ಬಹು ನಿರೀಕ್ಷಿತ ಗುಜರಾತ್- ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಭಾರತೀಯ ಜನತಾ ಪಾರ್ಟಿ ಗುಜರಾತ್‌ನಲ್ಲಿ ಭರ್ಜರಿ ವಿಜಯ ದಾಖಲಿಸಿದೆ. ಆದರೆ ಹಿಮಾಚಲ ಪ್ರದೇಶದ ಜನ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ಸನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಬಿಜೆಪಿಗೂ ಕಾಂಗ್ರೆಸ್‌ಗೂ ಇದು ಮಿಶ್ರ ಫಲಿತಾಂಶ. ಬಿಜೆಪಿಯೂ ಸೇರಿದಂತೆ ಇತರ ಪಕ್ಷಗಳೂ ಕಲಿಯಬೇಕಾದ ಪಾಠಗಳು ಈ ಚುನಾವಣಾ ಫಲಿತಾಂಶದಲ್ಲಿ ಅಡಕವಾಗಿವೆ.
ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಎರಡು ಕಾರಣಗಳಿವೆ. ಒಂದನೆಯದು ಬಿಜೆಪಿಯ ನಿಜವಾದ ಶಕ್ತಿ. ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮ, ಅವರ ಬಗೆಗೆ ಗುಜರಾತ್‌ನ ಜನವರಿಗೆ ಇರುವ ಪ್ರೀತಿ, ಗುಜರಾತ್‌ನಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆಗಳು, ಮೋದಿಯವರ ಜನಪ್ರಿಯತೆ, ಅವರು ನಡೆಸಿದ ರ್ಯಾಲಿಗಳು, ಬಿಜೆಪಿಯ ಸಂಘಟನಾ ಶಕ್ತಿ ಹಾಗೂ ವ್ಯೂಹತಂತ್ರಗಳು, 42ಕ್ಕೂ ಅಧಿಕ ಶಾಸಕರನ್ನು ಬಿಟ್ಟು ಹೊಸಬರಿಗೆ ಹೆಚ್ಚಿನ ಮಣೆ ಹಾಕಿದ್ದು, ರಾಷ್ಟ್ರೀಯವಾದದ ಅಲೆ, 2017ರಲ್ಲಿ ಸೋತಿದ್ದ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದು ಎಲ್ಲವೂ ಸೇರಿ ಬಿಜೆಪಿಯನ್ನು ಗೆಲ್ಲಿಸಿವೆ. ಅದರ ಸ್ಥಾನ ಸಂಖ್ಯೆ ಕಳೆದ ಬಾರಿಯ 99ರಿಂದ 156ಕ್ಕೇರಿದೆ. ಮತ ಪ್ರಮಾಣವೂ ಹೆಚ್ಚಾಗಿದೆ. ಕಳೆದ ಬಾರಿ 49 ಶೇಕಡಾ ಮತ ಪಡೆದಿದ್ದ ಪಕ್ಷ ಈ ಬಾರಿ ಅದನ್ನು ಶೇಕಡಾ 52.5ಕ್ಕೇರಿಸಿಕೊಂಡಿದೆ. ಗುಜರಾತ್ ಅಸ್ಮಿತೆ ಕೆಲಸ ಮಾಡಿದೆ. ಡಬಲ್ ಎಂಜಿನ್ ಸರಕಾರಕ್ಕೆ ಅಲ್ಲಿಯ ಜನ ಭರ್ಜರಿ ಬೆಂಬಲ ನೀಡಿದ್ದಾರೆ.
ಇದೇ ವೇಳೆ, ಇಲ್ಲಿ ಪ್ರಬಲ ಪ್ರತಿಪಕ್ಷ ಆಗಬಹುದಾಗಿದ್ದ ಕಾಂಗ್ರೆಸ್ ತನ್ನ ನಿರ್ಲಕ್ಷ್ಯ, ಒಳಜಗಳ, ನಾಯಕತ್ವದ ಕೊರತೆ ಇತ್ಯಾದಿಗಳಿಂದ ಇದ್ದ ನೆಲೆಯನ್ನೂ ಕಳೆದುಕೊಂಡಿದೆ. ಕೈ ನಾಯಕ ರಾಹುಲ್ ಗಾಂಧಿಯವರು ಇಲ್ಲಿ ಚುನಾವಣಾ ಪ್ರಚಾರಕ್ಕೂ ಆಗಮಿಸಿಲ್ಲ ಎಂಬುದು ಕಾಂಗ್ರೆಸ್ ಸಂಘಟನಾತ್ಮಕವಾಗಿ ಇಲ್ಲಿ ಎಚ್ಚರವಾಗಿಯೇ ಇಲ್ಲ ಎಂಬುದನ್ನು ಸೂಚಿಸಿದೆ. ಇನ್ನೊಂದು ಕಡೆ ಆಮ್ ಆದ್ಮಿ ಪಕ್ಷ ಗಣನೀಯವಾಗಿ ಬೆಳೆದಿದೆ. ಆಪ್ 5 ಕ್ಷೇತ್ರಗಳನ್ನು ಗೆದ್ದು, ರಾಷ್ಟ್ರೀಯ ಪಕ್ಷ ಎನಿಸಿಕೊಂಡಿದೆ. ತನ್ನ ಮತ ಪ್ರಮಾಣವನ್ನೂ ಹೆಚ್ಚಿಸಿಕೊಂಡಿರುವ ಆಪ್‌ನ ಹಲವು ಜನಪರ ಕಾರ್ಯಕ್ರಮಗಳು ಜನರನ್ನು ಸೆಳೆದಂತಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಪಕ್ಷವಾಗಿ ಬೆಳೆದು ನಿಲ್ಲುವ ಸಾಧ್ಯತೆಯನ್ನು ಆಪ್ ತೋರಿಸಿದೆ. ಹೀಗಾಗಿ ಆಪ್ ಬಗ್ಗೆ ಬಿಜೆಪಿ ಇನ್ನಷ್ಟು ಎಚ್ಚರವಾಗಿರುವುದು ಅಗತ್ಯ. ಆಪ್ ತನ್ನ ಜನಪರ- ಅಭಿವೃದ್ಧಿಪರ ಆಡಳಿತ ಮುಂದುವರಿಸಿದರೆ ಇನ್ನಷ್ಟು ಸಾಧನೆ ಮಾಡಬಹುದು.
ಹಿಮಾಚಲ ಪ್ರದೇಶದ ಫಲಿತಾಂಶ ಮಾತ್ರ ಬಿಜೆಪಿಗೆ ಎಚ್ಚರಿಕೆಯ ಗಂಟೆಯೇ ಹೌದು. ಮತದಾರ ಕಾಂಗ್ರೆಸ್ಸನ್ನು ಗುಜರಾತ್‌ನಲ್ಲಿ ಸೋಲಿಸಿ, ಇಲ್ಲಿ ಗೆಲ್ಲಿಸಿ, ಅದಕ್ಕೂ ಮಿಶ್ರ ಫಲ ಕೊಟ್ಟಿದ್ದಾನೆ. ಗುಜರಾತ್‌ನಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್‌ಗೂ ಇಲ್ಲಿ ಪಾಠ ಇದೆ. ಹಿಮಾಚಲ ಪ್ರದೇಶದ ಆಡಳಿತ ಕಳೆದ ಐದು ವರ್ಷಗಳಿಂದ ಗೊಂದಲದ ಗೂಡಾಗಿತ್ತು. ಒಳಜಗಳ, ಆಡಳಿತದಲ್ಲಿ ಅದಕ್ಷತೆ, ಯೋಜನೆಗಳನ್ನು ಸರಿಯಾಗಿ ಫಲಾನುಭವಿಗಳಿಗೆ ತಲುಪಿಸಲಾಗದ ಅಸಮರ್ಥತೆ, ಅಭಿವೃದ್ಧಿ ಕಾರ್ಯಕ್ರಮಗಳ ಕೊರತೆ, ಭ್ರಷ್ಟಾಚಾರದ ಆರೋಪಗಳು- ಇವೆಲ್ಲವೂ ಇಲ್ಲಿ ಬಿಜೆಪಿ ಆಡಳಿತದ ಬಲಿ ಪಡೆದಿವೆ. ಇವನ್ನೆಲ್ಲ ಜನ ಸಹಿಸುವುದಿಲ್ಲ ಎನ್ನುವುದಕ್ಕೆ ಇದೊಂದು ಸಂದೇಶ. ಹಿಮಾಚಲದ ಜನತೆ ಪ್ರತೀ ಅವಧಿಗೂ ಆಡಳಿತವನ್ನು ಬದಲಿಸುತ್ತಾರೆ. ಆಡಳಿತದಿಂದ ಅವರು ಹೆಚ್ಚಿನದನ್ನು ಬಯಸುತ್ತಾರೆ ಹಾಗೂ ಅದು ಸಿಗದೆ ಹೋದಾಗ ಪಾಠ ಕಲಿಸುತ್ತಾರೆ ಎಂಬುದಕ್ಕಿದು ನಿದರ್ಶನ.
ಈ ಸೋಲು ಗೆಲುವುಗಳು ಇತರ ಕಡೆಗಳಲ್ಲಿರುವ ರಾಜಕೀಯ ಮುಖಂಡರಿಗೆ ಆತ್ಮವಿಮರ್ಶೆಗೆ ದಾರಿಯಾಗಬೇಕು. ಇನ್ನು ಕೆಲವೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಾಗಲಿದೆ. ಗುಜರಾತ್ ಗೆಲುವಿನಿಂದ ಬೀಗದೆ, ಹಿಮಾಚಲದ ಸೋಲಿನ ಪಾಠವನ್ನು ರಾಜ್ಯ ಬಿಜೆಪಿ ಕಲಿಯುವುದೊಳಿತು. ಹಿಮಾಚಲ ಪ್ರದೇಶದಂತೆ ಇಲ್ಲೂ ಸ್ಥಳೀಯ ನಾಯಕತ್ವ ಹೈಕಮಾಂಡ್ ಕೈಗೊಂಬೆಯಾಗದೆ, ಬಲಿಷ್ಠವಾಗಬೇಕು ಹಾಗೂ ಕನ್ನಡದ ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವ ರಾಜಕಾರಣ ಮಾಡಬೇಕು. ಇನ್ನೊಂದು ಮಹತ್ವದ ಸಂಗತಿ ಎಂದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಆಗುವಂತೆ ಆಪ್ ಬೆಳೆಯುತ್ತಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಎಚ್ಚರಿಕೆಯ ಕರೆ. ಅಂದರೆ ಆಪ್ ಅನ್ನು ಮಣಿಸಲು ಅನ್ಯ ಹಾದಿಗಳನ್ನು ತುಳಿಯುವುದಲ್ಲ, ಬದಲಾಗಿ ಆಪ್‌ನ ಧನಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳುವತ್ತ ಬಿಜೆಪಿ- ಕಾಂಗ್ರೆಸ್ ಯೋಚಿಸಬಹುದು. ಆಪ್‌ನ ಕುದುರೆ ಓಟ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯುವ ಸಾಧ್ಯತೆಯೇನೋ ಇದೆ. ಆದರೆ ಅದು ಸ್ಥಳೀಯತೆಯಲ್ಲಿ ಬೇರು ಬಿಡದೆ ಏಕವ್ಯಕ್ತಿ ಯಾಜಮಾನ್ಯದ ಪಕ್ಷವಾಗಿದ್ದರೆ ಹೆಚ್ಚಿನದನ್ನು ಸಾಧಿಸಲಾರದು ಎಂಬುದನ್ನೂ ಗುಜರಾತ್ ಫಲಿತಾಂಶ ಸಾರಿದೆ.
ಇದನ್ನೂ ಓದಿ | Election Result 2022 | ಗುಜರಾತ್, ಹಿಮಾಚಲ ಚುನಾವಣೆ ಬಗ್ಗೆ ಎಕ್ಸಿಟ್ ಪೋಲ್ ಹೇಳಿದ್ದೇನು? ಜನರ ತೀರ್ಪೇನು?