Site icon Vistara News

ವಿಸ್ತಾರ ಸಂಪಾದಕೀಯ: ‘ದಿ ಕೇರಳ ಸ್ಟೋರಿ’ ನಿಷೇಧದ ಮಾತೇಕೆ?

Why is 'The Kerala Story' banned?

#image_title

ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರನ್ನು ಲವ್ ಜಿಹಾದ್ ಮೂಲಕ ಮತಾಂತರಿಸಿ ಉಗ್ರ ಕೃತ್ಯಗಳಲ್ಲಿ ತೊಡಗಿಸುವ ಕಥಾನಕವುಳ್ಳ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಮೇ 5ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರವನ್ನು ನಿಷೇಧಿಸಬೇಕೆಂದು ಕಾಂಗ್ರೆಸ್, ಎಡ ಪಕ್ಷಗಳು ಮತ್ತು ಕೆಲವು ಮುಸ್ಲಿಂ ಸಂಘಟನೆಗಳು ಒತ್ತಾಯಿಸುತ್ತಿವೆ. ಎಡಪಕ್ಷಗಳು ಹಾಗೂ ಕಾಂಗ್ರೆಸ್‌ನ ದ್ವಂದ್ವ ನೀತಿ, ತುಷ್ಟೀಕರಣ ನೀತಿಯನ್ನು ಇದು ಮತ್ತೊಮ್ಮೆ ಬಯಲಿಗೆ ತಂದಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್’ ಚಿತ್ರ ಕೂಡ ಬಿಡುಗಡೆಗೆ ಮೊದಲು ಇಂಥದ್ದೇ ವಿರೋಧ ಎದುರಿಸಿತ್ತು. ಆದರೆ ಬಿಡುಗಡೆಗೊಂಡು, 90ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂ ಪಂಡಿತ ಸಮುದಾಯದವರ ಮೇಲೆ ನಡೆದ ಚಿತ್ರಹಿಂಸೆಯ ಕ್ರೂರ ಸತ್ಯವನ್ನು ಜಗತ್ತಿಗೆ ಸಾರಿ ಹೇಳಿತ್ತು. ಈಗ ದಿ ಕೇರಳ ಸ್ಟೋರಿ ಕೂಡ ಇಂಥದ್ದೇ ಗಂಭೀರ ಕಥಾನಕವನ್ನು ಹೊಂದಿದೆ.

ಕೇರಳದಲ್ಲಿ ಅವ್ಯಾಹತವಾಗಿ ಲವ್ ಜಿಹಾದ್ ಪ್ರಕರಣಗಳು ನಡೆದಿರುವುದು ಕಟ್ಟು ಕತೆ ಏನಲ್ಲ. ಇದು ಈಗಾಗಲೇ ವರದಿಯಾಗಿರುವ ಸಂಗತಿ. ”ಕಳೆದ ಒಂದು ದಶಕದಲ್ಲಿ 32,000 ಮುಸ್ಲಿಮೇತರ ಯುವತಿಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. 2021ರಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಕೇರಳ ಅಸೆಂಬ್ಲಿಗೆ ನೀಡಿದ ಅಂಕಿಅಂಶಗಳ ಆಧಾರದ ಮೇಲೆಯೇ ಈ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ” ಎಂದು ಚಿತ್ರದ ನಿರ್ದೇಶಕ ಸುದೀಪ್ತೊ ಸೇನ್ ಹೇಳಿದ್ದಾರೆ. ಸೆಪ್ಟೆಂಬರ್ 2012ರಲ್ಲಿ ಪ್ರಕಟವಾದ ‘ಇಂಡಿಯಾ ಟುಡೆ’ ಪತ್ರಿಕೆಯ ವರದಿಯ ಪ್ರಕಾರ, 2006ರಿಂದ 2012ರವರೆಗೆ ಕೇರಳ ರಾಜ್ಯದಲ್ಲಿ 2,667 ಯುವತಿಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಅಂಕಿಸಂಕಿಯಲ್ಲಿ ತುಸು ವ್ಯತ್ಯಾಸ ಇರಬಹುದು. ಆದರೆ ಇದು ಗಂಭೀರವಾದ ಸಂಗತಿಯಂತೂ ಹೌದು. ಹಾಗಾಗಿ ಈ ವಿಷಯದ ಬಗ್ಗೆ ಸಿನಿಮಾ ಮಾಡುವುದರಲ್ಲಿ ತಪ್ಪೇನಿಲ್ಲ.

ಇನ್ನು ಕೇರಳದಿಂದ ಮತಾಂಧರ ಬೋಧನೆಯಿಂದ ಬ್ರೇನ್‌ವಾಶ್ ಆಗಿ ಐಸಿಸ್ ಸೇರಲು ಹೊರಟು, ಅಫ್ಘಾನಿಸ್ತಾನದ ಜೈಲಿನಲ್ಲಿರುವ ಕನಿಷ್ಠ ನಾಲ್ಕು‌ ಯುವತಿಯರ ದಾಖಲೆ ಎನ್‌ಐಎ ಬಳಿ ಇದೆ. ಇವರಲ್ಲಿ ಮೂವರು ಕ್ರಿಶ್ಚಿಯನ್ ಮತ್ತು ಒಬ್ಬಾಕೆ ಹಿಂದೂ ಮೂಲದವಳು. ಕೇರಳದಲ್ಲಿ ಮೂಲಭೂತವಾದದ ಬೋಧನೆ ಪಡೆದು, 2016ರಲ್ಲಿ ತಮ್ಮ ಗಂಡಂದಿರೊಂದಿಗೆ ಆಫ್ಘಾನಿಸ್ತಾನಕ್ಕೆ ಓಡಿಹೋಗಿ ಐಸಿಸ್ ಸೇರ್ಪಡೆಯಾಗಿದ್ದರು. ಈ ನಾಲ್ವರ ಗಂಡಂದಿರೂ ಐಎಸ್ಎಸ್ ವಿರುದ್ಧದ ಆಫ್ಘಾನ್- ಅಮೆರಿಕ ಸೇನಾದಾಳಿಗಳಲ್ಲಿ ಸಾವನ್ನಪ್ಪಿದ್ದರು. ನಂತರ ಇವರು ಕಾಬೂಲ್‌ನ ಜೈಲಿನಲ್ಲಿದ್ದಾರೆ ಎಂದು ಊಹಿಸಲಾಗಿದೆ. ಅಂದರೆ ದಿ ಕೇರಳ ಸ್ಟೋರಿಯ ಕಥಾವಸ್ತು ನೈಜತೆ ಹತ್ತಿರವಾಗಿಯೇ ಇದೆ.

ವಿಚಿತ್ರ ಎಂದರೆ, ಇದನ್ನು ವಿರೋಧಿಸುತ್ತಿರುವವರಲ್ಲಿ ಕಾಣಿಸುತ್ತಿರುವ ದ್ವಿಮುಖ ನೀತಿ. ಬೇಶರಮ್ ರಂಗ್ ಹಾಡಿನಲ್ಲಿ ಕೇಸರಿ ಬಿಕಿನಿ ವಿಚಾರದಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ನಿಷೇಧಿಸಿ ಎಂದು ಕೆಲವು ಹಿಂದೂ ಸಂಘಟನೆಗಳು ಒತ್ತಾಯಿಸಿದಾಗ ಟೀಕಿಸಿದ ಬುದ್ಧಿಜೀವಿಗಳೇ ಈಗ ದಿ ಕೇರಳ ಸ್ಟೋರಿ ನಿಷೇಧಿಸಿ ಎಂದು ಒತ್ತಾಯಿಸುತ್ತಿರುವುದು ಬೂಟಾಟಿಕೆಯಲ್ಲವೇ? ಪಠಾಣ್ ಚಿತ್ರಕ್ಕಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯ ದಿ ಕೇರಳ ಸ್ಟೋರಿಗೇಕಿಲ್ಲ? ಕಾಶ್ಮೀರ ಹತ್ಯಾಕಾಂಡ, ಲವ್ ಜಿಹಾದ್‌‌ನಂಥ ಕಹಿ ಸತ್ಯಗಳನ್ನು ಹೇಳುವಾಗ ಮಾತ್ರ ಇವರ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾದ ಧ್ವನಿಗಳು ಅಡಗಿಕೊಳ್ಳುವುದೇಕೆ?

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಪಿಎಫ್‌ಐ ಜತೆ ಬಜರಂಗ ದಳ ಹೋಲಿಕೆ ಸರಿಯಲ್ಲ

ಸೆನ್ಸಾರ್ ಮಂಡಳಿ ಈಗಾಗಲೇ ಈ ಚಿತ್ರ ವೀಕ್ಷಿಸಿ ಕೆಲವು ದೃಶ್ಯ ಕಟ್ ಮಾಡಲು ಸೂಚಿಸಿದೆ. ಇದನ್ನು ಚಿತ್ರ ತಂಡ ಒಪ್ಪಿದೆ. ಹೀಗಿರುವಾಗ ಚಿತ್ರ ನಿಷೇಧಿಸಿ ಎಂದು ಹುಯಿಲೆಬ್ಬಿಸುವುದೇಕೆ? ಈ ಚಿತ್ರ ನಿಷೇಧಿಸಿದ ಮಾತ್ರಕ್ಕೆ, ಕೇರಳದಿಂದ ಸಿರಿಯಾ ತನಕ ವ್ಯಾಪಿಸಿರುವ ಲವ್ ಜಿಹಾದ್‌ನ ಕರಾಳ ಹಾದಿಯನ್ನು ಮರೆಮಾಚಲಾದೀತೆ? ಇಂಥ ಚಿತ್ರಗಳು ಸಾರುವ ಸಂಗತಿಯನ್ನು ವಾಸ್ತವ ನೆಲೆಯಲ್ಲಿ ಸ್ವೀಕರಿಸುವ ಪರಿಶೀಲಿಸುವ ಮತ್ತು ಸಮಸ್ಯೆಗೆ ಉತ್ತರ ಹುಡುಕುವ ಪ್ರಕ್ರಿಯೆ ನಡೆಯಬೇಕು. ಈ ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿ ಆಗದಂತೆ ನೋಡಿಕೊಳ್ಳುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹೊಣೆಗಾರಿಕೆಯಾಗಿದೆ.

Exit mobile version