Site icon Vistara News

PM Narendra Modi: ʼಗೂಂಡಾರಾಜ್‌ʼ ನೆನಪಿಸಿದ ಮೋದಿ, ಉ.ಪ್ರದಲ್ಲಿ ʼಯೋಗಿ ಸ್ವಚ್ಛತಾ ಅಭಿಯಾನʼಕ್ಕೆ ಮೆಚ್ಚುಗೆ

pm narendra modi yogi adityanath

ಲಖನೌ: ಈ ಹಿಂದಿನ ʼಗೂಂಡಾರಾಜ್‌ʼ (gunda raj) ಅನ್ನು ತೊಲಗಿಸಿ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ನನ್ನ ಚಿಂತನೆಯ ʼಸ್ವಚ್ಛತಾ ಅಭಿಯಾನʼವನ್ನು (swacchta abhiyaan) ಸರಿಯಾಗಿ ಜಾರಿಗೆ ತಂದಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಪ್ರಶಂಸಿಸಿದ್ದಾರೆ.

ಉತ್ತರ ಪ್ರದೇಶದ ಅಜಂಗಢದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾನೂನು ಸುವ್ಯವಸ್ಥೆ ಜಾರಿ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನು ಶ್ಲಾಘಿಸಿದರು. “ನೀವು ಸಮಾಜವಾದಿ ಪಾರ್ಟಿಯ ʼಗೂಂಡಾರಾಜ್’ನ ಹಳೆಯ ದಿನಗಳನ್ನು ನೋಡಿದ್ದೀರಿ. ಯೋಗಿಜಿ ನನ್ನ ʼಸ್ವಚ್ಛತಾ ಅಭಿಯಾನ’ವನ್ನು ಸರಿಯಾಗಿ ಜಾರಿಗೆ ತಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಇದ್ದ ಗ್ಯಾಂಗ್‌ಗಳು, ಗಲಭೆಕೋರರು, ಮಾಫಿಯಾಗಳು, ಅಪಹರಣಕಾರರು ಮತ್ತು ಸುಲಿಗೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ” ಎಂದಿದ್ದಾರೆ.

“ಹತ್ತು ವರ್ಷಗಳ ಹಿಂದೆ ಇಲ್ಲಿ ಜನರು ದೇವರ ಭರವಸೆಯಲ್ಲಿ ಬದುಕುತ್ತಿದ್ದರು. ಕೆಲವು ಕಡೆ ಬಾಂಬ್ ದಾಳಿ, ಕೆಲವು ಕಡೆ ಸ್ಲೀಪರ್ ಸೆಲ್, ಕೆಲವು ಕಡೆ ಕೋಮು ಘರ್ಷಣೆ, ಇನ್ನು ಕೆಲವು ಕಡೆ ಭಯೋತ್ಪಾದನೆಯಿಂದ ಸಂಕಷ್ಟ ಪರಿಸ್ಥಿತಿ ಇತ್ತು. ಸಾವಿರಾರು ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡರು. ಈ ಹಿಂದಿನ ಸರ್ಕಾರಗಳು ಅಂತಹ ದುಷ್ಟರಿಗೆ ಸಹಕಾರ ನೀಡುತ್ತಿದ್ದವು” ಎಂದರು ಮೋದಿ.

“ಈಗಲೂ ನಿಮ್ಮ ಮೀಸಲಾತಿಯನ್ನು ಕಿತ್ತು ಸಮುದಾಯವೊಂದಕ್ಕೆ ನೀಡಲು ಆ ಪಕ್ಷಗಳು ಚಿಂತಿಸಿವೆ. ಬಜೆಟ್ 15% ಅಲ್ಪಸಂಖ್ಯಾತರ ಹೆಸರಿನಲ್ಲಿ ಹೋಗುತ್ತಿದೆ. 70 ವರ್ಷಗಳಿಂದ ಹಿಂದೂ ಮುಸ್ಲಿಂ ರಾಜಕೀಯ ಮಾಡಿವೆ. ನಾವು ಒಂದಾಗಿ ಹೋಗಬೇಕು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು” ಎಂದರು ನುಡಿದರು.

“ಸಿಎಎ ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವ ನೀಡುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಇವರು ದೇಶದಲ್ಲಿ ನಿರಾಶ್ರಿತರಾಗಿ ದೀರ್ಘಕಾಲ ವಾಸಿಸಿದ್ದಾರೆ. ಇವರು ಧರ್ಮದ ಆಧಾರದ ಮೇಲೆ ಮಾಡಿದ ದೇಶ ವಿಭಜನೆಗೆ ಬಲಿಯಾದವರು. ಆದರೆ ವಿರೋಧ ಪಕ್ಷಗಳಾದ ಎಸ್‌ಪಿ ಮತ್ತು ಕಾಂಗ್ರೆಸ್ ಕಾನೂನಿನ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವ ಮೂಲಕ ಗಲಭೆಗಳನ್ನು ಪ್ರಚೋದಿಸುತ್ತಿವೆ. ಈ ನಿರಾಶ್ರಿತರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ. ಅವರು ಉತ್ತರ ಪ್ರದೇಶ ಮತ್ತು ಇಡೀ ದೇಶದಲ್ಲಿ ಗಲಭೆಯನ್ನು ಸೃಷ್ಟಿಸಲು ಪ್ರಯತ್ನಿಸಿದರು” ಎಂದು ಮೋದಿ ಆರೋಪಿಸಿದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಎ ಅನುಷ್ಠಾನ ಮೋದಿ ಸರ್ಕಾರದ ದಿಟ್ಟ ನಿರ್ಧಾರ

Exit mobile version