Site icon Vistara News

Narendra Modi: ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?

Narendra Modi

Chhattisgarh Man Chops Off Finger, Offers It For Goddess At Temple Following NDA’s Victory

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಎನ್‌ಡಿಎ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಅವರು ಆಯ್ಕೆಯಾಗಿದ್ದು, ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ, ಎನ್‌ಡಿಎ ನಾಯಕರು, ಸಂಸದರು, ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕರ್ನಾಟಕ (Karnataka) ಸೇರಿ ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರದರ್ಶನದ ಕುರಿತು ಮಾತನಾಡಿದರು.

“ದಕ್ಷಿಣ ಭಾರತದಲ್ಲಿ ಎನ್‌ಡಿಎ ಬುನಾದಿ ಭದ್ರವಾಗಿದ್ದು, ಹೊಸ ರಾಜಕೀಯಕ್ಕೆ ಇದು ನಾಂದಿಯಾಗಿದೆ. ಕರ್ನಾಟಕ ಹಾಗೂ ತೆಲಂಗಾಣವನ್ನೇ ತೆಗೆದುಕೊಳ್ಳಿ, ಇತ್ತೀಚೆಗೆ ಬೇರೆ ಪಕ್ಷಗಳ ಸರ್ಕಾರಗಳು ಅಲ್ಲಿ ಆಡಳಿತಕ್ಕೆ ಬಂದಿವೆ. ಆದರೆ, ಜನರು ಭ್ರಮೆಯಿಂದ ಹೊರಬಂದು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಜನ ಎನ್‌ಡಿಎ ಮೈತ್ರಿಕೂಟವನ್ನು ಸ್ವೀಕರಿಸಿದ್ದಾರೆ. ಇದು ಎನ್‌ಡಿಎ ಮೇಲೆ ಜನ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.

“ಕರ್ನಾಟಕ, ತೆಲಂಗಾಣದ ಜತೆಗೆ ತಮಿಳುನಾಡಿನ ತಂಡಕ್ಕೂ ನಾನು ಅಭಿನಂದನೆ ತಿಳಿಸುತ್ತೇನೆ. ನಾವು ಒಗ್ಗೂಡಿ ಹೋರಾಡಿದರೂ ಒಂದು ಸೀಟು ಕೂಡ ಗೆಲ್ಲಲು ಆಗಲಿಲ್ಲ. ಆದರೆ, ಎನ್‌ಡಿಎ ಮತಗಳಿಕೆಯ ಪ್ರಮಾಣವು ಜಾಸ್ತಿಯಾಗಿದೆ. ಇದರಿಂದ ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಎನ್‌ಡಿಎಗೆ ಜನಬೆಂಬಲ ಸಿಗುತ್ತದೆ ಎಂಬುದಕ್ಕೆ ಇದು ಸಂಕೇತವಾಗಿದೆ. ಕೇರಳದಲ್ಲಿ ನಮ್ಮ ನೂರಾರು ಕಾರ್ಯಕರ್ತರು ತ್ಯಾಗ, ಬಲಿದಾನ ಮಾಡಿದರು. ಇದೇ ಮೊದಲ ಬಾರಿಗೆ ಕೇರಳದಲ್ಲಿ ಎನ್‌ಡಿಎ ಖಾತೆ ತೆರೆದಿದೆ” ಎಂದು ಹೇಳಿದರು.

ನೂರು ದಾಟದ ಕಾಂಗ್ರೆಸ್‌

ಹತ್ತು ವರ್ಷಗಳ ಬಳಿಕವೂ ಕಾಂಗ್ರೆಸ್‌ಗೆ 100 ಸೀಟುಗಳನ್ನು ದಾಟಲೂ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಜನ ವಿರೋಧಿ ನೀತಿಯನ್ನು ಮತದಾರರು ಮರೆತಿಲ್ಲ. ಯುಪಿಎ ಹೆಸರನ್ನು ಇಂಡಿ ಒಕ್ಕೂಟ ಎಂದು ಬದಲಾಯಿಸಿಕೊಂಡರೂ ಜನ ಇವರ ಹಗರಣಗಳನ್ನು ಮರೆತಿಲ್ಲ. ಹಾಗಾಗಿ ಮೂರನೇ ಬಾರಿ ದೇಶದ ಜನ ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಿದ್ದಾರೆ ಎಂದು ಮೋದಿ ಹೇಳಿದರು.

ಪ್ರತಿಪಕ್ಷಗಳು ಅಭಿವೃದ್ಧಿಯ ವಿರೋಧಿ

ಚುನಾವಣೆಯುದ್ದಕ್ಕೂ ಪ್ರತಿಪಕ್ಷಗಳು ಎಲೆಕ್ಟ್ರಾನಿಕ್‌ ಮತ ಯಂತ್ರಗಳನ್ನು ದೂಷಿಸುತ್ತ ಬಂದವು. ಆದರೆ ಮತ ಎಣಿಕೆ ಮುಗಿದ ಬಳಿಕ ಮೌನವಾಗಿವೆ. ಕಾಂಗ್ರೆಸ್‌ ಮತ್ತಿತರ ಪಕ್ಷಗಳು ಮತಯಂತ್ರಗಳಿಗೆ ಕಳಂಕ ಹೊರಿಸುವ ಮೂಲಕ ಪ್ರಜಾಪ್ರಭುತ್ವವನ್ನೂ ಅವಮಾನಿಸಿದವು. ಈ ಪಕ್ಷಗಳಿಗೆ ಹಳೆಯ ಪಾಳೇಗಾರಿಕೆಯಲ್ಲೇ ನಂಬಿಕೆ ಇದೆ. ಇವರು ಆಧುನಿಕತೆಯನ್ನು ಬೆಂಬಲಿಸುವುದಿಲ್ಲ. ಇವರು ಡಿಜಿಟಲ್‌ ಪಾವತಿಯನ್ನು ವಿರೋಧಿಸುತ್ತಾರೆ. ಇವರು ಆಧಾರ್‌ ವ್ಯವಸ್ಥೆಗೆ ಅಡ್ಡಿಪಡಿಸುತ್ತಾರೆ. ದೇಶಕ್ಕೆ ಉತ್ತಮ ಕೊಡುಗೆಯಾದ ಆಧಾರ್‌ ವ್ಯವಸ್ಥೆಯನ್ನು ಹಾಳುಗೆಡವಲು ಇವರು ಎಷ್ಟೆಲ್ಲ ಪ್ರಯತ್ನಪಟ್ಟರು. ಇವರು ಅಭಿವೃದ್ಧಿ ವಿರೋಧಿಗಳು ಎಂದು ಟೀಕಿಸಿದರು.

ಇದನ್ನೂ ಓದಿ: Narendra Modi: ಪ್ರಮಾಣವಚನಕ್ಕೂ ಮೊದಲು ಅಡ್ವಾಣಿಯ ಆಶೀರ್ವಾದ ಪಡೆದ ನರೇಂದ್ರ ಮೋದಿ!

Exit mobile version