Site icon Vistara News

Madhabi Puri Buch: ಅದಾನಿ ಹಗರಣದಲ್ಲಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್‌ ಭಾಗಿ; ಯಾರಿವರು? ಹಿನ್ನೆಲೆ ಏನು?

Madhabi Puri Buch

ನವದೆಹಲಿ: ಗೌತಮ್‌ ಅದಾನಿ (Gautam Adani)  ನೇತೃತ್ವದ ಅದಾನಿ ಗ್ರೂಪ್‌ ಅಕ್ರಮ ಎಸಗಿದೆ ಎಂದು ಅಮೆರಿಕದ ಹಿಂಡನ್‌ಬರ್ಗ್‌ (Hindenburg) ಸಂಸ್ಥೆಯು 2023ರ ಜನವರಿಯಲ್ಲಿ ವರದಿ ಪ್ರಕಟಿಸಿದ ದೇಶಾದ್ಯಂತ ಸಂಚಲ ಮೂಡಿಸಿದ ಬೆನ್ನಲ್ಲೇ ಹಿಂಡನ್‌ಬರ್ಗ್‌ ಮತ್ತೊಂದು ಸ್ಫೋಟಕ ವರದಿ ಬಹಿರಂಗಪಡಿಸಿದೆ. ವಿದೇಶದಲ್ಲಿ ಗೌತಮ್‌ ಅದಾನಿ ಹೊಂದಿರುವ ಕಂಪನಿಗಳಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಮುಖ್ಯಸ್ಥೆ ಮಾಧಬಿ ಪುರಿ ಬುಚ್‌ ಅವರ ಪಾಲಿದೆ ಎಂದು ಸ್ಫೋಟಕ ವರದಿ ಬಹಿರಂಗಪಡಿಸಿದೆ. ಈಗ ಮಾಧಬಿ ಪುರಿ ಬುಚ್‌ ಯಾರು? ಅವರ ಹಿನ್ನೆಲೆ ಏನು? ಎಂಬ ವಿಷಯ ಮುನ್ನೆಲೆಗೆ ಬಂದಿದೆ.

ಮಾಧಬಿ ಪುರಿ ಬುಚ್‌ ಯಾರು?

ಮಾಧಬಿ ಪುರಿ ಬುಚ್‌ ಅವರ ವೃತ್ತಿಜೀವನವು ಅಮೋಘ ಇತಿಹಾಸ ಹೊಂದಿದೆ. 1996ರಲ್ಲಿ ಮುಂಬೈನಲ್ಲಿ ಜನಿಸಿದ ಅವರು, ಗಣಿತ, ಹಣಕಾಸಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಹಾಗಾಗಿ ಅವರು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಅಹ್ಮದಾಬಾದ್‌ನಿಂದ ಎಂಬಿಎ ಪಡೆದಿದ್ದಾರೆ. 1989ರಲ್ಲಿ ಅವರು ಐಸಿಐಸಿಐ ಬ್ಯಾಂಕ್‌ ಸೇರುವ ಮೂಲಕ ಹಣಕಾಸು ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿದರು.

ಚಾಣಾಕ್ಷತನಕ್ಕೆ ಹೆಸರಾಗಿರುವ ಮಾಧಬಿ ಪುರಿ ಬುಚ್‌ ಅವರು ಐಸಿಐಸಿಐ ಬ್ಯಾಂಕ್‌ನಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತ, 2009ರಲ್ಲಿ ಐಸಿಐಸಿಐ ಸೆಕ್ಯುರಿಟೀಸ್‌ನ ಎಂಡಿ ಹಾಗೂ ಸಿಇಒ ಆದರು. ಐಸಿಐಸಿಐ ತೊರೆದ ಅವರು ಶಾಂಘೈನಲ್ಲಿರುವ ನ್ಯೂ ಡೆವಲಪ್‌ಮೆಂಟ್‌ ಬ್ಯಾಂಕ್‌ನ ಕನ್ಸಲ್ಟಂಟ್‌ ಆಗಿ ನೇಮಕಗೊಂಡರು. ಇದಾದ ಬಳಿಕವೇ ಅವರಿಗೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸಂಪರ್ಕ ಬೆಳೆದವು ಎಂದು ಹೇಳಲಾಗುತ್ತಿದೆ. ನಂತರ ಭಾರತಕ್ಕೆ ಬಂದ ಅವರು 2022ರಲ್ಲಿ ಸೆಬಿ ಅಧ್ಯಕ್ಷೆಯಾಗಿಯೂ ನೇಮಕಗೊಂಡರು. ಆ ಮೂಲಕ ಮಾರುಕಟ್ಟೆ ನಿಯಂತ್ರಕ ಸಂಸ್ಥೆಗೆ ಮುಖ್ಯಸ್ಥೆಯಾದ ಮೊದಲ ಮಹಿಳೆ ಎನಿಸಿದರು. ಈಗ ಅವರ ವಿರುದ್ಧವೇ ಹಗರಣದ ಆರೋಪ ಕೇಳಿಬಂದಿದೆ.

ಹೊಸ ವರದಿಯಲ್ಲಿ ಏನಿದೆ?

ಅದಾನಿ ಗ್ರೂಪ್‌ ವಿದೇಶದಲ್ಲಿ ಹೊಂದಿರುವ ಕಂಪನಿಗಳ ಹಗರಣಗಳಲ್ಲಿ ಸೆಬಿ ಅಧ್ಯಕ್ಷೆಯಾಗಿರುವ ಮಾಧಬಿ ಪುರಿ ಬುಚ್‌ ಹಾಗೂ ಅವರ ಪತಿ ಧವಳ್‌ ಬುಚ್‌ ಅವರ ಪಾಲೂ ಇದೆ. ಕಂಪನಿಗಳಲ್ಲೂ ಇವರು ಷೇರುಗಳನ್ನು ಹೊಂದಿದ್ದಾರೆ. ವಿದೇಶದಲ್ಲಿ ಕಂಪನಿಗಳಿಂದ ಅಕ್ರಮವಾಗಿ ಪಡೆದುಕೊಂಡ ಹಣದಲ್ಲಿ ಇವರದ್ದೂ ಪಾಲಿದೆ. ಬರ್ಮುಡಾ ಹಾಗೂ ಮಾರಿಷಸ್‌ ಫಂಡ್‌ಗಳಲ್ಲಿ ಮಾಧಬಿ ಪುರಿ ಬುಚ್‌ ಹಾಗೂ ಧವಳ್‌ ಬುಚ್‌ ಅವರ ಪಾಲು ಇದೆ ಎಂಬುದಾಗಿ ಹಿಂಡನ್‌ಬರ್ಗ್‌ ಸಂಸ್ಥೆಯು ಸ್ಫೋಟಕ ವರದಿ ಬಯಲು ಮಾಡಿದೆ.

ಮಾಧಬಿ ಪುರಿ ಬುಚ್‌ ಅವರು 2015ರಿಂದಲೂ ಗೌತಮ್‌ ಅದಾನಿ ಕಂಪನಿಗಳಲ್ಲಿ ತಮ್ಮ ವೈಯಕ್ತಿಕ ಹಣವನ್ನು ಹೂಡಿಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಗೌತಮ್‌ ಅದಾನಿ ಸಹೋದರ ವಿನೋದ್‌ ಅದಾನಿ ಅವರು ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳಿಂದ ಸೈಫೊನಿಂಗ್‌ (ಕಂಪನಿಗಳಿಂದ ಅಕ್ರಮವಾಗಿ ಹಣ ಪಡೆಯುವುದು) ಮೂಲಕ ಹಣ ಪಡೆದಿದ್ದಾರೆ. ಇದರಲ್ಲಿ ಮಾಧಬಿ ಪುರಿ ಬುಚ್‌ ಅವರ ಪಾಲೂ ಇದೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: Hindenburg: ಅದಾನಿ ವಿದೇಶಿ ಕಂಪನಿಯಲ್ಲಿ ಸೆಬಿ ಅಧ್ಯಕ್ಷೆಯದ್ದೂ ಪಾಲು; ಹಿಂಡನ್‌ಬರ್ಗ್‌ ಮತ್ತೊಂದು ಸ್ಫೋಟಕ ವರದಿ

Exit mobile version