Site icon Vistara News

ವಿಸ್ತಾರ Explainer | ಏನಿದು ಸಿ-295 ಸರಕು ಸಾಗಣೆ ವಿಮಾನ? ದೇಶದ ರಕ್ಷಣಾ ವ್ಯವಸ್ಥೆಗೆ ಹೇಗೆ ಬಲ?

Airbus

ಸೋಮಶೇಖರ್‌ ಬಿ, ಬೆಂಗಳೂರು

ಗುಜರಾತ್‌ನ ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ವಾಯುಪಡೆಗಾಗಿ ಸರಕು ಸಾಗಣೆ ವಿಮಾನಗಳನ್ನು ಉತ್ಪಾದಿಸುವ ಘಟಕಕ್ಕೆ ಚಾಲನೆ ನೀಡಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ವಾಯುಪಡೆಗಾಗಿ ವಿಮಾನಗಳನ್ನು ಉತ್ಪಾದಿಸುತ್ತಿದ್ದು, ಆತ್ಮನಿರ್ಭರ ಭಾರತಕ್ಕೆ ಇದು ಸಹಕಾರಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗಾದರೆ, ವಡೋದರಾದಲ್ಲಿ ಉತ್ಪಾದಿಸುವ ಸಿ-295 ಸರಕು ಸಾಗಣೆ ವಿಮಾನಗಳು ದೇಶದ ರಕ್ಷಣಾ ವ್ಯವಸ್ಥೆಗೆ ಹೇಗೆ ಬಲ ನೀಡಲಿವೆ? ಆತ್ಮನಿರ್ಭರ ಭಾರತ, ಮೇಕ್‌ ಇನ್‌ ಇಂಡಿಯಾಗೆ ಹೇಗೆ ಉತ್ತೇಜನ ನೀಡಲಿವೆ? ಏನಿದು ಯೋಜನೆ? ಎಷ್ಟು ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲಾಗುತ್ತದೆ ಎಂಬುದರ ವಿವರಣೆ (ವಿಸ್ತಾರ Explainer) ಇಲ್ಲಿದೆ.

ಏನಿದು ಯೋಜನೆ?

ಭಾರತದಲ್ಲಿಯೇ ಸುಧಾರಿತ ತಂತ್ರಜ್ಞಾನವುಳ್ಳ ಸಿ-295 ಸರಕು ಸಾಗಣೆ ವಿಮಾನಗಳನ್ನು ಉತ್ಪಾದಿಸುವುದೇ ಯೋಜನೆಯ ಪ್ರಮುಖ ಉದ್ದೇಶವಾಗಿದೆ. 2021ರ ಸೆಪ್ಟೆಂಬರ್‌ನಲ್ಲಿ ಏರ್‌ಬಸ್‌ ಡಿಫೆನ್ಸ್‌ ಹಾಗೂ ಸ್ಪೇನ್‌ನ ಸ್ಪೇಸ್‌ ಕಂಪನಿ ನಡುವಿನ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಇದರ ಅಡಿಯಲ್ಲಿ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ (TASL) ಹಾಗೂ ಸ್ಪೇನ್‌ನ ಸ್ಪೇಸ್‌ ಕಂಪನಿಗಳು ಜತೆಗೂಡಿ ಭಾರತದಲ್ಲಿ ಸಿ-295 ವಿಮಾನಗಳನ್ನು ಉತ್ಪಾದಿಸಲಿವೆ. ಒಪ್ಪಂದ ಪ್ರಕಾರ ನಾಲ್ಕು ವರ್ಷದಲ್ಲಿ ಸ್ಪೇನ್‌ ಭಾರತಕ್ಕೆ 16 ಸಿ-295 ವಿಮಾನಗಳನ್ನು ಪೂರೈಸಲಾಗುತ್ತದೆ. ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಸಂಸ್ಥೆಯು ಭಾರತದಲ್ಲಿಯೇ 40 ವಿಮಾನಗಳನ್ನು ಭಾರತದಲ್ಲಿಯೇ ಉತ್ಪಾದಿಸಲಿದೆ. ಇದಕ್ಕಾಗಿ ಒಟ್ಟು 21,935 ಕೋಟಿ ರೂ. ವ್ಯಯವಾಗಲಿದೆ.

ಕೆಲವೇ ದೇಶಗಳ ಸಾಲಿಗೆ ಸೇರಲಿದೆ ಭಾರತ

ವಾಯುಪಡೆಗಾಗಿ ಸರಕು ಸಾಗಣೆ ವಿಮಾನಗಳನ್ನು ದೇಶೀಯವಾಗಿಯೇ ಉತ್ಪಾದಿಸುತ್ತಿರುವ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತ ಸೇರಲಿದೆ. ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌, ರಷ್ಯಾ, ಇಟಲಿ, ಉಕ್ರೇನ್‌, ಬ್ರೆಜಿಲ್‌, ಚೀನಾ ಹಾಗೂ ಜಪಾನ್‌ನಲ್ಲಿ ಮಾತ್ರ ಸದ್ಯ ಸರಕು ಸಾಗಣೆ ವಿಮಾನಗಳನ್ನು ಉತ್ಪಾದಿಸಲಾಗುತ್ತಿದೆ. ಇವುಗಳ ಸಾಲಿಗೆ ಭಾರತವೂ ಸೇರಲಿದೆ. ಟಾಟಾ ಏರ್‌ಬಸ್‌ 2031ರ ವೇಳೆಗೆ 40 ವಿಮಾನಗಳನ್ನು ಉತ್ಪಾದಿಸಿ ದೇಶದ ವಾಯುಪಡೆಗೆ ನೀಡಲಿದೆ. ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ಉತ್ಪಾದನೆಯಾಗುವ ಸರಕು ಸಾಗಣೆ ವಿಮಾನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದು ಸಹ ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಮಿಲಿಟರಿ ಸರಕು ಸಾಗಣೆ ಕ್ಷೇತ್ರದ ಮಾರುಕಟ್ಟೆ ಮೌಲ್ಯವು 2030ರ ವೇಳೆಗೆ 45 ಶತಕೋಟಿ ಡಾಲರ್‌ಗೆ ಏರಿಸುವುದು ಸಹ ಕೇಂದ್ರದ ಗುರಿಯಾಗಿದೆ.

ಸಿ-295 ವಿಮಾನಗಳ ವೈಶಿಷ್ಟ್ಯವೇನು?

ಸಿ-295 ಹೊಸ ಜನರೇಷನ್‌ನ ಸರಕು ಸಾಗಣೆ ವಿಮಾನವಾಗಿದೆ. ವಾಯುಪಡೆಯ ಯಾವುದೇ ಕಾರ್ಯಾಚರಣೆಗಳಿಗೆ ಸರಕು ಸಾಗಣೆ ಮಾಡಲು ಇದು ಮಹತ್ವದ ಪಾತ್ರ ನಿರ್ವಹಿಸಲಿದೆ. ಜಗತ್ತಿನ ಯಾವುದೇ ಭಾಗದಲ್ಲಿ, ಯಾವುದೇ ಹವಾಮಾನದಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ವಿಮಾನದ ಕೆಲ ವೈಶಿಷ್ಟ್ಯಗಳು ಹೀಗಿವೆ:

  1. ಸಿ-295 ವಿಮಾನಕ್ಕೆ 5-10 ಟನ್‌ ಸರಕುಗಳನ್ನು ಸಾಗಣೆ ಮಾಡುವ ಸಾಮರ್ಥ್ಯವಿದೆ. ಯಾವುದೇ ಹವಾಮಾನದಲ್ಲಿ ಕಾರ್ಯನಿರ್ವಹಿಸುವ, ಹಗಲು-ರಾತ್ರಿ ಸಾಗಣೆ ಮಾಡುವ ದಕ್ಷತೆ ಹೊಂದಿದೆ. ಇದು ವಾಯುಪಡೆಯ ಆವ್ರೊ (Avro) ಸರಕು ಸಾಗಣೆಯ ಬದಲಾಗಿ ಕಾರ್ಯನಿರ್ವಹಿಸಲಿದೆ.
  2. ವ್ಯೂಹಾತ್ಮಕ ಉಪಕರಣಗಳ ಸರಕು ಸಾಗಣೆಯ ಜತೆಗೆ ವಿಮಾನದಲ್ಲಿ 71 ಸೈನಿಕರು ಅಥವಾ 50 ಪ್ಯಾರಾಟ್ರೂಪರ್‌ಗಳನ್ನು ಸಾಗಣೆ ಮಾಡಬಹುದಾಗಿದೆ. ಕಾರ್ಗೊ ಉದ್ದೇಶಗಳು ಹಾಗೂ ಸೈನಿಕರ ಪ್ಯಾರಾ ಡ್ರಾಪಿಂಗ್‌ಗೂ ಬಳಕೆ ಮಾಡಬಹುದಾದ ಕಾರಣ ಇದು ಸರಕು ಸಾಗಣೆಗೆ ಹೇಳಿ ಮಾಡಿಸಿದ ವಿಮಾನ ಎಂದೇ ಹೇಳಲಾಗುತ್ತದೆ.
  3. ಸರಕು ಸಾಗಣೆಯ ಜತೆಗೆ ವಿಶೇಷ ಕಾರ್ಯಾಚರಣೆಗಳಿಗೂ ಸಿ-295 ವಿಮಾನಗಳನ್ನು ಬಳಕೆ ಮಾಡಬಹುದಾಗಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಜನರ ಕಾರ್ಯಾಚರಣೆ ಹಾಗೂ ಸಾಗರ ಪ್ರದೇಶಗಳಲ್ಲಿ ಗಸ್ತು ತಿರುಗಲು ಸಹ ಇವುಗಳನ್ನು ಬಳಸಬಹುದಾಗಿದೆ.

ರಕ್ಷಣಾ ಕ್ಷೇತ್ರಕ್ಕೆ ಹೇಗೆ ಬಲ? ಏನೇನು ಸಾಗಣೆ?

ಆಧುನಿಕ ಯುಗದಲ್ಲಿ ಯುದ್ಧ, ದಾಳಿ, ಆಕ್ರಮಣಗಳ ಮಾದರಿ ಬದಲಾಗಿವೆ. ಹಾಗಾಗಿ, ರಕ್ಷಣಾ ಸಾಮಗ್ರಿಗಳ ಕ್ಷಿಪ್ರ ಸಾಗಣೆ ಅತ್ಯವಶ್ಯವಾಗಿದೆ. ಇದರ ದೃಷ್ಟಿಯಿಂದ ನೋಡುವುದಾದರೆ ಸಿ-295 ವಿಮಾನಗಳು ರಕ್ಷಣಾತ್ಮಕ, ತಂತ್ರಜ್ಞಾನ ಹಾಗೂ ವ್ಯೂಹಾತ್ಮಕವಾಗಿ ರಕ್ಷಣಾ ಕ್ಷೇತ್ರಕ್ಕೆ ಅಮೂಲ್ಯವಾಗಿವೆ. ಯೋಧರು, ಡ್ರೋನ್‌ಗಳು, ಮದ್ದು-ಗುಂಡುಗಳು, ಅತ್ಯಾಧುನಿಕ ಗನ್‌ಗಳು ಸೇರಿ ಹತ್ತಾರು ರಕ್ಷಣಾ ಸಾಮಗ್ರಿಗಳನ್ನು ಸಾಗಿಸಲು ಭಾರತಕ್ಕೆ ಸರಕು ಸಾಗಣೆ ವಿಮಾನಗಳು ನಿರ್ಣಾಯಕ ಎನಿಸಲಿವೆ. ದೇಶದಲ್ಲಿಯೇ ಉತ್ಪಾದಿಸಲಿರುವ 40 ವಿಮಾನಗಳ 13,400 ಭಾಗಗಳು, 4,600 ಸಣ್ಣ ಸಣ್ಣ ಪ್ರಮುಖ ಉಪಕರಣಗಳನ್ನು ದೇಶೀಯವಾಗಿಯೇ ಉತ್ಪಾದಿಸಲಾಗುತ್ತದೆ. ಅದರಲ್ಲೂ, ದೇಶದ ಏಳು ರಾಜ್ಯಗಳಲ್ಲಿರುವ 25 ಎಂಎಸ್‌ಎಂಇಗಳೇ ವಿಮಾನಗಳ ಭಾಗಗಳನ್ನು ಉತ್ಪಾದಿಸುತ್ತಿರುವುದು ವಿಶೇಷವಾಗಿದೆ. ಅದರಲ್ಲೂ, ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಹೊರತಾದ ದೇಶಗಳಲ್ಲಿ ಇದೇ ಮೊದಲ ಬಾರಿಗೆ, ಅದರಲ್ಲೂ ಭಾರತದಲ್ಲಿ ಸಿ-295 ವಿಮಾನಗಳನ್ನು ಉತ್ಪಾದಿಸುತ್ತಿರುವುದು ಪ್ರಮುಖವಾಗಿದೆ.

ಇದನ್ನೂ ಓದಿ | C-295 Planes | ಸೇನೆಗಾಗಿ ಸರಕು ಸಾಗಣೆ ವಿಮಾನ ಉತ್ಪಾದನೆ ಘಟಕಕ್ಕೆ ಮೋದಿ ಶಿಲಾನ್ಯಾಸ, ಆತ್ಮನಿರ್ಭರಕ್ಕೆ ಬಲ

Exit mobile version