Site icon Vistara News

Weather Report : ಸೆಪ್ಟೆಂಬರ್‌ ಮೊದಲ ವಾರ ಅಲ್ಪಾವಧಿ ಮಳೆಯಷ್ಟೇ!

Rain alert For karnataka

ಬೆಂಗಳೂರು: ರಾಜ್ಯದಲ್ಲಿ ಬುಧವಾರ ನೈರುತ್ಯ ಮುಂಗಾರು (Southwest Monsoon) ದುರ್ಬಲವಾಗಿತ್ತು. ಒಂದೆರಡು ಸ್ಥಳಗಳಲ್ಲಿ ಮಳೆಯಾಗಿರುವ (Rain News) ವರದಿ ಆಗಿದೆ. ಈಗಾಗಲೇ ಹವಾಮಾನ ಇಲಾಖೆ ಸೆಪ್ಟೆಂಬರ್‌ 7ರವರೆಗೆ ಕರ್ನಾಟಕದಲ್ಲಿ ಮಳೆಯು ಸಾಧಾರಣವಾಗಿರಲಿದೆ ಎಂದು ಮುನ್ಸೂಚನೆಯನ್ನು (Weather report) ನೀಡಿದೆ. ಸೆಪ್ಟೆಂಬರ್ 8 ರಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಸೆಪ್ಟೆಂಬರ್‌ 1ರಂದು ದಕ್ಷಿಣ ಒಳನಾಡಿನಲ್ಲಿ ಲಘು ಮಳೆಯಾದರೆ, ಉತ್ತರ ಒಳನಾಡು ಹಾಗೂ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಹಗುರ ಮಳೆಯಾಗಬಹುದು. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Marriage for rain: ಮಳೆಗಾಗಿ ಪುಟ್ಟ ಮಕ್ಕಳಿಗೇ ಮದುವೆ ಮಾಡಿಸಿದ ಗ್ರಾಮಸ್ಥರು; ಅದ್ಸರಿ ಈ ದಂಪತಿ ಮುಂದಿನ ಕಥೆಯೇನು?

ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಹಗುರ ಮಳೆಯಾಗಬಹುದು. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆ ಹಗುರದಿಂದ ಸಾಧಾರಣವಾಗಿ ಮಳೆ ಆಗಬಹುದು. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಚದುರಿದಂತಿದ್ದು, ಬಳ್ಳಾರಿ, ವಿಜಯನಗರ, ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆಯಾಗಲಿದೆ. ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತಿ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ.

ಗುರುವಾರ ಹಲವೆಡೆ ತಂಪೆರೆದ ವರುಣ

ಚಿಕ್ಕಬಳ್ಳಾಪುರದಲ್ಲಿ ಗುರುವಾರದಂದು ಮಳೆ ಸುರಿದಿದೆ. ಚಿಂತಾಮಣಿ ತಾಲೂಕಿನಾದ್ಯಂತ ಮಳೆಯ ಅಬ್ಬರ ಜೋರಾಗಿತ್ತು. ಕಳೆದ ಎರಡು ತಿಂಗಳಿನಿಂದ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಬಿತ್ತನೆ ಮಾಡಿ ಮಳೆ ಇಲ್ಲದೆ ರಾಗಿ ಬೆಳೆ ನೆಲಕಚ್ಚಿತ್ತು. ಅರೆಬರೆ ಬಿತ್ತನೆ ಮಾಡಿದ್ದ ರಾಗಿ ಬೆಳೆಗೆ ವರುಣ ಜೀವ ತಂದಿದ್ದಾನೆ. ಧಾರವಾಡದಲ್ಲೂ ಮಳೆಯ ಸಿಂಚನವಾಗಿದೆ. ರೈತರು ಕಳೆದ ಒಂದು ತಿಂಗಳಿಂದ ಮಳೆಗೆ ಎದುರು ನೋಡುತ್ತಿದ್ದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version