ಹೋಟೆಲ್, ರೆಸ್ಟೋರೆಂಟ್, ವಿಮಾನ ನಿಲ್ದಾಣ ಮುಂತಾದ ಸಾರ್ವಜನಿಕ ತಾಣಗಳಲ್ಲಿ ಧೂಮಪಾನಿಗಳಿಗಾಗಿ ಮೀಸಲಿಟ್ಟಿರುವ ‘ಧೂಮಪಾನ ವಲಯ’ಗಳನ್ನು ರದ್ದುಪಡಿಸಬೇಕು ಎಂದು ಹಲವಾರು ವೈದ್ಯರು, ಕ್ಯಾನ್ಸರ್ ರೋಗಿಗಳು, ಚಿಕಿತ್ಸಕರು ಮತ್ತು ಸಾಮಾಜಿಕ ಚಿಂತಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಕಾಯಿದೆಯನ್ನೇ ರೂಪಿಸಲಾಗಿದೆ. ಆದರೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿಲ್ಲ. ಪರಿಣತರು ಧೂಮಪಾನವನ್ನೇ ನಿಷೇಧಿಸುವ ಮಾತನಾಡಿದರೆ, ಸರ್ಕಾರ ಮಾತ್ರ ಹೋಟೆಲ್, ರೆಸ್ಟೊರೆಂಟ್, ವಿಮಾನ ನಿಲ್ದಾಣಗಳಲ್ಲಿ ಧೂಮಪಾನ ವಲಯ ಸ್ಥಾಪಿಸುವ ಮೂಲಕ, ಪರೋಕ್ಷವಾಗಿ ಧೂಮಪಾನವನ್ನು ಉತ್ತೇಜಿಸುತ್ತಿದೆ. ಈ ದ್ವಂದ್ವ ನೀತಿ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರ.
ಕಳೆದ ವರ್ಷ (2022 ಸೆಪ್ಟೆಂಬರ್) ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಂಸದೀಯ ಸ್ಥಾಯಿ ಸಮಿತಿಯು ‘ಕ್ಯಾನ್ಸರ್ ಆರೈಕೆಯ ಯೋಜನೆ ಮತ್ತು ನಿರ್ವಹಣೆ: ತಡೆಗಟ್ಟುವಿಕೆ, ರೋಗನಿರ್ಣಯ, ಸಂಶೋಧನೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಲಭ್ಯತೆʼ ಕುರಿತ 139ನೇ ವರದಿಯನ್ನು ರಾಜ್ಯಸಭೆಯ ಅಧ್ಯಕ್ಷರಿಗೆ ಸಲ್ಲಿಸಿದೆ. ಅದರಲ್ಲಿ, ಕ್ಯಾನ್ಸರ್‌ಗೆ ತಂಬಾಕು ಪ್ರಮುಖ ಅಪಾಯಕಾರಿ ಅಂಶ ಎಂದು ಹೇಳಿತ್ತು. ಭಾರತದಲ್ಲಿನ ಎಲ್ಲಾ ಕ್ಯಾನ್ಸರ್‌ಗಳ ಪೈಕಿ ಶೇಕಡ 50ರಷ್ಟಕ್ಕೆ ತಂಬಾಕು ಕಾರಣ; ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳನ್ನು ತಡೆಯಲು ತಂಬಾಕು ಸೇವನೆಯನ್ನು ನಿರುತ್ಸಾಹಗೊಳಿಸಬೇಕು ಎಂದಿತ್ತು. ಇದೇ ವರದಿಯಲ್ಲಿ, ವಿಮಾನ ನಿಲ್ದಾಣ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿರುವ ಸ್ಮೋಕಿಂಗ್ ಜೋನ್‌ಗಳನ್ನು ರದ್ದುಗೊಳಿಸಲು, ಸಂಘ ಸಂಸ್ಥೆಗಳಲ್ಲಿ ಧೂಮಪಾನ ಮುಕ್ತ ನೀತಿಯನ್ನು ಪ್ರೋತ್ಸಾಹಿಸಲು ಕೂಡ ಶಿಫಾರಸು ಮಾಡಿತ್ತು. ಆದರೆ ಈ ವರದಿಯ ಜಾರಿ, ಎಂದಿನಂತೆ, ನನೆಗುದಿಗೆ ಬಿದ್ದಿದೆ.
ಧೂಮಪಾನ ವಲಯಗಳು ಹೆಸರಿಗೆ ಪ್ರತ್ಯೇಕವಾಗಿದ್ದರೂ ಆಯಾ ತಾಣಗಳಿಗೆ ಭೇಟಿ ನೀಡುವ ಕುಟುಂಬಗಳಿಗೆ ಅಪಾಯಕಾರಿಯೇ ಆಗಿವೆ. ಇಂಥ ಸ್ಥಳಗಳಲ್ಲಿ ಪುಟ್ಟ ಮಕ್ಕಳು ಕೂಡ ಬರುತ್ತಾರೆ. ಧೂಮಪಾನ ವಲಯ ಒಂದು ಕಡೆ ಸ್ಥಾಪಿಸಿದರೂ, ಧೂಮಪಾನಿಗಳು ಬಿಡುವ ಹೊಗೆ ಎಲ್ಲೆಡೆ ಆವರಿಸುವುದಿಲ್ಲವೆ? ಇದರ ದುಷ್ಪರಿಣಾಮ ಎಲ್ಲರ ಮೇಲೆ ಬೀರುತ್ತದೆ. ಈ ಹಿನ್ನಲೆಯಲ್ಲಿ ಹಲವಾರು ವೈದ್ಯರು, ಕ್ಯಾನ್ಸರ್ ರೋಗಿಗಳು ಕೇಂದ್ರ ಸರ್ಕಾರವನ್ನು ಸ್ಮೋಕಿಂಗ್ ಜೋನ್‌ಗಳ ನಿಷೇಧಕ್ಕೆ ಒತ್ತಾಯಿಸಿರುವುದು ಸ್ವಾಗತಾರ್ಹ. ಧೂಮಪಾನಿಗಳಲ್ಲದ ಇತರರನ್ನು ಧೂಮಪಾನದಿಂದ ರಕ್ಷಿಸಿ ಎಂದು ಇವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಲೋಕಸಭೆಗೆ ಕೇಂದ್ರ ಸರ್ಕಾರ ನೀಡಿದ್ದ ಮಾಹಿತಿಯಂತೆ, 2018-2020ರ ನಡುವೆ 40 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗಿದ್ದು ಅದರಲ್ಲಿ 22.54 ಲಕ್ಷ ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಲ್ಯಾನ್ಸೆಟ್ ಹೊರತಂದಿರುವ ಅಧ್ಯಯನ ವರದಿಯೊಂದರ ಪ್ರಕಾರ, ಕ್ಯಾನ್ಸರ್ ಎರಡನೇ ಅತಿದೊಡ್ಡ ಕೊಲೆಪಾತಕ ರೋಗ. ತಜ್ಞರ ಪ್ರಕಾರ ಇವುಗಳಲ್ಲಿ ಶೇ. 40ರಷ್ಟು ತಂಬಾಕು ಸಂಬಂಧಿ. ಸುಮಾರು 14 ರೀತಿಯ ಕ್ಯಾನ್ಸರ್‌ಗಳಿಗೆ ತಂಬಾಕು ಬಳಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಲ್ಯಾನ್ಸೆಟ್ ವರದಿ ಹೇಳುತ್ತದೆ.
ಇದು ಧೂಮಪಾನಿಗಳಿಗೆ ಮಾತ್ರ ಉಂಟಾಗುವ ಸಮಸ್ಯೆಯಲ್ಲ. ಅವರ ಜತೆಗಿರುವ, ಧೂಮಪಾನಿಗಳಲ್ಲದವರು, ಇವರ ಕುಟುಂಬಸ್ಥರು ಕೂಡ ಮಾರಕ ಕಾಯಿಲೆಗಳಿಗೆ ತುತ್ತಾಗುವ ವಾಸ್ತವ ನಮ್ಮ ಕಣ್ಣೆದುರಿದೆ. ಜರ್ನಲ್ ಆಫ್ ನಿಕೋಟಿನ್ ಅಂಡ್ ಟೊಬ್ಯಾಕೋ ರಿಸರ್ಚ್‌ನಲ್ಲಿ ಕಳೆದ ವರ್ಷ ಪ್ರಕಟವಾಗಿರುವ ಒಂದು ಹೊಸ ಅಧ್ಯಯನದ ಪ್ರಕಾರ ದೇಶದಲ್ಲಿ ಧೂಮಪಾನ ಮತ್ತದರ ಹೊಗೆಗೆ ಒಡ್ಡಿಕೊಳ್ಳುವುದರಿಂದ ಪ್ರತಿ ವರ್ಷ ಸುಮಾರು 12 ಲಕ್ಷ ಭಾರತೀಯರು ಮೃತಪಡುತ್ತಿದ್ದಾರೆ. ಭಾರತದಲ್ಲಿ 10 ಕೋಟಿಗೂ ಹೆಚ್ಚು ಧೂಮಪಾನಿಗಳಿದ್ದು, ಧೂಮಪಾನಿಗಳಲ್ಲದವರು ಮನೆಗಳಲ್ಲಿ, ಉದ್ಯೋಗ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ಅಪಾಯಕಾರಿ ಹೊಗೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಧೂಮಪಾನ ಮಾಡದ ಮಕ್ಕಳು ಮತ್ತು ವಯಸ್ಕರನ್ನು ರೋಗ ಮತ್ತು ಅಕಾಲಿಕ ಮರಣಕ್ಕೀಡು ಮಾಡುವ 7,000ಕ್ಕೂ ಹೆಚ್ಚು ರಾಸಾಯನಿಕಗಳ ಮಾರಣಾಂತಿಕ ಮಿಶ್ರಣವಾದ ಧೂಮಪಾನದ ಹೊಗೆಗೆ ಯಾವ ಸ್ಮೋಕಿಂಗ್ ಜೋನ್ ಮಾಡಿದರೂ ಸುರಕ್ಷಿತತೆ ಎಂಬುದೇ ಇಲ್ಲ. ದೇಶದ ವಾರ್ಷಿಕ ಆರೋಗ್ಯ ವೆಚ್ಚಗಳ ಪೈಕಿ 56,700 ಕೋಟಿ ರೂಪಾಯಿ ವೆಚ್ಚಕ್ಕೆ ಧೂಮಪಾನದ ಹೊಗೆ ಕಾರಣವಾಗುತ್ತಿದೆ ಎಂದು ಕೂಡ ಈ ವರದಿ ಹೇಳಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಲಿಂಗ ಸಮಾನತೆಯ ಆಶಯ ಸರ್ಕಾರದ ಪ್ರಾತಿನಿಧ್ಯದಲ್ಲೂ ಈಡೇರಲಿ
ಇದೆಲ್ಲದರಿಂದಾಗಿ, ಸ್ಮೋಕಿಂಗ್‌ಗೆ ಸಾರ್ವಜನಿಕ ತಾಣಗಳಲ್ಲಿ ಕಡಿವಾಣ ಹಾಕಲೇಬೇಕಾದ ಕಠಿಣ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲೇಬೇಕಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ(ಸಿಒಟಿಪಿಎ) 2023ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಇನ್ನೊಂದು ಕಡೆ ಹೋಟೆಲ್, ರೆಸ್ಟೊರೆಂಟ್‌ಗಳಿಗೆ ವಿನಾಯಿತಿ ನೀಡುವುದು ವಿಪರ್ಯಾಸ. ಸಿಗರೇಟ್‌ಗಳ ಬಿಡಿ ಮಾರಾಟ ನಿಷೇಧಿಸುವುದು, ಅದನ್ನು ಉಲ್ಲಂಘಿಸಿದವರಿಗೆ ಕಠಿಣ ದಂಡ ವಿಧಿಸುವುದು, ತಂಬಾಕು ಉತ್ಪನ್ನಗಳ ಬಳಕೆಯನ್ನು ಪ್ರೇರೇಪಿಸುವ ಸೆಲೆಬ್ರಿಟಿಗಳಿಗೆ ಕಡಿವಾಣ, ತಂಬಾಕು ಬಳಕೆ ನಿಯಂತ್ರಣಕ್ಕಾಗಿ ಇರುವ ಕೋಟ್ಪಾ-2003 ಕಾಯಿದೆಯನ್ನು ಬಲಪಡಿಸುವುದು ಮುಂತಾದವುಗಳ ಮೂಲಕ ಧೂಮಪಾನದ ರೂಢಿಯ ನಿರಸನಗೊಳಿಸಿದರೆ ಮಾತ್ರ ದೇಶದ ಜನತೆ ಆರೋಗ್ಯವಂತವಾಗಿರಬಲ್ಲುದು.