Site icon Vistara News

ವಿಸ್ತಾರ ಸಂಪಾದಕೀಯ: ವ್ಯಾಪಕ ಉದ್ಯೋಗ ನಷ್ಟ; ಭರವಸೆಯ ಕ್ರಮಗಳು ನಡೆಯಲಿ

widespread job losses; Let the hopeful actions take place

#image_title

ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಉದ್ಯೋಗ ನಷ್ಟದ ಗ್ರಾಫ್ ಏರುತ್ತಲೇ ಇದೆ. 2022ರ ಮಧ್ಯಂತರದಿಂದ ಆರಂಭವಾದ ಉದ್ಯೋಗ ಕಡಿತ ಪ್ರಕ್ರಿಯೆ ಇನ್ನೂ ನಿಂತಿಲ್ಲ. ಬಹುಶಃ ಸದ್ಯಕ್ಕೆ ಈ ಪ್ರಕ್ರಿಯೆ ನಿಲ್ಲುವುದಿಲ್ಲ ಕೂಡ. ಅಮೆರಿಕ ಮೂಲದ ಐಟಿ ಕಂಪನಿಗಳಿಂದ ಇತ್ತೀಚಿನ ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಪೈಕಿ, ಶೇ.30ರಿಂದ 40ರಷ್ಟು ಜನರು ಭಾರತೀಯ ಮೂಲದವರಿದ್ದಾರೆ ಎಂಬುದು ಆತಂಕದ ಸಂಗತಿಯಾಗಿದೆ. ಇದೇ ವೇಳೆ, ಭಾರತದ ಕಂಪನಿಗಳು ಕೂಡ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. ಉದ್ಯೋಗ ನಷ್ಟ ಭೀತಿಯನ್ನು ಹಿಮ್ಮೆಟ್ಟಿಸಲು ಅಥವಾ ಉದ್ಯೋಗ ಕಳೆದುಕೊಂಡವರಿಗೆ ಆತ್ಮವಿಶ್ವಾಸ ಮೂಡಿಸುವ, ಭರವಸೆಯನ್ನು ಹೆಚ್ಚಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕಾದ ಅಗತ್ಯ ಈಗ ಹೆಚ್ಚಾಗಿದೆ.

ಸದ್ಯದ ಮಟ್ಟಿಗೆ, ಉದ್ಯೋಗ ಕಡಿತ ಎಂಬುದು ಜಾಗತಿಕ ಪ್ರಕ್ರಿಯೆಯಾಗಿದೆ. ಅದನ್ನು ಹೊರತುಪಡಿಸಿ, ಭಾರತೀಯ ಸಂದರ್ಭಕ್ಕೆ ಅನುಗುಣವಾಗಿ ನಾವು ನೋಡುವುದಾದರೆ, ಕೆಲ ದಿನಗಳ ಹಿಂದೆಯಷ್ಟೇ 82 ಸ್ಟಾರ್ಟಪ್‌ಗಳಿಂದ 23,000 ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ. 19 ಎಜುಟೆಕ್‌ ಸ್ಟಾರ್ಟಪ್‌ಗಳು ಇದುವರೆಗೆ 8460 ಉದ್ಯೋಗಿಗಳನ್ನು ವಜಾಗೊಳಿಸಿವೆ. ಬೈಜೂಸ್‌, ಓಲಾ, ಮೀಶೂ, ಎಂಪಿಎಲ್‌, ಉಡಾನ್‌, ಅನ್‌ ಅಕಾಡೆಮಿ, ವೇದಾಂತು ಮೊದಲಾದ ಕಂಪನಿಗಳಲ್ಲಿ ಉದ್ಯೋಗಗಳನ್ನು ಕಡಿತ ಮಾಡಲಾಗುತ್ತಿದೆ. ಇದು ಯಾವುದೇ ಒಂದು ವಲಯಕ್ಕೆ ಸಿಮೀತವಾಗಿಲ್ಲ. ತಂತ್ರಜ್ಞಾನ, ಶಿಕ್ಷಣ, ಹಣಕಾಸು, ಬ್ಯಾಂಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಂಪನಿಗಳು ಉದ್ಯೋಗ ಕಡಿತ ಮೂಲಕ ಎದುರಾಗುವ ಸವಾಲಿಗೆ ಸಜ್ಜಾಗುತ್ತಿವೆ.

ಹಾಗೆ ನೋಡಿದರೆ, 2023ರ ಮೊದಲ ಮೂರು ತಿಂಗಳಲ್ಲೇ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಕಡಿತವಾಗಿವೆ. 2022ರಲ್ಲಿ ಜಾಗತಿಕವಾಗಿ 1.61 ಲಕ್ಷ ಉದ್ಯೋಗಗಳು ನಷ್ಟವಾಗಿದ್ದವು. ಆದರೆ, ಈ ಮೂರು ತಿಂಗಳ ಅವಧಿಯಲ್ಲಿ 518 ಟೆಕ್ ಕಂಪನಿಗಳು, 1,71,858 ಉದ್ಯೋಗಿಗಳನ್ನು ವಜಾ ಮಾಡಿವೆ. ಜಾಗತಿಕ ಬೃಹತ್ ಕಂಪನಿಗಳಾದ ಗೂಗಲ್, ಮೆಟಾ, ಟ್ವಿಟರ್, ಅಮೆಜಾನ್, ಆಕ್ಸೆಂಚರ್ ಈ ವಿಷಯದಲ್ಲಿ ಹೆಚ್ಚಿನ ಕೊಡುಗೆ ನೀಡಿವೆ. ಇದರ ಮಧ್ಯೆಯೂ ಬೆಳ್ಳಿ ರೇಖೆಯೊಂದು ಮೂಡಿದೆ. ಯಾವ ಕಂಪನಿಗಳು ಆರ್ಥಿಕ ಹಿಂಜರಿತ ಭೀತಿ ಮತ್ತು ತಮ್ಮ ಪ್ರಾಜೆಕ್ಟ್‌ಗಳಿಗೆ ಹೊಂದಿಕೆಯಾಗದ ಉದ್ಯೋಗಗಳನ್ನು ಕಡಿತ ಮಾಡುತ್ತಿವೆಯೋ ಅದೇ ಕಂಪನಿಗಳು, ಹೊಸಬರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಮುಕ್ತ ಮನಸ್ಸು ಹೊಂದಿವೆ. ವಿಶೇಷವಾಗಿ ಭಾರತೀಯ ಕಂಪನಿಗಳು ಈ ವಿಷಯದಲ್ಲಿ ಹೆಚ್ಚು ಆಶಾದಾಯಕವಾಗಿವೆ. ಟೀಮ್‌ಲೀಸ್ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಉದ್ಯೋಗದಾತ ಕಂಪನಿಗಳ ಪೈಕಿ ಶೇ.62 ಕಂಪನಿಗಳು ಹೊಸಬರನ್ನು ನೇಮಕ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿವೆ. ಜನವರಿಯಿಂದ ಜೂನ್‌ವರೆಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಇನ್ಫಾರ್ಮೇಷನ್ ಟೆಕ್ನಾಲಜಿ, ಇ-ಕಾಮರ್ಸ್, ಟೆಕ್ನಾಲಜಿ ಸ್ಟಾರ್ಟ್‌ಪ್ಸ್, ಎಜುಕೇಷನಲ್ ಸರ್ವೀಸ್ ಮತ್ತು ಕನ್ಸಟ್ರಕ್ಷನ್- ರಿಯಲ್ ಎಸ್ಟೇಟ್, ಕೃಷಿ ವಲಯದ ಕಂಪನಿಗಳು ಗರಿಷ್ಠ ಪ್ರಮಾಣದಲ್ಲಿ ನೇಮಕಾತಿಯನ್ನು ನಡೆಸಲಿವೆ. ಈ ಅಂಶವು ಸಮಾಧಾನಕರ ಸಂಗತಿಯಾಗಿದೆ.

ಮತ್ತೊಂದೆಡೆ, ಉದ್ಯೋಗ ಕಡಿತಕ್ಕೊಳಗಾದವರ ನೆರವಿಗೆ ಕೇಂದ್ರ ಸರ್ಕಾರವು ಮುಂದಾಗಲು ಅವಕಾಶವಿದೆ. ಯಾಕೆಂದರೆ, ಸರ್ಕಾರವೇ ಒದಗಿಸಿರುವ ಮಾಹಿತಿಯ ಪ್ರಕಾರ, ವಿವಿಧ ಇಲಾಖೆಗಳಲ್ಲಿ ಹೆಚ್ಚು ಕಡಿಮೆ 10 ಲಕ್ಷ ಉದ್ಯೋಗಳು ಖಾಲಿ ಇವೆ. ಮಾನವೀಯ ದೃಷ್ಟಿಯಿಂದ ಉದ್ಯೋಗ ಕಳೆದುಕೊಂಡಿರುವವರ ಪೈಕಿ, ಸರ್ಕಾರಿ ಕೆಲಸಕ್ಕೆ ಸೂಕ್ತವಾಗುವ ಅಭ್ಯರ್ಥಿಗಳು ಇದ್ದರೆ, ಅಂಥವರನ್ನು ಗುರುತಿಸಿ ಅವರಿಗೆ ಕೆಲಸ ಕೊಡಬಹುದು. ಅದು ಸಾಧ್ಯವಿಲ್ಲ ಎಂದಾದರೆ, ಅವರಿಗೆ ಪುನರ್ ಕೌಶಲ ತರಬೇತಿ ನೀಡಿ, ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಬಹುದು. ಈ ಹಿನ್ನೆಲೆಯಲ್ಲಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ”ಐಟಿ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಕಡಿತವಾಗುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಿ, ಅವರ ನೆರವಿಗೆ ಮುಂದಾಗಬೇಕು,” ಎಂದು ಹೇಳಿದ್ದು ಸೂಕ್ತವಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಅಮೆರಿಕದಲ್ಲಿ ಹಾರಾಡಿದ ತ್ರಿವರ್ಣ ಧ್ವಜ; ಖಲಿಸ್ತಾನಿಗಳಿಗೆ ದೇಶಪ್ರೇಮಿಗಳ ತಿರುಗೇಟು

ಉದ್ಯೋಗ ಕಳೆದುಕೊಂಡ ಎಲ್ಲರಿಗೂ ಕೇಂದ್ರ ಸರ್ಕಾರವು ಉದ್ಯೋಗ ಕೊಡಲು ಸಾಧ್ಯವಿಲ್ಲ ಎಂಬುದೂ ಅಷ್ಟೇ ಸತ್ಯ. ಆದರೆ, ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಿದೆ. ಅವರಿಗೆ, ಮರಳಿ ಉದ್ಯೋಗ ಪಡೆದುಕೊಳ್ಳಲು ಮಾರ್ಗದರ್ಶನ ಮಾಡಬಹುದು. ಉದ್ಯಮಶೀಲತೆ ಹೆಚ್ಚಿಸುವ ಯೋಜನೆಗಳನ್ನು ಯಾರಾದರೂ ಹೊಂದಿದ್ದರೆ, ಅಂಥವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬಹುದು; ಹಣಕಾಸು ನೆರವು ಒದಗಿಸಬಹುದು. ಇದರಿಂದ ಉದ್ಯೋಗ ಸೃಷ್ಟಿಯೂ ಆಗಬಹುದು. ಇದಕ್ಕೆಲ್ಲ ವ್ಯವಸ್ಥಿತ ಮಾರ್ಗವನ್ನು ಸೃಷ್ಟಿಸಲು ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಯೋಚಿಸಿ, ಮುಂದಡಿ ಇಡಲಿ. ಉದ್ಯೋಗ ಕಡಿತದಿಂದಾಗುತ್ತಿರುವ ಪರಿಣಾಮವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ಪ್ರಯತ್ನವನ್ನು ಮಾಡಲಿ.

Exit mobile version