ಬೆಂಗಳೂರು: ಕುಂತರೂ ನಿಂತರೂ ಬಿಸಿಲಿನದ್ದೇ ಚಿಂತೆಯಾಗಿದೆ. ಮುಂಜಾನೆ ಸೂರ್ಯ ನೆತ್ತಿಗೆ ಬಂದರೆ ಸಾಕು ಬಿಸಿಲ ಧಗೆಗೆ ಜನರು ತತ್ತರಿಸಿ (Karnataka Weather Forecast) ಹೋಗುತ್ತಿದ್ದಾರೆ. ಸದ್ಯ ಇದೇ ವಾತಾವರಣವೂ ಭಾನುವಾರವೂ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ, ಒಳನಾಡಲ್ಲಿ ಶುಷ್ಕ ವಾತಾವರಣವೇ (Dry Weather) ಆವರಿಸಲಿದೆ.
ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯ ಕೆಲವು ಕಡೆಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿರುವ ಸಾಧ್ಯತೆ ಇದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಕಲಬುರಗಿಯಲ್ಲಿ ಬಿಸಿಲ ಧಗೆ
ರಾಜ್ಯದಲ್ಲಿ ಶುಕ್ರವಾರ ಒಣ ಹವೆ ವಾತಾವರಣ ಇತ್ತು. ಅತೀ ಗರಿಷ್ಠ ಉಷ್ಣಾಂಶ 37.8 ಡಿ.ಸೆ ಕಲಬುರಗಿಯಲ್ಲಿ ದಾಖಲಾಗಿತ್ತು ಇದರಿಂದಾಗಿ ಬಿಸಿಲ ಧಗೆ ಹೆಚ್ಚಳಗೊಂಡಿತ್ತು. ಕನಿಷ್ಠ ಉಷ್ಣಾಂಶ 15.1 ಡಿ.ಸೆ. ಮಂಡ್ಯದಲ್ಲಿ ದಾಖಲಾಗಿತ್ತು. ಕೋಲಾರಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 15.2 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಿನಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 37.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕನಿಷ್ಠ ತಾಪಮಾನ ಏರಿಕೆ
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ತುಮಕೂರು, ರಾಮನಗರ ಮತ್ತು ಬೆಳಗಾವಿ ಸೇರಿದಂತೆ ಹಾಸನ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್‌ನಿಂದ 15 ಡಿಗ್ರಿ ಸೆಲ್ಸಿಯಸ್ ಇತ್ತು. ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್; ಟೆಕ್ನಾಲಜಿ ಬಳಸಿ ವಿದ್ರೋಹಿಗಳ ಹಿಡಿಯಲು ಸಿಎಂ ಖಡಕ್ ಸೂಚನೆ
ವಿಟಮಿನ್ ಮಾತ್ರೆಗಳನ್ನು ಅತಿಯಾಗಿ ಸೇವಿಸಬೇಡಿ!
ವಿಟಮಿನ್‌ಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳು. ಶರೀರ ಆರೋಗ್ಯವಾಗಿರಲು ಮಾತ್ರವಲ್ಲ, ತನ್ನ ಕೆಲಸವನ್ನು ಮಾಡಿಕೊಳ್ಳಲು ಸಹ ಜೀವಸತ್ವಗಳ ಅಗತ್ಯವಿದೆ. ಆಹಾರದ ಮೂಲಕ ದೊರೆಯುವ ಈ ಸತ್ವಗಳು ಸಾಕಾಗದು ಎನಿಸಿದ ಬಹಳಷ್ಟು ಮಂದಿ ವಿಟಮಿನ್ ಪೂರಕಗಳನ್ನು ಸೇವಿಸುತ್ತಾರೆ. ಇದಕ್ಕೆ ವೈದ್ಯರ ಸಲಹೆ ಅಗತ್ಯ. ಪೂರಕಗಳನ್ನು ತಮ್ಮಷ್ಟಕ್ಕೆ ಇಷ್ಟ ಬಂದಂತೆ ಸೇವಿಸಿದರೆ ಸಮಸ್ಯೆಗಳಾಗಬಹುದು. ಕಾರಣ, ವಿಟಮಿನ್ ಅತಿಯಾದರೆ (Side Effects of Vitamin) ಅದಕ್ಕೂ ಅಡ್ಡಪರಿಣಾಮಗಳಿಗೆ. ಏನದು?
ಜೀವಸತ್ವಗಳಲ್ಲಿ ಕೆಲವು ನೀರಿನಲ್ಲಿ ಕರಗಬಲ್ಲಂಥವು, ಕೆಲವು ಕೊಬ್ಬಿನಲ್ಲಿ ಕರಗಬಲ್ಲವು. ನೀರಲ್ಲಿ ಕರಗಬಲ್ಲ ಸಿ ವಿಟಮಿನ್‌ನಂಥವು ಕೊಂಚ ಹೆಚ್ಚಾದರೆ ಅತಿಯಾದ ದುಷ್ಪರಿಣಾಮಗಳೇನು ಆಗುವುದಿಲ್ಲ. ಕಾರಣ, ಇವು ಹೆಚ್ಚಾದಷ್ಟು ಮೂತ್ರದಲ್ಲಿ ಹೊರಗೆ ಹೋಗಿಬಿಡುತ್ತದೆ. ಆದರೆ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್ ಎ, ಡಿ, ಇ ಮತ್ತು ಕೆ-ನಂಥವು ಸಮಸ್ಯೆಗಳು ತರಬಲ್ಲವು. ಏಕೆಂದರೆ, ದೇಹದ ಕೊಬ್ಬಿನ ಕೋಶಗಳಲ್ಲಿ ಉಳಿಯುವ ಇವನ್ನು ದೇಹದಿಂದ ವರ್ಜಿಸುವುದು ಕಷ್ಟವಾಗಿಬಿಡಬಹುದು. ಯಾವ ವಿಟಮಿನ್ ಅತಿಯಾದರೆ ಆರೋಗ್ಯದ ಮೇಲಿನ ಪರಿಣಾಮವೇನು ಎಂಬುದನ್ನು ಗಮನಿಸೋಣ.
ವಿಟಮಿನ್ ಎ
ಯಾವುದೇ ಜೀವಸತ್ವಗಳು ಆಹಾರದ ಮೂಲಕ ದೇಹ ಸೇರಿದರೆ ಹೆಚ್ಚು ಸುರಕ್ಷಿತ. ಹಾಗಲ್ಲದೆ ಪೂರಕಗಳನ್ನು ಸೇವಿಸುವಾಗ ಮಾತ್ರ ಎಚ್ಚರ ಬೇಕು. ಎ ಜೀವಸತ್ವ ಹೆಚ್ಚಾದರೆ ತಲೆನೋವು, ತಲೆಸುತ್ತು, ಹೊಟ್ಟೆ ತೊಳೆಸುವುದು, ಚರ್ಮದ ಕಿರಿಕಿರಿ, ಮೂಳೆ ಮತ್ತು ಕೀಲುಗಳಲ್ಲಿ ನೋವುಗಳು ಸಾಮಾನ್ಯವಾಗಿ ಕಂಡುಬರುವಂಥ ಅಡ್ಡ ಪರಿಣಾಮಗಳು. ಆದರೆ ವಿಪರೀತ ಹೆಚ್ಚಾದ ಪ್ರಕರಣಗಳಲ್ಲಿ, ದೃಷ್ಟಿದೋಷ, ಮೂಳೆಗಳಲ್ಲಿ ಉರಿಯೂತ, ಕೂದಲು ಉದುರುವುದು, ಚರ್ಮ ಒಣಗುವುದು, ಯಕೃತ್‌ಗೆ ಹಾನಿಯಾಗುವಂಥದ್ದು ಕಂಡು ಬರಬಹುದು.
ವಿಟಮಿನ್ ಡಿ
ಆಹಾರದ ಮೂಲಕ ಅಥವಾ ಸೂರ್ಯನ ಬೆಳಕಿನ ಮೂಲಕ ನಮ್ಮ ದೇಹ ಸೇರುವ ರೀತಿಯೇ ಸೂಕ್ತವಾದದ್ದು. ಆದರೆ ವಿಟಮಿನ್ ಡಿ ಕೊರತೆಯಾದ ಸಂದರ್ಭಗಳಲ್ಲಿ ವೈದ್ಯರ ಸೂಚನೆಯ ಮೇರೆಗೆ ಪೂರಕ ಮಾತ್ರೆಗಳನ್ನು ಸೇವಿಸಬೇಕು. ಅದಿಲ್ಲದಿದ್ದರೆ, ಹೊಟ್ಟೆ ತೊಳೆಸುವುದು, ವಾಂತಿ, ಅಶಕ್ತತೆ ಕಾಡಬಹುದು. ತೀವ್ರವಾದ ಪ್ರಕರಣಗಳಲ್ಲಿ ರಕ್ತದಲ್ಲಿ ಕ್ಯಾಲ್ಶಿಯಂ ಮಟ್ಟ ಏರುವುದು ಅಥವಾ ಕಿಡ್ನಿ ತೊಂದರೆಗಳು ಬಾಧಿಸಬಹುದು.
ಇ ಜೀವಸತ್ವ
ಈ ವಿಟಮಿನ್ ಅಧಿಕವಾದರೆ ಆಗುವ ಅಡ್ಡ ಪರಿಣಾಮಗಳು ತೀವ್ರವಾಗುವ ಸಾಧ್ಯತೆ ಹೆಚ್ಚು. ಇದು ಕಾಡುವುದು ಆಂತರಿಕ ರಕ್ತಸ್ರಾವದ ರೂಪದಲ್ಲಿ. ನೈಸರ್ಗಿಕವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯಲ್ಲಿ ಹೆಚ್ಚುವರಿ ವಿಟಮಿನ್ ಇ ಅಡ್ಡಗಾಲು ಹಾಕುತ್ತದೆ. ಇದರಿಂದ ಹೆಮೊರೇಜ್‌ಗಳ ಭೀತಿ ಹೆಚ್ಚಬಹುದು. ಇದಲ್ಲದೆ, ದುಷ್ಪರಿಣಾಮ ಸೌಮ್ಯ ಸ್ವರೂಪದಲ್ಲಿದ್ದರೆ, ವಾಂತಿ, ಡಯರಿಯ, ಹೊಟ್ಟೆ ನೋವು, ತಲೆನೋವು, ಅಲರ್ಜಿಯ ಸೂಚನೆಗಳು ಕಾಡಬಹುದು.
ವಿಟಮಿನ್ ಕೆ
ಈ ಸತ್ವವು ಹೆಚ್ಚಾಗುವ ಮಟ್ಟಿಗೆ ದೇಹ ಸೇರುವ ಸಾಧ್ಯತೆ ಉಳಿದವಕ್ಕೆ ಹೋಲಿಸಿದರೆ ಕಡಿಮೆ. ಆದಾಗ್ಯೂ ಕೆ ಜೀವಸತ್ವ ಹೆಚ್ಚಾದರೆ ಕೆಂಪುರಕ್ತಕಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಯಕೃತ್‌ಗೂ ತೊಂದರೆ ನೀಡಬಹುದು. ರಕ್ತ ನೀರಾಗುವಂಥ ಔಷಧಿ ಸೇವಿಸುವವರಲ್ಲಿ, ಈ ಔಷಧಿಯ ಪರಿಣಾಮದಲ್ಲೂ ಅಡ್ಡಗಾಲು ಹಾಕುತ್ತದೆ ಕೆ ಜೀವಸತ್ವ.
ವಿಟಮಿನ್ ಸಿ
ಈವರೆಗೆ ಹೇಳಿದ ಜೀವಸತ್ವಗಳೆಲ್ಲವೂ ಕೊಬ್ಬಿನಲ್ಲಿ ಕರಗುವಂಥವು. ಇನ್ನು ಮೇಲಿನವು ನೀರಲ್ಲಿ ಕರಗಬಲ್ಲ ಜೀವಸತ್ವಗಳು. ಆಸ್ಕಾರ್ಬಿಕ್ ಆಮ್ಲವೆಂದೂ ಕರೆಯಲಾಗುವ ಇದು ಹೆಚ್ಚಾದರೆ ಸಾಮಾನ್ಯವಾಗಿ ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ. ಈ ಮಿತಿಯನ್ನೂ ಮೀರಿ ವಿಟಮಿನ್ ಸಿ ಸೇವಿಸಿದರೆ, ಜೀರ್ಣಾಂಗಗಳ ತೊಂದರೆ ಬಾಧಿಸಬಹುದು. ಇನ್ನೂ ಹೆಚ್ಚಾದರೆ ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗಬಹುದು.
ವಿಟಮಿನ್ ಬಿ
ಇದರಲ್ಲಿ ಹಲವಾರು ವಿಟಮಿನ್‌ಗಳಿವೆ. ಒಂದೊಂದನ್ನೂ ಪ್ರತ್ಯೇಕವಾಗಿ ಹೇಳುವುದಾದರೆ- ವಿಟಮಿನ್ ಬಿ೩ ಹೆಚ್ಚಾದರೆ, ಚರ್ಮ ಕೆಂಪಾಗಿ ಬಿಸಿಯಾಗುವುದು, ಹೃದಯ ಬಡಿತ ಏರುವುದು, ವಾಂತಿ, ಯಕೃತ್‌ಗೆ ಹಾನಿ ಮತ್ತು ಜೀರ್ಣಾಂಗಗಳ ಸಮಸ್ಯೆ ಉಂಟಾಗಬಹುದು. ವಿಟಮಿನ್ ಬಿ೬ ಹೆಚ್ಚಾದರೆ, ನರಗಳಿಗೆ ಹಾನಿಯಾಗಬಹುದು, ಸ್ನಾಯುಗಳು ದುರ್ಬಲವಾಗಬಹುದು.
ಫಾಲಿಕ್ ಆಮ್ಲ ಅಥವಾ ಬಿ9 ಜೀವಸತ್ವ ಅತಿಯಾದರೆ, ವಿಟಮಿನ್ ಬಿ12 ಕೊರತೆಯನ್ನು ಮರೆಮಾಚಿಬಿಡುತ್ತದೆ. ಇದರಿಂದ ನರಗಳ ಸಮಸ್ಯೆಯೂ ತಲೆದೋರಬಹುದು. ವಿಟಮಿನ್ ಬಿ12 ವಿಪರೀತವಾದರೆ ತಲೆನೋವು, ತಲೆಸುತ್ತು, ವಾಂತಿ, ಒತ್ತಡಗಳು ಕಾಡಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ