Site icon Vistara News

PM Narendra Modi: ನಾಮಪತ್ರ ಸಲ್ಲಿಕೆ ವೇಳೆ ಪಿಎಂ ಮೋದಿ ಪಕ್ಕದಲ್ಲಿ ಕುಳಿತಿದ್ದ ಸಾಧು ಯಾರು?

pm narendra modi nomination 2

ವಾರಾಣಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಮಂಗಳವಾರ ವಾರಾಣಾಸಿ ಲೋಕಸಭೆ ಕ್ಷೇತ್ರದಿಂದ ನಾಮಪತ್ರ (Narendra Modi nomination) ಸಲ್ಲಿಸಿದರು. ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಸೇರಿದಂತೆ ಇನ್ನೂ ಹಲವರಿದ್ದರು. ಆದರೆ ಮುಖ್ಯವಾಗಿ ಒಂದು ಮುಖ ಎಲ್ಲರ ಗಮನ ಸೆಳೆಯಿತು. ಅದು ಮೋದಿಯವರ ಪಕ್ಕದಲ್ಲಿಯೇ ಕುಳಿತಿದ್ದ, ಗಡ್ಡಧಾರಿ ಸಾಧು. ಮೋದಿ ಹಾಗೂ ಈ ವ್ಯಕ್ತಿ ಆತ್ಮೀಯವಾಗಿ ಮಾತನಾಡಿಕೊಳ್ಳುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆಯಾಯಿತು.

ಹಾಗಾದರೆ ಅವರು ಯಾರು? ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ಸಲ್ಲಿಸಿದ ನಾಮಪತ್ರವನ್ನು ಅನುಮೋದಿಸಿದ ನಾಲ್ವರಲ್ಲಿ ಈ ಸಾಧುವೂ ಒಬ್ಬರು. ಅವರ ಹೆಸರು ಪಂಡಿತ ಗಣೇಶ್ವರ ಶಾಸ್ತ್ರಿ (Pandit Ganeshwar Shastri). ಇತರ ಮೂವರೆಂದರೆ ಬೈಜನಾಥ್ ಪಟೇಲ್, ಲಾಲ್‌ಚಂದ್ ಕುಶ್ವಾಹಾ ಮತ್ತು ಸಂಜಯ್ ಸೋಂಕರ್.

ಯಾರು ಈ ಗಣೇಶ್ವರ ಶಾಸ್ತ್ರಿ? ಇವರು ಇತ್ತೀಚೆಗೆ ನಡೆದ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಿದ್ಧ ವಿದ್ವಾಂಸರು. ವಿದ್ವಾಂಸ ರಾಜೇಶ್ವರ ಶಾಸ್ತ್ರಿಯವರ ಎರಡನೇ ಮಗ. ವಿದ್ವಾನ್‌ ಗಣೇಶ್ವರ ಶಾಸ್ತ್ರಿ ಅವರು ಕಾಶಿಯಲ್ಲಿ ನೆಲೆಸಿದ್ದು, ಧರ್ಮ ಪ್ರಚಾರ ಮತ್ತು ಬೋಧನೆಗೆ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಅವರು ಸಾಂಗ್ವೇದ ವಿದ್ಯಾಲಯದಲ್ಲಿ ಗೀರ್ವಾಣವಾಗ್‌ವರ್ಧಿನಿ ಸಭೆಯ ನಿರ್ಧಾರಗಳನ್ನು ಶ್ರದ್ಧೆಯಿಂದ ಅನುಸರಿಸುತ್ತಾರೆ ಮತ್ತು ಜ್ಯೋತಿಷ್ಯ, ಆಯುರ್ವೇದ ಮತ್ತು ಆಚರಣೆಗಳಲ್ಲಿ ತಮ್ಮ ಪರಿಣತಿಯ ಮೂಲಕ ಜನರಿಗೆ ಸಹಾಯ ಮಾಡುತ್ತಿರುತ್ತಾರೆ.

ಜನವರಿ 22ರಂದು ನಡೆದ ಅಯೋಧ್ಯೆ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭವು ಪಂಡಿತ ಗಣೇಶ್ವರ ಶಾಸ್ತ್ರಿ ದ್ರಾವಿಡ ಅವರು ನಿರ್ಧರಿಸಿದ 84 ಸೆಕೆಂಡುಗಳ ಕಾಲ ಶುಭ ಮುಹೂರ್ತದಲ್ಲಿ ನಡೆದಿತ್ತು. ಈ ಸಮಯವನ್ನು ರಾಮ ಮಂದಿರದ ಅಡಿಪಾಯ ಹಾಕಲು ಸಹ ಬಳಸಲಾಗಿತ್ತು. ಇದು ಈ ಮಂದಿರ ಯೋಜನೆಯಲ್ಲಿ ಈ ವಿದ್ವಾಂಸರು ಎಷ್ಟು ಆಳವಾಗಿ ತೊಡಗಿಕೊಂಡಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಗಣೇಶ್ವರ ಶಾಸ್ತ್ರಿ ಅವರ ಪೂರ್ವಜರು ಗಂಗಾನದಿಯ ದಡದ ಕಾಶಿಯ ರಾಮಘಾಟ್ ಪ್ರದೇಶದಲ್ಲಿ ನೆಲೆಸಿದ್ದಾರೆ. ಗಣೇಶ್ವರ ಶಾಸ್ತ್ರಿ ಹುಟ್ಟಿದ್ದು ಇಲ್ಲೇ. ಇವರ ಕುಟುಂಬ ದಕ್ಷಿಣ ಭಾರತದಿಂದ ಬಂದು ಕಾಶಿಯಲ್ಲಿ ನೆಲೆಸಿದೆ. ಅವರ ಹಿರಿಯ ಸಹೋದರ, ಗೌರವಾನ್ವಿತ ವಿದ್ವಾಂಸರಾದ ಪಂಡಿತ ವಿಶ್ವೇಶ್ವರ ಶಾಸ್ತ್ರಿ ಅವರು ಕಾಶಿಯಲ್ಲಿ ವಾಸಿಸುತ್ತಿದ್ದಾರೆ. ಶೈಕ್ಷಣಿಕ ಶ್ರೇಷ್ಠತೆ ಈ ಕುಟುಂಬದ ಪರಂಪರೆಯಾಗಿದೆ.

ಮೋದಿ ನಾಮಪತ್ರ ಅನುಮೋದಿಸಿದ ಇನ್ನು ಮೂವರೆಂದರೆ ಬೈಜನಾಥ್ ಪಟೇಲ್, ಹಿರಿಯ RSS ಸ್ವಯಂಸೇವಕ, OBC ಸಮುದಾಯಕ್ಕೆ ಸೇರಿದವರು. ಲಾಲ್‌ಚಂದ್ ಕುಶ್ವಾಹಾ, ಇವರು ಕೂಡ ಒಬಿಸಿ ಸಮುದಾಯದವರು. ಸಂಜಯ್ ಸೋಂಕರ್, ಇವರು ದಲಿತ ಸಮುದಾಯದಿಂದ ಬಂದವರು.

ಪ್ರತಿಯೊಬ್ಬ ಚುನಾವಣಾ ಅಭ್ಯರ್ಥಿಯು ಅನುಮೋದಕರನ್ನು ಹೊಂದಿರಬೇಕು. ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಇವರು ಅಭ್ಯರ್ಥಿಯ ನಾಮನಿರ್ದೇಶನವನ್ನು ಅನುಮೋದಿಸುವ ಅಸೆಂಬ್ಲಿ ಅಥವಾ ಸಂಸದೀಯ ಕ್ಷೇತ್ರದ ನೋಂದಾಯಿತ ಮತದಾರರಾಗಿರಬೇಕು. ಅಭ್ಯರ್ಥಿಯ ನಾಮನಿರ್ದೇಶನ ಪತ್ರಗಳಿಗೆ ಪ್ರಸ್ತಾವನೆದಾರರು ಮತ್ತು ಅಭ್ಯರ್ಥಿ ಸಹಿ ಮಾಡಬೇಕು. ಜನತಾ ಪ್ರಾತಿನಿಧ್ಯ ಕಾಯಿದೆ, 1951ರ ಪ್ರಕಾರ, ಮಾನ್ಯತೆ ಪಡೆದ ರಾಜ್ಯ ಅಥವಾ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ಒಬ್ಬ ಅನುಮೋದಕರ ಅಗತ್ಯವಿರುತ್ತದೆ. ಆದರೆ ಸ್ವತಂತ್ರ ಅಥವಾ ಗುರುತಿಸದ ಪಕ್ಷದ ಅಭ್ಯರ್ಥಿಗೆ 10 ಜನರ ಅಗತ್ಯವಿದೆ.

ಇದನ್ನೂ ಓದಿ: PM Narendra Modi: ಪಿಎಂ ಮೋದಿ ನಾಮಪತ್ರ ಅನುಮೋದಿಸಿದ ನಾಲ್ವರ ಹಿನ್ನೆಲೆ ಏನು?

Exit mobile version