ಶಿವಮೊಗ್ಗ: ಮಲೆನಾಡಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಶಿವಮೊಗ್ಗದ ವಿಶ್ವ ಪ್ರಸಿದ್ಧ ಜೋಗ ಜಲಪಾತ (Jog Falls) ಮೈದುಂಬಿ ಧುಮ್ಮಿಕ್ಕುತ್ತಿದೆ. ಜೋಗ ಜಲಪಾತ ವೀಕ್ಷಣೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯುವಕನೋರ್ವ ಜಲಪಾತದ ಬಳಿ ನಾಪತ್ತೆಯಾಗಿದ್ದಾನೆ. ಇತ್ತ ಮಹಾರಾಷ್ಟ್ರದ ಗಡಚರೋಲಿ ಎಂಬಲ್ಲಿ ನೋಡ ನೋಡ್ತಿದ್ದಂತೆ ಬಾಲಕನೋರ್ವ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದಾನೆ (Karnataka Rain News).
ಘಟನೆ ವಿವರ
ಜೋಗ ಜಲಪಾತ ವೀಕ್ಷಣೆಗೆ ಬೆಂಗಳೂರಿನಿಂದ ಆಗಮಿಸಿದ್ದ ಆನಂದ್ (24) ಜಲಪಾತದ ಬಳಿ ಕಣ್ಮರೆಯಾಗಿದ್ದಾನೆ. ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿರುವ ಗದಗ ಮೂಲದ ಆನಂದ್ ಜೋಗ ಜಲಪಾತಕ್ಕೆ ಜುಲೈ 15ರಂದು ಆಗಮಿಸಿದ್ದ. ಯಾತ್ರಿ ನಿವಾಸದದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿಗೆ ತೆರಳಿದ್ದ ಆನಂದ್ ಬಳಿಕ ನಾಪತ್ತೆಯಾಗಿದ್ದು, ಕಳೆದ 6 ದಿನಗಳಿಂದ ಆತಗಾಗಿ ಕಾರ್ಗಲ್ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆನಂದ್ ತಂದಿದ್ದ ಬ್ಯಾಗ್ ಸಿಕ್ಕಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಜೋಗ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣದಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.
ಕೊಚ್ಚಿಹೋದ ಬಾಲಕ
ಬೆಳಗಾವಿ: ಮಹಾರಾಷ್ಟ್ರದಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಅವಾಂತರ ಸೃಷ್ಟಿಸುತ್ತಿದೆ. ಮಹಾರಾಷ್ಟ್ರದ ಗಡಚರೋಲಿ ಎಂಬಲ್ಲಿ ಸಾವರ್ಜನಿಕರು ನೋಡ ನೋಡುತ್ತಿದ್ದಂತೆ ಹಳ್ಳದ ನೀರಲ್ಲಿ ಬಾಲಕನೋರ್ವ ಕೊಚ್ಚಿಹೋದ ಘಟನೆಯೂ ನಡೆದಿದೆ. ಹಳ್ಳ ದಾಟಲು ದಾವಂತದಿಂದ ಓಡಿ ಬರುತ್ತಿದ್ದ ಬಾಲಕ ಆಯತಪ್ಪಿ ನೀರಿಗೆ ಬಿದ್ದು ಅಪಘಡ ಸಂಭವಿಸಿದೆ. ಬಾಲಕ ನೀರಲ್ಲಿ ಬಿದ್ದು ಕೊಚ್ಚಿ ಹೋಗುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಪ್ರವಾಹದಲ್ಲಿ ಕೊಚ್ಚಿಹೋದ ಬಾಲಕನ ರಕ್ಷಣೆಗೆ ಸ್ಥಳೀಯರು ವಿವಿಧ ರೀತಿಯಲ್ಲಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊಚ್ಚಿ ಹೋದ ಬಾಲಕನಿಗಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಲವು ಗಂಟೆಗಳ ಕಾಲ ಹುಡುಕಾಟ ನಡೆಸಿದರೂಬಾಲಕನ ಸುಳಿವು ಸಿಕ್ಕಿಲ್ಲ.
ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ
ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಕೃಷ್ಣಾ ನದಿಯ ಒಳ ಹರಿವು ಪ್ರಮಾಣ 1.22 ಲಕ್ಷ ಕ್ಯೂಸೆಕ್ ದಾಟಿದೆ. ಮಳೆಯಿಂದಾಗಿ ಕೃಷ್ಣೆಯ ಜತೆಗೆ ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.
ಇದನ್ನೂ ಓದಿ: Karnataka Rain News: ಮಳೆ ಅನಾಹುತ; ಮನೆಗೋಡೆ ಕುಸಿದು ಇಬ್ಬರು ಕಂದಮ್ಮಗಳು ಸೇರಿ 3 ಸಾವು
ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 7 ಸೇತುವೆಗಳು ಮುಳುಗಡೆಯಾಗಿವೆ. ಇತ್ತ ನಾಗನೂರು – ಗೋಟೂರ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ. ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ನಾಗನೂರ – ಗೋಟೂರ ಸೇತುವೆ ಮುಳುಗಡೆಯಾಗಲು ಎರಡು ಅಡಿಗಳು ಮಾತ್ರ ಬಾಕಿ ಇದೆ. ಇದು ಮುಳುಗಡೆಯಾದರೆ ಮಹಾರಾಷ್ಟ್ರ ಜತೆಗಿನ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.