ಮಂಗಳೂರು ಸ್ಫೋಟದ ಕುರಿತು ನಡೆಯುತ್ತಿರುವ ತನಿಖೆಯಿಂದ ಹೊರ ಬೀಳುತ್ತಿರುವ ಮಾಹಿತಿಗಳು ಆತಂಕ ಹೆಚ್ಚಿಸುತ್ತಿದೆ. ಈ ಆತಂಕಕ್ಕೆ ಉಗ್ರರು ಅನುಸರಿಸಲು ಮುಂದಾಗಿದ್ದ ಯೋಜನೆ ಎಂಬುದು ಒಂದು ಕಾರಣವಾದರೆ, ಮತ್ತೊಂದು, ಉಗ್ರಕೃತ್ಯಕ್ಕೆ ಸಿದ್ಧತೆಗಳು ನಡೆಯುತ್ತಿದ್ದರೂ ಅದರ ಚೂರೇ ಚೂರು ಸುಳಿವು ನಮ್ಮ ಪೊಲೀಸರಿಗೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ಸಿಗದಿರುವುದು. ಮಂಗಳೂರು ಸ್ಫೋಟ ಪ್ರಕರಣವು ನಮ್ಮ ಪೊಲೀಸ್ ವ್ಯವಸ್ಥೆಯ ದೊಡ್ಡ ವೈಫಲ್ಯ ಎಂದು ಹೇಳದೇ ವಿಧಿಯಿಲ್ಲ.
ಗಾಯಗೊಂಡಿರುವ ಶಂಕಿತ ಉಗ್ರ ಶಾರಿಕ್‌ನ ‘ಉಗ್ರ ಇತಿಹಾಸ’ ಬೆಚ್ಚಿ ಬೀಳಿಸುತ್ತಿದೆ. ಒಬ್ಬ ಸಾಮಾನ್ಯ ಕಳ್ಳ ಏನಾದರೂ ಒಮ್ಮೆ ಪೊಲೀಸ್ ಕೈಗೆ ಸಿಕ್ಕಿ ಬಿದ್ದರೆ, ಆತನ ಮೇಲೆ ಜೀವನಪರ್ಯಂತ ಪೊಲೀಸರು ಕಣ್ಣಿಟ್ಟಿರುತ್ತಾರೆ. ಎಲ್ಲೇ ಕಳ್ಳತನವಾದರೂ ಮೊದಲು ಆತನನ್ನು ಠಾಣೆಗೆ ಕರೆದು ವಿಚಾರಿಸುತ್ತಾರೆ. ಆದರೆ, ಶಂಕಿತ ಉಗ್ರ ಶಾರಿಕ್, ದೇಶ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕಾಗಿಯೇ ಜೈಲಿಗೆ ಹೋಗಿ ಬಂದಿದ್ದಾನೆ. ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ. ಹಾಗಿದ್ದೂ ಆತ ಜೈಲಿನಿಂದ ಹೊರ ಬಂದ ಮೇಲೆ ಏನು ಮಾಡುತ್ತಿದ್ದಾನೆ, ಯಾರ ಜತೆ ಸಂಪರ್ಕದಲ್ಲಿದ್ದಾನೆ ಎಂಬ ಬಗ್ಗೆ ನಮ್ಮ ಪೊಲೀಸ್ ಇಲಾಖೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸದಿರುವುದು ಖಂಡನೀಯ.
ಮಂಗಳೂರು ಸ್ಫೋಟದ ಬಳಿಕ ಶಂಕಿತ ಉಗ್ರನ ಇತಿಹಾಸವನ್ನು ಕೆದಕಲಾಗುತ್ತಿದೆ. ಇದೇ ಕೆಲಸವನ್ನು ಪೊಲೀಸರು ಎರಡು ವರ್ಷಗಳಿಂದ ಮಾಡುತ್ತಾ ಬಂದಿದ್ದರೆ, ಇಂದು ಮಂಗಳೂರು ಸ್ಫೋಟ ಸಂಭವಿಸುತ್ತಿರಲಿಲ್ಲ. ತೀರ್ಥಹಳ್ಳಿಯ ಸೊಪ್ಪಿನ ಗುಡ್ಡೆ ನಿವಾಸಿ ಶಾರಿಕ್ ಜಗತ್ತಿನ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಜತೆಗೆ ಸಂಪರ್ಕ ಹೊಂದಿದ್ದ. ಆತ ಕುಕ್ಕರ್ ಒಂದನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ತಲೆಯ ಮೇಲೆ ಐಸಿಸ್ ಉಗ್ರರು ಧರಿಸುವಂತೆ ಶಿರವಸ್ತ್ರ ಧರಿಸಿಕೊಂಡು ತೆಗೆಸಿಕೊಂಡಿರುವ ಚಿತ್ರವೂ ಎಲ್ಲವನ್ನೂ ಸ್ಪಷ್ಟಪಡಿಸುತ್ತಿದೆ.
ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆ ಪರವಾಗಿ ಗೋಡೆ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ನವೆಂಬರ್‌ನಲ್ಲಿ ಶಾರಿಕ್ ಬಂಧನವಾಗಿತ್ತು. ಈತನ ಜತೆಗೆ ಮತ್ತೊಬ್ಬ ಆರೋಪಿ ಮಾಜ್ ಮುನೀರ್ ಅಹಮದ್ ಕೂಡಾ ಸಿಕ್ಕಿಬಿದ್ದಿದ್ದ. ಈ ಮೊದಲು ಬೇರೊಂದು ಕಡೆ ಇದೇ ರೀತಿ ಬರೆದಿದ್ದರೂ ಅದು ಗಮನ ಸೆಳೆದಿರಲಿಲ್ಲ. ಹೀಗಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ಮತ್ತೊಮ್ಮೆ ಬರೆದಿದ್ದರು. ಟವರ್ ಲೊಕೇಶನ್ ಮತ್ತು ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಇವರಿಬ್ಬರನ್ನು ಬಂಧಿಸಲಾಗಿತ್ತು. ಅಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ)ವೇ ದಿಲ್ಲಿಯಿಂದ ಬಂದು ಇಲ್ಲಿ ತನಿಖೆಯನ್ನು ನಡೆಸಿತ್ತು. ಬಂಧಿತರಿಗೆ ಉಗ್ರ ಸಂಘಟನೆಗಳ ಜತೆ ಸಂಪರ್ಕವಿದೆ ಎಂಬ ಮಾಹಿತಿಯನ್ನು ಅಂದೂ ನೀಡಲಾಗಿತ್ತು. ಆದರೆ ಈ ಇಬ್ಬರು 2021 ಸೆಪ್ಟೆಂಬರ್ 8ರಂದು ಜಾಮೀನು ಮೇಲೆ ಕೋರ್ಟ್‌ನಿಂದ ಬಿಡುಗಡೆಯಾಗಿದ್ದರು. ಆ ಬಳಿಕ ಶಾರಿಕ್ ಏನಾದ ಎಂಬ ಬಗ್ಗೆ ನಮ್ಮ ಪೊಲೀಸರೂ ಗಮನಿಸಲೇ ಇಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ, ಕಳೆದ ತಿಂಗಳು ಸಂಭವಿಸಿದ ಕೊಯಮತ್ತೂರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಉಗ್ರ ಜಮೀಶಾ ಮುಬಿನ್ ಜತೆಗೂ ಶಾರಿಕ್ ನಂಟು ಹೊಂದಿದ್ದ! ಸ್ಫೋಟ ಸಂಭವಿಸುವ ಮುಂಚೆ ಈತ ಕೊಯಮತ್ತೂರಿಗೆ ಹೋಗಿ ಬಂದಿದ್ದ ಎಂಬ ಸಂಗತಿ ಈಗ ಬಯಲಾಗುತ್ತಿದೆ. ಕೊಯಮತ್ತೂರು ಸ್ಫೋಟದ ಬಳಿಕವಾದರೂ ನಮ್ಮ ಆಡಳಿತ ವ್ಯವಸ್ಥೆ ಚೂರು ಎಚ್ಚರಿಕೆ ವಹಿಸಿದ್ದರೆ ಸಾಕಾಗುತ್ತಿತ್ತು. ಕೊಯಮತ್ತೂರು ಸ್ಫೋಟದಲ್ಲಿ ಮೃತಪಟ್ಟ ಮುಬಿನ್ ಬೆಂಗಳೂರಲ್ಲಿ ಮೆಕ್ಯಾನಿಕಲ್ ಎಂಜನಿಯರಿಂಗ್ ಓದಿದ್ದಾನೆ. ಈ ವೇಳೆ, ಬೆಂಗಳೂರಲ್ಲೇ ಇದ್ದ ಶಾರಿಕ್ ಮತ್ತು ಮುಬಿನ್ ಮಧ್ಯೆ ಸಂಪರ್ಕ ಏರ್ಪಟ್ಟಿದೆ. ಈ ಸಂಪರ್ಕ ಮುಂದೆ ಉಗ್ರ ಕೃತ್ಯಗಳವರೆಗೂ ಬೆಳೆದು ಬಂದಿದೆ. ಇಷ್ಟು ಮಾತ್ರವಲ್ಲ, ಶಿವಮೊಗ್ಗ ಮತ್ತು ಬಂಟ್ವಾಳದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್‌ನಲ್ಲೂ ಶಾರಿಕ್ ಭಾಗಿಯಾಗಿದ್ದ!
ಶಂಕಿತ ಉಗ್ರ ಶಾರಿಕ್‌ಗೆ ಇಷ್ಟೆಲ್ಲ ಉಗ್ರ ಚಟುವಟಿಕೆಗಳ ಹಿನ್ನೆಲೆ ಇದ್ದರೂ, ಆತನ ಮೇಲೆ ನಿಗಾ ವಹಿಸುವ ಕೆಲಸವನ್ನು ಪೊಲೀಸರು ಮಾಡಲಿಲ್ಲ. ಇಷ್ಟಾಗಿಯೂ, ರಾಜ್ಯ ಗೃಹ ಸಚಿವರು ರಾಜಕೀಯವಾಗಿ ಲಘು ಹೇಳಿಕೆಗಳನ್ನು ನೀಡುವ ಮೂಲಕ ಇಡೀ ಪ್ರಕರಣದ ಗಂಭೀರತೆಯನ್ನು ಹಾಳು ಮಾಡುತ್ತಿದ್ದಾರೆ. ಅವರಿಗೆ ನಿಜವಾಗಲೂ ಉಗ್ರರನ್ನು ಮಟ್ಟ ಹಾಕುವ ಉದ್ದೇಶವಿದ್ದರೆ, ಮೊದಲ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸುವ ಕೆಲಸ ಮಾಡಲಿ. ಅವರ ಕಣ್ಣ ಮುಂದೆಯೇ, ಉಗ್ರ ಚಟುವಟಿಕೆ ಇತಿಹಾಸವಿರುವ ವ್ಯಕ್ತಿ ಒಂದು ಕೃತ್ಯದಿಂದ ಮತ್ತೊಂದು ಕೃತ್ಯಕ್ಕೆ ಸಿದ್ಧತೆಯನ್ನು ನಡೆಸುತ್ತಿದ್ದ. ಪೊಲೀಸರಿಗೆ ಮಾತ್ರ ಈ ಬಗ್ಗೆ ಕಿಂಚಿತ್ ಅರಿವು ಇರಲಿಲ್ಲ ಎಂಬುದು ನಾಚಿಕೆಗೇಡು. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಶಂಕಿತರ ಚಲನಲನ ಮೇಲೆ ನಿಗಾ ಇಡುವ ಕೆಲಸವನ್ನು ಮಾಡಲಿ. ಇಲ್ಲದಿದ್ದರೆ, ಇಂದು ಮಂಗಳೂರಲ್ಲಾಗಿರುವ ಸ್ಫೋಟ, ರಾಜ್ಯದ ಉಳಿದ ಭಾಗದಲ್ಲಾಗಲು ಹೆಚ್ಚು ದಿನ ಬೇಕಾಗುವುದಿಲ್ಲ.