ವಿದಿಶಾ: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನಲ್ಲೇ ಜನಿಸಿದ ಹೆಣ್ಣು ಮಗುವಿಗೆ (Girl Child) ಆ ರೈಲಿನ ಹೆಸರಿಟ್ಟಿರುವ ಅಪರೂಪದ ಪ್ರಸಂಗ ನಡೆದಿದೆ (Viral News). 24 ವರ್ಷದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮುಂದಿನ ನಿಲ್ದಾಣ ತಲುಪುವ ಮೊದಲೇ ಮಗುವಿಗೆ ಜನ್ಮ ನೀಡಿದ್ದರು. ಮುಂಬೈ ಮತ್ತು ವಾರಣಾಸಿ ನಡುವಿನ ಕಾಮಯಾನಿ ಎಕ್ಸ್ಪ್ರೆಸ್ (Kamayani Experss) ರೈಲಿನಲ್ಲಿ ಘಟನೆ ನಡೆದಿದೆ.
ಮಹಿಳೆ ತನ್ನ ಪತಿಯೊಂದಿಗೆ ಮಹಾರಾಷ್ಟ್ರದ ನಾಸಿಕ್ನಿಂದ ಮಧ್ಯಪ್ರದೇಶದ ಸತ್ನಾಗೆ ಪ್ರಯಾಣಿಸುತ್ತಿದ್ದರು. ಭೋಪಾಲ್ ಮತ್ತು ವಿದಿಶಾ ನಡುವೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಇನ್ಸ್ಪೆಕ್ಟರ್ ಮಂಜು ಮಹೋಬೆ ತಿಳಿಸಿದ್ದಾರೆ. ಆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಗರ್ಭಿಣಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಅರೆ. ಪುರುಷ ಪ್ರಯಾಣಿಕರು ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದರು.
ರೈಲು ವಿದಿಶಾ ರೈಲ್ವೆ ನಿಲ್ದಾಣಕ್ಕೆ ಬಂದ ನಂತರ, ನವಜಾತ ಶಿಶು ಮತ್ತು ತಾಯಿಯನ್ನು ಅವರ ಆರೋಗ್ಯದ ಪರೀಕ್ಷೆಗಾಗಿ ಹರ್ದಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಬ್ಬರೂ ಚೆನ್ನಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ರೈಲಿನಲ್ಲಿ ಜನಿಸಿದ ಮಗುವಿಗೆ ‘ಕಾಮಯಾನಿ’ ಎಂದು ಹೆಸರಿಸಿಟ್ಟಿದ್ದಾರೆ.
ಹೆಣ್ಮಕ್ಳೇ ಸ್ಟ್ರಾಂಗು ಗುರು; ಮನೆಗೆ ನುಗ್ಗಿದ ಕಳ್ಳರನ್ನು ಒದ್ದೋಡಿಸಿದ ತಾಯಿ-ಮಗಳು!
ಹೈದರಾಬಾದ್: ಬರೀ ಹೆಣ್ಣುಮಕ್ಕಳೇ ಇರುವ, ಒಂಟಿ ಮಹಿಳೆಯರು ವಾಸಿಸುವ ಮನೆಗಳಿಗೆ ನುಗ್ಗಿ, ದರೋಡೆ ಮಾಡುವ ಪ್ರಕರಣಗಳು ನಗರಗಳಲ್ಲಿ ಇತ್ತೀಚೆಗೆ ಜಾಸ್ತಿಯಾಗಿವೆ. ಆದರೆ, ಹೈದರಾಬಾದ್‌ನಲ್ಲಿ (Hyderabad) ಮನೆಗೆ ನುಗ್ಗಿದ ಇಬ್ಬರು ದರೋಡೆಕೋರರ (Robbers) ವಿರುದ್ಧ ತಾಯಿ-ಮಗಳು ಹೋರಾಡಿ, ಅವರನ್ನು ಬಡಿದು ಮನೆಯಿಂದ ಓಡಿಸುವ ಮೂಲಕ ಶೌರ್ಯ ಮೆರೆದಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Video) ಆಗಿದ್ದು, ತಾಯಿ-ಮಗಳ ಸಾಹಸವನ್ನು ಜನ ಕೊಂಡಾಡಿದ್ದಾರೆ.
ಇದನ್ನೂ ಓದಿ : IPL 2024 : ಡಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ ಕೊಹ್ಲಿ, ಇಲ್ಲಿದೆ ವಿಡಿಯೊ
ಹೈದರಾಬಾದ್‌ನ ರಸೂಪ್‌ಪುರದ ಪೈಗಾಹ್ ಕಾಲೋನಿಯಲ್ಲಿರುವ ಮನೆಗೆ ಇಬ್ಬರು ಕಳ್ಳರು ನುಗ್ಗಿದ್ದಾರೆ. ಶಸ್ತ್ರಸಜ್ಜಿತವಾಗಿಯೇ ಮನೆಗೆ ನುಗ್ಗಿದ ಅವರು, ತಾಯಿ-ಮಗಳನ್ನು ಕೊಂದು, ಮನೆಯಲ್ಲಿರುವ ನಗ-ನಾಣ್ಯಗಳನ್ನು ಕದ್ದೊಯ್ಯುವ ಉದ್ದೇಶ ಹೊಂದಿದ್ದರು ಎಂದು ತಿಳಿದುಬಂದಿದೆ. ಆದರೆ, ಇಬ್ಬರೂ ಕಳ್ಳರ ವಿರುದ್ಧ ತಾಯಿ-ಮಗಳು ಹೋರಾಡಿದ್ದಾರೆ. ಅವರಿಗೆ ಬಡಿದು, ಒದ್ದು ಮನೆಯಿಂದ ಓಡಿಸಿದ್ದಾರೆ. ಆ ಮೂಲಕ ಇಬ್ಬರೂ ಶೌರ್ಯ ಮೆರೆದಿದ್ದಾರೆ. ತಾಯಿ-ಮಗಳ ಹೊಡೆತ ತಾಳದ ಕಳ್ಳರು ಎದ್ನೋ, ಬಿದ್ನೋ ಎಂದು ಕಾಲ್ಕಿತ್ತಿದ್ದಾರೆ.
ಮನೆಯ ಬಾಗಿಲಿನ ಬಳಿ ಕಳ್ಳನೊಬ್ಬ ಇಬ್ಬರ ಕೈಗೆ ಸಿಕ್ಕಿದ್ದಾನೆ. ಆತನು ಇಬ್ಬರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲು ಮುಂದಾಗುತ್ತಲೇ ತಾಯಿ-ಮಗಳು ಆತನನ್ನು ಹಿಮ್ಮೆಟ್ಟಿಸಿದ್ದಾರೆ. ಅವನಿಗೆ ಹೊಡೆದು, ಬಡಿದು ಮನೆಯಿಂದ ಓಡಿಸಿದ್ದಾರೆ. ಮತ್ತೊಬ್ಬ ಕಳ್ಳನು ಮನೆಯೊಳಗೆ ಅವಿತು ಕೂತಿದ್ದು, ಇಬ್ಬರೂ ಮನೆಯೊಳಗೆ ಹೋಗಿ ಆತನಿಗೂ ನಾಲ್ಕು ಕೊಟ್ಟಿದ್ದಾರೆ. ಅವನೂ ಎದ್ನೋ-ಬಿದ್ನೋ ಎಂದು ಮನೆಯಿಂದ ಓಡಿ ಹೋಗಿದ್ದಾನೆ.
ಇಬ್ಬರೂ ದರೋಡೆಕೋರರನ್ನು ತಾಯಿ-ಮಗಳು ಕೂಡಿ ಹಿಮ್ಮೆಟ್ಟಿಸಿದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೈದರಾಬಾದ್ ಪೊಲೀಸರು ಕೂಡ ಪ್ರಕರಣವನ್ನು ದೃಢಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ತಾಯಿ-ಮಗಳ ಧೈರ್ಯವನ್ನು ಕಂಡ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.