Site icon Vistara News

Celebrity Beauty Tips: ಮನೆಮದ್ದುಗಳಲ್ಲೇ ಇದೆ ಬಾಲಿವುಡ್ ಸೆಲೆಬ್ರಿಟಿ ಸೌಂದರ್ಯದ ಗುಟ್ಟು!

celebrities beauty tips

ಸೆಲೆಬ್ರಿಟಿಗಳು ಹೇಗೆ ತಮ್ಮ ಚರ್ಮ, ಕೂದಲಿನ ಪಾಲನೆ ಪೋಷಣೆಯನ್ನು (Celebrity Beauty Tips) ದಿನನಿತ್ಯ ಮಾಡುತ್ತಾರೆ? ಅವರೂ ನಮ್ಮಂತೆ ದಿನನಿತ್ಯ ಬಳಕೆಯ ಅಡುಗೆಮನೆಯ ವಸ್ತುಗಳಿಂದ ಮನೆಯಲ್ಲೇ ಮಾಡಿಕೊಳ್ಳಬಹುದಾದ ವಸ್ತುಗಳನ್ನು ಬಳಸುತ್ತಾರೋ ಅಥವಾ ತಾವೇ ಜಾಹೀರಾತುಗಳಲ್ಲಿ, ಇದನ್ನು ಬಳಸಿ ಎಂದು ಪೋಸು ಕೊಟ್ಟ ವಸ್ತುಗಳನ್ನೆಲ್ಲ ಬಳಸುತ್ತಾರಾ ಎಂಬ ಕುತೂಹಲ ಸಹಜವಾಗಿ ಅವರ ಅಭಿಮಾನಿಗಳಲ್ಲಿ ಇರುವುದು ಸಹಜ. ಹಾಗಾಗಿಯೇ ಇಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳಾದ ಆಲಿಯಾ ಭಟ್‌ರಿಂದ (Alia Bhat) ಹಿಡಿದು ಪ್ರಿಯಾಂಕ ಛೋಪ್ರಾವರೆಗೆ (Priyanka Chopra) ತಮ್ಮ ಸೌಂದರ್ಯಕ್ಕೆ ಮನೆಮದ್ದುಗಳ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಪ್ರಿಯಾಂಕ ಛೋಪ್ರಾ ಹೆಚ್ಚಾಗಿ ಮಾಡುವುದು ಮೊಸರಿನ ಫೇಶಿಯಲ್‌ ಅಂತೆ. ನನಗೆ ಫ್ರೆಶ್‌ ಫೀಲ್‌ ಬೇಕಾದರೆ, ಒಂದಿಷ್ಟು ಮೊಸರಿಗೆ ಎರಡು ಚಮಚ ಓಟ್‌ ಮೀಲ್‌ ಸೇರಿಸಿ ಅದಕ್ಕೆ ಸ್ವಲ್ಪ ಅರಶಿಣ ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯುತ್ತೇನೆ. ಇದು ಮುಖಕ್ಕೆ ಫಟಾಫಟ್‌ ಹೊಳಪು ನೀಡುತ್ತದಲ್ಲದೆ ಫ್ರೆಶ್‌ ಫೀಲ್‌ ಕೊಡುತ್ತದೆ. ಎನ್ನುತ್ತಾರೆ ಪ್ರಿಯಾಂಕ.

ಸೋನಂ ಕಪೂರ್‌ ಅಹುಜಾಗೆ ತೆಂಗಿನೆಣ್ಣೆ ಎಂದರೆ ಭಾರೀ ಇಷ್ಟವಂತೆ. ಭಾರತೀಯರ ಮನೆಯಲ್ಲಿ ತೆಂಗಿನೆಣ್ಣೆಯಿಲ್ಲದೆ, ಅದರ ನಾನಾ ಉಪಯೋಗಗಳನ್ನು ಪಡೆಯದೆ ಇರುವ ಮನೆಯೇ ಇರಲಿಕ್ಕಿಲ್ಲ ಎನ್ನುವ ಅವರು, ಇಂದಿಗೂ ತಲೆಗೆ ತೆಂಗಿನೆಣ್ಣೆಯಿಂದ ಮಸಾಜ್‌ ಮಾಡಿಕೊಂಡು ಒಂದೆರಡು ಗಂಟೆ ಬಿಟ್ಟು ಸ್ನಾನ ಮಾಡುವುದು ಅಭ್ಯಾಸ ಎನ್ನುತ್ತಾರೆ. ತೆಂಗಿನೆಣ್ಣೆ ಕೇವಲ ತಲೆಗಷ್ಟೇ ಅಲ್ಲ, ಬಹಳಷ್ಟು ಕಡೆ ನಾನು ಬಳಸಿಕೊಳ್ಳುತ್ತೇನೆ ಎನ್ನುವ ಅವರು, ಬಹಳ ಸಾರಿ ಲಿಪ್‌ ಸ್ಟಿಕ್ಕಿನ ಜೊತೆಯೂ ಬಳಸುತ್ತೇನೆ. ತೆಂಗಿನೆಣ್ಣೆಯನ್ನು ತುಟಿಗೆ ಹಚ್ಚಿಕೊಂಡು ಮತ್ತೆ ಲಿಪ್‌ಸ್ಟಿಕ್‌ ಬಳಸುತ್ತೇನೆ. ಇನ್ನೂ ಬಹಳ ಸಾರಿ ನಾನು ಹುಬ್ಬಿಗೆ ರೆಪ್ಪೆಕೂದಲಿಗೂ ತೆಂಗಿನೆಣ್ಣೆ ಹಚ್ಚಿಕೊಳ್ಳುತ್ತೇನೆ ಎನ್ನುತ್ತಾರೆ.

ಇನ್ನು ಕರೀನಾ ಕಪೂರ್‌ ಖಾನ್‌ ಕೂಡಾ ಇಂಥ ತಲೆತಲಾಂತರದಿಂದ ಬಂದ ಸೌಂದರ್ಯ ಸಲಹೆಗಳನ್ನೇ ಮನೆಯಲ್ಲಿ ಹೆಚ್ಚು ಪಾಲಿಸುತ್ತಾರಂತೆ. ಅವರಿಗೆ ಶ್ರೀಗಂಧವನ್ನು ಮುಖಕ್ಕೆ ಲೇಪಿಸಿಕೊಳ್ಳುವುದು ಬಹಳಷ್ಟು ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ ಎಂಬ ನಂಬಿಕೆ. ಅಷ್ಟೇ ನಂಬಿಕೆ ಜೇನುತುಪ್ಪದ ಮೇಲೂ ಇದೆಯಂತೆ. ಒಂದು ಚಮಚ ಜೇನುತುಪ್ಪವನ್ನು ಮುಖಕ್ಕೆ ಲೇಪಿಸಿಕೊಂಡು ಚೆನ್ನಾಗಿ ಮಸಾಜ್‌ ಮಾಡಿಕೊಂಡು ಆಮೇಲೆ ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಂಡರೆ ಮುಖದ ಚರ್ಮ ನಯವಾಗುತ್ತದೆ. ನಾನು ಆಗಾಗ ಇದನ್ನು ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ.

ಇನ್ನು ಆಲಿಯಾ ಭಟ್‌ ಕೂಡಾ ಇಂಥ ನಂಬಿಕೆಗಳಿಂದ ದೂರ ಇಲ್ಲ. ಆಕೆಯೂ ಕೂಡಾ ಅತಿ ಹೆಚ್ಚು ಸೌಂದರ್ಯ ಸಾಧನಗಳನ್ನು ಮುಖಕ್ಕೆ ಬಳಸಿ ಮುಖಕ್ಕೇ ಕನ್‌ಫ್ಯೂಸ್‌ ಆಗುವಂತೆ ನಡೆದುಕೊಳ್ಳುವುದಿಲ್ಲ. ಮುಖದ ಚರ್ಮ ಉಸಿರಾಡಲು ಬಿಡಬೇಕು ಎಂದು ಹೇಳುತ್ತಾರೆ. ಆಲಿಯಾಗೆ ಮುಲ್ತಾನಿ ಮಿಟ್ಟಿ ಪ್ರಿಯವಂತೆ. ತಾನು ಹೆಚ್ಚಾಗಿ ಮನೆಯಲ್ಲಿ ಮುಲ್ತಾನಿ ಮಿಟ್ಟಿಯನ್ನು ಫೇಸ್‌ಪ್ಯಾಕ್‌ ಆಗಿ ಬಳಸುತ್ತೇನೆ. ಇದರಿಂದ ಮೊಡವೆ, ಕಪ್ಪುಕಲೆಗಳಂತ ಸಮಸ್ಯೆಗಳಿದ್ದರೆ ಪರಿಹಾರ ಸಿಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: Mothers Day Special: ಮದರ್ಸ್ ಡೇ ಹಿನ್ನೆಲೆ; ಅಮ್ಮಂದಿರಿಗೆ ಬ್ಯೂಟಿ ಪ್ಯಾಕೇಜ್‌ಗಳ ಸುರಿಮಳೆ

ವಯಸ್ಸು 54 ಆದರೂ ಇಂದಿಗೂ ತನ್ನ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಂಡಿರುವ ಒಂದು ಕಾಲದ ಬಾಲಿವುಡ್‌ ಕ್ವೀನ್‌ ಮಾಧುರಿ ದೀಕ್ಷಿತ್‌ ಕೂಡಾ ತನ್ನ ಅಡುಗೆ ಮನೆಯ ದಿನನಿತ್ಯದ ಬಳಕೆಯ ವಸ್ತುಗಳಲ್ಲೇ ಸೌಂದರ್ಯದ ಗುಟ್ಟು ಅಡಗಿದೆ ಎನ್ನುತ್ತಾರೆ. ಆಕೆ ಬಹುಕಾಲದಿಂದ ಬಳಸುವುದು ಕಡಲೆ ಹಿಟ್ಟು. ಕಡಲೆ ಹಿಟ್ಟಿಗೆ ಸ್ವಲ್ಪ ನಿಂಬೆರಸ, ಸ್ವಲ್ಪ ಜೇನು ಸೇರಿಸಿಕೊಂಡು ಕಲಸಿ ಮುಖಕ್ಕೆ ಬಹಳ ಉತ್ತಮ. ನಾನು ಹೆಚ್ಚಾಗಿ ಮನೆಯಲ್ಲಿದ್ದಾಗ ಇದನ್ನು ಮಾಡಿಕೊಳ್ಳುತ್ತೇನೆ. ಇದಲ್ಲದೆ, ಸೌತೆಕಾಯಿಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಅದನ್ನು ಹಾಲಿನಲ್ಲಿ ಮುಳುಗಿಸಿ ಇಟ್ಟುಕೊಳ್ಳುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ ಎನ್ನುತ್ತಾರೆ.

ಜಾಹ್ನವಿ ಕಪೂರ್‌ಗಂತೂ ಈ ವಿಚಾರದಲ್ಲಿ ಬಹಳಷ್ಟು ನೆನಪುಗಳಿವೆ. ಅಮ್ಮ ನಟಿ ಶ್ರೀದೇವಿ ಪ್ರತಿ ಮೂರು ದಿನಗಳಿಗೊಮ್ಮೆ, ತನಗೂ, ತಂಗಿ ಖುಷಿಗೂ ಮನೆಯಲ್ಲೇ ನೆಲ್ಲಿಕಾಯಿ ಹಾಗೂ ಒಣಹೂವುಗಳಿಂದ ಮಾಡಿದ ಎಣ್ಣೆಯಿಂದ ತಲೆಗೆ ಚೆನ್ನಾಗಿ ಮಸಾಜ್‌ ಮಾಡುತ್ತಿದ್ದಳು ಎನ್ನುತ್ತಾರೆ.‌

ಇದನ್ನೂ ಓದಿ:Saiee Manjrekar: ಇಲ್ಲಿದೆ ಸಾಯಿ ಮಂಜ್ರೇಕರ್ ಬ್ಯೂಟಿಫುಲ್‌ ಕ್ಲಾಥಿಂಗ್ಸ್‌

Exit mobile version