ಉತ್ತರಾಖಂಡ(Uttarakhand) ಸರ್ಕಾರವು ನಾಲ್ಕು ದಿನಗಳ ವಿಶೇಷ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕವನ್ನು ಅಂಗೀಕಾರ ಮಾಡಿದೆ. (Uniform Civil Code Bill). ಆ ಮೂಲಕ, ಈ ಸಂಹಿತೆ ಜಾರಿಗೆ ತಂದ ಸ್ವತಂತ್ರ ಭಾರತದ ಮೊದಲ ರಾಜ್ಯ ಎಂಬ ಖ್ಯಾತಿ ಪಾತ್ರವಾಗಿದೆ. ಗೋವಾದಲ್ಲಿ ಈಗಾಗಲೇ ಏಕರೂಪ ನಾಗರಿಕ ಸಂಹಿತೆಯಿದೆ. ಆದರ ಅದು ಪೋರ್ಚುಗೀಸ್ ಆಡಳಿತವಿದ್ದಾಗಲೇ ಅನುಷ್ಠಾನಗೊಂಡಿದೆ.
ವಿಧೇಯಕ ಕುರಿತು ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮದುವೆ, ಜೀವನಾಂಶ, ಉತ್ತರಾಧಿಕಾರ ಮತ್ತು ವಿಚ್ಛೇದನದಂತಹ ವಿಷಯಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಏಕರೂಪ ನಾಗರಿಕ ಸಂಹಿತೆ ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ ಎಂದು ಹೇಳಿದರು.
ಏಕರೂಪ ಅಥವಾ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಕುರಿತ ಮಾತು ನಮ್ಮ ದೇಶದಲ್ಲಿ ಆಗಾಗ ಕೇಳಿಬರುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರ ಹೆಜ್ಜೆಯಿಡುವ ಸೂಚನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಏಕರೂಪ ನಾಗರಿಕ ಸಂಹಿತೆ ಜಾರಿ ಪರವಾಗಿ ಬ್ಯಾಟ್ ಬೀಸಿದ್ದರು. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಕೂಡ ಹೇಳಿತ್ತು.
ಇದನ್ನೂ ಓದಿ : Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ
ಹಾಗಿದ್ದರೆ ಏನಿದು ಏಕರೂಪ ಅಥವಾ ಸಮಾನ ನಾಗರಿಕ ಸಂಹಿತೆ? ಇದರ ಅಗತ್ಯವೇನು? ಇದು ಇಲ್ಲದಿದ್ದರೆ ಏನು ತೊಂದರೆ? ಯಾರು ಇದನ್ನು ಪ್ರತಿಪಾದಿಸಿದವರು?
ಏಕರೂಪ ನಾಗರಿಕ ಸಂಹಿತೆ ಎಂದರೇನು?
ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರ ಸೇರಿದಂತೆ ಭಾರತದ ಎಲ್ಲಾ ನಾಗರಿಕರಿಗೆ ಅನ್ವಯವಾಗುವ, ಅವರ ಧರ್ಮವನ್ನು ಲೆಕ್ಕಿಸದೆ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಕಾನೂನುಗಳ ಒಂದು ಗುಂಪಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಪರಿಕಲ್ಪಿಸಲಾಗಿದೆ. ಈಗ ಅಸ್ತಿತ್ವದಲ್ಲಿರುವ ವೈವಿಧ್ಯಮಯ ವೈಯಕ್ತಿಕ ಕಾನೂನುಗಳನ್ನು ಬದಲಿಸುವ ಗುರಿ ಇದರದು.
ವೈಯಕ್ತಿಕ ಕಾನೂನಿನ ಭಿನ್ನತೆ
ಭಾರತದಲ್ಲಿ ಮತದ ಆಧಾರದ ಹಲವು ವೈಯಕ್ತಿಕ ಅಧಿಕಾರ, ಸ್ವಾಮ್ಯ ಇತ್ಯಾದಿಗಳು ಭಿನ್ನವಾಗಿವೆ. ಮುಖ್ಯವಾಗಿ ಮಹಿಳೆಯರ ಉತ್ತರಾಧಿಕಾರದ ಹಕ್ಕು. 1956ರ ಹಿಂದೂ ಉತ್ತರಾಧಿಕಾರ ಕಾಯಿದೆಯಡಿಯಲ್ಲಿ, (ಇದು ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರ ಹಕ್ಕುಗಳನ್ನು ನಿಯಂತ್ರಿಸುತ್ತದೆ) ಹಿಂದೂ ಮಹಿಳೆಯರು ತಮ್ಮ ಪೋಷಕರ ಆಸ್ತಿಗೆ ಗಂಡು ಮಕ್ಕಳಷ್ಟೇ ಸಮಾನ ಹಕ್ಕುದಾರರು. ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳ ಹಕ್ಕುಗಳು ಸಮಾನವಾಗಿರುತ್ತವೆ. ಪೂರ್ವಜರ ಆಸ್ತಿ ವಿಭಜನೆ ಸಂದರ್ಭ ಮಹಿಳೆಯರನ್ನು ಸಮಾನ ಉತ್ತರಾಧಿಕಾರಿಯಗಿಯೇ ಪರಿಗಣಿಸಲಾಗುತ್ತದೆ.
ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಮುಸ್ಲಿಂ ಮಹಿಳೆಯರು ತಮ್ಮ ಗಂಡನ ಆಸ್ತಿಯಲ್ಲಿ 1/8ನೇ ಅಥವಾ 1/4 ಭಾಗದಷ್ಟು ಪಾಲು ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ. ಇದು ಕೂಡ ಮಕ್ಕಳ ಉಪಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದರೆ, ಇದರಲ್ಲೂ ಪುತ್ರಿಯರ ಪಾಲು ಪುತ್ರರ ಪಾಲಿನ ಅರ್ಧದಷ್ಟು.
ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಯಹೂದಿಗಳಿಗೆ 1925ರ ಭಾರತೀಯ ಉತ್ತರಾಧಿಕಾರ ಕಾಯಿದೆ ಅನ್ವಯಿಸುತ್ತದೆ. ಮಕ್ಕಳು ಅಥವಾ ಇತರ ಸಂಬಂಧಿಕರ ಉಪಸ್ಥಿತಿಯ ಆಧಾರದ ಮೇಲೆ ಕ್ರಿಶ್ಚಿಯನ್ ಮಹಿಳೆಯರು ಪಾಲನ್ನು ಪಡೆಯುತ್ತಾರೆ. ಪಾರ್ಸಿ ವಿಧವೆಯರು ತಮ್ಮ ಮಕ್ಕಳಂತೆ ಸಮಾನ ಪಾಲನ್ನು ಪಡೆಯುತ್ತಾರೆ. ಮೃತರ ಪೋಷಕರು ಜೀವಂತವಾಗಿದ್ದರೆ, ಮೃತರ ಮಗು ಪಡೆಯುವ ಆಸ್ತಿಯ ಅರ್ಧದಷ್ಟು ಪಾಲು ಸತ್ತವರ ಪೋಷಕರಿಗೆ ಹೋಗುತ್ತದೆ.
ಇವೆಲ್ಲವೂ ಭಾರತದಲ್ಲಿ ಗೊಂದಲ- ಗೋಜಲು ಸೃಷ್ಟಿಸಿವೆ. ಅಂತರ್‌ಮತೀಯ- ಅಂತರ್‌ಜಾತೀಯ ಮದುವೆಗಳಾದಾಗ ಆಸ್ತಿ ಹಕ್ಕಿನ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಭಾರತೀಯ ಸಂವಿಧಾನ ʼಎಲ್ಲರಿಗೂ ಸಮಾನʼ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ನೀಡಿದೆಯಾದರೂ, ಆಸ್ತಿ ವಿಚಾರದಲ್ಲಿ ಬೇರೆ ಬೇರೆ ಧರ್ಮಗಳು ಬೇರೆ ಬೇರೆ ಕಾನೂನುಗಳನ್ನು ಹೊಂದಿರುವುದರಿಂದ ಸಮಾನತೆ ಸಾಧಿಸಲು ಸಾಧ್ಯವಾಗಿಲ್ಲ. ಇದನ್ನು ತೊಡೆಯುವ ಉದ್ದೇಶ ಯುಸಿಸಿಯದು.
ಮುಸ್ಲಿಮ್ ಕಾನೂನುಗಳು ಷರಿಯಾ ಆಧರಿತವಾಗಿವೆ. ಹೀಗಾಗಿ ವಿವಾಹ, ಉತ್ತರಾಧಿಕಾರ, ಆಸ್ತಿ ಹಂಚಿಕೆ, ವಿಚ್ಛೇದನ, ಜೀವನಾಂಶ ಮುಂತಾದ ವಿಚಾರಗಳಲ್ಲಿ ಗಣನೀಯವಾದ ಭೇದಗಳಿವೆ. ಇದು ಒಂದೇ ದೇಶದ ಪ್ರಜೆಗಳಲ್ಲಿ ಭೇದವನ್ನು ಸೃಷ್ಟಿಸಿದೆ. ʼʼಸೆಕ್ಯುಲರ್ ಆಗಿರುವ ಒಂದು ದೇಶದಲ್ಲಿ ಕಾನೂನುಗಳು ಬೇರೆ ಬೇರೆಯಾಗಿರಲು ಹೇಗೆ ಸಾಧ್ಯ?ʼʼ ಎಂದು ಗೃಹ ಸಚಿವರು ಹಿಂದೆ ಪ್ರಶ್ನಿಸಿದ್ದರು.
ಇದನ್ನೂ ಓದಿ : Uniform Civil Code: ʻಹಿಂದೂಗಳಿಗೆ ಯಾಕಿಲ್ಲ?ʼ ಏಕರೂಪ ನಾಗರಿಕ ಸಂಹಿತೆ ವಿರುದ್ಧ ಓವೈಸಿ ಕಿಡಿ
ಸಂವಿಧಾನ ಏನು ಹೇಳಿದೆ?
ಸಂವಿಧಾನದ ʼರಾಜ್ಯ ನೀತಿ ನಿರ್ದೇಶಕ ತತ್ವʼಗಳಲ್ಲಿ ಒಂದಾದ ಸಂವಿಧಾನದ 44ನೇ ವಿಧಿಯು ʼʼಭಾರತದ ಭೂಪ್ರದೇಶದಾದ್ಯಂತ ಜನರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಸರ್ಕಾರ ಪ್ರಯತ್ನಿಸಬೇಕುʼʼ ಎಂದು ಹೇಳಿದೆ. ಆದರೆ, ಆರ್ಟಿಕಲ್ 37 ಹೇಳುವಂತೆ, ನಿರ್ದೇಶಕ ತತ್ವಗಳು ಸರ್ಕಾರಿ ನೀತಿಗಳಿಗೆ ಮಾರ್ಗದರ್ಶಿ ತತ್ವಗಳಾಗಿವೆ ಅಷ್ಟೇ. ಇವುಗಳನ್ನು ನ್ಯಾಯಾಲಯದ ಮೂಲಕ ಪಟ್ಟು ಹಿಡಿದು ಜಾರಿಗೊಳಿಸಲಾಗುವುದಿಲ್ಲ.
ಯುಸಿಸಿ ಬೆಂಬಲಿಸುವ ವಾದಗಳು
ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು, ಯುಸಿಸಿ ಜಾರಿ ಅಪೇಕ್ಷಣೀಯ ಎಂದು ಅಭಿಪ್ರಾಯಪಟ್ಟರು. ಆದರೆ ಸಂವಿಧಾನ ಸಭೆಯಲ್ಲಿ ಈ ಬಗ್ಗೆ ಒಮ್ಮತ ಮೂಡಲಿಲ್ಲ. ಹಾಗಾಗಿ ಅದು ಐಚ್ಛಿಕವಾಗಿ ಉಳಿಯಲಿ ಎಂದು ವಿಚಾರ ಪ್ರಸ್ತಾಪಿಸಿದರು.
“ಭವಿಷ್ಯದಲ್ಲಿ ಸಂಸತ್ತು ಈ ಬಗ್ಗೆ ಆರಂಭಿಕ ಹೆಜ್ಜೆ ಇಡಬಹುದು. ಹಾಗೆ ಮಾಡುವಾಗ ಮೊದಲ ಹಂತದಲ್ಲಿ ಈ ಸಂಹಿತೆಯನ್ನು ಐಚ್ಛಿಕವಾಗಿ, ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳುವ ಅವಕಾಶ ಸೃಷ್ಟಿಸಬೇಕು” ಎಂದು ಕೂಡ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಹೇಳಿದ್ದರು. ನಂತರ ಸಂವಿಧಾನ ಸಭೆಯು ಇದನ್ನು ನಿರ್ದೇಶಕ ತತ್ವವಾಗಿ ಹಾಕಲು ಒಪ್ಪಿಕೊಂಡಿತು.
ನ್ಯಾಯಪೀಠಗಳ ಒತ್ತು
ನಂತರದ ವರ್ಷಗಳಲ್ಲಿ ಆಗಾಗ ಶಾಸಕಾಂಗ ಹಾಗೂ ನ್ಯಾಯಾಂಗಗಳು ವೈಯಕ್ತಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಅಥವಾ ಏಕರೂಪದ ನಾಗರಿಕ ಸಂಹಿತೆಯನ್ನು ತರುವ ವಿಷಯ ಪ್ರಸ್ತಾಪಿಸುತ್ತಾ ಬಂದಿವೆ. ಈ ವಿಚಾರದಲ್ಲಿ ಗಮನ ಸೆಳೆಯುವ ಟಿಪ್ಪಣಿ ಹೊಂದಿದ್ದ ಗಮನಾರ್ಹ ತೀರ್ಪುಗಳು ಶಾಬಾನೋ ಪ್ರಕರಣ, ಸರಳಾ ಮುದ್ಗಲ್ ಮುಂತಾದ ಪ್ರಕರಣಗಳಲ್ಲಿ ನ್ಯಾಯಪೀಠಗಳಿಂದ ಬಂದಿವೆ.
ಶಾಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪಂಚಸದಸ್ಯ ನ್ಯಾಯಪೀಠ ಈ ರೀತಿ ಟಿಪ್ಪಣಿ ನೀಡಿತು:
ʼʼನಮ್ಮ ಸಂವಿಧಾನದ 44ನೇ ವಿಧಿ ಸತ್ತಂತೆ ಆಗಿದೆ ಎಂಬುದು ವಿಷಾದಕರ. ಈ ದೇಶಕ್ಕೆ ಒಂದು ಏಕರೂಪ ನಾಗರಿಕ ಸಂಹಿತೆ ತರುವ ಬಗ್ಗೆ ಯಾವುದೇ ಅಧಿಕೃತ ಚಟುವಟಿಕೆ ಇದುವರೆಗೂ ನಡೆದಿರುವುದಕ್ಕೆ ಸಾಕ್ಷಿಯಿಲ್ಲ. ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ತರಬೇಕಿರುವುದರಿಂದ, ಈ ವಿಷಯದಲ್ಲಿ ಮುಸ್ಲಿಂ ಸಮುದಾಯ ಮುಂದುವರಿಯಬೇಕಿದೆ ಎಂದು ಬಹಳ ಮಂದಿ ನಂಬಿರುವಂತೆ ಕಾಣಿಸುತ್ತಿದೆ. ಕಾನೂನುಗಳಿಗೆ ವಿಭಿನ್ನ ಪ್ರತಿಕ್ರಿಯೆ, ಗೊಂದಲಗಳು, ಸಿದ್ಧಾಂತಗಳ ತಿಕ್ಕಾಟಗಳನ್ನು ನಿವಾರಿಸುವಲ್ಲಿ ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಏಕರೂಪ ನಾಗರಿಕ ಸಂಹಿತೆ ನೆರವಾಗಬಹುದು. ಯಾವುದೇ ಸಮುದಾಯ ಈ ವಿಷಯದಲ್ಲಿ ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧವಾಗುತ್ತಿರುವಂತಿಲ್ಲ. ಈ ದೇಶದ ಪ್ರಜೆಗಳ ಹಿತರಕ್ಷಣೆಗಾಗಿ ಸ್ವತಃ ಸರ್ಕಾರವೇ ಆ ಕೆಲಸಕ್ಕೆ ಬದ್ಧವಾಗಬೇಕಿದೆ. ಹಾಗೆ ಮಾಡಲು ಅದಕ್ಕೆ ಶಾಸನಾತ್ಮಕವಾದ ಅಧಿಕಾರವೂ ಇದೆ. ಇದಕ್ಕೆ ಶಾಸನಾತ್ಮಕ ಸ್ಪರ್ಧಾತ್ಮಕತೆ ಈ ವಿಷಯದಲ್ಲಿ ಎಷ್ಟು ಮುಖ್ಯವೋ, ರಾಜಕೀಯ ಧೈರ್ಯವೂ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಡಬೇಕಾಗುತ್ತದೆ. ವಿಭಿನ್ನ ನಂಬಿಕೆಗಳ ಸಮುದಾಯಗಳನ್ನು ವ್ಯಕ್ತಿಗಳನ್ನು ಈ ವಿಚಾರದಲ್ಲಿ ಒಟ್ಟಿಗೆ ತರುವಲ್ಲಿ ಇರುವ ಸಂಕಷ್ಟಗಳು ನಮಗೆ ಗೊತ್ತಿವೆ. ಆದರೆ ಸಂವಿಧಾನ ಅರ್ಥ ಉಳಿಸಿಕೊಳ್ಳಬೇಕಾದರೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡುವುದು ಅತ್ಯಗತ್ಯ.ʼʼ
1995ರಲ್ಲಿನ ಸರಳಾ ಮುದ್ಗಲ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಇನ್ನಷ್ಟು ಸ್ಪಷ್ಟವಾಗಿ ಯುಸಿಸಿ ಜಾರಿಯ ಅಗತ್ಯವನ್ನು ಪ್ರತಿಪಾದಿಸಿತು. ʼʼದೇಶದಲ್ಲಿನ 80% ನಾಗರಿಕರು ಒಂದೇ ವೈಯಕ್ತಿಕ ಕಾನೂನಿನ ಆಡಳಿತಕ್ಕೆ ಒಳಪಟ್ಟಿರುವಾಗ, ಇನ್ನೂ ಯುಸಿಸಿ ಜಾರಿಗೆ ಮೀನ ಮೇಷ ಎಣಿಸುತ್ತಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲʼʼ ಎಂದು ಕೋರ್ಟ್ ಹೇಳಿತು. 2003ರ ಜಾನ್ ವಲ್ಲಮೊತ್ತಮ್ ಪ್ರಕರಣದಲ್ಲೂ ಈ ಮಾತನ್ನು ಪುನರುಚ್ಚರಿಸಿತು.
ಆದರೆ ನಂತರ, ಯುಸಿಸಿ ಜಾರಿಗೆ ಸಂಬಂಧಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತು. ʼʼಯುಸಿಸಿ ಜಾರಿಗೆ ಸಂಬಂಧಿಸಿ ಈ ಕೋರ್ಟ್‌ಗೆ ಆಗಮಿಸುವುದು ತಪ್ಪು ಮಾರ್ಗ. ಅದು ಸಂಸತ್ತಿನ ಕಾರ್ಯಕ್ಷೇತ್ರಕ್ಕೆ ಸೇರಿದುದು.ʼʼ ಎಂದಿತು.
UCC ವಿರುದ್ಧವೂ ವಾದಗಳಿವೆ
21ನೇ ಕಾನೂನು ಆಯೋಗವು 2018ರ ಆಗಸ್ಟ್‌ನಲ್ಲಿ “ಕುಟುಂಬ ಕಾನೂನಿನ ಸುಧಾರಣೆ” ಕುರಿತು ವರದಿ ಮಂಡಿಸಿತು. ಅದರಲ್ಲಿ ʼʼಯುಸಿಸಿ ಈ ಹಂತದಲ್ಲಿ ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ” ಎಂದು ಹೇಳಿತು. ಆದರೆ, ವೈಯಕ್ತಿಕ ಕಾನೂನುಗಳಲ್ಲಿನ ತಾರತಮ್ಯ ಮತ್ತು ಅಸಮಾನತೆಯನ್ನು ನಿಭಾಯಿಸಲು ಈ ಕೌಟುಂಬಿಕ ಕಾನೂನುಗಳ ಸುಧಾರಣೆಗೆ ಶಿಫಾರಸು ಮಾಡಿತು. ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ.ಎಸ್ ಚೌಹಾಣ್ ನೇತೃತ್ವದ ಕಾನೂನು ಆಯೋಗ ಹೀಗೆ ಹೇಳಿತು: “ಕಾಯಿದೆಗಳ ಏಕರೂಪತೆಗೆ ನಾವು ಹಠ ಹಿಡಿದು ಅದು ದೇಶದ ಸಾಂಸ್ಕೃತಿಕ ವೈವಿಧ್ಯತೆಗೂ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೂ ಬೆದರಿಕೆಗೆ ಕಾರಣವಾಗಬಾರದು.ʼʼ
ಕಾಂಗ್ರೆಸ್, ಮುಸ್ಲಿಂ ಲೀಗ್ ಮುಂತಾದ ಪಕ್ಷಗಳು ನೀತಿಸಂಹಿತೆ ಜಾರಿಯನ್ನು ವಿರೋಧಿಸಿವೆ. ಮುಸ್ಲಿಮರ ಹಕ್ಕುಗಳಿಗೆ ಇದರಿಂದ ಧಕ್ಕೆ ಒದಗುತ್ತದೆ ಎಂಬುದು ಮುಸ್ಲಿಂ ಲೀಗ್ ವಾದ.
ಬಿಜೆಪಿ, ಆರೆಸ್ಸೆಸ್ ಬೆಂಬಲ
ಭಾರತೀಯ ಜನತಾ ಪಾರ್ಟಿ ಹಾಗೂ ಆರೆಸ್ಸೆಸ್, ದೀನ್‌ದಯಾಳ ಉಪಾಧ್ಯಾಯರ ಕಾಲದಿಂದಲೇ ಯುಸಿಸಿ ಜಾರಿಯ ಬಗ್ಗೆ ಒತ್ತಿ ಹೇಳುತ್ತ ಬಂದಿದೆ. ಜವಾಹರ್‌ಲಾಲ್ ನೆಹರೂ, ಡಾ.ಬಿ.ಆರ್.ಅಂಬೇಡ್ಕರ್‌ರಂಥ ದೊಡ್ಡ ನಾಯಕರು ಕೂಡ ಇದನ್ನು ಬೆಂಬಲಿಸಿದ್ದರು.
ಯುಸಿಸಿ ಜಾರಿಯ ಲಾಭವೇನು?
ಸಮಾನ ನಾಗರಿಕ ಸಂಹಿತೆಯಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಈ ಕಾನೂನು ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುತ್ತದೆ. ಅನೇಕ ವೈಯಕ್ತಿಕ ಕಾನೂನುಗಳು ಮಹಿಳೆಯರ ಹಕ್ಕುಗಳು, ವೈವಾಹಿಕ ನಿರ್ಬಂಧಗಳು, ಆಸ್ತಿ ಹಕ್ಕುಗಳಲ್ಲಿ ತಾರತಮ್ಯಪೂರಿತವಾಗಿವೆ. ಅಂತರ್‌ಧರ್ಮೀಯ ವಿವಾಹ ಮುಂತಾದ ಪ್ರಗತಿಪರ ವಿಚಾರಗಳನ್ನು ಇವು ಪ್ರೋತ್ಸಾಹಿಸುವುದಿಲ್ಲ. ಹಿಂದೂ ವಿವಾಹ ಕಾಯ್ದೆ ಹೊರತುಪಡಿಸಿ, ಉಳಿದ ವಿವಾಹ ಕಾಯ್ದೆಗಳಲ್ಲಿ ಗಂಡನಿಂದ ಹೆಂಡತಿಗೆ ಜೀವನಾಂಶ ಸಂಬಂಧ ಸ್ಪಷ್ಟತೆ ಇಲ್ಲ. ಯುಸಿಸಿಯ ಮೂಲಕ ಇದೆಲ್ಲದಕ್ಕೂ ಒಂದು ಸಮಾನ ಪಾತಳಿ ಕಲ್ಪಿತವಾಗಲಿದೆ. ದೇಶದ ಎಲ್ಲ ಪ್ರಜೆಗಳು ಒಂದೇ ಕಾನೂನಿನಡಿಯಲ್ಲಿ ಬರುವುದರಿಂದ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಲು ನ್ಯಾಯಾಲಯಗಳಿಗೆ ಸಾಧ್ಯವಾಗುತ್ತದೆ.
ಗೋವಾದಲ್ಲಿರುವ ನಾಗರಿಕ ಸಂಹಿತೆ ಏನು?
ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವವರು ಗೋವಾದಲ್ಲಿ ಈಗ ಜಾರಿಯಲ್ಲಿರುವ ಏಕರೂಪ ಸಂಹಿತೆಯನ್ನು ತೋರಿಸುತ್ತಾರೆ. ಇದೊಂದು ಗಮನಾರ್ಹ ನೀತಿಸಂಹಿತೆ. 1867ರಲ್ಲಿ ಇದು ಪೋರ್ಚುಗಲ್‌ನಲ್ಲಿ ನಂತರ 1869ರಲ್ಲಿ ಗೋವಾವನ್ನೂ ಸೇರಿ ಪೋರ್ಚುಗೀಸರು ಆಡಳಿತದಲ್ಲಿದ್ದ ಎಲ್ಲ ಪ್ರಾಂತ್ಯಗಳಲ್ಲಿ ಇದು ಜಾರಿಗೆ ಬಂತು.
ಈ ಕಾನೂನಿನ ಪ್ರಕಾರ ಯಾವುದೇ ಧರ್ಮದವರ ವಿವಾಹ ನಾಗರಿಕ ಪ್ರಾಧಿಕಾರದ ಮುಂದೆ ಕಡ್ಡಾಯವಾಗಿ ನೋಂದಾವಣೆಯಾಗಬೇಕು. ಹೆಂಡತಿಯು ಗಂಡನ ಆಸ್ತಿಗೆ ಸಮಾನ ಉತ್ತರಾಧಿಕಾರಿಯಾಗಿರುತ್ತಾಳೆ. ವಿಚ್ಛೇದನದ ಸಂದರ್ಭದಲ್ಲಿ ಆಕೆ ತನ್ನ ಪತಿ ಆನುವಂಶಿಕವಾಗಿ ಪಡೆಯುವ ಸಾಮಾನ್ಯ ಸ್ವತ್ತುಗಳ ಅರ್ಧ ಪಾಲಿಗೆ ಅರ್ಹಳಾಗಿರುತ್ತಾಳೆ. ಪೋಷಕರು ಕಡ್ಡಾಯವಾಗಿ ತಮ್ಮ ಆಸ್ತಿಯಲ್ಲಿ ಅರ್ಧ ಭಾಗವನ್ನು ಹೆಣ್ಣುಮಕ್ಕಳಿಗೂ ಸೇರಿಸಿ ಹಂಚಿಕೊಳ್ಳಬೇಕು. ಆಸ್ತಿ ಹಕ್ಕುಗಳಿಗೆ ಸಂಬಂಧಿಸಿ ಈ ನೀತಿಸಂಹಿತೆ ತುಂಬಾ ಆಧುನಿಕವಾಗಿದೆ. ಆದರೆ ವಿವಾಹ ಮತ್ತು ದತ್ತು ಕಾಯಿದೆಗಳು ಇನ್ನಷ್ಟು ಸುಧಾರಿತಗೊಳ್ಳಬೇಕಿವೆ.
ಗೋವಾ ಸ್ವತಂತ್ರಗೊಂಡ ಮೇಲೂ ಈ ಕಾಯಿದೆ ಹೇಗೆ ಉಳಿಯಿತು? ʼಗೋವಾ, ದಮನ್ ಮತ್ತು ದಿಯು ಆಡಳಿತ ಕಾಯಿದೆ- 1962ʼರ ಸೆಕ್ಷನ್ 5(1) ರ ಪ್ರಕಾರ ಭಾರತ ಸರ್ಕಾರದ ಬದ್ಧತೆಯಂತೆ, ಇವು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳ್ಳುವ ಮುನ್ನ ಹೊಂದಿದ್ದ ಎಲ್ಲಾ ಕಾನೂನುಗಳು ಹಾಗೇ ಮುಂದುವರಿದವು. ಇಲ್ಲಿ ಶಾಸಕಾಂಗವು ಹಳೆಯ ಕಾನೂನು ರದ್ದುಪಡಿಸುವವರೆಗೆ ಅಥವಾ ನೂತನ ಕಾಯಿದೆ ಜಾರಿಗೆ ತರುವವರೆಗೆ ಅದು ಹಾಗೇ ಮುಂದುವರಿಯುತ್ತದೆ.