ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಜಗತ್ತೇ ಸಂಭ್ರಮದಿಂದ ಸಜ್ಜಾಗಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದಲ್ಲಿ ಇರುವುದರಿಂದ ಅಲ್ಲೂ ಈ ಸಲ ಎಂದಿಗಿಂತ ಹೆಚ್ಚು ಅದ್ಧೂರಿಯಾಗಿ ಯೋಗ ಬೆಳಗಲಿದೆ. ಈ ಹಿಂದೆ ಭಾರತದಿಂದ ಹೋದ ಸಾಕಷ್ಟು ಯೋಗ ಗುರುಗಳು ಯೋಗವನ್ನು ಅಮೆರಿಕದಲ್ಲಿ ಜನಪ್ರಿಯಗೊಳಿಸಿದ್ದನ್ನು ಇಲ್ಲಿ ನೆನೆಯಬಹುದು. ಇದು ಒಂದು ರೀತಿಯಲ್ಲಿ ಅಮೆರಿಕ ಹಾಗೂ ವಿಶ್ವದ ಮೇಲೆ ಯೋಗದ ಮೂಲಕ ಭಾರತದ ಪ್ರಭಾವ. ಈ ಬಾರಿ ಅಲ್ಲಿ ವಿಶ್ವಸಂಸ್ಥೆ ಆಯೋಜಿಸುವ ಕಾರ್ಯಕ್ರಮದಲ್ಲಿ ಮೋದಿ ಯೋಗ ಮಾಡಲಿದ್ದಾರೆ. ʼಯೋಗ ಫಾರ್ ವಸುಧೈವ ಕುಟುಂಬಕಂʼ ಎಂಬ ಥೀಮ್ ಇಟ್ಟುಕೊಂಡು ಆಚರಣೆ ಮಾಡಲಾಗುತ್ತಿದೆ.
ಯೋಗದ ಖ್ಯಾತಿ ಈಗ ವಿಶ್ವದಾದ್ಯಂತ ಹರಡಿದೆ. ಯೋಗವನ್ನು ವಿಶ್ವಸಂಸ್ಥೆಯೇ ಒಪ್ಪಿಕೊಂಡಿದೆ. ಮೈ-ಮನಸಿಗೆ ಮುದ-ಆರೋಗ್ಯ ಕೊಡುವ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕು ಎಂದು 2015ರಲ್ಲಿ ಭಾರತ ವಿಶ್ವಸಂಸ್ಥೆಯಲ್ಲಿ ಕರಡು ಪ್ರಸ್ತಾಪವನ್ನು ಇಟ್ಟಾಗ ಅದಕ್ಕೆ ವಿಶ್ವಸಂಸ್ಥೆಯ 175 ರಾಷ್ಟ್ರಗಳು ಅನುಮೋದನೆ ಕೊಟ್ಟವು (ಸದ್ಯ ಯೋಗ ದಿನವನ್ನು 177 ರಾಷ್ಟ್ರಗಳು ಅನುಮೋದಿಸಿವೆ). ಅದಾದ ಮೇಲೆ ಅದೇ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಘೋಷಣೆಯಾಯಿತು. 44 ಮುಸ್ಲಿಂ ರಾಷ್ಟ್ರಗಳು ಸೇರಿ ಒಟ್ಟು 192 ರಾಷ್ಟ್ರಗಳು ಯೋಗ ದಿನವನ್ನು ಆಚರಿಸಿದವು. ಅಂದಮೇಲೆ ಭಾರತದ ಸಂಪ್ರದಾಯಕ್ಕೆ, ಪದ್ಧತಿಗೆ ಸಿಕ್ಕಿದ್ದು ಅಭೂತಪೂರ್ವ ಸ್ಪಂದನೆ ಎನ್ನಬಹುದು.
ವೇದಕಾಲದಲ್ಲೂ, ಅದಕ್ಕೂ ಮುನ್ನವೂ ಭಾರತದಲ್ಲಿ ಯೋಗ ಅಸ್ತಿತ್ವದಲ್ಲಿತ್ತು. ಇದು ವಿಶ್ವಕ್ಕೆ ಭಾರತ ನೀಡಿರುವ ಮಹತ್ವದ ಕೊಡುಗೆಯಾಗಿದೆ ಎನ್ನುವುದನ್ನು ಜಗತ್ತೇ ಒಪ್ಪಿಕೊಂಡಿದೆ. ಯೋಗ ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಕ್ರಿಯಾಶೀಲತೆಯನ್ನು ಯೋಗ ಒಗ್ಗೂಡಿಸುತ್ತದೆ. ಪ್ರಕೃತಿ ಮತ್ತು ಮನುಷ್ಯನ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಇದು ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನ. ಹಾಗೇ ಮನುಷ್ಯನಿಗೆ ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ತಾದಾತ್ಮ್ಯ ಹೊಂದಲು ನೆರವಾಗುತ್ತದೆ. ನಮ್ಮ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದು ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲು ಹೊಂದಿರುವ ದಿನವಾದ ಕಾರಣ ಯೋಗದ ದೃಷ್ಟಿಕೋನದಲ್ಲಿ ಹೆಚ್ಚು ಮಹತ್ವ ಪಡೆದಿದೆ.
ಯೋಗಾಸನದ ಆರೋಗ್ಯ ಮಹತ್ವಗಳನ್ನೂ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಅಧ್ಯಯನದ ಮೂಲಕ ಒಪ್ಪಿಕೊಂಡಿವೆ. ಯೋಗಾಸನದಿಂದ ಮೂಳೆಯ ಮೇಲ್ಪದರದ ಸ್ನಾಯುಗಳ ಬೆಳವಣಿಗೆಯೊಂದಿಗೆ ಮನಸ್ಸಿನ ಚೈತನ್ಯ ಕೂಡ ವೃದ್ಧಿಸುತ್ತದೆ. ಶರೀರವು ಹಗುರಾಗುವುದರೊಂದಿಗೆ ರಕ್ತದ ಅವಶ್ಯಕತೆಯೂ ಕಡಿಮೆಯಾಗುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಶರೀರವು ಆರಾಮದ ಸ್ಥಿತಿಯಲ್ಲಿ ಇರುತ್ತದೆ. ಇದರ ಪರಿಣಾಮ ಉಸಿರಾಟದ ವ್ಯವಸ್ಥೆ ನಿರಾಳವಾಗಿರುತ್ತದೆ. ಅನೇಕ ದೈಹಿಕ ನೋವುಗಳಿಗೆ, ಒತ್ತಡಗಳಿಗೆ ಯೋಗಾಸನಗಳು ಮದ್ದು. ಹಾಗೆಯೇ ಉಸಿರಾಟದ ನಿಯಂತ್ರಣವಾಗಿರುವ ಪ್ರಾಣಾಯಾಮವು ದೈಹಿಕ ಸಕ್ಷಮತೆಗೆ ತುಂಬಾ ಪೂರಕ ಎಂಬುದನ್ನು ಕಂಡುಕೊಂಡಿದ್ದಾರೆ.
ಇದನ್ನೂ ಓದಿ : Yoga Day 2023: ವಿಶ್ವವನ್ನೇ ಬೆರಗುಗೊಳಿಸುತ್ತಿರುವ ಯೋಗದ ಇತಿಹಾಸ, ಥೀಮ್, ಆಚರಣೆಯ ಹಿನ್ನೆಲೆ ಏನು?
ದೈಹಿಕ-ಮಾನಸಿಕ ಒತ್ತಡದ, ಕಲುಷಿತದ ಇಂದಿನ ಕಾಲಘಟ್ಟದಲ್ಲಿ ಯೋಗ ಒಂದು ವರದಾನವಾಗಿದೆ. ನಮ್ಮ ಪೀಳಿಗೆಗೆ ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದಾಟಿಸಬೇಕಿದೆ. ವರ್ಷಕ್ಕೊಮ್ಮೆ ಯೋಗ ದಿನದ ಸಂದರ್ಭದಲ್ಲಿ ಮಾತ್ರ ಇದರ ವಿಜೃಂಭಣೆ ಮಾಡದೆ, ವರ್ಷವಿಡೀ ಯೋಗ ನಮ್ಮೆಲ್ಲರ ಬದುಕಿನ ಭಾಗವಾಗಬೇಕು. ಶಾಲಾ, ಕಾಲೇಜುಗಳಲ್ಲಿ ಗರಿಷ್ಠ ಅಂಕ ಬೇಟೆಯ ಪಠ್ಯಕ್ರಮದ ನಡುವೆ ಯೋಗಕ್ಕೂ ಜಾಗ ಇರಬೇಕು. ವಿದ್ಯಾರ್ಥಿಗಳು ನಿತ್ಯವೂ ನಿಯಮಿತವಾಗಿ ಯೋಗ ಕಲಿಯುವಂತಾಗಬೇಕು. ನಮ್ಮಲ್ಲಿ ಆಯುಷ್ ಇಲಾಖೆ ಸದ್ಯ ಯೋಗಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದೆ. ಆದರೆ ಇದನ್ನು ಕೇಂದ್ರೀಕರಿಸಿ ಒಂದು ಪಠ್ಯಕ್ರಮವನ್ನು ರೂಪಿಸುವ, ಯುವಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು. ಯೋಗದ ಮೂಲಕ ಮಾನಸಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಚೈತನ್ಯಶೀಲರಾದ ಭಾವಿ ಪ್ರಜೆಗಳ ನಿರ್ಮಾಣ ನಮ್ಮಿಂದ ಸಾಧ್ಯವಾಗಲಿ.