Site icon Vistara News

Baba Ramdev: ಸುಪ್ರೀಂ ಕೋರ್ಟ್‌ ತಪರಾಕಿ, ಬಾಬಾ ರಾಮದೇವ್‌ ಬೇಷರತ್‌ ಕ್ಷಮೆಯಾಚನೆ

I said owaisi, not obc says baba ramdev

ಹೊಸದಿಲ್ಲಿ: ತಪ್ಪುದಾರಿಗೆಳೆಯುವ ಜಾಹೀರಾತು (Advertisement) ಪ್ರಕರಣದಲ್ಲಿ ತನ್ನ ಆದೇಶವನ್ನು ಪಾಲಿಸದಿದ್ದಕ್ಕಾಗಿ ಪತಂಜಲಿ (Patanjali) ಸಂಸ್ಥೆಯ ಯೋಗ ಗುರು ಬಾಬಾ ರಾಮ್‌ದೇವ್ (Yoga Guru Baba Ramdev) ಅವರನ್ನು ಮಂಗಳವಾರ ಸುಪ್ರೀಂ ಕೋರ್ಟ್‌ (Supreme Court) ತೀವ್ರ ತರಾಟೆಗೆ ತೆಗೆದುಕೊಂಡಿತು. ಇದರಿಂದ ತಬ್ಬಿಬ್ಬಾದ ರಾಮದೇವ್‌, ನ್ಯಾಯಪೀಠದ ಮುಂದೆ ಬೇಷರತ್ತಾಗಿ ಕ್ಷಮೆ (apology) ಯಾಚಿಸಿದರು.

ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ್‌ನ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಬಾರದು ಎಂದು ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ ನಂತರವೇ ಇಬ್ಬರೂ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದರು.‌ ಮಾರ್ಚ್ 19ರಂದು ಈ ಪ್ರಕರಣದಲ್ಲಿ ನೀಡಲಾದ ನೋಟಿಸ್‌ಗೆ ಕಂಪನಿಯು ಪ್ರತಿಕ್ರಿಯಿಸಲು ವಿಫಲವಾದ ಕಾರಣ ಸುಪ್ರೀಂ ಕೋರ್ಟ್, ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಹಾಜರಾಗಲೇಬೇಕು ಎಂದು ಸೂಚಿಸಿತು.

ನವೆಂಬರ್ 21, 2023ರಂದು ನ್ಯಾಯಾಲಯಕ್ಕೆ ನೀಡಿದ ಮಾಹಿತಿಯಲ್ಲಿ, ಪತಂಜಲಿ ಕಂಪನಿ ನೀಡಿದ ಜಾಹೀರಾತುಗಳು ರಾಮ್‌ದೇವ್ ಅವರ ಅನುಮೋದನೆಯನ್ನು ಪ್ರತಿಬಿಂಬಿಸುವುದರಿಂದ ಅವರಿಗೆ ಶೋಕಾಸ್ ನೋಟಿಸ್ ನೀಡುವುದು ಸೂಕ್ತವೆಂದು ಪರಿಗಣಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. “ರೋಗಗಳಿಗೆ ಚಿಕಿತ್ಸೆ ನೀಡುವ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ” ಎಂಬ ತನ್ನ ವಾಗ್ದಾನವನ್ನು ಪಾಲಿಸದಿದ್ದಕ್ಕಾಗಿ ನ್ಯಾಯಾಲಯವು ಕಂಪನಿಯನ್ನು ತೀವ್ರವಾಗಿ ಟೀಕಿಸಿತು.

ನಂತರ ಪೀಠದ ಮುಂದೆ ಹಾಜರಾದ ಬಾಬಾ ರಾಮದೇವ್‌ ಅವರ ವಕೀಲರು, “ನನ್ನ ಉಪಸ್ಥಿತಿಯನ್ನು ಗಮನಿಸಲು ಮತ್ತು ಬೇಷರತ್ತಾದ ಕ್ಷಮೆಯಾಚನೆಯನ್ನು ಸ್ವೀಕರಿಸಲು ನ್ಯಾಯಾಲಯವನ್ನು ಕೋರುತ್ತೇನೆ” ಎಂದು ತಿಳಿಸಿದರು.

ಇದಕ್ಕೂ ಮುನ್ನ ಬಾಬಾ ರಾಮ್‌ದೇವ್ ಅವರನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. “ನೀವು ಎಲ್ಲಾ ತಡೆಗೋಡೆಗಳನ್ನು ಮುರಿದಿದ್ದೀರಿ. ಇದು ಕಾಯಿದೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್‌ ಮಾತ್ರವಲ್ಲ, ದೇಶಾದ್ಯಂತ ನ್ಯಾಯಾಲಯಗಳು ನೀಡಿದ ಪ್ರತಿಯೊಂದು ಆದೇಶವನ್ನೂ ಗೌರವಿಸಬೇಕು,” ಎಂದು ನ್ಯಾಯಾಲಯ ಹೇಳಿದೆ.

ತನ್ನ ಔಷಧಿಗಳ ಕುರಿತು ಎಲ್ಲಾ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮದಲ್ಲಿ ಬರುವ, ತಪ್ಪು ಮಾಹಿತಿ ನೀಡುವ ಎಲ್ಲ ಜಾಹಿರಾತುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಪತಂಜಲಿಗೆ ಫೆಬ್ರವರಿ 27ರಂದು ಸೂಚಿಸಿತ್ತು.

ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನೂ ಪೀಠ ತರಾಟೆಗೆ ತೆಗೆದುಕೊಂಡಿದೆ. “ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ಅತ್ಯಂತ ದುರದೃಷ್ಟಕರ. ಸರ್ಕಾರ ಕೆಲವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದೆ.

ಪತಂಜಲಿ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​(ಐಎಂಎ) ಸಲ್ಲಿಸಿರುವ ದೂರಿನ ವಿಚಾರಣೆ ನಡೆಯುತ್ತಿದೆ. ಪತಂಜಲಿ ಆಯುರ್ವೇದ್ ತನ್ನ ಔಷಧಿಗಳ ಬಗ್ಗೆ ಸುಳ್ಳು ಹೇಳುತ್ತಿದೆ ಮತ್ತು ದಾರಿ ತಪ್ಪಿಸುವ ಮಾಹಿತಿ ನೀಡುತ್ತಿದೆ. ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆ ಸಾರ್ವಜನಿಕರ ದಾರಿತಪ್ಪಿಸಲುಮ ಅಲೋಪತಿ ವೈದ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ಹಲವಾರು ಜಾಹೀರಾತುಗಳನ್ನು ಉಲ್ಲೇಖಿಸಿ ದೂರಿತ್ತು.

“ಆಧುನಿಕ ಔಷಧಗಳನ್ನು ಸೇವಿಸಿದರೂ ವೈದ್ಯಾಧಿಕಾರಿಗಳೇ ಸಾಯುತ್ತಿದ್ದಾರೆ ಎಂದು ಈ ಜಾಹೀರಾತುಗಳು ಹೇಳುತ್ತಿವೆ” ಎಂದು ಐಎಂಎ ವಕೀಲರು ವಾದಿಸಿದ್ದಾರೆ. ಇಂಥ ಜಾಹೀರಾತುಗಳನ್ನು ಪ್ರಕಟಿಸದಂತೆ ನ್ಯಾಯಾಲಯ ಬಾಬಾ ರಾಮದೇವ್‌ಗೆ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ: ಚಾಟಿಯ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ಕ್ಷಮೆಯಾಚಿಸಿದ ಬಾಬಾ ರಾಮದೇವ್;‌ ಏನಿದು ಕೇಸ್?‌

Exit mobile version