Site icon Vistara News

ವಿಸ್ತಾರ ಸಂಪಾದಕೀಯ: ಹಿಟ್‌ ಆ್ಯಂಡ್‌ ರನ್‌ ಕಾಯಿದೆಯ ಬಗ್ಗೆ ಚಾಲಕರಿಗೆ ಭಯವೇಕೆ?

Truck Drivers

ಹಿಟ್‌ ಆ್ಯಂಡ್‌ ರನ್‌ (Hit And Run law) ಅಪಘಾತ ಪ್ರಕರಣದಲ್ಲಿ ಚಾಲಕರಿಗೆ ಕಠಿಣ ಶಿಕ್ಷೆ ನೀಡುವ ಕಾಯಿದೆಯ ಜಾರಿ ರದ್ದು ಮಾಡಲು ಆಗ್ರಹಿಸಿ ಜನವರಿ 17ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ (Lorry strike) ಕರೆ ನೀಡಲಾಗಿದೆ. ಹಿಟ್ ಆ್ಯಂಡ್‌ ರನ್ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಕುರಿತಂತೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ. ರಾಷ್ಟ್ರಪತಿಯವರ ಅಂಕಿತ ದೊರತರೆ ಕಾನೂನು ಸ್ವರೂಪ ಪಡೆಯಲಿದೆ. ಈ ಕಾನೂನಿನಂತೆ ಹಿಟ್‌ ಆ್ಯಂಡ್‌ ರನ್‌ ಜೀವಹಾನಿ ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಆದರೆ ಕೇಂದ್ರ ಸರ್ಕಾರದ ರಸ್ತೆ ಸಂಚಾರಿ ಕಾನೂನು ತಿದ್ದುಪಡಿ ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಜನವರಿ 17ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಕೇಂದ್ರ ಸರ್ಕಾರ ಲಾರಿ ಮಾಲೀಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಹಿಟ್ ಆ್ಯಂಡ್‌ ರನ್ ಪ್ರಕರಣವನ್ನು ತನಗೆ ಬೇಕಾದಂತೆ ತಿರುಚುತ್ತಿದೆ. ಅಪಘಾತ ಎಂಬ ಶಬ್ದವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಾರೋ ನಿರ್ಲಕ್ಷ್ಯದಿಂದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದರೂ ಲಾರಿ ಮಾಲೀಕರನ್ನು ದೂಷಿಸಲಾಗುತ್ತಿದೆ. ನಿರ್ಲಕ್ಷ್ಯ ಚಾಲನೆಗೆ ಇರುವ ಹಾಲಿ ನಿಯಮಗಳನ್ನು ಸರಿಯಾಗಿ ಜಾರಿಗೆ ತಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಸರ್ಕಾರ ಈ ಕಾನೂನು ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಲಾರಿ ಚಾಲಕ ಮಾಲಿಕರು ಆಗ್ರಹಿಸಿದ್ದಾರೆ.

ಅಪಘಾತ ನಡೆಸಿ ಪರಾರಿಯಾದ (ಹಿಟ್‌ ಆ್ಯಂಡ್‌ ರನ್‌) ಪ್ರಕರಣ, ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣವಾದರೆ, ಯಾವುದೇ ಚಾಲಕ ಅಪಘಾತದ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡದೆ, ಸ್ಥಳದಿಂದ ಪಲಾಯನ ಮಾಡಿದರೆ ಅಂಥ ಆರೋಪಿಗೆ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ.ವರೆಗೆ ದಂಡವನ್ನು ವಿಧಿಸಬೇಕು ಎಂಬುದು ಹೊಸ ಕಾನೂನಿನ ನಿಯಮ. ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ (IPC)ಯಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಿಗೆ ನಿರ್ದಿಷ್ಟ ನಿಬಂಧನೆ ಹೊಂದಿರಲಿಲ್ಲ. ಐಪಿಸಿಯ ಸೆಕ್ಷನ್ 304 ಎ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆ ಪ್ರಕಾರ ಉದ್ದೇಶಪೂರ್ವಕವಲ್ಲದ ಮತ್ತು ನಿರ್ಲಕ್ಷ್ಯದ ಕೃತ್ಯದಿಂದ ಸಾವಿಗೆ ಕಾರಣ ಎಂದು IPC ಯ ಸೆಕ್ಷನ್ 304 A ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿತ್ತು. ಅದರಡಿ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ / ದಂಡ ವಿಧಿಸಬಹುದಿತ್ತು.

ಇದೀಗ ಲಾರಿ ಚಾಲಕರ ಆತಂಕವೆಂದರೆ, ದೊಡ್ಡ ವಾಹನ ಮತ್ತು ಚಿಕ್ಕ ವಾಹನಗಳ ನಡುವೆ ಅಪಘಾತ ನಡೆದಾಗ ತನಿಖೆ ನಡೆಸದೆ ಭಾರಿ ಗಾತ್ರದ ವಾಹನಗಳದ್ದೇ ತಪ್ಪೆಂದು ಕೇಸ್ ಹಾಕಬಹುದು. ಅಪಘಾತ ನಡೆದಾಗ ಲಾರಿಯನ್ನು ವಶಕ್ಕೆ ಪಡೆಯಲಾಗುತ್ತದೆ. ನಂತರ ಇಂತಹ ಲಾರಿಗಳನ್ನು ಹಿಂದಿರುಗಿಸಲು ಸತಾಯಿಸುತ್ತಾರೆ. ಸಂಚಾರ ದಟ್ಟಣೆ ನೆಪವೊಡ್ಡಿ ಲಾರಿಗಳಿಗೆ ಹೆಚ್ಚು ದಂಡ ವಿಧಿಸಲಾಗುತ್ತದೆ. ಅನೇಕ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಚಾಲಕರು ಪರಾರಿ ಆಗಿಬಿಡುತ್ತಾರೆ ಎಂಬ ದೂರು ಇದೆ. ಆದರೆ ಬಹುತೇಕ ಸಂದರ್ಭದಲ್ಲಿ ರೊಚ್ಚಿಗೆದ್ದ ಸ್ಥಳೀಯರು ಥಳಿಸಿ ಕೊಲ್ಲುವ ಭಯದಿಂದ ಚಾಲಕರು ಅಪಘಾತ ಸ್ಥಳದಿಂದ ಕಾಲ್ಕಿತ್ತಿರುತ್ತಾರೆ. ಬಳಿಕ ಸ್ವಇಚ್ಛೆಯಿಂದ ಪೊಲೀಸರಿಗೆ ಶರಣಾಗಿದ್ದಾರೆ. ಹೀಗಿರುವ ಕಾನೂನು ತೊಡಕುಗಳನ್ನು ಪರಿಹರಿಸದೇ ಕಠಿಣ ಕಾನೂನು ಮೊರೆ ಹೋಗುವುದು ಸಮಂಜಸವಲ್ಲ ಎಂಬುದು ಟ್ರಕ್‌ ಚಾಲಕರ ದೂರು.

ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳು ಸೃಷ್ಟಿಸಿರುವ ತಲೆನೋವು ಸಣ್ಣದೇನಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, 2022ರಲ್ಲಿ, ಭಾರತದಲ್ಲಿ ಒಟ್ಟು 47,806 ಹಿಟ್‌ ಆ್ಯಂಡ್‌ ರನ್‌ ಘಟನೆಗಳು ನಡೆದಿದ್ದು, 50,815 ಜನರನ್ನು ಕೊಂದಿವೆ. ಅಂದರೆ, ಪ್ರತಿ ಗಂಟೆಗೆ ಸುಮಾರು ಆರು ಜನರು ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಸಾವನ್ನಪ್ಪುತ್ತಾರೆ ಮತ್ತು ದಿನಕ್ಕೆ ಸರಾಸರಿ 140 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. 2021ರಲ್ಲಿ, 47,530 ಘಟನೆಗಳು 43,499 ಜನರನ್ನು ಕೊಂದಿವೆ. ಎಂದರೆ, ಇದರ ಗಂಭೀರತೆ ಏನು ಎಂದು ಅರ್ಥ ಮಾಡಿಕೊಳ್ಳಬಹುದು. ʼಅಪಘಾತʼ ಎಂಬುದರ ಅರ್ಥವೇ ʼಉದ್ದೇಶಪೂರ್ವಕವಲ್ಲದ್ದುʼ ಎಂಬುದು. ರಸ್ತೆಯ ಮೇಲೆ ಲಾರಿ ಚಾಲಕರೂ ಸೇರಿದಂತೆ ಯಾರಿಗೂ ಯಾರನ್ನೂ ಕೊಲ್ಲುವ ಉದ್ದೇಶವಿಲ್ಲದೇ ಇರಬಹುದು; ಆದರೆ ರಸ್ತೆ ನಿಯಮಗಳು ಹಾಗೂ ವಾಹನ ನಿಯಮಗಳು ಸ್ಪಷ್ಟವಾಗಿ ಹೇಳುವ ಪ್ರಕಾರ, ಅಪಘಾತ ಸಂಭವಿಸಿದರೆ ಮಾಡಬೇಕಾದ ಮೊದಲ ಕೆಲಸವೇ ಯಾರಿಗಾದರೂ ಗಾಯವಾಗಿದೆಯೇ ಎಂದು ಗಮನಿಸಿ, ಗಾಯಾಳುಗಳನ್ನು ಚಿಕಿತ್ಸೆಗೆ ಕೊಂಡೊಯ್ಯಲು ವ್ಯವಸ್ಥೆ ಮಾಡುವುದು; ಇದು ಕಾನೂನಾತ್ಮಕವಾಗಿಯೂ, ಮಾನವೀಯವಾಗಿಯೂ ಅಗತ್ಯ. ಅಪಘಾತಗಳು ಸಂಭವಿಸುತ್ತವೆ; ಆದರೆ ಹಾಗೆ ಸಂಭವಿಸಿ ತಾನು ಅನ್ಯರ ಸಾವು ಅಥವಾ ಗಾಯಕ್ಕೆ ಕಾರಣನಾದಾಗಲೂ ವ್ಯಕ್ತಿ ಅವರಿಗೆ ಸ್ಪಂದಿಸದೆ ಆ ಜಾಗದಿಂದ ಕಾಲ್ಕೀಳುತ್ತಾನೆ ಎಂದಾದರೆ ಆತ ಕ್ರೂರಿ ಎಂದೇ ಅರ್ಥ. ಅಂಥವರಿಗೆ ಶಿಕ್ಷೆಯಾಗುವುದರಲ್ಲಿ ತಪ್ಪಿಲ್ಲ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಾಮ ಬಿಜೆಪಿಗೆ ಸೇರಿದವನಲ್ಲ, ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರ ಹಾಕಿದ್ದು ಸರಿಯಲ್ಲ

ಹಾಗೆಯೇ ಇದು ಲಾರಿ ಚಾಲಕರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದೂ ತಪ್ಪು. ಇಂದು ನಗರಗಳಲ್ಲಿ ರಾತ್ರಿ ಅತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಗುದ್ದಿ ಜೀವಹಾನಿಗೆ ಕಾರಣರಾಗುವ ಕಾರು ಮಾಲಿಕರ ಸಂಖ್ಯೆ ಕೂಡ ಹೆಚ್ಚಿದೆ. ಇಂಥವರೂ ಶಿಕ್ಷೆಗೆ ಅರ್ಹರು. ಅಪಘಾತ ಎಸಗಿ ಪರಾರಿ ಆಗುವವರಿಗೆ ಮಾತ್ರ ಈ ಕಾಯಿದೆ ಅನ್ವಯಿಸುತ್ತದೆ. ಹೀಗಿರುವಾಗ ಇಡೀ ಚಾಲಕರ ಸಮೂಹ ಹೆದರಲು ಕಾರಣಗಳಿಲ್ಲ. ಅಪಘಾತ ಸಂಭವಿಸಿದಾಗ ಸ್ಥಳದಲ್ಲಿದ್ದು, ಸಂತ್ರಸ್ತರಿಗೆ ನೆರವು ಒದಗಿಸುವುದು ಮಾನವೀಯ ಸಂಗತಿ. ಅದು ಚಾಲಕನಲ್ಲಿ ಯಾವುದೇ ದುರುದ್ದೇಶವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಇದು ಮುಂದೆ ಪೊಲೀಸ್‌ ಕೇಸ್‌ ಅಥವಾ ನ್ಯಾಯಾಂಗ ವಿಚಾರಣೆಯಲ್ಲಿ ಲಾರಿ ಚಾಲಕರ ಪರವಾಗಿ ನಿಲ್ಲುವ ಅಂಶ ಕೂಡ ಆಗಿದೆ. ಅನೇಕ ಕಡೆಗಳಲ್ಲಿ ಹೆದ್ದಾರಿಗಳು ರಾತ್ರಿ ಹೊತ್ತಿನಲ್ಲಿ ನಿರ್ಜನವಾಗಿರುತ್ತವೆ. ಗಾಯಗೊಂಡು ಬಿದ್ದಿರುವವರ ನೆರವಿಗೆ ಯಾರೂ ಬರುವಂತಿರುವುದಿಲ್ಲ. ಇಂಥ ಹೊತ್ತಿನಲ್ಲಿ ಅಪಘಾತ ಎಸಗಿದವರೇ ನೆರವಾಗುವುದು ಅಗತ್ಯ ಕೂಡ.

Exit mobile version