶಸ್ಸಿಗೆ ಪ್ರಧಾನ ಕಾರಣ ಎನ್ನುತ್ತಾರೆ ಮೇಘಶ್ರೀ.

ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಮೇಘಶ್ರೀ ಶಾಲೆ ಹಾಗೂ ಕಾಲೇಜು ಹಂತಗಳನ್ನು ಉತ್ತಮ ಅಂಕಗಳೊಂದಿಗೆ ಪೂರೈಸಿದ್ದಾರೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಇವರು, ಕ್ಯಾಂಪಸ್ ಸಂದರ್ಶನದಲ್ಲಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿಯಾದರು. ಬಾಲ್ಯದಲ್ಲೇ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದ ಮೇಘಶ್ರೀ, ಇಂಜಿನಿಯರಿಂಗ್‌ ಪದವಿಗೆ ತಮ್ಮ ಸಾಧನೆಯನ್ನು ಸೀಮಿತಗೊಳಿಸದೆ, ಕಠಿಣ ಪರಿಶ್ರಮದ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದವರು.

ತಂದೆ ರುದ್ರಮುನಿ, ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಚೀಫ್ ಮ್ಯಾನೇಜರ್ ಆಗಿದ್ದರು. ತಾಯಿ ರುಕ್ಮಿಣಿದೇವಿ ಪ್ರಾಥಮಿಕ ಶಾಲಾ ಶಿಕ್ಷಕಿ. ಚಿತ್ರದುರ್ಗದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಪೂರೈಸಿದರು. ಎಸ್‌ಎಸ್‌ಎಲ್‌ಸಿ ಬಳಿಕ ತಂದೆಯವರಿಗೆ ವರ್ಗಾವಣೆಯಾಗಿದ್ದರಿಂದ ನಂತರದ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದರು. ಎಂಇಎಸ್ ಕಿಶೋರ್ ಕೇಂದ್ರದಲ್ಲಿ ಪಿಯುಸಿ ಹಾಗೂ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಇ ಶಿಕ್ಷಣ ಪಡೆದರು.

ಮೂರು ವರ್ಷ ಸಾಫ್ಟ್‌ವೇರ್‌ ಕೆಲಸ ಮಾಡಿದ ಮೇಘಶ್ರೀ, 2014ರಲ್ಲಿ ಉದ್ಯೋಗ ತೊರೆದು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರಾರಂಭಿಸಿದರು. ಒಂದು ವರ್ಷದ ಸಿದ್ಧತೆಯ ಬಳಿಕ 2015ರಲ್ಲಿ ಯುಪಿಎಸ್‌ಸಿ ಜತೆಗೆ ಕೆಎಎಸ್ ಪರೀಕ್ಷೆಯನ್ನೂ ಬರೆದರು. ಕೇವಲ 1.6 ಅಂಕಗಳಿಂದ ಬ್ಯಾಂಕ್ ಪಟ್ಟಿಯಿಂದ ವಂಚಿತರಾಗಿದ್ದರಿಂದ, ಪೂರ್ಣ ಪ್ರಮಾಣದಲ್ಲಿ ಯುಪಿಎಸ್‌ಸಿ ಮೇಲೆಯೇ ಗಮನ ಕೇಂದ್ರೀಕರಿಸಿದರು. ಸತತ ಅಧ್ಯಯನದೊಂದಿಗೆ 2016ರಲ್ಲಿ 2ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಐಎಎಸ್‌ಗೆ ಆಯ್ಕೆಯಾಗಿದ್ದರು.

ಇದನ್ನೂ ಓದಿ: Wayanad Landslide: ಇಲ್ಲಿಗೇಕೆ ಬಂದ್ರಿ? ಕಾರ್ಯಾಚರಣೆಗೆ ಅಡ್ಡಿ ಮಾಡೋಕಾ?- ರಾಹುಲ್‌ ಗಾಂಧಿ ಮೇಲೆ ಕೂಗಾಡಿದ ವ್ಯಕ್ತಿ-ವಿಡಿಯೋ ಇದೆ

Exit mobile version