Site icon Vistara News

karnataka weather forecast : ರಾಜ್ಯದ ಬಹುತೇಕ ಕಡೆ ಬಿಸಿಲೇ ಹೆಚ್ಚು; ಸದ್ಯ ಮಳೆ ಸುರಿದರೂ ಬೊಗಸೆಯಷ್ಟು!

Weather Report

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್‌ ಮೊದಲ ವಾರದಲ್ಲಿ (First week of October) ಭಾರಿ ಮಳೆಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಮುಂಗಾರು ದುರ್ಬಲವಾಗಿದ್ದು, ಸದ್ಯಕ್ಕಂತೂ ಉತ್ತಮ ಮಳೆ ಕಾಣುವುದು ಕಷ್ಟ ಎಂಬ ಪರಿಸ್ಥಿತಿ ಎದುರಾಗಿದೆ. ಈ ಮೊದಲು ಕರ್ನಾಟಕದಲ್ಲಿ ಸೆಪ್ಟೆಂಬರ್‌ ಮುಗಿದ ನಂತರ ಭಾರಿ ಮಳೆಯಾಗಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ, ಈಗ ಬಂದಿರುವ ಹವಾಮಾನ ಇಲಾಖೆಯ ವರದಿಯನ್ವಯ (karnataka weather forecast) ಇನ್ನು ಎರಡು ದಿನ ರಾಜ್ಯದಲ್ಲಿ ಉತ್ತಮ ಮಳೆ ಇಲ್ಲ. ಮುಂದಿನ 24 ಗಂಟೆಯಲ್ಲಿ ಒಣ ಹವೆ ಇರಲಿದ್ದು, ಉತ್ತರ ಒಳನಾಡಿನಲ್ಲಿ ಸಾಮಾನ್ಯ ಮಳೆಯಾಗುವ (Rain News) ಸಾಧ್ಯತೆಯಿದೆ. ಉಳಿದಂತೆ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಕ್ಷಿಣ ಒಳನಾಡಿನ (South Inland) ಜಿಲ್ಲೆಯಾದ ತುಮಕೂರು, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಒಣಹವೆ ಮೇಲುಗೈ ಸಾಧಿಸುತ್ತದೆ.

ಇದನ್ನೂ ಓದಿ:‌ Sikkim Flash Flood: ಸಿಕ್ಕಿಂನಲ್ಲಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ; 23 ಯೋಧರು ನಾಪತ್ತೆ

ಉತ್ತರ ಒಳನಾಡಲ್ಲಿ ಲಘು ಮಳೆ

ಉತ್ತರ ಒಳನಾಡಿನ (North Inland) ಬೆಳಗಾವಿ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉಳಿದಂತೆ ಹಾವೇರಿ, ಗದಗ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿಯಲ್ಲಿ ಗುಡುಗು ಮಳೆ

ಕರಾವಳಿಯ (coastal Karnataka) ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಚದುರಿದ ಮಳೆ ಸುರಿಯಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಲ್ಲಿ ರಾತ್ರಿ ಮಳೆ

ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮುಂದಿನ ಎರಡು ದಿನ ಬೆಳಗ್ಗೆ ಹೊತ್ತಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರುತ್ತದೆ. ಆಗಾಗ ಬಿಸಿಲು ಬರುತ್ತದೆ. ಆದರೆ, ಸಂಜೆ ಇಲ್ಲವೇ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗಲಿದೆ. ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಗರಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಮಳೆ ಕೈಕೊಟ್ಟರೆ ಮುಂದೇನು?

ಮಳೆ ಸಂಕಟ ಇದೇ ಪ್ರಮಾಣದಲ್ಲಿ ಮುಂದುವರಿದರೆ ರಾಜ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಲಿದೆ. ಈಗಾಗಲೇ ಕಾವೇರಿ ಕೊಳ್ಳ ಸೇರಿದಂತೆ ರಾಜ್ಯದ ಬಹುತೇಕ ಕಡೆ ನೀರಿನ ಕೊರತೆಯನ್ನು ಎದುರಿಸಲಾಗುತ್ತಿದೆ. ಹಲವು ಕಡೆ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ಕೆಲವು ಕಡೆ ಈಗಲೇ ನೀರಿಗೆ ಪರದಾಟ ನಡೆಸಲಾಗುತ್ತಿದ್ದು, ಇನ್ನೂ ಸಮರ್ಪಕವಾಗಿ ಮಳೆಯಾಗದೇ ಹೋದಲ್ಲಿ ಬರುವ ಬೇಸಿಗೆಯಲ್ಲಿ ಜಲಕ್ಷಾಮ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Road Accident : ಮರಕ್ಕೆ ಡಿಕ್ಕಿ ಹೊಡೆದ ಬೈಕ್‌; ಯುವಕ ಮೃತ್ಯು; ಮೈಸೂರಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು

ಆಗಲಿದೆಯೇ ಮೋಡ ಬಿತ್ತನೆ?

ಇನ್ನು ಮಳೆ ಆಗದೇ ಹೋದಲ್ಲಿ ಮೋಡ ಬಿತ್ತನೆ ಮಾಡುವ ಚಿಂತನೆ ಇದೆ ಎಂದು ರಾಜ್ಯ ಸರ್ಕಾರ ಸಹ ಹೇಳಿದೆ. ಆದರೆ, ಮೋಡ ಬಿತ್ತನೆ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಮಾತ್ರ ಇನ್ನೂ ದೃಢವಾಗಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version