Site icon Vistara News

Lok Sabha Election 2024 : ಯಡಿಯೂರಪ್ಪ ಮೋಸ ಮಾಡಿದರು ಎಂದ ಈಶ್ವರಪ್ಪ; ಶಿವಮೊಗ್ಗದಲ್ಲಿ ಪಕ್ಷೇತರ ಸ್ಪರ್ಧೆ ಬಾಂಬ್‌!

KS Eshwarappa says he won't attend PM Modi's event

ಶಿವಮೊಗ್ಗ : ತಮ್ಮ ಪುತ್ರ ಕೆ.ಇ ಕಾಂತೇಶ್‌ ಅವರಿಗೆ ಹಾವೇರಿ ಕ್ಷೇತ್ರದ ಲೋಕ ಸಭಾ ಟಿಕೆಟ್ (Lok Sabha Election 2024)​ ತಪ್ಪಿದ ಹಿನ್ನೆಲೆಯಲ್ಲಿ ಸಿಡಿದೆದ್ದಿರುವ ರಾಜ್ಯ ಬಿಜೆಪಿ ಹಿರಿಯ ಮುಖಂಡ ಈಶ್ವರಪ್ಪ ಬಂಡಾಯದ ಕಹಳೆ ಊದಲು ನಿರ್ಧರಿಸಿದ್ದಾರೆ. ತುರ್ತು ಸುದ್ದಿಗೋಷ್ಠಿ ಕರೆದು ಬಿಜೆಪಿ ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಮಾಜಿ ಸಿಎಂ ಹಾಗೂ ಸ್ವಪಕ್ಷದ ವೈರಿ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಸ್ವಜನ ಪಕ್ಷಪಾತಕ್ಕೆ ತಾಯಿ ಸಮಾನ ಪಕ್ಷವನ್ನು ಯಡಿಯೂರಪ್ಪ ಕತ್ತು ಹಿಸುಕಿ ಕೊಲ್ಲುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಯಶ್ವರಪ್ಪ ಅವರ ಪುತ್ರ ಕಾಂತೇಶ್​ ಹಾವೇರಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಬುಧವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹಾವೇರಿಗೆ ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಹೆಸರು ಪ್ರಕಟಗೊಂಡ ಬೆನ್ನಲ್ಲೇ ಈಶ್ವರಪ್ಪ ಅವರು ಮುನಿಸಿಕೊಂಡಿದ್ದಾರೆ. ಪುತ್ರನ ಜತೆ ಕಾರಿನಲ್ಲಿ ಮನೆಯಿಂದ ಹೊರಟ ಅವರು ತುರ್ತು ಸುದ್ದಿಗೋಷ್ಠಿ ಕರೆದು ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವ ಸೂಚನೆ ಕೊಟ್ಟಿದ್ದಾರೆ.

ಟಿಕೆಟ್​ ಸಿಕ್ಕಿಲ್ಲ ಎಂಬುದನ್ನು ತಿಳಿಸಲು ಕರೆ ಮಾಡಿದ್ದ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಶುಕ್ರವಾರ ಸಂಜೆ 5 ಗಂಟೆಗೆ (ಮಾರ್ಚ್​ 15ರಂದು) ಸಭೆಯಿದೆ. ಅಲ್ಲಿಗೆ ಎಲ್ಲರೂ ಬನ್ನಿ. ತೀರ್ಮಾನ ತೆಗೆದುಕೊಳ್ಳೋಣ ಎಂಬ ಸಂದೇಶ ರವಾನಿಸಿದ್ದಾರೆ.

ಭರವಸೆ ಕೊಟ್ಟು ಮೋಸ ಮಾಡಿದರು ಎಂಬ ಆರೋಪ

ಹಾವೇರಿ ಟಿಕೆಟ್ ಪುತ್ರನಿಗೆ ನೀಡುವಂತೆ ಕೋರಿ ನಾನು ಯಡಿಯೂರಪ್ಪ ಅವರ ಮನೆಗೆ ಹೋಗಿದ್ದೆ. ಅವರು ಆ ವೇಳೆ ಟಿಕೆಟ್​ ಕೊಡಿಸುವ ಭರವಸೆ ಕೊಟ್ಟಿದ್ದರು. ಹಾವೇರಿ ಜನರ ವಿಶ್ವಾಸವನ್ನು ನನ್ನ ಪುತ್ರ ಕಾಂತೇಶ್​ ಗಳಿಸಿದ್ದ. ಆದರೆ ಯಡಿಯೂರಪ್ಪ ನನಗೆ ಅನ್ಯಾಯ ಮಾಡಿದರು ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ಯಡಿಯೂರಪ್ಪ ಅವರಿಂದ ನನಗೆ ಮೋಸ ಆಗಿದೆ. ನಾನು ಮೋದಿ ಅಭಿಮಾನಿಯಾಗಿದ್ದೇನೆ ಹಾಗೂ ಬಿಜೆಪಿ ನಿಷ್ಠನಾಗಿದ್ದೇನೆ. ಶಿವಮೊಗ್ಗ ದ ಜನರು ನನಗೆ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದ ಈಶ್ವರಪ್ಪ ವಿವರಿಸಿದ್ದಾರೆ.

ಯಡಿಯೂರಪ್ಪ ಅವರು ಹಠ ಹಿಡಿದು ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್​ ಸಿಗುವಂತೆ ಮಾಡಿದ್ದಾರೆ. ಶೋಭಾ ಕರಂದ್ಲಾಜೆ ಒಂದು ಬಾರಿಯೂ ದೆಹಲಿ ಹೋಗಿಲ್ಲ. ಹಾಗಿದ್ದೂ ಅವರಿಗೆ ಟಿಕೆಟ್​ ನೀಡಲಾಗಿದೆ. ಅದರೆ, ನನ್ನ ಮಗನಿಗೆ ಟಿಕೆಟ್ ಯಾಕೆ ಕೊಡಿಸಿಲ್ಲ ಗೊತ್ತಿಲ್ಲ ಎಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನನ್ನು ಹಣಿಯುವ ಯತ್ನ

ನಾನು‌ 40 ವರ್ಷದಿಂದ ಬಿಜೆಪಿಗಾಗಿ ದುಡಿದಿದ್ದೇನೆ. ಆದರೆ, ಹಠ ಹಿಡಿದು ಯಡಿಯೂರಪ್ಪ ನನ್ನನ್ನು ಹಣಿಯಲು ಯತ್ನಿಸುತ್ತಿದ್ದಾರೆ. ಅವರಿಂದಾಗಿ ಸಾಕಷ್ಟು ನಾಯಕರಿಗೆ ರಾಜ್ಯದಲ್ಲಿ ಅನ್ಯಾಯವಾಗಿದೆ. ಪ್ರತಾಪ ಸಿಂಹ ಸಿ.ಟಿ. ರವಿ ನಳೀನ್ ಕುಮಾರ್ ಕಟೀಲ್ ಸದಾನಂದ ಗೌಡ ಹೀಗೆ ಸಾಕಷ್ಟು ಜನರಿಗೆ ಟಿಕೆಟ್ ದೊರೆಯದಂತಾಗಿದೆ. ಅವರೇ ಮುಂದೆ ನಿಂತು ನಾಯಕರು ತೆರೆ ಮರೆಗೆ ಸರಿಯವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿರು.

ರಾಜ್ಯದ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಮೋಸ ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೂ ಅವರಿಗೆ ಟಿಕೆಟ್ ಕೊಡಿಸಲಾಗಿದೆ. ಬೊಮ್ಮಾಯಿಯವರೇ ನನ್ನ ಮಗ ಕಾಂತೇಶನನಿಗೆ ಟಿಕೆಟ್ ಕೊಡಿ ಅಂತಾ ಹೇಳಿದ್ದರು. ಆ ಮಾತಿಗೂ ಬೆಲೆಯಿಲ್ಲ ಎಂದು ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಶುಕ್ರವಾರದ ಸಭೆ ಕರೆದು ತೀರ್ಮಾನ ತಿಳಿಸುತ್ತೇನೆ. ರಾಜ್ಯದ ಜನ ನೋವಲ್ಲಿ ಇದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ನೋವು ಆಗಿದೆ. ಕಾರ್ಯಕರ್ತರ ನೋವಿಗೆ ಧ್ವನಿಯಾಗುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : Lok Sabha Election 2024 : ಪ್ರತಾಪ್‌ಸಿಂಹ, ಕಟೀಲ್‌ ಸಹಿತ 8 ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌

ಜಾತಿ‌ ನಾಯಕ ಆಗಿಲ್ಲ

ನಾನೆಂದೂ ಜಾತಿ ನಾಯಕ ಆಗಲು ಬಯಸಿಲ್ಲ ಹಾಗೂ ಅಗಿಲ್ಲ. ನಾನು ಹಿಂದುತ್ವವನ್ನು ಪ್ರತಿಪಾದಿಸಿದ್ದೇನೆ. ಯಡಿಯೂರಪ್ಪ ನನ್ನ ಆತ್ಮೀಯ ಸ್ನೇಹಿತರು. ನಾವಿಬ್ಬರು ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ನನ್ನ ಪ್ರಾಣ ಇರುವವರೆಗೂ ಮೋದಿಯನ್ನು ಬಿಡಲ್ಲ ಎಂದು ಹೇಳಿದರು.

ಪಕ್ಷದ ನಾಯಕರು ದೆಹಲಿಯಿಂದ ಕರೆ ಮಾಡಿ ಬೆಂಗಳೂರಿಗೆ ಬನ್ನಿ ಅಂಥ ಕರೆದಿದ್ದಾರೆ. ಅವರಲ್ಲಿ ಮಾತನಾಡುವುದು ಏನಿದೆ. ಈಗಾಗಲೇ ಟಿಕೆಟ್ ಘೋಷಣೆ ಆಗಿದೆ‌. ಈಗ ಮಾತಾನಾಡಿದರೆ ಏನೂ ಪ್ರಯೋಜನ ಇಲ್ಲ. ಶಿವಮೊಗ್ಗ ಕ್ಷೇತ್ರದ ಬಗ್ಗೆ ಮುಂದೆ ತೀರ್ಮಾನ ಮಾಡುವೆ. ಹಾವೇರಿಯಿಂದ ಪಕ್ಷೇತರ ಸ್ಪರ್ಧೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಈಶ್ವರಪ್ಪ ಹೇಳಿದರು.

ನಾನು ಬಿಜೆಪಿ ಬಿಟ್ಟು ಹೋಗ್ತೀನಿ ಎಂದು ಹೇಳುತ್ತಿಲ್ಲ. ಪಕ್ಷ ವನ್ನ ಉಳಿಸಲು ಎಲ್ಲಾ ಪ್ರಯತ್ನ ಮಾಡುವೆ. ಒಂದೇ ಕುಟುಂಬದ ಕೈಯಲ್ಲಿ ಬಿಜೆಪಿ ಸಿಕ್ಕಿದೆ ಅಂತಾ ಕಾರ್ಯಕರ್ತರು ಹೇಳ್ತಾ ಇದ್ದಾರೆ ಎಂದು ಈಶ್ವರಪ್ಪ ಹೇಳಿದರು.

Exit mobile version