ಹೈದರಾಬಾದ್: ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ (Congress Leader Sam Pitroda) ಅವರ ಹೊಸ ವಿವಾದಿತ ಹೇಳಿಕೆಗೆ (Controversial statement) ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), “ಚರ್ಮದ ಬಣ್ಣದ (skin colour) ಆಧಾರದ ಮೇಲೆ ಭಾರತೀಯರಿಗೆ ಮಾಡುವ ಅವಮಾನವನ್ನು ಈ ದೇಶ ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.
ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಸ್ಯಾಮ್ ಪಿತ್ರೋಡಾ ವಿವಾದ ಹುಟ್ಟುಹಾಕಿದ್ದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದರು.
ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪಿಎಂ ನರೇಂದ್ರ ಮೋದಿ ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಪದವಿಯ ಸ್ಪರ್ಧೆಯ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ‘ಶೆಹಜಾದಾ’ನ ಅಂಕಲ್ ಹಾಗೂ ಫಿಲಾಸಫಿ ಮಾರ್ಗದರ್ಶಕನೊಬ್ಬ ಅಮೆರಿಕದಲ್ಲಿದ್ದಾನೆ. ಆತ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ. ಈ ‘ಶೆಹಜಾದಾ’ ಮೂರನೇ ಅಂಪೈರ್‌ನಿಂದ ಸಲಹೆ ಪಡೆಯುತ್ತಾನೆ. ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ.. ” ಎಂದು ಪಿತ್ರೋಡಾ ಮೇಲೆ ನರೇಂದ್ರ ಮೋದಿ ಹರಿಹಾಯ್ದರು.
ಪಿತ್ರೋಡಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ನಾವು ವಿಭಿನ್ನವಾಗಿ ಕಾಣಿಸಬಹುದು, ಆದರೆ ನಾವೆಲ್ಲರೂ ಒಂದೇ” ಎಂದಿದ್ದಾರೆ. “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯಮಯ ದೇಶ. ನಾವು ವಿಭಿನ್ನವಾಗಿ ಕಾಣಿಸಬಹುದು ಆದರೆ ನಾವೆಲ್ಲರೂ ಒಂದೇ. ಹಮಾರೆ ದೇಶ್ ಕೆ ಬಾರೆ ಮೇ ಥೋಡಾ ತೊ ಸಮಜ್ ಲೋ! (ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳುವಳಿಕೆ ಇರಲಿ)” ಎಂದಿದ್ದಾರೆ ಶರ್ಮಾ.
ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭೆ ಅಭ್ಯರ್ಥಿ ಕಂಗನಾ ರಣಾವತ್, ಪಿತ್ರೋಡಾ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ, “ಸ್ಯಾಮ್ ಪಿತ್ರೋಡಾ ಅವರು ರಾಹುಲ್ ಗಾಂಧಿಯವರ ಮಾರ್ಗದರ್ಶಕರು. ಅವರ ಜನಾಂಗೀಯವಾದಿಗಳ ಮಾತುಗಳನ್ನು ಕೇಳಿ. ಇವರು ಭಾರತೀಯರನ್ನು ವಿಭಜಿಸುವವರು. ಅವರ ಸಂಪೂರ್ಣ ಸಿದ್ಧಾಂತವೇ ವಿಭಜಿಸು ಮತ್ತು ಆಳು. ಸಹ ಭಾರತೀಯರನ್ನು ಚೈನೀಸ್, ಆಫ್ರಿಕನ್ ಎಂದು ಕರೆಯುವುದು ಬೇಸರದ ಸಂಗತಿ; ಇದು ಕಾಂಗ್ರೆಸ್‌ಗೂ ಅವಮಾನಕಾರಿ!” ಎಂದು ಕಂಗನಾ ಎಕ್ಸ್‌ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು. ಕಾಂಗ್ರೆಸ್ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು.
ಇದನ್ನೂ ಓದಿ: Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!