Site icon Vistara News

Women Slapped : ಪಿಟಿಐ ಪತ್ರಕರ್ತೆಯ ಕಪಾಳಕ್ಕೆ ಬಾರಿಸಿದ ಎಎನ್​ಐ ವರದಿಗಾರ; ಇಲ್ಲಿದೆ ಆತಂಕಕಾರಿ ವಿಡಿಯೊ

Women Slapped

ಬೆಂಗಳೂರು: ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (PTI) ಮಹಿಳಾ ವರದಿಗಾರರ (Female Journalist) ಮೇಲೆ ಮತ್ತೊಂದು ಸುದ್ದಿ ಸಂಸ್ಥೆ ಎಎನ್ಐನಲ್ಲಿ (ANI) ಕೆಲಸ ಮಾಡುತ್ತಿರುವ ಪತ್ರಕರ್ತನೊಬ್ಬ (Male Journalist) ದೈಹಿಕವಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ಉಪ ಮುಖ್ಯಮಂತ್ರಿ ಡಿ . ಕೆ. ಶಿವಕುಮಾರ್ ಅವರು ನಡೆಸಿದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಇಬ್ಬರೂ ವರದಿಗಾರರು ತೀವ್ರ ವಾಗ್ವಾದ ನಡೆಸಿದ್ದು, ಅಂತಿಮವಾಗಿ ಎಎನ್ಐ ವರದಿಗಾರ ಪಿಟಿಐ ವರದಿಗಾರ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇತರ ಸುದ್ದಿ ಸಂಸ್ಥೆಗೆ ಸೇರಿದವರು ಎಎನ್ಐ ವರದಿಗಾರನನ್ನು ದೂರ ತಳ್ಳಿ ಇನ್ನಷ್ಟು ಗಲಾಟೆಯಾಗದಂತೆ ನೋಡಿಕೊಂಡಿದ್ದಾರೆ. ಇವೆಲ್ಲವು ವಿಡಿಯೊದಲ್ಲಿ ದಾಖಲಾಗಿದೆ.

“ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಟಿಐ ಯುವ ವರದಿಗಾರ್ತಿಯೊಬ್ಬರ ಮೇಲೆ ದೈಹಿಕ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ಕಿರುಕುಳ ನೀಡಲಾಗಿದೆ. ಇದು ಎಎನ್ಐ ವರದಿಗಾರನ ಅಸಹ್ಯಕರ ವರ್ತನೆ. ಎಎನ್ಐ ತನ್ನ ಸಿಬ್ಬಂದಿಯ ಇಂತಹ ನಡವಳಿಕೆಯನ್ನು ಖಂಡಿಸುತ್ತದೆಯೇ? ಎಂದು ಪಿಟಿಐ ವಿಡಿಯೊ ಸಮೇತ ಟ್ವೀಟ್ ಮಾಡಿದೆ.

ಪಿಟಿಐ ಈ ಘಟನೆಯನ್ನು ಖಂಡಿಸಿದೆ ಮತ್ತು ವೀಡಿಯೊದಲ್ಲಿ ಕಾಣಿಸಿಕೊಂಡ ತಮ್ಮ ಉದ್ಯೋಗಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಎನ್ಐ ಆಡಳಿತ ಮಂಡಳಿಗೆ ಮನವಿ ಮಾಡಿದೆ. ಎಫ್ಐಆರ್ ಕೂಡ ದಾಖಲಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಸುದ್ದಿ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : Xiaomi Car: ಎಲೆಕ್ಟ್ರಿಕ್​ ಕಾರು ಮಾರುಕಟ್ಟೆಗೆ ಇಳಿಸಿದ ಮೊಬೈಲ್ ಕಂಪನಿ ರೆಡ್​ಮಿ

“ನಮ್ಮ ಆಡಳಿತ ಮಂಡಳಿ ಮತ್ತು ಪತ್ರಕರ್ತೆಯ ಸಹೋದ್ಯೋಗಿಗಳು ಆಕ್ರೋಶಗೊಂಡಿದ್ದಾರೆ ಮತ್ತು ಈ ಅಪ್ರಚೋದಿತ ಹಲ್ಲೆಯನ್ನು ಬಲವಾಗಿ ಖಂಡಿಸಿದ್ದಾರೆ. ಪಿಟಿಐ ತನ್ನ ಉದ್ಯೋಗಿಗಳನ್ನು ರಕ್ಷಿಸಲು ಬದ್ಧವಾಗಿದೆ. ಆಘಾತಕಾರಿ ಘಟನೆಯ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ. ಪಿಟಿಐ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದೇವೆ” ಎಂದು ಪಿಟಿಐ ಹೇಳಿಕೆ ಬಿಡುಗಡೆ ಮಾಡಿದೆ.

ಘಟನೆಯ ಬಗ್ಗೆ ಅನೇಕ ನಾಯಕರು ಕಳವಳ ವ್ಯಕ್ತಪಡಿಸಿದರು ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ್, “ಇಂದು ಬೆಂಗಳೂರಿನಲ್ಲಿ ಪಿಟಿಐ ಪತ್ರಕರ್ತೆಯನ್ನು ದೈಹಿಕವಾಗಿ ಮತ್ತು ಮೌಖಿಕವಾಗಿ ನಿಂದಿಸಿದ ಪುರುಷ ಪತ್ರಕರ್ತನ ನಡವಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತೇನೆ ಎಂದು ಬರೆದಿದ್ದಾರೆ.

ಏತನ್ಮಧ್ಯೆ, ಎಎನ್ಐ ವರದಿಗಾರ ತನ್ನ ಮೇಲೆ ಮೊದಲು ಮಹಿಳಾ ಪತ್ರಕರ್ತೆ ಹಲ್ಲೆ ನಡೆಸಿದ್ದರು ಎಂದು ಪ್ರತಿ ಎಫ್ಐಆರ್ ದಾಖಲಿಸಲಿದ್ದಾರೆ. ಅದಕ್ಕೆ ಪೂರಕವಾಗಿ ಪರಚಿದ ಮುಖದ ಚಿತ್ರ ಹಾಕಿದ್ದಾರೆ. ಆದಾಗ್ಯೂ, ಎಎನ್ಐ ಪತ್ರಕರ್ತ ನವೀನ್ ಕಪೂರ್ ನೀಡಿದ ಸ್ಪಷ್ಟೀಕರಣದ ಪ್ರಕಾರ, ಉದ್ಯೋಗದಾತರು ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ.

Exit mobile version