Site icon Vistara News

Rain news: ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಸಿಲುಕಿಕೊಂಡ ನೂರಾರು ಪ್ರಯಾಣಿಕರು

rain news charamadi ghat traffic jam

ಚಿಕ್ಕಮಗಳೂರು: ಚಿಕ್ಕಮಗಳೂರು- ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ (Charmadi Ghat) ಹೆದ್ದಾರಿಯಲ್ಲಿ (Highway) ಮಳೆಯ ಪರಿಣಾಮ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಹಾಳಾಗಿ ನಿಂತುದರಿಂದ ನೂರಾರು ಪ್ರಯಾಣಿಕರು ಮಳೆಯಲ್ಲಿ (Rain news) ಸಿಲುಕಿಕೊಂಡು ಪಾಡು ಪಟ್ಟಿದ್ದಾರೆ. ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ದಾರಿ ಕಾಣದೆ ವಾಹನ ಸವಾರರು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದುದರಿಂದ ಟ್ರಾಫಿಕ್‌ ಜಾಮ್‌ (Traffic jam) ಉಂಟಾಯಿತು. ಜೊತೆಗೆ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳು ಕೆಟ್ಟು ನಿಂತ ಪರಿಣಾಮ, ವಾಹನಗಳು ಅತ್ತಿತ್ತ ಹೋಗಲಾಗದೆ ಪ್ರಯಾಣಿಕರು ಬವಣೆ ಅನುಭವಿಸಿದರು.

ಚಾರ್ಮಾಡಿ ಘಾಟಿನ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಮಳೆಯ ನಡುವೆ KSRTC ಬಸ್ಸುಗಳೆರಡು ಕೆಟ್ಟು ರಸ್ತೆ ಮಧ್ಯದಲ್ಲಿ ನಿಂತವು. ಬಸ್ಸುಗಳು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‌ಗಳಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಯಿತು. ಹೀಗಾಗಿ ಬೆಳಗಿನ ಜಾವದಿಂದ ನೂರಾರು ವಾಹನಗಳು ನಿಂತಲ್ಲೇ ನಿಂತವು. ನಿರಂತರ ಮಳೆಯಲ್ಲಿ ಪ್ರಯಾಣಿಕರು ಬಾಕಿಯಾದರು. ಮಂಗಳೂರಿಗೆ ರೋಗಿಯನ್ನು ಒಯ್ಯುತ್ತಿದ್ದ ಒಂದು ಆಂಬ್ಯುಲೆನ್ಸ್ ಟ್ರಾಫಿಕ್ ನಡುವೆ ಸಿಲುಕಿಕೊಂಡಿತು. ಟ್ರಾಫಿಕ್ ಕ್ಲಿಯರ್ ಮಾಡಲು ಬಣಕಲ್, ಮೂಡಿಗೆರೆ ಪೊಲೀಸರು ಹರಸಾಹಸಪಟ್ಟರು.

ಚಿಕ್ಕಮಗಳೂರು ಜಿಲ್ಲೆಯ ಹಲವಡೆ ಮಳೆಯ ಆರ್ಭಟ ಮುಂದುವರಿದಿದೆ. ಚಿಕ್ಕಮಗಳೂರು, ಕೊಪ್ಪ, ಕಡೂರು, ಕಳಸಾಪುರ, ಪಂಚನಹಳ್ಳಿ, ಬೀರೂರು, ಶಿವನಿ, ಬೆಳವಾಡಿ, ಮೂಡಿಗೆರೆ, ಹಿರೇನಲ್ಲೂರು, ಚಿಕ್ಕನಲ್ಲೂರು, ಭಾಗದಲ್ಲಿ ಭಾರಿ ಮಳೆಯಾಗಿದ್ದು, ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಸ್ಥಗಿತವಾಗಿದೆ.

ಚಿಕ್ಕಮಗಳೂರು ತಾಲೂಕಿನ ಈಶ್ವರಹಳ್ಳಿ ಗ್ರಾಮದಲ್ಲಿ ರೈತ ಬಸವರಾಜು ಎಂಬವರಿಗೆ ಸೇರಿದ 4 ಎಕರೆ ಬಾಳೆ ತೋಟ ಭಾರಿ ಗಾಳಿ ಮಳೆಗೆ ನೆಲಕಚ್ಚಿದೆ. ಕೇವಲ ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರಬೇಕಿದ್ದ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿ ರೈತ ಕಂಗಾಲಾಗಿದ್ದಾರೆ

ಚಿಕ್ಕಮಗಳೂರಿನ ಬಯಲು ಸೀಮೆ ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ರಾತ್ರಿಯಿಡೀ ಸುರಿದ ಮಳೆಗೆ ಹೊಂಗೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಅಜ್ಜಂಪುರ ತಾಲೂಕಿನ ಐತಿಹಾಸಿಕ ಶಿವನಿ ಕೆರೆಗೆ ಭಾರಿ ಪ್ರಮಾಣದ ನೀರು ಬಂದಿದೆ. ಹೊಂಗೆ ಹಳ್ಳದ ಸುತ್ತಮುತ್ತಲಿನ ಕೆಲವು ತೋಟಗಳು ಜಲಾವೃತವಾಗಿವೆ. ಸೇತುವೆ ರಸ್ತೆಯ ಮೇಲೆ ಹಳ್ಳದ ನೀರು ಹರಿಯಿತು.

ದೇವಾಲಯದ ಶಿಖರಕ್ಕೆ ಸಿಡಿಲು

Tourist boat capsizes

ಯಾದಗಿರಿ: ಜಿಲ್ಲೆಯ ದೋರನಹಳ್ಳಿ ಗ್ರಾಮದ ಶ್ರೀ ಪರಮಾನಂದೇಶ್ವರ ದೇವಸ್ಥಾನದ ಶಿಖರಕ್ಕೆ ಸಿಡಿಲು ಅಪ್ಪಳಿಸಿದ್ದು, ಮೇಲ್ಭಾಗದಿಂದ ಕೆಳಭಾಗದವರಗೆ ಹಾನಿಯಾಗಿದೆ. ದೇವಸ್ಥಾನದಲ್ಲಿ ಮಲಗಿದ್ದ ವೃದ್ಧೆ ಅಪಾಯದಿಂದ ಪಾರಾಗಿದ್ದಾರೆ.

ತುಮಕೂರು: ತುಮಕೂರು ‌ಜಿಲ್ಲೆಯಲ್ಲಿ‌ ತಡರಾತ್ರಿ ಮಳೆ ಅಬ್ಬರಕ್ಕೆ ಹೆಚ್ ಬೈರಾಪುರ ಗ್ರಾಮದ ಎರಡು ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೆಚ್ ಬೈರಾಪುರ ಗ್ರಾಮದ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡಿದರು.

Tourist boat capsizes

ತುಮಕೂರು ಜಿಲ್ಲೆಯ ಶಿರಾ ನಗರದ 18ನೇ ವಾರ್ಡ್‌ನ ಕೆಲ ಮನೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದೆ. ವಾಣಿಜ್ಯ ಮಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು, ಮನೆಯೊಳಗಿದ್ದ ಅಪಾರ ಪ್ರಮಾಣದ ಧವಸ ಧಾನ್ಯ, ಪೀಠೋಪಕರಣಗಳು ನೀರು ಪಾಲಾಗಿವೆ. ಶಿರಾ ನಗರಸಭೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ 18ನೇ ವಾರ್ಡ್ ಜನ ಆಕ್ರೋಶಿಸಿದ್ದಾರೆ.

ಮಗುಚಿದ ಬೋಟ್‌, ಪ್ರಯಾಣಿಕರ ರಕ್ಷಣೆ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಸಮೀಪ ಪ್ರವಾಸಿ ಬೋಟ್ ಪಲ್ಟಿಯಾಗಿದ್ದು, ಸಮುದ್ರದ ಹಿನ್ನೀರಿನಲ್ಲಿ ಮಗುಚಿದ ಪ್ರವಾಸಿಗರ ಬೋಟ್‌ನಿಂದ 40 ಪ್ರವಾಸಿಗರನ್ನು ರಕ್ಷಣೆ ಮಾಡಲಾಯಿತು.

Tourist boat capsizes

ಅಳಿವೆ ಸಂಗಮ ಸ್ಥಳದಿಂದ ತುಸು ದೂರದಲ್ಲಿ ಘಟನೆ ನಡೆದಿದ್ದು, ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ರಕ್ಷಣಾ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು. ಮೂಡಂಗಿಯ ಗಣೇಶ, ರಮೇಶ ಎನ್ನುವವರಿಗೆ ಸೇರಿದ ಪ್ರವಾಸಿ ಬೋಟ್ ಇದಾಗಿದ್ದು, ನಿಗದಿಗಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿ ಹತ್ತಿಸಿಕೊಂಡಿದ್ದರಿಂದ ಮಗುಚಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Karnataka Weather : ವರ್ಷಾಘಾತಕ್ಕೆ ಜನ ಸುಸ್ತು; ಮಳೆಯಾಟಕ್ಕೆ ಬಿರುಗಾಳಿ ಸಾಥ್‌

Exit mobile version