Site icon Vistara News

Yogi Adityanath: “ಗೋಮಾಂಸ ಸೇವಿಸುವ ಹಕ್ಕು….” ಕಾಂಗ್ರೆಸ್‌ ವಿರುದ್ಧ ಯೋಗಿ ಇನ್ನೊಂದು ಆರೋಪ

Yogi Adithyanatha

ಲಖನೌ: “ಕಾಂಗ್ರೆಸ್ (Congress) ಪಕ್ಷವು ಅಲ್ಪಸಂಖ್ಯಾತರಿಗೆ (minorities) ಗೋಮಾಂಸ (beef) ತಿನ್ನುವ ಹಕ್ಕನ್ನು ನೀಡಲು ಬಯಸುತ್ತಿದೆ” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಶುಕ್ರವಾರ ಟೀಕಿಸಿದ್ದಾರೆ. “ಈ ನಾಚಿಕೆಯಿಲ್ಲದ ಜನರು ಗೋಮಾತೆಗಳನ್ನು ಕಟುಕರ ಕೈಗೆ ಒಪ್ಪಿಸಲು ಬಯಸುತ್ತಿದ್ದಾರೆ” ಎಂದು ಅವರು ಆಕ್ರೋಶಿಸಿದ್ದಾರೆ.

ಮೊರಾದಾಬಾದ್‌ನಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, “ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರಿಗೆ ಅವರ ಆಯ್ಕೆಯ ಆಹಾರವನ್ನು ತಿನ್ನುವ ಸ್ವಾತಂತ್ರ್ಯವನ್ನು ನೀಡಲು ಬಯಸುತ್ತದೆ. ಅಂದರೆ ಅವರು ಗೋಹತ್ಯೆಗೆ ಅವಕಾಶ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದರು.

ಸಂಭಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಮೇಶ್ವರ್ ಲಾಲ್ ಸೈನಿ ಪರ ರ್ಯಾಲಿಯಲ್ಲಿ ಯೋಗಿ ಆದಿತ್ಯನಾಥ್ ಮಾತನಾಡಿದರು. “ಸ್ತ್ರೀಧನ (ಮಹಿಳೆಯರ ಚಿನ್ನಾಭರಣಗಳು) ಅನ್ನು ಕಾಂಗ್ರೆಸ್‌ ಕಸಿದುಕೊಂಡು ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಗೆ ಹಂಚಲಿದೆ” ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ “ಪಿತ್ರಾರ್ಜಿತ ತೆರಿಗೆ” ಆರೋಪವನ್ನು ಉಲ್ಲೇಖಿಸಿದ ಅವರು, “ಕಾಂಗ್ರೆಸ್ ಜನರ ಆಸ್ತಿಯ ಎಕ್ಸ್-ರೇ ಮಾಡುವ ಭರವಸೆ ನೀಡಿದೆ” ಎಂದು ಆರೋಪಿಸಿದರು.

“ಇದರರ್ಥ, ಯಾರದಾದರೂ ಮನೆಯಲ್ಲಿ ನಾಲ್ಕು ಕೋಣೆಗಳಿದ್ದರೆ, ಅದರಲ್ಲಿ ಎರಡನ್ನು ಅವರು ಕಸಿದುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ಮಹಿಳೆಯರ ಆಭರಣಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಹೇಳುತ್ತದೆ. ಇದನ್ನು ದೇಶ ಎಂದಿಗೂ ಒಪ್ಪಿಕೊಳ್ಳುವುದಿಲ್ಲ” ಎಂದು ಅವರು ಹೇಳಿದರು. “ಕರ್ನಾಟಕದಲ್ಲಿ SC/ST/OBC ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಪ್ರಯತ್ನಿಸಿದೆ. ಆ ಪಕ್ಷವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಕೋಟಾದಿಂದ ಮುಸ್ಲಿಮರಿಗೆ 6 ಪ್ರತಿಶತ ಮೀಸಲಾತಿ ನೀಡುತ್ತದೆ” ಎಂದು ಪ್ರತಿಪಾದಿಸಿದರು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, “ಅವರು ರಾಮನ ಅಸ್ತಿತ್ವವನ್ನು ಪ್ರಶ್ನಿಸುವವರು. ಅವರ ಸರ್ಕಾರ ಇದ್ದಾಗ ಭಗವಾನ್ ರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದರು. ಇದು ಅವರ ದ್ವಂದ್ವ ನೀತಿಗೆ ಉದಾಹರಣೆಯಾಗಿದೆ” ಎಂದಿದ್ದಾರೆ.

ಈ ವಾರದ ಆರಂಭದಲ್ಲಿ ಯೋಗಿ ಆದಿತ್ಯನಾಥ್ ಅವರು, ದೇಶದ ಮೇಲೆ ಶರಿಯಾ ಕಾನೂನನ್ನು ಹೇರಲು ಕಾಂಗ್ರೆಸ್ ಬಯಸಿದೆ ಎಂದು ಹೇಳಿದ್ದರು. “ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ದೇಶಕ್ಕೆ ದ್ರೋಹ ಬಗೆದಿವೆ. ಮತ್ತೊಮ್ಮೆ ತಮ್ಮ ಸುಳ್ಳು ಪ್ರಣಾಳಿಕೆಯೊಂದಿಗೆ ನಿಮ್ಮ ಬಳಿಗೆ ಬಂದಿವೆ. ನೀವು ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ನೋಡಿದರೆ, ಅವರು ಸರ್ಕಾರ ರಚಿಸಿದರೆ ಶರಿಯಾ ಕಾನೂನನ್ನು ಜಾರಿಗೆ ತರಲು ಉದ್ದೇಶಿಸಿರುವುದು ಗೊತ್ತಾಗುತ್ತದೆ” ಎಂದು ಯೋಗಿ ಆರೋಪಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದೆ ದೇಶದಲ್ಲಿ ಶರಿಯಾ ಕಾನೂನು ಜಾರಿ; ಯೋಗಿ ಆದಿತ್ಯನಾಥ್ ವಾಗ್ದಾಳಿ

Exit mobile version