ಆರ್‌ಬಿಐ ಮೊದಲ ಬಾರಿಗೆ ರೂಪಾಯಿಯ ರಿಟೇಲ್ ಡಿಜಿಟಲ್ ಕರೆನ್ಸಿಯನ್ನು ಬೆಂಗಳೂರು ಸೇರಿದಂತೆ ನಾಲ್ಕು ನಗರಗಳಲ್ಲಿ ಡಿಸೆಂಬರ್ 1ರಂದು ಪ್ರಾಯೋಗಿಕವಾಗಿ ಬಿಡುಗಡೆಗೊಳಿಸುತ್ತಿದೆ. ಏನಿದು ಡಿಜಿಟಲ್ ಕರೆನ್ಸಿ? (Central Bank Digital Currency) ಇದರ ಉದ್ದೇಶ ಮತ್ತು ಪ್ರಯೋಜನವೇನು? ಇದು ಸುರಕ್ಷಿತವೇ? ಭಾರತೀಯರು ಇದನ್ನು ಬಳಸಲು ಸಜ್ಜಾಗಿದ್ದಾರೆಯೇ? (ವಿಸ್ತಾರ Money Guide) ಇಲ್ಲಿದೆ ವಿವರ.
ಡಿಜಿಟಲ್ ಕರೆನ್ಸಿ ಬಗ್ಗೆ ಆರ್‌ಬಿಐ ಹೇಳಿದ್ದೇನು?
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (Central bank digital currency) ಶೀಘ್ರದಲ್ಲಿಯೇ ಇ-ರುಪೀಯನ್ನು ನಿರ್ದಿಷ್ಟ ಉದ್ದೇಶಗಳಿಗೆ ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಲಾಗುವುದು. ಡಿಜಿಟಲ್ ಕರೆನ್ಸಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಭಿಯಾನವನ್ನೂ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ತಿಳಿಸಿದೆ.
ಡಿಜಿಟಲ್ ರೂಪಾಯಿಯ ಸ್ವರೂಪ, ಅದರ ಪ್ರಯೋಜನಗಳ ಬಗ್ಗೆ ಕಾಲಾನುಕಾಲಕ್ಕೆ ಮಾಹಿತಿ ನೀಡಲಾಗುವುದು. ಈಗ ಲಭ್ಯವಿರುವ ಕರೆನ್ಸಿಗಳಿಗೆ ಹೆಚ್ಚುವರಿಯಾಗಿ ಡಿಜಿಟಲ್ ಕರೆನ್ಸಿ ಸಿಗಲಿದೆ. ಕೇಂದ್ರ ಬಜೆಟ್‌ನಲ್ಲಿ (೨೦೨೨-೨೩) ಪ್ರಸಕ್ತ ಸಾಲಿನಲ್ಲಿಯೇ ಡಿಜಿಟಲ್ ಕರೆನ್ಸಿ ಬಿಡುಗಡೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಇದು ಒಂದು ಪರ್ಯಾಯ ವಿಧಾನ ಅಥಾ ಆಯ್ಕೆಯೇ ಹೊರತು, ಕ್ಯಾಶ್‌ಲೆಸ್ ಸೊಸೈಟಿ ರೂಪಿಸುವ ಗುರಿ ಇರುವಂಥದ್ದಲ್ಲ ಎಂದು ಆರ್‌ಬಿಐ ತಿಳಿಸಿದೆ. ಡಿಜಿಟಲ್ ಕರೆನ್ಸಿಗೆ ಚಲಾವಣೆಯ ಮಾನ್ಯತೆ ಸಿಗಲಿದ್ದು, ಎಲ್ಲ ನಾಗರಿಕರು, ಉದ್ದಿಮೆಗಳು, ಸರ್ಕಾರಿ ಇಲಾಖೆಗಳು ಬಳಸಬಹುದು. ಸಿಬಿಡಿಸಿಯನ್ನು ನಗದಿಗೆ ಬದಲಿಸಬಹುದು.
ಡಿಜಿಟಲ್ ರೂಪಾಯಿ ಕೊಡು-ಕೊಳ್ಳುವಿಕೆಗೆ ಬ್ಯಾಂಕ್ ಖಾತೆ ಬೇಡ!
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಎನ್ನುವುದು ಬ್ಯಾಂಕ್ ನೋಟ್‌ಗಿಂತ ಬೇರೆಯಲ್ಲ. ಆದರೆ ಡಿಜಿಟಲ್ ಸ್ವರೂಪದಲ್ಲಿ ಇರುತ್ತದೆ. ಹಾಗೂ ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡುತ್ತದೆ. ಡಿಜಿಟಲ್ ರೂಪದಲ್ಲಿ ಇರುವುದರಿಂದ ಅದರದ್ದೇ ಅನುಕೂಲಗಳನ್ನು ಒಳಗೊಂಡಿದೆ. ಕೆಲವು ಸವಾಲುಗಳನ್ನೂ ಒಳಗೊಂಡಿದೆ. ಆದರೆ ಇದರ ಬಳಕೆ ಸುಲಭ, ತ್ವರಿತ ಗತಿಯಲ್ಲಿ ಸಾಧ್ಯ. ಯಾವುದೇ ಮಧ್ಯವರ್ತಿಯ ಅಗತ್ಯವಿಲ್ಲ. ಇದರ ವರ್ಗಾವಣೆಗೆ ಬ್ಯಾಂಕ್ ಖಾತೆಯ ಅಗತ್ಯ ಇಲ್ಲ. ಜಗತ್ತಿನ ನಾನಾ ದೇಶಗಳಲ್ಲಿ ಡಿಜಿಟಲ್ ಕರೆನ್ಸಿಗಳನ್ನು ಬಿಡುಗಡೆಗೊಳಿಸಲಾಗಿದೆ. ಬಹುತೇಕ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲು ಸಂಶೋಧನೆ, ಸಿದ್ಧತೆ ನಡೆಸುತ್ತಿವೆ. ಏಕೆಂದರೆ ಪ್ರತಿಯೊಂದು ದೇಶಕ್ಕೂ ಇದರ ಅಗತ್ಯತೆ ಕಂಡು ಬಂದಿದೆ.
ಡಿಜಿಟಲ್ ಕರೆನ್ಸಿ ಬಂದರೆ ಈಗ ಇರುವ ಬ್ಯಾಂಕ್ ನೋಟುಗಳಿಗೆ ಯಾವುದೇ ತೊಂದರೆ ಇರುವುದಿಲ್ಲ. ಅವುಗಳ ಜತೆಗೆ ಹೆಚ್ಚುವರಿ ಆಯ್ಕೆಯಾಗಿ ಸಿಬಿಡಿಸಿ ಇರುತ್ತದೆ. ದೇಶ-ಗಡಿಗಳ ಹಂಗಿಲ್ಲದೆ ಡಿಜಿಟಲ್ ರೂಪಾಯಿಯನ್ನು ಪರಿಚಯಿಸಲು ಆರ್‌ಬಿಐಗೆ ಇದರಿಂದ ಹಾದಿ ಸುಗಮವಾಗಲಿದೆ.
ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತದ ಕ್ರಾಂತಿ
ಭಾರತ ಡಿಜಿಟಲ್ ಪೇಮೆಂಟ್‌ಗಳಲ್ಲಿ ಕ್ರಾಂತಿಕಾರಕ ಪ್ರಗತಿಯನ್ನು ಸಾಧಿಸಿದೆ. ಪೇಮೆಂಟ್ ಮತ್ತು ಸೆಟ್ಲ್‌ಮೆಂಟ್ ಸಿಸ್ಟಮ್‌ಗಳಿಗೆ ಪ್ರತ್ಯೇಕ ಕಾನೂನು ಇದೆ. ಇದರಿಂದ ಪೇಮೆಂಟ್ ಸಿಸ್ಟಮ್ ಕಾಲಾನುಸಾರ ಬೆಳವಣಿಗೆಯಾಗಿದೆ. ಹಣ ಪಾವತಿಯ ವಿಧಾನ ಕೈಗಟಕುತ್ತಿದೆ. ಸುಲಭವಾಗಿದೆ. ತಂತ್ರಜ್ಞಾನ ಆಧಾರಿತವಾಗಿದೆ. ಸುರಕ್ಷಿತವಾಗಿದೆ. ದಿನದ 24 ಗಂಟೆಯೂ ವರ್ಷದ 365 ದಿನಗಳಲ್ಲಿಯೂ ಇದು ಲಭ್ಯವಿದೆ. ಆರ್‌ಟಿಜಿಎಸ್, ಎನ್‌ಇಎಫ್‌ಟಿ (ನೆಫ್ಟ್) ಅನುಕೂಲದಿಂದ ಎಲೆಕ್ಟ್ರಾನಿಕ್ ಪೇಮೆಂಟ್ ಸಿಸ್ಟಮ್ ಸುಧಾರಿಸಿದೆ. ಐಎಂಪಿಎಸ್ ಮತ್ತು ಯುಪಿಐ (Unified payments interface) ತಂತ್ರಜ್ಞಾನದಿಂದಾಗಿ ಹಣಕಾಸು ವರ್ಗಾವಣೆಯಲ್ಲಿ ಕ್ರಾಂತಿಕಾರಕ ಪರಿವರ್ತನೆ ಸಂಭವಿಸಿದೆ. ಇದೀಗ ಡಿಜಿಟಲ್ ಕರೆನ್ಸಿಯ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿದ ನಂತರ ಬಿಡುಗಡೆಗೆ ಆರ್‌ಬಿಐ ಸಜ್ಜಾಗುತ್ತಿದೆ.
ಡಿಜಿಟಲ್ ಕರೆನ್ಸಿಯ ಉದ್ದೇಶ ಏನು?
ಡಿಜಿಟಲ್ ಕರೆನ್ಸಿಗೆ ವಿಶಿಷ್ಟವಾದ ಅನುಕೂಲಗಳು ಇವೆ. ವಿಶ್ವಾಸ, ಸುರಕ್ಷತೆ, ನಗದೀಕರಣ, ಸೆಟ್ಲ್‌ಮೆಂಟ್, ಅಂತಿಮವಾಗಿ ಸಮಗ್ರತೆಯ ವಿಚಾರದಲ್ಲಿ ಡಿಜಿಟಲ್ ಕರೆನ್ಸಿಯಿಂದ ಪ್ರಯೋಜನ ಇದೆ. ಭೌತಿಕ ನಗದು ರೂಪಾಯಿಗಳ ನಿರ್ವಹಣೆಗೆ ತಗಲು ವೆಚ್ಚವನ್ನು ಗಮನಿಸಿದರೆ, ಡಿಜಿಟಲ್ ಕರೆನ್ಸಿಗೆ ಕಡಿಮೆ. ಪೇಮೆಂಟ್ ಸಿಸ್ಟಮ್‌ನಲ್ಲಿ ಹೆಚ್ಚು ದಕ್ಷತೆ ಸಿಗಲಿದೆ. ಸಿಬಿಡಿಸಿಯ ಆಫ್‌ಲೈನ್ ಬಳಕೆಯ ಫೀಚರ್ ಕೂಡ ಹಿಂದುಳಿದ ಪ್ರದೇಶಗಳಲ್ಲಿ, ವಿದ್ಯುತ್ ಅಥವಾ ಮೊಬೈಲ್ ನೆಟ್ ವರ್ಕ್ ಇಲ್ಲದಿರುವ ಕಡೆಗಳಲ್ಲಿ ಅನುಕೂಲಕರವಾಗಲಿದೆ.
ಖಾಸಗಿ ಕ್ರಿಪ್ಟೊ ಕರೆನ್ಸಿಗಳ ಸವಾಲು
ದೇಶದಲ್ಲಿ ಖಾಸಗಿ ಕ್ರಿಪ್ಟೊ ಕರೆನ್ಸಿಗಳು ಹಣದ ಪರಿಕಲ್ಪನೆಯನ್ನೇ ಬದಲಿಸುತ್ತಿವೆ. ಅವುಗಳಿಗೆ ಆರ್‌ಬಿಐನಿಂದ ಕರೆನ್ಸಿಯ ಮಾನ್ಯತೆ ಇರದಿದ್ದರೂ, ಇವುಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಹಣದ ಮೂಲಭೂತ ಉದ್ದೇಶಗಳಿಗೆ ಧಕ್ಕೆಯಾಗುವ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ತನ್ನದೇ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ.
ಡಿಜಿಟಲ್ ಕರೆನ್ಸಿಯ ವಿಧಗಳು: ಉದ್ದೇಶಿತ ಡಿಜಿಟಲ್ ಕರೆನ್ಸಿ ಮುಖ್ಯವಾಗಿ ಎರಡು ವಿಧಗಳಲ್ಲಿ ಇರಲಿದೆ. ಸಾಮಾನ್ಯ ಅಥವಾ ರಿಟೇಲ್ ಬಳಕೆಗೆ (CBDC-R) ಚಲಾವಣೆಯಲ್ಲಿ ಇರುವಂಥದ್ದು. ಇದನ್ನು ದೈನಂದಿನ ಸಾಮಾನ್ಯ ಹಣಕಾಸು ಚಲಾವಣೆಗೆ ಬಳಸಬಹುದು. ಇನ್ನೊಂದು ಹಣಕಾಸೇತರ ಗ್ರಾಹಕರು ಬಳಸುವ, ಬಿಸಿನೆಸ್ ಉದ್ದೇಶಗಳಿಗೆ ಬಳಸುವ ಹೋಲ್‌ಸೇಲ್ ಸಿಬಿಡಿಸಿ ( CBDC-W). ಇದನ್ನು ಬ್ಯಾಂಕ್‌ಗಳ ನಡುವೆ ಬಳಸಬಹುದು. ಸಗಟು ಹಣಕಾಸು ವರ್ಗಾವಣೆಗೆ ಉಪಯೋಗಿಸಬಹುದು.
ಹೊಣೆಗಾರಿಕೆಯಲ್ಲಿ ಎರಡು ಮಾದರಿ:
ಈ ಡಿಜಿಟಲ್ ಕರೆನ್ಸಿಯ ಬಿಡುಗಡೆ ಮತ್ತು ನಿರ್ವಹಣೆಯ ಕಾನೂನಾತ್ಮಕ ಉತ್ತರದಾಯಿತ್ವ, ಹೊಣೆಗಾರಿಕೆಯಲ್ಲಿ ಎರಡು ಮಾದರಿಗಳಿರಲಿವೆ. ಅವುಗಳೆಂದರೆ ಏಕ ಸ್ತರದ ಮಾದರಿ (Single Tier model) ಮತ್ತು ದ್ವಿಸ್ತರದ ಮಾದರಿ (Two-Tier model). ಏಕ ಸ್ತರದ ನೇರ ಮಾದರಿಯಲ್ಲಿ ಸಿಬಿಡಿಸಿ ಸಿಸ್ಟಮ್‌ನ ಬಿಡುಗಡೆ-ನಿರ್ವಹಣೆ, ಅಕೌಂಟ್ ಕೀಪಿಂಗ್, ವರ್ಗಾವಣೆಯ ಪರಿಶೀಲನೆ ಎಲ್ಲವನ್ನೂ ಆರ್‌ಬಿಐ ಮಾಡಲಿದೆ. ದ್ವಿಸ್ತರದ ಪರೋಕ್ಷ ಮಾದರಿಯಲ್ಲಿ ಸೆಂಟ್ರಲ್ ಬ್ಯಾಂಕ್, ಬ್ಯಾಂಕ್‌ಗಳು, ಸರ್ವೀಸ್ ಪ್ರೊವೈಡರ್ಸ್ ಎದಲ್ಲರಿಗೂ ಅವರದ್ದೇ ಜವಾಬ್ದಾರಿ ಇರುತ್ತದೆ.
500, 100, 50 ರೂ. ಮುಖಬೆಲೆಯಲ್ಲಿ ಡಿಜಿಟಲ್ ಕರೆನ್ಸಿ: ಸಿಬಿಡಿಸಿಗಳು ಬ್ಯಾಂಕ್ ನೋಟುಗಳ ಮುಖಬೆಲೆಯ ಮಾದರಿಯಲ್ಲಿ 500, 100, 50 ರೂ. ಇತ್ಯಾದಿ ನಿಗದಿತ ಮುಖಬೆಲೆಯಲ್ಲಿ ಸಿಗಲಿದೆ. ಟೋಕನ್ ಆಧಾರಿತವಾಗಿರಲಿದೆ.
ಜನತೆಗೆ ಪ್ರಯೋಜನವೇನು? ಖಾಸಗಿ ಕ್ರಿಪ್ಟೊ ಕರೆನ್ಸಿಗಳಿಗೆ ಆರ್‌ಬಿಐ ಮಾನ್ಯತೆ ಇಲ್ಲ. ಯಾವುದೇ ನಿಯಂತ್ರಣವೂ ಇಲ್ಲ. ಹೀಗಾಗಿ ಅನೇಕ ಮಂದಿ ದುಡ್ಡು ಕಳೆದುಕೊಂಡಿದ್ದಾರೆ. ಆದರೆ ಡಿಜಿಟಲ್ ಕರೆನ್ಸಿಗೆ ಮಾನ್ಯತೆ ಇರಲಿದೆ. ನಿಯಂತ್ರಕ ವ್ಯವಸ್ಥೆಯಾಗಿ ಸ್ವತಃ ಆರ್‌ಬಿಐ ಉತ್ತರದಾಯಿತ್ವವನ್ನು ಹೊಂದಿರುತ್ತದೆ. ವಿದೇಶಗಳಲ್ಲಿರುವ ಭಾರತೀಯರಿಗೆ ತವರಿಗೆ ಹಣ ಕಳುಹಿಸುವುದು ಸುಲಭವಾಗಲಿದೆ ಎಂಬ ನಿರೀಕ್ಷೆ ಇದೆ.
ಸವಾಲೇನು? ಡಿಜಿಟಲ್ ಕರೆನ್ಸಿಯ ಸುರಕ್ಷತೆ ಸದ್ಯದ ಮಟ್ಟಿಗೆ ಪ್ರಶ್ನಾರ್ಹ. ಏಕೆಂದರೆ ಅದು ಬಿಡುಗಡೆಯಾಗಿ ಬಳಕೆಯಾದ ಬಳಿಕವಷ್ಟೇ ಸಾಬೀತಾಗಲಿದೆ. ಹೀಗಾಗಿ ಇದರ ಸಾಧಕ-ಬಾಧಕಗಳ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಲು ಕಾಯಬೇಕಾದ ಅನಿವಾರ್ಯತೆ ಇದೆ. ಆದರೆ ಒಂದು ಸಲ ವ್ಯವಸ್ಥೆ ಪ್ರಬುದ್ಧತೆ ಗಳಿಸಿದ ಬಳಿಕ ಇದರಿಂದ ಪ್ರಯೋಜನವೇ ಹೆಚ್ಚು ಎನ್ನುತ್ತಾರೆ ಸೈಬರ್ ತಜ್ಞರಾದ ಡಾ. ಹರ್ಷ. ಬಹುತೇಕ ಎಲ್ಲ ಆನ್‌ಲೈನ್ ಸಾಧನಗಳ ಮೂಲಕ ಡಿಜಿಟಲ್ ಕರೆನ್ಸಿ ವರ್ಗಾವಣೆ ಸಾಧ್ಯವಾಗಲಿದೆ. ಆದರೆ ಇದರ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು, ಜಾಗೃತಿ ಮುಖ್ಯ. ಇಲ್ಲದಿದ್ದರೆ, ಇಲ್ಲಿಯೂ ಸೈಬರ್ ವಂಚನೆಗೆ ಒಳಗಾಗುವ ಅಪಾಯ ಇದೆ ಎನ್ನುತ್ತಾರೆ ಅವರು.
ಸಾಲಪತ್ರಗಳ ವಹಿವಾಟಿನಲ್ಲಿ ಆರಂಭಿಕ ಬಳಕೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಗಟು (Wholesale) ವಿಭಾಗದಲ್ಲಿ ಡಿಜಿಟಲ್ ಕರೆನ್ಸಿಯನ್ನು ಮೊದಲು ಬಿಡುಗಡೆ ಮಾಡಲಿದೆ. ಅದೂ ಸರ್ಕಾರಿ ಸಾಲಪತ್ರಗಳ ವಹಿವಾಟಿನಲ್ಲಿ ಮೊದಲ ಸಲ ಬಳಕೆಯಾಗಲಿದೆ. ಸರ್ಕಾರಿ ಸಾಲಪತ್ರಗಳ (Government securities) ಸೆಕೆಂಡರಿ ಮಾರುಕಟ್ಟೆ ವರ್ಗಾವಣೆಗಳಲ್ಲಿ ಡಿಜಿಟಲ್ ಕರೆನ್ಸಿ ರೂಪಾಯಿಯನ್ನು ಬಳಕೆಗೆ ನವೆಂಬರ್ 1ರಿಂದ ಅನುಮತಿ ನೀಡಲಾಗುವುದು. ಬ್ಯಾಂಕ್‌ಗಳ ನಡುವೆ ಡಿಜಿಟಲ್ ವರ್ಗಾವಣೆಗೆ ಬಳಕೆಯಿಂದ, ವರ್ಗಾವಣೆಯ ವೆಚ್ಚ ಕಡಿಮೆಯಾಗಲಿದೆ. ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್, ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿಯನ್ನು ಈ ಪ್ರಾಯೋಗಿಕ ಯೋಜನೆಯಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಇದನ್ನೂ ಓದಿ:Digital Rupee | ಬೆಂಗಳೂರಿನಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಡಿಸೆಂಬರ್ 1ಕ್ಕೆ ಬಿಡುಗಡೆ