Site icon Vistara News

ವಿಸ್ತಾರ ಸಂಪಾದಕೀಯ: 2000 ರೂ. ನೋಟು ವಾಪಸ್ ಸೂಕ್ತ ನಿರ್ಧಾರ

Vistara Editorial

Vistara Editorial

2000 ರೂ. ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಾಪಸ್ ಪಡೆದಿದೆ. ಒಂದು ವೇಳೆ ಜನ ಸಾಮಾನ್ಯರಲ್ಲಿ ಈ ನೋಟುಗಳಿದ್ದರೆ ಬ್ಯಾಂಕ್‌ಗೆ ಕೊಟ್ಟು ಅಷ್ಟೇ ಮೌಲ್ಯದ ಬೇರೆ ನೋಟುಗಳನ್ನು ಪಡೆಯಲು ಇನ್ನೂ ನಾಲ್ಕು ತಿಂಗಳು ಅವಕಾಶ ಇದೆ. 2023ರ ಸೆ.30ರವರೆಗೆ ಜನ 2 ಸಾವಿರ ರೂ. ನೋಟುಗಳನ್ನು ಬಳಸಬಹುದು. ಹಾಗಾಗಿ ಜನ ಆತಂಕಪಡಬೇಕಿಲ್ಲ. ಆರ್‌ಬಿಐ ಈಗಾಗಲೇ 2 ಸಾವಿರ ರೂ. ನೋಟುಗಳನ್ನು ಮುದ್ರಣ ಮಾಡುವುದನ್ನು ನಿಲ್ಲಿಸಿತ್ತು. ಎಟಿಎಂಗಳಲ್ಲಿ ಈ ನೋಟು ಸಿಗುತ್ತಿರಲಿಲ್ಲ. ಕ್ಲೀನ್ ನೋಟ್ ಪಾಲಿಸಿಯ ಅಂಗವಾಗಿ ಹೀಗೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ನೋಟು ವಾಪಸ್ ಎಂದ ಕೂಡಲೇ 2016ರ ಡಿಮಾನಿಟೈಸೇಷನ್ ದಿ‌ನಗಳು ನೆನಪಾಗಿ ಬೆಚ್ಚಿ ಬೀಳುವ ಹಾಗಾಗುತ್ತದೆ, ನಿಜ. 1000 ಹಾಗೂ 500 ರೂ. ನೋಟುಗಳನ್ನು ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ನಿಷೇಧಿಸಿತ್ತು. ಆ ಸಂದರ್ಭದಲ್ಲಿ ಸೂಕ್ತ ತಯಾರಿ ಇಲ್ಲದೆ, ದಿನಕ್ಕೊಂದು ನಿರ್ಧಾರ ತೆಗೆದುಕೊಂಡು ಮುನ್ನಡೆದ ಪರಿಣಾಮ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತವಾಗಿ ಉಂಟಾಗಿತ್ತು. ಆದರೆ ಈ ಬಾರಿ ಆರ್‌ಬಿ‌ಐ ಹೀಗೆ ಮಾಡಿಲ್ಲ. ಬದಲಾಗಿ ನಾಲ್ಕು ತಿಂಗಳು ಕಾಲಾವಕಾಶ ನೀಡಿದೆ. ನೋಟು ಉಳ್ಳವರು ಅವುಗಳನ್ನು ಬದಲಿಸಿಕೊಳ್ಳಲೂ, ಖಾತೆಗೆ ತುಂಬಲೂ ಸಮಯ ಕೊಡಲಾಗಿದೆ.

ಯಾಕೆ ಎರಡು ಸಾವಿರ ರೂಪಾಯಿಯ ಮೇಲೆ ಈಗ ದೃಷ್ಟಿ? ನಮಗೆಲ್ಲ ತಿಳಿದಿರುವಂತೆ, ನೋಟಿನ ಮುಖಬೆಲೆ ಹೆಚ್ಚಾದಂತೆ, ಭ್ರಷ್ಟಾಚಾರಕ್ಕೆ ಅದನ್ನು ಬಳಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಕ್ರಮ ಹಣಕಾಸು ಕೂಡಿಡಲು, ಲಂಚ ಕೊಡಲು ಹಾಗೂ ಪಡೆಯಲು ಈ ದೊಡ್ಡ ಬೆಲೆಯ ಕರೆನ್ಸಿಗಳು ಸೂಕ್ತ. ಇವು ಹಣಕಾಸು ವಂಚನೆಯ ಮೂಲ. ಹಾಗೆಯೇ ಇವುಗಳನ್ನು ಹೊರಬಿಟ್ಟದ್ದೇ 1000, 500 ಮುಖಬೆಲೆಯ ನೋಟುಗಳನ್ನು ಹಿಂದೆಗೆದುಕೊಂಡಾಗ. ಹೀಗಾಗಿ ಇವುಗಳ ಮುದ್ರಣದ ಉದ್ದೇಶ ತಾತ್ಕಾಲಿಕ. ಅದು ಈಡೇರಿದೆ.

2000 ರೂ. ಮುಖಬೆಲೆಯ ನೋಟುಗಳು ಬಡವರ ಪಾಲಿಗೆ ದುಃಸ್ವಪ್ನವಾಗಿದ್ದವು. ಹೆಚ್ಚಿನವರ ದೈನಂದಿನ ದುಡಿಮೆಯೇ ಅಷ್ಟಿರುವುದಿಲ್ಲ. ಬೀದಿ ವ್ಯಾಪಾರಿಗಳು ಮುಂತಾದವರ ಬಳಿ ಈ ನೋಟುಗಳಿಗೆ ಚಿಲ್ಲರೆಯೂ ಇರುತ್ತಿರಲಿಲ್ಲ. ಸಾಮಾನ್ಯ ಜನರ ಬಳಿ ಇಲ್ಲದ, ಶ್ರೀಮಂತರ ಬಳಿ ಮಾತ್ರ ಇರುವ ಕರೆನ್ಸಿಯಿಂದ ದೈನಂದಿನ ನಗದು ವಹಿವಾಟಿಗೆ ಯಾವುದೇ ಲಾಭವಿಲ್ಲ. ಇವು ಸಾಮಾನ್ಯ ಬಳಕೆಯಲ್ಲಿ ಇಲ್ಲ ಎಂಬುದನ್ನು ಆರ್‌ಬಿಐ ಕೂಡ ಗುರುತಿಸಿದೆ.

ಇದನ್ನೂ ಓದಿ: 2000 Notes Withdrawn: 2 ಸಾವಿರ ರೂ. ನೋಟು ವಾಪಸ್‌ ನಂತರ ಮುಂದೇನು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಇನ್ನೊಂದು ಪ್ರಮುಖ ಉದ್ದೇಶ ಏನಿತ್ತೆಂದರೆ, ದೇಶದ ಹಣಕಾಸು ವ್ಯವಹಾರವನ್ನು ಡಿಜಿಟಲ್ ಆಗಿಸುವುದು. ಈ ಉದ್ದೇಶವಂತೂ ಬಹುತೇಕ ಈಡೇರಿದಂತಾಗಿದ್ದು, ಇಂದು ಪ್ರತಿಯೊಬ್ಬ ಪ್ರಜೆಗೂ ಯುಪಿಐ ಪಾವತಿ ವ್ಯವಸ್ಥೆ ಲಭ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಬಗ್ಗೆ ಇನ್ನಷ್ಟು ಸಾಕ್ಷರತೆ ಅಗತ್ಯವಿದೆ. ಹಣಕಾಸು ವ್ಯವಹಾರ ದೊಡ್ಡದಾದಷ್ಟೂ ಡಿಜಿಟಲ್ ಪಾವತಿ ಕ್ಷೇಮ, ಸಾಕ್ಷಿಯುಳ್ಳದ್ದು ಹಾಗೂ ತೆರಿಗೆಯ ವ್ಯಾಪ್ತಿಯೊಳಗೆ ಬರುತ್ತದೆ. ಇಲ್ಲಿಯೂ ಎರಡು ಸಾವಿರದ ಕರೆನ್ಸಿಯ ಉದ್ದೇಶ ಮುಗಿದಿದೆ.

ಆರ್ಥಿಕ ಶಿಸ್ತಿನ ದೃಷ್ಟಿಯಿಂದ, ತೆರಿಗೆ ವಂಚಕರನ್ನು ಪತ್ತೆ ಹಚ್ಚಲು, ಅಕ್ರಮವಾಗಿ ಹಣ ಕೂಡಿಟ್ಟವರನ್ನು ಮಟ್ಟ ಹಾಕಲು, ಖೋಟಾ ನೋಟುಗಳನ್ನು ತಡೆಯಲು ಆಗಾಗ ಇಂಥ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೆ ಸರ್ಕಾರ ಮತ್ತು ಆರ್‌ಬಿಐಗೆ ಸಹಕಾರ ನೀಡಿದರೆ ಇದರ ಗುರಿ ಸಾಧನೆ ಸಾಧ್ಯ.

Exit mobile version