Site icon Vistara News

ವಿಸ್ತಾರ ಸಂಪಾದಕೀಯ: ರಾಜ್ಯ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಣದ ಪರಿಸ್ಥಿತಿ ಸರಿಹೋಗುವುದೆಂದು?

SSLC Result

ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ಬಳಿಕ, ಊಹಿಸಿದಂತೆಯೇ ಆಗಿದೆ. ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟದ ಬಗ್ಗೆ ಚರ್ಚೆ ಎದ್ದಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರಸ್ತುತ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಕಲಿಕೆಯ ಗುಣಮಟ್ಟ ಕುಸಿದಿದೆ (SSLC Result) ಎಂದು ಖಾಸಗಿ ಶಾಲಾ ಒಕ್ಕೂಟ (ಕ್ಯಾಮ್ಸ್) ಅಸಮಾಧಾನ ಹೊರಹಾಕಿದೆ. ಸರ್ಕಾರಿ ಶಾಲಾ ಶಿಕ್ಷಣದ ಬಗ್ಗೆ ಹೆತ್ತವರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಸಂಕಲಿಸಿದರೆ ದಾರುಣ ಚಿತ್ರ ಸಿಗಬಹುದು; ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಹೆತ್ತವರು ಕೆಳಮಧ್ಯಮ ವರ್ಗದ, ಕೆಳವರ್ಗದವರಾದುದರಿಂದ ಅವರಿಗೆ ಬೇರೆ ದಾರಿಯಿಲ್ಲ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿರುವವರು, ಅಲ್ಲಿಗೆ ಕಳಿಸುತ್ತಿರುವುದೇಕೆ ಎಂದು ಕೇಳಿದರೆ ಸರ್ಕಾರಿ ಶಿಕ್ಷಣದ ಕಳಪೆ ಗುಣಮಟ್ಟದತ್ತ ಬೆಟ್ಟು ಮಾಡುತ್ತಾರೆ. ಆದರೆ ಇದೂ ಪೂರ್ತಿ ಸತ್ಯವಲ್ಲ. ಯಾಕೆಂದರೆ ಹಲವಾರು ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಇದು ಒಟ್ಟಾರೆಯಾಗಿ ರಾಜ್ಯ ಶೈಕ್ಷಣಿಕ ಪಠ್ಯದ ಸಮಸ್ಯೆಗಳತ್ತ ಬೆಟ್ಟು ಮಾಡುತ್ತದೆ. ಒಟ್ಟಾರೆಯಾಗಿ ಪಠ್ಯದ ಸಮಸ್ಯೆ ಹಾಗೂ ಕಲಿಕೆಯ ಸಮಸ್ಯೆಗಳು ಒಗ್ಗೂಡಿ ಇಂದಿನ ಈ ಸ್ಥಿತಿಗೆ ತಂದಿವೆ.

ಸರ್ಕಾರ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಸರ್ಕಾರ ಯಾವುದೇ ಪರಿಣಾಮಕಾರಿ ರೂಪುರೇಷೆಗಳನ್ನು ರೂಪಿಸುತ್ತಿಲ್ಲ. ಬದಲಿಗೆ ಶಿಕ್ಷಣ ಇಲಾಖೆ ದಿನಕ್ಕೊಂದು ನಿಯಮಗಳನ್ನು ಮಾಡುತ್ತಿದೆ. ಆದರೆ ತಾವೇ ನಡೆಸುವ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನ ಮಾಡದೇ, ಕೇವಲ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ನಿಯಮ ಎಂಬಂತೆ ವರ್ತಿಸುತ್ತಿದೆ ಎಂದು ಶಾಲಾ ಒಕ್ಕೂಟ ಆಕ್ರೋಶ ಹೊರಹಾಕಿದೆ. ಇದೂ ನಿಜ. ಶಾಲೆಗಳನ್ನು ಪ್ರಯೋಗಶಾಲೆಗಳಂತೆ ನೋಡುವ ಮನಸ್ಥಿತಿ ಪ್ರತಿಯೊಂದು ಸರಕಾರದ್ದಾಗಿದೆ. ಇದಕ್ಕೆ ಇತ್ತೀಚೆಗೆ ಪದವಿ ಶಿಕ್ಷಣದಲ್ಲಿ ಮಾಡುತ್ತಿರುವ ಬದಲಾವಣೆಯೇ ದೃಷ್ಟಾಂತ. ನಾಲ್ಕು ವರ್ಷಗಳ ಪದವಿಯನ್ನು ಮತ್ತೆ ಮೂರು ವರ್ಷಕ್ಕೆ ಇಳಿಸಿರುವ ಈ ಕ್ರಮದಿಂದಾಗಿ, ರಾಜ್ಯ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪ್ರತ್ಯೇಕತೆ ಕಾಪಾಡಿಕೊಂಡು, ಎನ್‌ಇಪಿಯಿಂದ ದೊರೆಯಬಹುದಾದ ಲಾಭಗಳಿಂದ ವಂಚಿತವಾಗಲಿದೆ.

ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲೆ ಶಿಕ್ಷಣದ ಗುಣಮಟ್ಟ ಕಾಪಾಡದೇ ಇರುವುದರಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕುಸಿತ ಉಂಟಾಗಿದೆ. 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಿರಾಶದಾಯವಾಗಿದೆ. ಸಿಸಿಟಿವಿ ಹಾಕಿದ್ದಕ್ಕೆ ಫಲಿತಾಂಶ ಕಡಿಮೆ ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಅಧಿಕಾರಿಗಳ ಬಳಿ ಚರ್ಚೆ ಮಾಡಿದಾಗ, ಮಕ್ಕಳು ತುಂಬಾ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರನ್ನು ಪಾಸ್ ಮಾಡಬೇಕು ಎನ್ನುತ್ತಾರೆ. ಹೀಗಾಗಿ ಗ್ರೇಸ್‌ ಅಂಕ ಕೊಡಲಾಗಿದೆ. ಹತ್ತು ವರ್ಷಗಳಿಂದ ಶಾಲೆಯಲ್ಲಿ ಕಲಿತರೂ 10ನೇ ತರಗತಿಗೆ ಬಂದಾಗ ಕನಿಷ್ಠ 25 ಅಂಕ ಗಳಿಸಲೂ ಆಗದ ಮಕ್ಕಳ ಸಂಖ್ಯೆ ಹೆಚ್ಚು ಇದೆ ಎಂದರೆ ಏನರ್ಥ? ಇದು ಶಿಕ್ಷಣವೇ? ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬದಲು ಮಕ್ಕಳ ಹಿತದೃಷ್ಟಿಯ ಹೆಸರಲ್ಲಿ ಗ್ರೇಸ್‌ ಅಂಕದ ಪ್ರಮಾಣ ಹೆಚ್ಚಿಸುತ್ತಿರುವುದು ಸರಿಯಲ್ಲ. ಇದು ಕ್ರಿಕೆಟ್‌ನಲ್ಲಿ ಬೌಂಡರಿಗೆ ಬಾಲ್‌ ಹೋಗುತ್ತಿಲ್ಲ ಎಂದು ಬೌಂಡರಿ ವ್ಯಾಪ್ತಿಯನ್ನೇ ಕುಗ್ಗಿಸಿದಂತೆ! ಇದರಿಂದ ಆಟಗಾರರ ಪ್ರತಿಭೆಯೇನೂ ಹೆಚ್ಚುವುದಿಲ್ಲ!

ಇದನ್ನೂ ಓದಿ:ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

ಪ್ರತಿ ಸಲ ಸರ್ಕಾರ ಬಂದಾಗಲೂ ರಾಜಕೀಯ ಸಿದ್ಧಾಂತದ ಹಿನ್ನೆಲೆಯಲ್ಲಿ ಪಠ್ಯಕ್ರಮ ಪರಿಷ್ಕರಣೆ ಆಗುತ್ತಿದೆ. ಕಳೆದ ಹತ್ತಾರು ವರ್ಷಗಳಿಂದ ಇದೇ ರೀತಿ ನಡೆದುಕೊಂಡು ಬರುತ್ತಿದೆ. ಶಿಕ್ಷಣ ಇಲಾಖೆಯಿಂದ ಗುಣಮಟ್ಟದ ಪಠ್ಯ ಪುಸ್ತಕ ರಚನೆ ಆಗದೇ ಇದ್ದಲ್ಲಿ ಇದರ ಅಡ್ಡಪರಿಣಾಮವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಮಕ್ಕಳಿಗೆ ಬೇಕಾದಂತಹ ಸಂಯೋಜಿತ ಪಠ್ಯ ರಚನೆಯಾಗದೆ ಇದ್ದರೆ, ಪೋಷಕರು ಅನಿವಾರ್ಯವಾಗಿ CBSE-ICSE ಕಡೆ ಹೋಗಬೇಕಾಗುತ್ತದೆ. ರಾಜ್ಯದ ವಿದ್ಯಾರ್ಥಿಗಳು ನೆರೆಹೊರೆ ರಾಜ್ಯಗಳ ಪಠ್ಯಕ್ಕೆ ಹಾಗೂ ರಾಷ್ಟ್ರಮಟ್ಟದ ಶಿಕ್ಷಣಕ್ಕೆ ಸ್ಪರ್ಧಾತ್ಮಕವಾಗಿ ಸಿದ್ಧ ಮಾಡುವುದು ಸರ್ಕಾರದ ಆದ್ಯ ಜವಾಬ್ದಾರಿ. ಆದರೆ ಈ ವಿಚಾರದಲ್ಲಿ ಸದಾ ರಾಜಕೀಯ. ವಿದ್ಯಾರ್ಥಿಗಳ ಹಿತದೃಷ್ಟಿಗಿಂತ ತಮ್ಮ ಸಿದ್ಧಾಂತಗಳನ್ನು ಹೇರುವುದೇ ಪಕ್ಷಗಳ ಆದ್ಯತೆಯಾಗಿದೆ. ಶಿಕ್ಷಣ ತಜ್ಞರನ್ನು ಮುಂದಿಟ್ಟುಕೊಂಡು ಪಠ್ಯಕ್ರಮ ರಚಿಸುವುದಕ್ಕಿಂತಲೂ ರಾಜಕೀಯ ಚಿಂತನೆಯ ತಜ್ಞರನ್ನು ಸಮಿತಿಯಲ್ಲಿ ನೇಮಿಸಿಕೊಂಡು ಪಠ್ಯ ರಚಿಸಲಾಗುತ್ತಿದೆ. ಇದು ಮಕ್ಕಳ ಬಾಳಿನಲ್ಲಿ ಆಡುವ ಚೆಲ್ಲಾಟ. ಇದು ನಿಲ್ಲಬೇಕು. ಇಲ್ಲವಾದರೆ ಈ ಫಲಿತಾಂಶ ಕುಸಿತ ಹಾಗೂ ಅವಮಾನ ಮುಂದುವರಿಯಲಿದೆ.

Exit mobile version