Site icon Vistara News

Skin care Foods | ತ್ವಚೆಯ ಕಾಂತಿ ವೃದ್ಧಿಗಾಗಿ ಈ ಆಹಾರ ತಪ್ಪದೇ ಸೇವಿಸಿ

skin care foods

ಸುಂದರವಾಗಿ ಕಾಣಬೇಕೆಂಬುದು ಎಲ್ಲಾ ಹುಲುಮಾನವರ ಸಹಜ ಬಯಕೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ಕ್ರೀಮು, ಸೋಪು, ಬಣ್ಣ-ಬೇಗಡೆ… ಎಲ್ಲಾ ತಂದು ಪ್ರಯತ್ನಿಸುವುದು ವಾಡಿಕೆ. ಹೇಗಾದರೂ ಮಾಡಿ ನಮ್ಮ ಚರ್ಮವನ್ನು ನಯವಾಗಿಸಿ, ಹೊಳಪಾಗಿಸಿ, ಗೌರ ವರ್ಣಕ್ಕೆ ತಂದು, ಆಗಿದ್ದಕ್ಕಿಂತ ನಾಲ್ಕಾರು ವರ್ಷ ಚಿಕ್ಕವರಂತೆ ಕಂಡರೆ ನಮ್ಮ ಶ್ರಮ ಸಾರ್ಥಕ ಎಂದುಕೊಳ್ಳುತ್ತೇವೆ. ಇಷ್ಟೆಲ್ಲಾ ಕಸರತ್ತು ಮಾಡುವಾಗ ನಾವು ಒಂದು ವಿಷಯವನ್ನು ಅವಶ್ಯ ಮರೆತಿರುತ್ತೇವೆ. ನಮ್ಮ ಚರ್ಮದ ಆರೋಗ್ಯಕ್ಕೆ ಬೇಕಾದ್ದು ದೊರೆಯುವುದು ಮಾರುಕಟ್ಟೆಯ ದುಬಾರಿ ಕ್ರೀಮುಗಳಲ್ಲಲ್ಲ, ನಮ್ಮ ಆಹಾರದಲ್ಲಿ. ಪೌಷ್ಟಿಕ ಮತ್ತು ಸಮತೋಲಿತ ಆಹಾರದಿಂದ ಖಂಡಿತವಾಗಿ ನಮ್ಮ ತ್ವಚೆಯ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಅವಕಾಡೊ/ಬೆಣ್ಣೆ ಹಣ್ಣು: ಆರೋಗ್ಯಕರ ಕೊಬ್ಬನ್ನು ವಿಪರೀತ ಪ್ರಮಾಣದಲ್ಲಿ ಹೊಂದಿರುವ ಈ ಹಣ್ಣು, ಚರ್ಮವೂ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಅತ್ಯಂತ ಲಾಭದಾಯಕ. ವಿಟಮಿನ್‌ ಇ ಜೀವಸತ್ವದ ಖನಿಯಂತಿರುವ ಈ ಆಹಾರ, ಅತ್ಯುತ್ತಮ antioxidant. ಹಾಗಾಗಿ ತ್ವಚೆಯಲ್ಲಿರುವ ನೆರಿಗೆಗಳನ್ನು ಕಡಿಮೆ ಮಾಡಿ, ತೇವವನ್ನು ಹಿಡಿದಿಡುವಲ್ಲಿ ಸಹಕಾರಿಯಾಗುತ್ತದೆ. ಮಾತ್ರವಲ್ಲ, ಸೂರ್ಯನ ಅತಿನೇರಳೆ ಕಿರಣಗಳಿಂದ ಚರ್ಮಕ್ಕೆ ಉಂಟಾಗುವ ಹಾನಿಯಿಂದಲೂ ರಕ್ಷಿಸುತ್ತದೆ.

ಮೀನುಗಳು: ಬಂಗುಡೆ, ಸೋದಿಯಂಥ ಕೆಲವು ಮೀನುಗಳು ಹೇರಳವಾಗಿ ಒಮೇಗಾ ೩ ಫ್ಯಾಟಿ ಆಮ್ಲಗಳನ್ನು ಹೊಂದಿದ್ದು, ಚರ್ಮ ಸುಕ್ಕಾಗುವುದನ್ನು ತಡೆಯುತ್ತವೆ. ಇ ಜೀವಸತ್ವ ಮತ್ತು ಜಿಂಕ್‌ ಸಹ ಸಾಕಷ್ಟು ಪ್ರಮಾಣದಲ್ಲಿ ಈ ಆಹಾರದಲ್ಲಿ ಲಭ್ಯವಿದ್ದು, ಸಂಪೂರ್ಣ ದೇಹಾರೋಗ್ಯಕ್ಕೆ ಲಾಭದಾಯಕ. ಉತ್ತಮ ಪ್ರೊಟೀನ್‌ ಸಹ ಇರುವ ಈ ಆಹಾರದಿಂದ ಉರಿಯೂತವನ್ನು ಶಮನಗೊಳಿಸಲು ಸಾಧ್ಯವಿದೆ.

ವಾಲ್‌ನಟ್: ಸಸ್ಯಾಹಾರಿಗಳಿಗೆ ಇರುವ ಕೆಲವೇಕೆಲವು ಒಮೇಗಾ ೩ ಫ್ಯಾಟಿ ಆಮ್ಲಗಳನ್ನು ಮೂಲಗಳಲ್ಲಿ ಇದೂ ಒಂದು. ಸೋರಿಯಾಸಿಸ್‌ ರೀತಿಯ ಚರ್ಮ ರೋಗಗಳಿಗೆ ವೈದ್ಯೋಪಚಾರದ ಜೊತೆಗೆ ಇಂಥ ಆಹಾರಗಳೂ ನೆರವಾಗಬಲ್ಲವು. ಇದಲ್ಲದೆ, ಜಿಂಕ್‌ ಮತ್ತು ವಿಟಮಿನ್‌ ಇ ಹೊಂದಿರುವ ಈ ನಟ್‌ಗಳು ಉತ್ತಮ ಪ್ರೊಟೀನ್‌ ಮೂಲವೂ ಹೌದು. ಸೂರ್ಯಕಾಂತಿ ಬೀಜ, ಅಗಸೆ ಬೀಜದಂಥ ಬಹುತೇಕ ಎಣ್ಣೆ ಬೀಜ ಮತ್ತು ನಟ್‌ಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಮತ್ತು ತ್ವಚೆಯ ಸೌಂದರ್ಯಕ್ಕೆ ಕೊಡುಗೆ ನೀಡಬಲ್ಲವು.‌

ಇದನ್ನೂ ಓದಿ | Skin care | ಮಳೆಗಾಲದಲ್ಲಿ ನಿಮ್ಮ ಚರ್ಮದ ಮೇಲೆ ಈ ಐದು ತಪ್ಪುಗಳನ್ನು ಮಾಡಲೇಬೇಡಿ!

ಸಿಹಿ ಗೆಣಸು: ಬೀಟಾ ಕ್ಯಾರೋಟಿನ್‌ ಇರುವ ಇಂಥ ಎಲ್ಲಾ ಆಹಾರಗಳು ನಮ್ಮ ಚರ್ಮದ ಕಾಂತಿಗೆ ನೆರವಾಗಬಲ್ಲವು. ಕ್ಯಾರೆಟ್‌, ಬೀಟ್‌ರೂಟ್‌, ಪಾಲಕ್‌ ಮುಂತಾದ ವಿಟಮಿನ್‌ ಎ ಹೇರಳವಾಗಿರುವ ಎಲ್ಲಾ ಆಹಾರಗಳನ್ನು ಈ ಸಾಲಿಗೆ ಸೇರಿಸಬಹುದು. ಸೂರ್ಯನ ಕಿರಣಗಳಿಂದ ಉಂಟಾಗುವ ಒಣ ಚರ್ಮ, ಸುಕ್ಕು ಮುಂತಾದ ತೊಂದರೆಗಳ ನಿವಾರಣೆಗೆ ಇವು ಬೇಕೆಬೇಕು.

ಟೊಮೇಟೊ, ಬ್ರೊಕೊಲಿ ಇತ್ಯಾದಿ: ವಿಟಮಿನ್‌ ಸಿ ವಿಫುಲವಾಗಿರುವ ಆಹಾರಗಳನ್ನು ಈ ಸಾಲಿಗೆ ಸೇರಿಸಬಹುದು. ಲೈಕೋಪೇನ್‌ನಂಥ ಕೆರೋಟಿನಾಯ್ಡ್‌ಗಳ ಆಗರವಾಗಿರುವ ಟೊಮೇಟೊ ಮತ್ತು ಬ್ರೊಕೊಲಿಗಳು ಚರ್ಮದಲ್ಲಿರುವ ಕೊಲಾಜಿನ್‌ ಪ್ರಮಾಣವನ್ನು ಹೆಚ್ಚಿಸಿ, ತ್ವಚೆಯ ಯೌವನ ಮರುಕಳಿಸುವಂತೆ ಮಾಡುತ್ತವೆ. ಬ್ರೊಕೊಲಿಯಲ್ಲಿರುವ ಸಲ್ಫೊರಾಫೆನ್‌ ಎಂಬ ವಿಶೇಷ ಅಂಶ, ಚರ್ಮದ ಕ್ಯಾನ್ಸರ್‌ ತಡೆಗಟ್ಟುವಲ್ಲೂ ಸಹಕಾರಿ. ಚರ್ಮದ ಹೊಳಪು ಹೆಚ್ಚಿಸುವಲ್ಲಿ ವಿಟಮಿನ್‌ ಸಿ ಪಾತ್ರ ಗಮನಾರ್ಹ.

ಸೋಯಾ: ಐಸೋಪ್ಲೆವನ್ಸ್‌ ಹೇರಳವಾಗಿರುವ ಈ ಆಹಾರ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಉಪಕಾರಿ. ಅತಿನೇರಳೆ ಕಿರಣಗಳ ಪ್ರಭಾವವನ್ನು ತಗ್ಗಿಸಿ, ಚರ್ಮದ ಕ್ಯಾನ್ಸರ್‌ ತಡೆಯಲು ನೆರವಾಗುತ್ತದೆ. ತ್ವಚೆಯ ಹಿಗ್ಗುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿ, ಕೊಲಾಜಿನ್‌ ವೃದ್ಧಿಸುತ್ತದೆ.

ಇದನ್ನೂ ಓದಿ | Korean Beauty Trend: ಗ್ಲಾಸ್‌ ಸ್ಕಿನ್ ಲುಕ್‌ ಹಿಂದೆ ಬಿದ್ದ ಹುಡುಗಿಯರು

Exit mobile version