ಮಂಗಳೂರು ನಗರದ ರಸ್ತೆಯಲ್ಲಿ ನಮಾಜ್ (Namaz On Road) ಮಾಡಿದ ವಿಚಾರಕ್ಕೆ ಬಿಜೆಪಿ ನಾಯಕರು ಹಾಗೂ ಹಿಂದು ಸಂಘಟನೆಗಳು ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ನಮಾಜ್ ಮಾಡಿದವರ ವಿರುದ್ಧ ಕದ್ರಿ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಕಲಂ 341, 283, 143 ಜೊತೆಗೆ 149ರಡಿ ಸುಮೋಟೊ ಪ್ರಕರಣ ದಾಖಲಾಗಿದೆ. ಮೇ 24ರಂದು ನಗರದ ಕಂಕನಾಡಿಯ ಮಸೀದಿ ಎದುರು ಯುವಕರ ತಂಡ ನಮಾಜ್ ಮಾಡಿತ್ತು. ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಆಗಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಬಗ್ಗೆ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಕಿಡಿಕಾರಿದ್ದರು. ಇಂತಹ ಘಟನೆ ಮರುಕಳಿಸಿದರೆ ಅದೇ ವೇಳೆಯಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ವಿಶ್ವ ಹಿಂದೂ ಪರಿಷದ್ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಸಕ್ರಿಯತೆ ಮೆಚ್ಚಬೇಕಾದ ಸಂಗತಿ.
ಕೆಲವರು ಇದನ್ನು ಸಾರ್ವಜನಿಕ ತಾಣಗಳಲ್ಲಿ ನಡೆಯುವ ಹಿಂದೂ ಧಾರ್ಮಿಕ ಆಚರಣೆಗಳ ಜೊತೆಗೆ ಹೋಲಿಸುತ್ತಿದ್ದಾರೆ. ನಮಾಜ್ ಸಂಪೂರ್ಣ ವೈಯಕ್ತಿಕ ಸಂಗತಿ ಹಾಗೂ ಅದೊಂದು ವೈಯಕ್ತಿಕ ಧಾರ್ಮಿಕ ಆಚರಣೆ. ಅದೇನೂ ಸಾರ್ವಜನಿಕ ಪ್ರಾರ್ಥನೆಯಾಗಲೀ, ಸಾರ್ವಜನಿಕ ಸತ್ಯನಾರಾಯಣ ಪೂಜೆಯಂತಹ ಕಾರ್ಯಕ್ರಮವಾಗಲೀ, ಮೊಸರು ಕುಡಿಕೆಯಂಥ ಮನರಂಜನಾ ಕಾರ್ಯಕ್ರಮವಾಗಲೀ ಅಲ್ಲ. ಆದ್ದರಿಂದ ಅದನ್ನು ಹಿಂದೂ ಧಾರ್ಮಿಕ ಆಚರಣೆಗಳ ಜೊತೆಗೆ ಹೋಲಿಸಲು ಸಾಧ್ಯವಿಲ್ಲ. ಯಾವುದೇ ಹಿಂದೂ ಹಬ್ಬಕ್ಕೆ ಸಂಬಂಧಿಸಿದ ಆಚರಣೆಯನ್ನೇ ಮಾಡುವುದಿದ್ದರೂ ರಸ್ತೆಯನ್ನು ಬಂದ್ ಮಾಡಿ ಯಾರೂ ಮಾಡುವುದಿಲ್ಲ. ಸಾರ್ವಜನಿಕ ಮೈದಾನ ಅಥವಾ ವೈಯಕ್ತಿಕ ಖಾಲಿ ಜಾಗಗಳಲ್ಲಿ, ರಸ್ತೆಯಲ್ಲಿ ಯಾವುದೇ ಅಡೆತಡೆಯಾಗದಂತೆ ಆಚರಿಸುತ್ತಾರೆ. ರಾಮನವಮಿಯಲ್ಲಿ ನಡೆಯುವ ಪಾನಕ ಪನಿವಾರ ವಿತರಣೆ ಕೂಡ ರಸ್ತೆಯಲ್ಲಿ ಹೋಗಿ ಬರುವವರ ದಣಿವನ್ನು ತಣಿಸುವಂತೆ ಆಪ್ಯಾಯಮಾನವಾಗಿರುತ್ತದೆಯೇ ಹೊರತು, ಕಿರಿಕಿರಿ ಮಾಡುವಂತೆ ಇರುವುದಿಲ್ಲ. ಆದ್ದರಿಂದ ಇದನ್ನು ಹಿಂದೂ ಆಚರಣೆಗಳ ಜೊತೆಗೆ ಹೋಲಿಸುವುದು ಕುತರ್ಕ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕುಡುಕ ಬಾಲಕನಿಂದ ಅಪಘಾತ ಪ್ರಕರಣ; ಪುಣೆ ಪೊಲೀಸರ ದಿಟ್ಟ ಕ್ರಮ ಶ್ಲಾಘನೀಯ
ಹಿಂದೂ ಧರ್ಮೀಯರು ಕೂಡ ವೈಯಕ್ತಿಕ ಪೂಜೆ, ನಿತ್ಯಪೂಜೆಯಂಥ ಆಚರಣೆಗಳನ್ನು ಮನೆಯೊಳಗೆ, ದೇವರ ಕೋಣೆಯಲ್ಲಿ ಮಾಡಿಕೊಳ್ಳುತ್ತಾರೆ. ಎಂದೂ ಇತರರಿಗೆ ತೊಂದರೆ ಮಾಡುವಂತೆ ನೆರವೇರಿಸುವುದಿಲ್ಲ. ಇನ್ನು ಮುಸ್ಲಿಂ ಸಮುದಾಯದ ಉರೂಸ್‌ನಂಥ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲರೂ ಸೇರುವಂತಹ ವಿಶಾಲ ಮೈದಾನಗಳಲ್ಲಿ ನಡೆಸುವ ಅವಕಾಶವಿದ್ದೇ ಇದೆ. ಇದಕ್ಕೆ ಯಾರೂ ಅಡ್ಡಿಪಡಿಸಿಲ್ಲ. ಮಸೀದಿಗಳಲ್ಲಿ ಪ್ರತಿದಿನ ಐದು ಬಾರಿ ನಡೆಸುವ ಆಜಾನ್ ಅನ್ನು ಕೂಡ ಧ್ವನಿವರ್ಧಕದಲ್ಲಿ ಪ್ರಸಾರ ಮಾಡುವುದನ್ನು ಕೂಡ ಬಹುತೇಕ ಹಿಂದೂಗಳು ಯಾವುದೇ ರೀತಿಯಲ್ಲಿ ಆಕ್ಷೇಪಿಸಿಲ್ಲ. ಆದರೆ ಯಾವಾಗ ರಸ್ತೆಯಲ್ಲಿ ನಮಾಜ್ ಎಂಬುದು ಹೊಸದಾಗಿ ಆರಂಭವಾಯಿತೋ ಆಗ ಸ್ಥಳೀಯರು ಆತಂಕಕ್ಕೆ ಒಳಗಾಗುವುದು ಸಹಜ. ಇದೊಂದು ನಿತ್ಯದ ಪರಿಪಾಠವೇ ಆಗಿಬಿಟ್ಟರೆ, ಆಗ ನಿತ್ಯವೂ ದಾರಿಹೋಕರು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಪ್ರತಿದಿನ ನಿರ್ದಿಷ್ಟ ಹೊತ್ತಿಗೆ ಇಂತಿಂಥ ರಸ್ತೆಯಲ್ಲಿ ಹೋಗಬಾರದು ಎಂಬ ಅಘೋಷಿತ ಕರ್ಫ್ಯೂ ಸೃಷ್ಟಿಯಾಗಿಬಿಡುತ್ತದೆ.
ಒಂದು ಸಮಾಜದಲ್ಲಿ ಅಸಹನೆ ಬೇರೂರಲು ಆರಂಭವಾಗುವುದು ಇಂಥ ಸಣ್ಣ, ಆದರೆ ಮೊಳಕೆಯಲ್ಲೇ ನಾವು ಹತ್ತಿಕ್ಕಬೇಕಾದ ಸಂಗತಿಗಳಿಂದಲೇ. ರಸ್ತೆಯಲ್ಲಿ ನಮಾಜ ಮಾಡುವುದನ್ನು ಸಾಂಪ್ರದಾಯಿಕ ಮುಸ್ಲಿಮರು ಕೂಡ ಸಮರ್ಥಿಸುವುದಿಲ್ಲ. ಮಸೀದಿಯ ಒಳಗೆ ಅಥವಾ ಮನೆಯ ಒಳಗೆ ನಡೆಯಬೇಕಾದ ಒಂದು ಖಾಸಗಿ ಧಾರ್ಮಿಕ ಸಂಗತಿಯನ್ನು ಸಾರ್ವಜನಿಕ ಮಾಡಿದರೆ ಅದರ ಘನತೆ ಕಳೆದುಹೋಗುತ್ತದೆ. ಅದಕ್ಕಿರಬಹುದಾದ ಪವಿತ್ರ ಆವರಣವೂ ನಾಶವಾಗುತ್ತದೆ. ನಮಾಜ್ ಎಂಬುದು ಮುಸ್ಲಿಮರಿಗೆ ಹೇಗೋ ಹಾಗೆಯೇ ಹಿಂದೂಗಳು ಕೂಡ ಗೌರವಿಸಬೇಕಾದ ಸಂಗತಿ. ಆ ಗೌರವ ಇರುವುದರಿಂದಲೇ, ರಸ್ತೆಯಲ್ಲಿ ಮಾಡುವ ಮೂಲಕ ಅದರ ಘನತೆಯನ್ನು ನಾಶ ಮಾಡದಿರಿ ಎಂಬ ಸಂದೇಶವನ್ನು ಹಿಂದೂ ಸಮಾಜದ ಹಲವರು ನೀಡುತ್ತಿದ್ದಾರೆ ಎಂದು ತಿಳಿಯಬೇಕು. ಈ ಮಾತನ್ನು ಮುಸ್ಲಿಂ ಸಮುದಾಯ ಒಪ್ಪಿ ಗೌರವಿಸಿದರೆ ಸಮಾಜದ ಸಾಮರಸ್ಯ ಕದಡದು.