ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ( Rishi Sunak) ಬ್ರಿಟನ್‌ನ ನೂತನ ಪ್ರಧಾನಿಯಾದ ಬಳಿಕ, ಸುನಕ್ ಹಾಗೂ ಅಕ್ಷತಾ ಮೂರ್ತಿಯವರ ಲವ್ ಸ್ಟೋರಿ, ಮದುವೆ ಬಗ್ಗೆ ಕುತೂಹಲದಿಂದ ಇಂಟರ್‌ನೆಟ್‌ನಲ್ಲಿ ಜಾಲಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಎಲ್ಲೆಡೆ ರಿಷಿ ಸುನಕ್ ಭಾರತದ ಅಳಿಯ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವಾರಸ್ಯಕರ ಚರ್ಚೆಗೀಡಾಗಿದೆ. ಒಂದು ಕಡೆ ಬ್ರಿಟನ್‌ನಲ್ಲಿ ರಿಷಿ ಸುನಕ್ ಅಭಿಮಾನಿಗಳು ಹಾಗೂ ಅಲ್ಲಿನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಾವಿರಾರು ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಸಂಭ್ರಮದ ವಿಜಯೋತ್ಸವವನ್ನು ಆಚರಿಸಿದರು. ಇತ್ತ ಸಾವಿರಾರು ಮೈಲಿ ದೂರದ ಭಾರತದಲ್ಲೂ ದೀಪಾವಳಿಯ ಸಡಗರದ ನಡುವೆ, ನಮ್ಮವರೊಬ್ಬರು ಒಂದು ಕಾಲದಲ್ಲಿ ವಸಾಹತುಶಾಹಿಯಾಗಿದ್ದ ಬ್ರಿಟಿಷರ ನಾಡಿನ ಪ್ರಧಾನಿ ಹುದ್ದೆಗೆ ಏರುತ್ತಿದ್ದಾರೆ ಎಂಬ ಸಂಚಲನ ಸೃಷ್ಟಿಯಾಗಿತ್ತು! ದೀಪಾವಳಿ ಪಟಾಕಿಗಳ ಬೆಳಕು ಮತ್ತು ಕಳೆಯನ್ನು ಹೆಚ್ಚಿಸಿದಂತಾಗಿತ್ತು.
ಹಾಗಾದರೆ, ವಿಶ್ವದ ಗಮನ ಸೆಳೆದಿರುವ ಈ ಜೋಡಿ ಭೇಟಿಯಾಗಿದ್ದೆಲ್ಲಿ? ಪ್ರೀತಿ ಹುಟ್ಟಿದ್ದು ಎಲ್ಲಿ? ಇವರ ಮದುವೆ ನಡೆದದ್ದೆಲ್ಲಿ? ಪುರೋಹಿತರು, ಗುರು ಹಿರಿಯರು, ಬಂಧು ಬಳಗದ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾದರೇ, ಯಾರೆಲ್ಲ ಗಣ್ಯರು ಬಂದಿದ್ದರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಅಮೆರಿಕದ ಸ್ಟಾನ್‌ಫೋರ್ಡ್ ವಿವಿಯಲ್ಲಿ ಮೊದಲ ಭೇಟಿ
ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿಯ ಲವ್ ಸ್ಟೋರಿ ಮತ್ತು ವಿವಾಹಕ್ಕೆ ದಶಕದ ಹಿಂದಿನ ಕಥೆ ಇದೆ. ಇಬ್ಬರೂ ಕಾಲೇಜು ವಿದ್ಯಾಭ್ಯಾಸದ ದಿನಗಳಲ್ಲಿ ಭೇಟಿಯಾದರು. ಅಮೆರಿಕದಲ್ಲಿ ಸ್ಟಾನ್‌ಫೋರ್ಡ್ ವಿಶ್ವ ವಿದ್ಯಾಲಯದಲ್ಲಿ ರಿಷಿ ಅವರು ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಅಡಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದರು. ಸುನಕ್ ಆಗ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಅಕ್ಷತಾ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಯಾಗಿದ್ದರು. ಮುಂದೆ ಫ್ಯಾಷನ್ ಡಿಸೈನರ್ ಕೂಡ ಆದರು. ಇವರಿಬ್ಬರೂ 13 ವರ್ಷಗಳ ಹಿಂದೆ ಸತಿ-ಪತಿಗಳಾದರು.
ಸುನಕ್ ಅವರು ಸಂದರ್ಶನವೊಂದರಲ್ಲಿ ತಮ್ಮ ಲವ್ ಸ್ಟೋರಿಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಮೆರಿಕದ ಸ್ಟಾನ್‌ಫೋರ್ಡ್ ವಿವಿಯಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಇಬ್ಬರೂ ಒಟ್ಟಿಗೆ ಓದುತ್ತಿದ್ದೆವು. ನೋಡಲು ಸಣ್ಣಗಿದ್ದ ಅಕ್ಷತಾ ಮೂರ್ತಿ ಆಗ ಹೈ ಹೀಲ್ಡ್ ಚಪ್ಪಲಿ ಧರಿಸಿ ಬರುತ್ತಿದ್ದರು. ಆದರೆ ಸುನಕ್ ಮನವಿಯ ಬಳಿಕ ಹೈ ಹೀಲ್ಡ್ ಚಪ್ಪಲಿಯನ್ನು ಕೈಬಿಟ್ಟರಂತೆ. ಇದಕ್ಕಾಗಿ ನಾನು ಅಕ್ಷತಾಗೆ ಕೃತಜ್ಞನಾಗಿರುವೆ ಎಂದು ಸುನಕ್ ಸಂದರ್ಶನದಲ್ಲಿ ಬಣ್ಣಿಸಿದ್ದರು. ಚುನಾವಣೆಯ ಪ್ರಚಾರದ ಸಂದರ್ಭ ಅಕ್ಷತಾ ಮೂರ್ತಿ ನೀಡಿರುವ ಸಹಕಾರವನ್ನೂ ಸುನಕ್ ಸ್ಮರಿಸಿದ್ದಾರೆ.
ಆರಂಭದಲ್ಲಿ ನಾರಾಯಣ ಮೂರ್ತಿ, ರಿಷಿಯನ್ನು ಒಪ್ಪಿರಲಿಲ್ಲ
ಅಕ್ಷತಾ ಮೂರ್ತಿ ಮತ್ತು ರಿಷಿ ಸುನಕ್ ಲವ್ ಸ್ಟೋರಿಯಲ್ಲಿ ಹೆತ್ತವರು ಅಥವಾ ಕುಟುಂಬ ವರ್ಗದಿಂದ ಯಾವುದೇ ವಿರೋಧ, ಆಕ್ಷೇಪ ಇದ್ದಿರಲಿಲ್ಲ. ಹೀಗಿದ್ದರೂ, ನಾರಾಯಣ ಮೂರ್ತಿಯವರು ಅಳಿಯನ ಬಗ್ಗೆ ತೀರ್ಮಾನಕ್ಕೆ ಬರಲು ತಮ್ಮದೇ ಸಮಯ ತೆಗೆದುಕೊಂಡಿದ್ದರು. ಕೇಳಿದ ತಕ್ಷಣವೇ ಸಮ್ಮತಿಸಿರಲಿಲ್ಲ. ಮಗಳಿಗೆ ಬರೆದ ಪತ್ರವೊಂದರಲ್ಲಿ ನಾರಾಯಣ ಮೂರ್ತಿ ಅವರು ರಿಷಿ ಸುನಕ್ ಅವರನ್ನು ಮನಸಾರೆ ಮೆಚ್ಚಿಕೊಂಡು ಭಾವುಕರಾಗಿ ಹೀಗೆ ಬರೆಯುತ್ತಾರೆ- ನಾನು ರಿಷಿಯನ್ನು ಭೇಟಿಯಾದಾಗ ನೀನು ಅವನಲ್ಲಿ ಕಂಡುಕೊಂಡಿದ್ದ ವಿಶೇಷ ಗುಣಗಳನ್ನು ನಾನೂ ಕಂಡೆ. ಆತ ಬುದ್ಧಿವಂತ, ಸುಂದರಾಂಗ, ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅತ್ಯಂತ ಪ್ರಾಮಾಣಿಕ ಹುಡುಗ. ನಿನ್ನ ಹೃದಯ ಏಕಾಗಿ ಕಳವಾಗಿದೆ ಎಂಬುದನ್ನು ನಾನು ಅರ್ಥ ಮಾಡಿಕೊಂಡೆ.
ಬೆಂಗಳೂರಿನಲ್ಲಿ ನಡೆಯಿತು ಮದುವೆ
ರಿಷಿ ಸುನಕ್ ಮತ್ತು ಅಕ್ಷತಾ ಅವರ ವಿವಾಹ ಸಮಾರಂಭ ಬೆಂಗಳೂರಿನಲ್ಲಿ 2009ರಲ್ಲಿ ಸರಳವಾದರೂ, ಸೊಗಸಾಗಿ ನಡೆಯಿತು. ಜಯನಗರದ ಚಾಮರಾಜ ಕಲ್ಯಾಣ ಮಂಟಪದಲ್ಲಿ ಮದುವೆ ಹಾಗೂ ಹಳೆ ಏರ್‌ಪೋರ್ಟ್ ರಸ್ತೆಯಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್‌ನ ಬಾಲ್‌ರೂಮ್‌ನಲ್ಲಿ ಆರತಕ್ಷತೆ ನಡೆಯಿತು. ಗಣ್ಯರಾದ ಅಜೀಂ ಪ್ರೇಮ್‌ಜೀ, ಕಿರಣ್ ಮಜುಂದಾರ್ ಷಾ, ಅನಿಲ್ ಕುಂಬ್ಳೆ, ನಂದನ್ ನಿಲೇಕಣಿ, ಕ್ಯಾಪ್ಟನ್ ಜಿ.ಆರ್ ಗೋಪಿನಾಥ್, ಪ್ರಕಾಶ್ ಪಡುಕೋಣೆ, ಸೈಯದ್ ಕೀರ್ಮಾನಿ, ಗಿರೀಶ್ ಕಾರ್ನಾಡ್ ಮೊದಲಾದ ಗಣ್ಯರು ಅತಿಥಿಗಳಾಗಿ ಆಗಮಿಸಿದ್ದರು. ದಂಪತಿಗೆ ಈಗ ಇಬ್ಬರು ಪುತ್ರಿಯರಾದ ಕೃಷ್ಣಾ ಮತ್ತು ಅನುಷ್ಕಾ ಇದ್ದಾರೆ.
ಕೋವಿಡ್ ಆರಂಭದಿಂದಲೂ ಸುದ್ದಿಯಲ್ಲಿದ್ದ ದಂಪತಿ
ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಕೋವಿಡ್ ದಂಪತಿ ಕೋವಿಡ್ ಬಿಕ್ಕಟ್ಟು ಆರಂಭವಾದಂದಿನಿಂದಲೂ ಸುದ್ದಿಯಲ್ಲಿದ್ದರು. ಆ ವೇಳೆಗೆ ರಾಜಕೀಯವಾಗಿ ರಿಷಿ ಸುನಕ್ ಅವರು ಪ್ರವರ್ಧಮಾನಕ್ಕೆ ಬಂದಿದ್ದರು. ಮುಂದಿನ ಪ್ರಧಾನಿ ಹುದ್ದೆಗೆ ಕಣದಲ್ಲಿದ್ದರು. ಈ ಹಿನ್ನೆಲೆಯಲ್ಲಿ ರಿಷಿ ಮತ್ತು ಅಕ್ಷತಾ ಮೂರ್ತಿ ಹಾಗೂ ಅವರ ತೆರಿಗೆ ವ್ಯವಹಾರಗಳ ಸುತ್ತಮುತ್ತ ವಿವಾದ ಉಂಟಾಗಿತ್ತು. ತೆರಿಗೆಯನ್ನು ತಪ್ಪಿಸಲೆಂದೇ ಅಕ್ಷತಾ ಮೂರ್ತಿಯವರು ಇನ್ನೂ ಬ್ರಿಟನ್ ಪೌರತ್ವದ ಬದಲಿಗೆ non-domicile status ಗಳಿಸಿದ್ದಾರೆ ಎಂದು ವರದಿಯಾಗಿತ್ತು. ಆಗ ಪತ್ನಿಯನ್ನು ರಿಷಿ ಸುನಕ್ ಬಲವಾಗಿ ಸಮರ್ಥಿಸಿಕೊಂಡಿದ್ದರು.
ಮಾವನ ಬಗ್ಗೆ ರಿಷಿ ಸುನಕ್ ಅಭಿಮಾನ:
ನಾನು ಯಾವಾಗಲೂ ಬ್ರಿಟನ್‌ನ ತೆರಿಗೆದಾರ, ನನ್ನ ಪತ್ನಿ ಬೇರೊಂದು ರಾಷ್ಟ್ರದಿಂದ ಇಲ್ಲಿಗೆ ಬಂದವಳು. ಹೀಗಾಗಿ ಅವಳಿಗೆ ಸಂಬಂಧಿಸಿದ ತೆರಿಗೆ ವಿಚಾರವನ್ನು ಪ್ರತ್ಯೇಕವಾಗಿ ನೋಡಬೇಕಾಗಿದೆ. ಹಾಗೂ ಆಕೆ ತೆರಿಗೆ ಕುರಿತ ವಿವರಣೆಯನ್ನು ನೀಡಿದ್ದು, ವಿವಾದವೂ ಇತ್ಯರ್ಥವಾಗಿದೆ. ನನ್ನ ಪತ್ನಿಯ ಕುಟುಂಬ ಹೊಂದಿರುವ ಸಂಪತ್ತಿನ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ನನಗೆ ಆಕೆಯ ಹೆತ್ತವರು ಕಟ್ಟಿರುವ ಬಿಸಿನೆಸ್ ಸಾಮ್ರಾಜ್ಯದ ಬಗ್ಗೆ ಹೆಮ್ಮೆ ಇದೆ ಎಂದು ಸುನಕ್ ಅವರು ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದರು. ನನ್ನ ಪತ್ನಿ ಭಾರತವನ್ನು ಪ್ರೀತಿಸುತ್ತಾಳೆ.
ಸುಧಾಮೂರ್ತಿಯವರೂ ತಮ್ಮ ಕುಟುಂಬ ಅಪಾರ ಸಂಪತ್ತನ್ನು ಗಳಿಸಿದ್ದರೂ, ಮಕ್ಕಳಿಗೆ ಸರಳ ಜೀವನದ ಮೌಲ್ಯಗಳನ್ನು ಕಲಿಸಿಕೊಟ್ಟು ಮಾದರಿಯಾಗಿದ್ದಾರೆ. ಐಷಾರಾಮಿ ಕಾರಿನ ಬದಲಿಗೆ ಆಟೊ ರಿಕ್ಷಾದಲ್ಲಿಯೇ ಶಾಲೆಗೆ ಮಕ್ಕಳನ್ನು ಕಳಿಸುತ್ತಿದ್ದರು ಸುಧಾ ಮೂರ್ತಿ.
ರಾಜಕೀಯ ಪ್ರವೇಶಿಸಲು ಹೆತ್ತವರೇ ಪ್ರೇರಣೆ:
ನಾನು ರಾಜಕೀಯ ರಂಗ ಪ್ರವೇಶಿಸಲು ಹೆತ್ತವರೇ ಕಾರಣ. ಮಕ್ಕಳನ್ನು ಸಮಾಜಮುಖಿಯಾಗಿ ಇರುವಂತೆ ಅವರು ನೋಡಿಕೊಳ್ಳುತ್ತಿದ್ದರು. ಕಠಿಣ ಪರಿಶ್ರಮ ಮತ್ತು ತ್ಯಾಗ ಅವರ ಆದರ್ಶವಾಗಿತ್ತು ಎಂದು ರಿಷಿ ಸುನಕ್ ಹೇಳಿದ್ದಾರೆ.