ಮುಂಬೈ: ಮಹಾರಾಷ್ಟ್ರದ ಆಡಳಿತಾರೂಢ ಶಿಂಧೆ ಬಣದ ರಾಜಕೀಯ ನಾಯಕರೊಬ್ಬರ ಪುತ್ರ ಐಷಾರಾಮಿ ಬಿಎಂಡಬ್ಲ್ಯು ಕಾರು ಗುದ್ದಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣನಾದ ಪ್ರಕರಣ ಇನ್ನೂ ಚರ್ಚೆಯಲ್ಲಿರುವ ನಡುವೆಯೇ ಮಹಾರಾಷ್ಟ್ರದಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ನಾಸಿಕ್ ನಲ್ಲಿ ಮಂಗಳವಾರ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ 36 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ (Hit And Run Case). ವೈಶಾಲಿ ಶಿಂಧೆ ಮೃತಪಟ್ಟವರು. ಬಿಳಿ ಬಣ್ಣದ ಹ್ಯಾಚ್ ಬ್ಯಾಕ್ ಕಾರೊಂದು ಹಿಂದಿನಿಂದ ಹೊಡೆದ ಪರಿಣಾಮ ಮಹಿಳೆ ಸುಮಾರು 15-20 ಮೀಟರ್ ದೂರಕ್ಕೆ ಬಿದ್ದಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಭೀಕರ ಅಪಘಾತದ ನಂತರ ರಸ್ತೆಯ ಒಂದೇ ಬದಿಯಲ್ಲಿ ನಿಂತಿದ್ದ ಇಬ್ಬರು ಪುರುಷರು ಅವರನ್ನು ರಕ್ಷಣೆಗೆ ಮುಂದಾಗಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ ಗಂಗಾಪುರ ಪ್ರದೇಶದಲ್ಲಿ ಸಂಭವಿಸಿದ ಅಪಘಾತದ ನಂತರ ಚಾಲಕ ಪರಾರಿಯಾಗಿದ್ದ. ಬಳಿಕ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ವರ್ಲಿಯಲ್ಲಿ ಶಿವಶೇನೆ ನಾಯಕನ ಮಗ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ದ್ವಿಚಕ್ರ ವಾಹನದಲ್ಲಿದ್ದ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ಮಹಿಳೆ ಸಾವನ್ನಪ್ಪಿದ ಮೂರು ದಿನಗಳ ನಂತರ ಈ ಘಟನೆ ನಡೆದಿದೆ. ಕಾವೇರಿ ನಖ್ವಾ ಎಂದು ಗುರುತಿಸಲ್ಪಟ್ಟ ಮಹಿಳೆ ತನ್ನ ಪತಿ ಪ್ರದೀಪ್ ಅವರೊಂದಿಗೆ ಅಡುಗೆ ಮಾಡಲು ಮೀನು ಖರೀದಿಸಿದ ನಂತರ ಮನೆಗೆ ಮರಳುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: UP Accident : ಉತ್ತರ ಪ್ರದೇಶದ ಉನ್ನಾವೊ ಬಳಿ ಹಾಲಿನ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಬಸ್; 18 ಮಂದಿ ಸಾವು, ಹಲವರಿಗೆ ಗಾಯ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಬಣದ ಸದಸ್ಯ ರಾಜಕಾರಣಿ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಈ ಆರೋಪಿಯಾಗಿದ್ದು ಮಂಗಳವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಿಎಂಡಬ್ಲ್ಯು ಕಾರನ್ನು ನಿಲ್ಲಿಸುವ ಮೊದಲು ಡಿಕ್ಕಿ ಹೊಡೆದ ನಂತರ ಆಕೆಯನ್ನು ಒಂದೂವರೆ ಕಿ.ಮೀ ವರೆಗೆ ಎಳೆದೊಯ್ದಿದ್ದ.
ಆರೋಪಿ ಮಿಹಿರ್ ಶಾ ತನ್ನ ಚಾಲಕನೊಂದಿಗೆ ಸೀಟ್ ಬದಲಾಯಿಸಿ ಕಾರಿನ ಕೆಳಗೆ ಸಿಲುಕಿಕೊಂಡಿದ್ದ ಮಹಿಳೆಯ ದೇಹವನ್ನು ಹೊರತೆಗೆದು ರಸ್ತೆಯ ಮೇಲೆ ಬಿಟ್ಟು ಹೋಗಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಬಳಿಕ ಆತನ ತಂದೆ ಮತ್ತು ಚಾಲಕನನ್ನು ಪೊಲೀಸರು ಬಂಧಿಸಿದ್ದರು.
ಮೇ ತಿಂಗಳಲ್ಲಿ ಪುಣೆ ಪೋರ್ಷೆ ಕಾರು ಅಪಘಾತದಲ್ಲಿ 17 ವರ್ಷದ ಅಪ್ರಾಪ್ತ ಬಾಲಕ ಭಾಗಿಯಾಗಿದ್ದ ಎಂದು ಆರೋಪಿಸಲಾಗಿತ್ತು. ಪ್ರಕಾರ, ಅಪ್ರಾಪ್ತ ವಯಸ್ಕ ಬಾಲಕ ಮದ್ಯದ ಅಮಲಿನಲ್ಲಿ ಕಾರನ್ನು ಚಲಾಯಿಸುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಧ್ಯಪ್ರದೇಶದ ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳು ಮೃತಪಟ್ಟಿದ್ದರು.