Site icon Vistara News

ವಿಸ್ತಾರ ಸಂಪಾದಕೀಯ: ಪಿತೃಪ್ರಧಾನ ವೈಭವೀಕರಣ ಏಕೆ? ಸುಪ್ರೀಂ ಕೋರ್ಟ್ ಪ್ರಶ್ನೆ ಚಿಂತನಾರ್ಹ

Patriarchy In India

Patriarchy In India

ಯಾವುದೇ ತೀರ್ಪಿನಲ್ಲಿ ಅಥವಾ ವಾದದಲ್ಲಿ ಪಿತೃಪ್ರಾಧಾನ್ಯತೆಯ ಅಂಶಕ್ಕೆ ಒತ್ತು ಕೊಡಬೇಡಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟವಾಗಿ ಹೇಳಿದೆ. ಬಾಲಕನೊಬ್ಬನ ಕೊಲೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಬಗ್ಗೆ ಸೂಚಿಸಿದೆ. ಗಂಡು ಮಗುವಾಗಿದ್ದರಿಂದ ಪೋಷಕರಿಗೆ ಮುಂದೆ ಆತನೇ ಆಧಾರವಾಗಿದ್ದ ಎಂದು ದೂರುದಾರರ ಪರ ವಕೀಲರು ವಾದಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು, ಪಿತೃಪ್ರಧಾನ ವಾದ ಏಕೆ? ಹೆಣ್ಣು ಮಕ್ಕಳೂ ಪೋಷಕರನ್ನು ನೋಡಿಕೊಳ್ಳುವುದಿಲ್ಲವೇ? ಈಗಿನ ಕಾಲದಲ್ಲಿ ಗಂಡು, ಹೆಣ್ಣು ಎರಡೂ ಒಂದೇ. ಗಂಡು ಹೆಚ್ಚು, ಹೆಣ್ಣು ಕಡಿಮೆ ಎನ್ನುವುದು ಈ ಕಾಲಘಟ್ಟದಲ್ಲಿ ಅರ್ಥಹೀನ ಎಂದು ಹೇಳಿರುವುದು ಅರ್ಥಪೂರ್ಣವಾಗಿದೆ.

ಈ ತಲೆಮಾರಿನ ಬಹುತೇಕ ಪೋಷಕರು ತಮ್ಮ ಮಕ್ಕಳಲ್ಲಿ ಹೆಣ್ಣು, ಗಂಡು ಎಂಬ ಭೇದಭಾವ ಮಾಡುತ್ತಿಲ್ಲ. ಕಲಿಕೆಯಲ್ಲಿ ಇಂದು ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಿಗೂ ಅಂತರವಿಲ್ಲ. ಕರಿಯರ್‌ನಲ್ಲೂ ಅವರ ಕೈ ಮಿಗಿಲಾಗಿದೆ. ತಮ್ಮದೇ ಆದ ಸ್ಟಾರ್ಟಪ್‌ಗಳನ್ನು ಸ್ಥಾಪಿಸಿ, ದೊಡ್ಡ ಕಂಪನಿಗಳ ಸಿಇಒ ಆಗಿ, ದೇಶವನ್ನೂ ಮುನ್ನಡೆಸುವವರಾಗಿ ಹೆಣ್ಣುಮಕ್ಕಳು ಬೆಳಗಿದ್ದಾರೆ. ಇದೆಲ್ಲದರ ನಡುವೆಯೂ ಮನೆಯ ಆಗುಹೋಗುಗಳನ್ನು ಗಂಡಿಗಿಂತ ಮಿಗಿಲಾಗಿ ಗಮನಿಸಿಕೊಂಡು, ತೂಗಿಸಿಕೊಂಡು, ಗಂಡಿಗಿಂತ ತಮ್ಮ ಸಾಮರ್ಥ್ಯ ಅಧಿಕ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ಅನೇಕ ಹೆಣ್ಣುಮಕ್ಕಳು ತಮ್ಮ ಸಹೋದರರಿಗಿಂತ ಚೆನ್ನಾಗಿ ಪೋಷಕರನ್ನು ನೋಡಿಕೊಳ್ಳುತ್ತಿರುವುದೂ ಉಂಟು. ಸಾಕಷ್ಟು ಪೋಷಕರು, ಮೊದಲ ಮಗು ಹೆಣ್ಣಾಗಿದ್ದರೂ ಒಂದೇ ಹೆಣ್ಣು ಮಗು ಸಾಕು ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆ. ಅಂದರೆ ಅವರ ಮನದಲ್ಲಿ ಗಂಡು ಮಗುವೇ ತಮ್ಮನ್ನು ಮುಂದೆ ನೋಡಿಕೊಳ್ಳುವವನು ಎಂಬ ಭಾವನೆ ಇಲ್ಲ. ಈ ಪ್ರಗತಿಪರ ಮನೋಭಾವವನ್ನು ಇಂದು ಹೆಚ್ಚಿನ ಕಲಿತ ದಂಪತಿಗಳಲ್ಲಿ ಗಮನಿಸಬಹುದು.

ಸರ್ವರಿಗೆ ಸಮಾನ ನ್ಯಾಯದ ಚಿಂತನೆ ಹೊಂದಿರಬೇಕಾದ ನ್ಯಾಯಾಂಗದಲ್ಲೂ ಪುರುಷಪ್ರಾಧಾನ್ಯತೆಯ ಭಾವನೆ ಇನ್ನೂ ಉಳಿದುಕೊಂಡಿರುವುದು ಅಚ್ಚರಿಯ ಸಂಗತಿ. 2021ರಲ್ಲಿ ʼಅಪರ್ಣಾ ಭಟ್ ಮತ್ತು ಇತರರು ವರ್ಸಸ್ ಮಧ್ಯಪ್ರದೇಶ ಸರ್ಕಾರʼ ಎಂಬ ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ನ್ಯಾಯಾಲಯಗಳು ತಮ್ಮ ತೀರ್ಪುಗಳಲ್ಲಿ ಪುರುಷ ಪ್ರಧಾನ ಹಾಗೂ ಸ್ತ್ರೀದ್ವೇಷಿ ಹೇಳಿಕೆಗಳನ್ನು ನೀಡದಂತೆ ಹಲವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಮಹಿಳೆಯರು ದೈಹಿಕವಾಗಿ ದುರ್ಬಲರು ಮತ್ತು ಅವರಿಗೆ ರಕ್ಷಣೆ ಬೇಕು, ಮಹಿಳೆಯರು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರು, ಪುರುಷನೇ ಮನೆಯ ಮುಖ್ಯಸ್ಥ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಆತನೇ ತೆಗೆದುಕೊಳ್ಳಬೇಕು, ಮಹಿಳೆ ನಮ್ಮ ಸಂಸ್ಕೃತಿಗೆ ವಿಧೇಯಳು ಹಾಗೂ ನಿಷ್ಠಳಾಗಿರಬೇಕು ಮುಂತಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸದಂತೆ ಮಾರ್ಗಸೂಚಿ ಹೇಳಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ, ಪಿತೃಪ್ರಧಾನ ವಾದ ಬಡಿಗಿಡಿ ಎಂಬ ಸುಪ್ರೀಂ ಕೋರ್ಟ್ ಸೂಚನೆ ಸೂಕ್ಷ್ಮ ಸಂವೇದನೆಯಿಂದ ಕೂಡಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ

ಹೆಣ್ಣು ಗಂಡಿಗೆ ಎಲ್ಲ ವಿಚಾರಗಳಲ್ಲೂ ಸರಿಸಮಾನ ಎಂಬುದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಹಲವು ಸರ್ಕಾರೀ ಉಪಕ್ರಮಗಳಿಂದಲೂ ರುಜುವಾತುಪಡಿಸಲಾಗಿದೆ. ಉದಾಹರಣೆಗೆ, ಪೋಷಕರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಗಂಡಿನಷ್ಟೇ ಸಮಾನ ಪಾಲು ಇದೆ. ವಯೋವೃದ್ಧ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಗಂಡು ಮಕ್ಕಳಿಗೆ ಕೊಡಬಹುದಾದ ಶಿಕ್ಷೆಯೇ ಹೆಣ್ಣುಮಕ್ಕಳಿಗೂ ಸಮಾನವಾಗಿ ಸಲ್ಲುತ್ತದೆ! ಸಂವಿಧಾನವಾಗಲೀ ನಮ್ಮ ಕಾನೂನುಗಳಾಗಲೀ ಪುರುಷನಿಗೂ ಮಹಿಳೆಗೂ ಯಾವುದೇ ಭೇದವನ್ನು ಮಾಡಿಲ್ಲ. ಆದರೂ ಕೌಟುಂಬಿಕ, ಸಾಮಾಜಿಕ, ಆಡಳಿತಾತ್ಮಕ, ಧಾರ್ಮಿಕ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಅಸಮಾನತೆಯ ಆಚರಣೆ ರೂಢಿಯಲ್ಲಿರುವುದು ನಿಜ. ರೂಢಿಗತವಾಗಿ ಬೆಳೆದು ಬಂದಿರುವ ಆಚರಣೆಗಳು ಮತ್ತು ನಂಬಿಕೆಗಳಿಂದ, ಪುರು‌‍‍‍ಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಿಂದ, ಅಸಮಾನತೆ ಬೆಳೆದಿದೆ. ಸಮಾಜದ ಹಲವರಲ್ಲಿರುವ ಈ ಅಜ್ಞಾನ ತೊಲಗುವುದಕ್ಕೆ ವೈಜ್ಞಾನಿಕ ಚಿಂತನೆ, ಶಿಕ್ಷಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೋರ್ಟ್‌ನ ನಿರ್ದೇಶನವೂ ಪೂರಕವಾಗಿದೆ.

Exit mobile version