ಅಮ್ಮ ಮತ್ತು ಮಗುವಿನ ಸಂಬಂಧವೇ ಹಾಗೆ. ಭೂಮಿಯ ಮೇಲೆ ಸಿಗುವ ಅಪರೂಪದ ಬಂಧವಿದು. ನವಮಾಸ ಹೊತ್ತು ಹೆತ್ತ ಜೀವಕ್ಕೂ ಕರುಳ ಬಳ್ಳಿಗೂ ಇರುವ ಸಂಬಂಧ ಮತ್ತೆ ಎದೆಹಾಲಿನ ಮೂಲಕ ಇನ್ನೂ ಗಟ್ಟಿಯಾಗುತ್ತದೆ. ಅಮ್ಮನ ಮಡಿಲಲ್ಲಿ ಬೆಚ್ಚಗೆ ಕೂತು ಹಾಲು ಕುಡಿವ ಮಗು ಅನುಭವಿಸುವ ಲೋಕವೇ ದಿವ್ಯವಾದದ್ದು. ಅದಕ್ಕೇ ಅಮ್ಮನೆಂಬ ಭಾವವೇ ಪರಮ ಪವಿತ್ರವಾದದ್ದು!
ಗರ್ಭಾವಸ್ಥೆಯಿಂದಲೇ ಆರಂಭವಾಗುವ ಅಮ್ಮ ಮಗುವಿನ ಸಂಬಂಧಕ್ಕೆ ಭಾಷ್ಯ ಬರೆಯುವುದು ಈ ಸ್ತನ್ಯಪಾನ. ಬಹುತೇಕ ಸಕಲ ಜೀವ ಜಂತುಗಳಲ್ಲೂ ಇರುವ ಈ ಅಮ್ಮನೆಂಬ ಭಾವ, ಪ್ರೀತಿ, ಪಾತ್ಸಲ್ಯ ಅನುಪಮವಾದದ್ದು. ಗರ್ಭದಿಂದ ಹೊರ ಪ್ರಪಂಚಕ್ಕೆ ಕಾಲಿಟ್ಟರೂ ಮಗು ಆರೋಗ್ಯವಾಗಿ, ರೋಗ ರುಜಿನಗಳ ಬಾಧೆಯಿಲ್ಲದೆ ಬೆಳೆಯುವುದು ಇದೇ ಅಮ್ಮನ ಎದೆಹಾಲಿನಿಂದ. ಈ ಎದೆಹಾಲೆಂಬ ಅಮೃತ ಕೇವಲ ಹೊಟ್ಟೆತುಂಬಿಸುವ ಆಹಾರವಷ್ಟೇ ಅಲ್ಲ. ಇಬ್ಬರ ನಡುವಿನ ಜೀವ-ಭಾವದ ತಂತುವೂ ಹೌದು. ಎಷ್ಟೇ ಪ್ರಪಂಚ ಮುಂದುವರಿದರೂ, ಅಮ್ಮ ಮಗುವಿನ ಸಂಬಂಧ ಏರ್ಪಡುವ ಈ ಅಪರೂಪದ ನಿಸರ್ಗದತ್ತ ಗಳಿಗೆಯನ್ನು ಮಾತ್ರ ಯಾರೂ ಕಸಿದುಕೊಳ್ಳಲಾರರು. ಹಾಗಾಗಿಯೇ, ಆರೋಗ್ಯಕರ ಲಾಭಗಳ ಹೊರತಾಗಿಯೂ ಸ್ತನ್ಯಪಾನವೆಂಬ ಕ್ರಿಯೆ ಎತ್ತರಕ್ಕೇರುವುದು.
ಈ ಸ್ತನ್ಯಪಾನ ಸಪ್ತಾಹ ಮಾಡುವ ಉದ್ದೇಶವೇನು? ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಅಗತ್ಯ ಇನ್ನೂ ಇರುವುದ್ಯಾಕೆ ಎಂದು ನೋಡಿದರೆ, ಪ್ರಪಂಚದಾದ್ಯಂತ ಸಿಗುವ ಅಂಕಿ ಅಂಶಗಳು ಇನ್ನೂ, ಜನರು ಈ ಬಗ್ಗೆ ಅರಿತುಕೊಳ್ಳುವುದು ಬಾಕಿ ಇದೆ ಎಂದೇ ಹೇಳುತ್ತದೆ. ಅದಕ್ಕಾಗಿಯೇ, ಪ್ರತಿ ವರ್ಷ ಆಗಸ್ಟ್ ೧ರಿಂದ ೭ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ೧೭೦ ದೇಶಗಳಲ್ಲಿ ಆಚರಿಸಲ್ಪಡುತ್ತದೆ. ಈ ವರ್ಷ, ʻಸ್ತನ್ಯಪಾನದತ್ತ ಒಂದು ಹೆಜ್ಜೆ ಮುಂದೆ; ಸುಶಿಕ್ಷಿತರನ್ನಾಗಿಸಿ ಮತ್ತು ಬೆಂಬಲಿಸಿʼ ಎಂಬ ಧ್ಯೇಯವಾಕ್ಯದಡಿ ಎದೆಹಾಲಿನ ಮಹತ್ವವನ್ನು ಲೋಕಕ್ಕೆ ಸಾರಲಾಗುತ್ತಿದೆ.
ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಮೊದಲ ಬಾರಿಗೆ ೧೯೯೨ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಆಗ ಸುಮಾರು ೭೦ ದೇಶಗಳು ಈ ಸಪ್ತಾಹದ ಅಗತ್ಯತೆಯನ್ನು ಅರ್ಥ ಮಾಡಿಕೊಂಡು ಆಚರಿಸಲು ಆರಂಭಿಸಿದರೆ, ಇದು ಇದರ ಸಂಖ್ಯೆ ೧೭೦ಕ್ಕೇರಿದೆ. ಅಂಕಿಅಂಶಗಳ ವರದಿಯ ಪ್ರಕಾರ, ಹುಟ್ಟುವ ಪ್ರತಿ ಮೂರು ಮಕ್ಕಳಲ್ಲಿ ಇಬ್ಬರು ಎದೆಹಾಲು ಕುಡಿಯುತ್ತಿಲ್ಲ. ಆಧುನಿಕ ಜಗತ್ತಿನ ಪ್ರಭಾವವೂ ಸೇರಿದಂತೆ ಹಲವು ಕಾರಣಗಳಿಂದ ಇಂದು ಮಹಿಳೆಯರು ಎದೆಹಾಲನ್ನು ಮಕ್ಕಳಿಗೆ ಉಣಿಸುವ ಪ್ರಕ್ರಿಯೆ ಕಡಿಮೆಯಾಗುತ್ತಿದ್ದು, ಅದಕ್ಕಾಗಿಯೇ, ಜನರಲ್ಲಿ ಈ ಬಗ್ಗೆ ತಿಳುವಳಿಕೆ ಮೂಡಿಸಿ, ಮಗುವಿಗೂ, ಹೆತ್ತ ಅಮ್ಮನಿಗೂ ಎದೆಹಾಲು ಉಣಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿ ಹೇಳಲು ಸಾಮೂಹಿಕವಾಗಿ ಈ ಪ್ರಯತ್ನ ಮಾಡಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ, ಸಪ್ತಾಹದ ಸಂದರ್ಭ ಸ್ತನ್ಯಪಾನ ಯಾಕೆ ಮಗುವಿಗೆ ಅತ್ಯಗತ್ಯ ಎಂದು ವಿವರಿಸುವುದು ಹೀಗೆ. ತಾಯಿಯ ಎದೆಹಾಲಿನಷ್ಟು ಸಮೃದ್ಧವಾದ ಆಹಾರ ಶಿಶುವಿಗೆ ಇನ್ನೊಂದಿಲ್ಲ. ಮೊದಲ ಆರು ತಿಂಗಳು ಮಗುವಿಗೆ ಅಮ್ಮನ ಹಾಲೇ ಮುಖ್ಯ ಆಹಾರ. ಸಂದರ್ಭ ಬೇರೆ ಆಹಾರದ ಅಗತ್ಯವೇ ಇರುವುದಿಲ್ಲ. ಆದರೆ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತಿವೆ. ಪ್ರಪಂಚದಲ್ಲಿ, ಮೊದಲ ಆರು ತಿಂಗಳು ಕೇವಲ ಶೇ.೪೦ರಷ್ಟು ಶಿಶುಗಳು ಮಾತ್ರ ತಾಯಿಯ ಎದೆಹಾಲನ್ನು ಪ್ರಮುಖ ಆಹಾರವಾಗಿ ತೆಗೆದುಕೊಳ್ಳುತ್ತವೆ. ಸ್ತನ್ಯಪಾನವನ್ನು ಜಾಗತಿಕ ಮಟ್ಟದಲ್ಲಿ ಸಾರ್ವತ್ರೀಕರಣಗೊಳಿಸಿದರೆ, ೮,೨೦,೦೦೦ ಮಕ್ಕಳು ಪ್ರತಿವರ್ಷ ಬದುಕಬಹುದು ಎನ್ನುತ್ತದೆ ಈ ಕುರಿತ ಒಂದು ವರದಿ.
ಭಾರತದಲ್ಲಿ ಮಗುವಿನ ಜನನವಾದ ತಕ್ಷಣ ಒಂದು ಗಂಟೆಯೊಳಗೆ ಎದೆಹಾಲು ಕುಡಿಸುವ ಪ್ರಮಾಣದಲ್ಲಿಯೂ ಭಾರೀ ಇಳಿಕೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ವರದಿಯ ಪ್ರಕಾರ, ಪ್ರತಿ ೨೨ ರಾಜ್ಯಗಳ ಪೈಕಿ, ಸಿಕ್ಕಿಂನಲ್ಲಿ ಶೇ.೩೩.೫ರಷ್ಟು ಪ್ರಮಾಣದಲ್ಲಿ ಇದು ಇಳಿಕೆ ಕಂಡಿದೆ. ಲಕ್ಷದ್ವೀಪ, ಮೇಘಾಲಯಗಳಲ್ಲಿ ಶೇ.೧೮ರಷ್ಟು ಕಡಿಮೆಯಾಗಿದೆ.
ಮೊದಲ ಆರು ತಿಂಗಳ ಸ್ತನ್ಯಪಾನ ಯಾಕೆ ಬಹುಮುಖ್ಯ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಹೀಗೆ ಎಳೆಎಳೆಯಾಗಿ ವಿವರಿಸುತ್ತದೆ.
೧. ಮಗು ಹುಟ್ಟಿದ ಒಂದು ಗಂಟೆಯಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಕ್ರಿಯೆಗೆ ತಯಾರಾಗಬೇಕು. ಮೊದಲ ಮೂರು ದಿನ ಉತ್ಪತ್ತಿಯಾಗುವ ಹಳದಿ ಬಣ್ಣದ ಗಟ್ಟಿ ದ್ರವವನ್ನು ಯಾವುದೇ ಕಾರಣಕ್ಕೂ ಹಿಂಡಿ ಚೆಲ್ಲಬಾರದು. ಇದು ಮಕ್ಕಳಿಗೆ ಅಗತ್ಯವಾಗಿ ಬೇಕಾದ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಪೋಷಕಾಂಶ, ಜೀವಸತ್ವಗಳು ಹಾಗೂ ಖನಿಜಾಂಶಗಳು ಹೇರಳವಾಗಿರುತ್ತವೆ. ಮಗುವಿನ ಬುದ್ಧಿಮತ್ತೆಎ ತೀಕ್ಷ್ಣವಾಗುತ್ತದೆ.
೨. ಆರು ತಿಂಗಳ ಕಾಲ ಕೇವಲ ತಾಯಿಯ ಎದೆಹಾಲಿನಲ್ಲೇ ಬೆಳೆದ ಮಕ್ಕಳು ಉತ್ತಮ ಬೆಳವಣಿಗೆ ಹೊಂದುತ್ತಾರೆ. ಶಾರೀರಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ ಅವರ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಮಕ್ಕಳಿಗೆ ಸಿಗಬೇಕಾದ ಎಲ್ಲ ಪೋಷಕಾಂಶಗಳೂ ಎದೆಹಾಲಿನಲ್ಲಿ ಸಮೃದ್ಧವಾಗಿರುವುದರಿಂದ ಆರು ತಿಂಗಳ ಕಾಲ ಮಗುವಿಗೆ ಇತರೆ ಆಹಾರಗಳ ಅಗತ್ಯ ಕಂಡುಬರುವುದಿಲ್ಲ. ವೈದ್ಯರ ಸಲಹೆಯ ಮೇರೆಗೆ ಪೂರಕ ಆಹಾರಗಳನ್ನು ಆರಂಭಿಸಬಹುದು.
ಇದನ್ನೂ ಓದಿ: ಮಕ್ಕಳ ಹೆತ್ತವರಿಗೆ ದಕ್ಕುವ ಉಚಿತ ಸಲಹೆಗಳು ಮತ್ತು ಕಟು ಸತ್ಯಗಳು!
೩. ಮಗುವಿಗೆ ಆರು ತಿಂಗಳ ನಂತರವೂ ಎದೆಹಾಲನ್ನು ಮುಂದುವರಿಸಿ, ಎರಡು ವರ್ಷಗಳವರೆಗೆ ಹಾಲುಣಿಸಬಹುದು. ಹಾಗೂ ಅಗತ್ಯವಿದ್ದಲ್ಲಿ ಆಮೇಲೆಯೂ ಆರು ತಿಂಗಳ ಕಾಲ ಮುಂದುವರಿಸಬಹುದು.
೪. ಬಾಲ್ಯಕಾಲದಲ್ಲಿ ಬರುವ ಯಾವುದೇ ಆರೋಗ್ಯ ಸಮಸ್ಯೆಗಳಿಗೂ ತಾಯಿಯ ಎದೆಹಾಲೇ ಪರಿಹಾರ. ಎದೆಹಾಲಿನಲ್ಲಿರುವ ರೋಗನಿರೋಧಕಗಳು ಹಾಗೂ ಪೋಷಕಾಂಶಗಳು ಮಗುವಿಗೆ ಎಲ್ಲ ರೀತಿಯ ರೋಗಗಳಿಂದಲೂ ರಕ್ಷಣಾ ಕವಚದಂತೆ ವರ್ತಿಸುವುದಲ್ಲದೆ, ಮಗುವನ್ನು ಗಟ್ಟಿಮುಟ್ಟಾಗಿಸುತ್ತದೆ. ತಾಯಿ ಹಾಲನ್ನು ಪೂರ್ಣಾಹಾರವಾಗಿ ಕುಡಿವ ಮಗು ರೋಗರುಜಿನಗಳಿಂದಲೇ ದೂರವಿರುತ್ತದೆ.
೫. ಎದೆಹಾಲು ಉಣಿಸುವುದು ಕೇವಲ ಮಗುವಿಗಷ್ಟೇ ಅಲ್ಲ ತಾಯಿಗೂ ಉಪಯೋಗವಿದೆ. ಇದು ತಾಯಿಗೆ ಮುಂದಿನ ಆರು ತಿಂಗಳ ಕಾಲ ನೈಸರ್ಗಿಕ ವಿಧಾನದಲ್ಲಿ ಜನನ ನಿಯಂತ್ರಣವನ್ನೂ ಮಾಡುತ್ತದೆ. ಇದರಿಂದ ತಾಯಿಗೆ ಶೇ.೯೮ರಷ್ಟು ರಕ್ಷಣೆ ಸಿಗುತ್ತದೆ.
೬. ಎದೆಹಾಲು ಕುಡಿಸುವುದು ತಾಯಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ. ಮಧುಮೇಹ, ಬಾಣಂತಿ ಸನ್ನಿ ಹೆಸರಿನ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಬರುವುದರಿಂದಲೂ ದೂರವಿರಿಸುತ್ತದೆ.
೭. ಮಕ್ಕಳಿಗೆ ದೀರ್ಘಕಾಲಿಕ ಲಾಭಗಳೂ ಇವೆ. ಎದೆಹಾಲು ಕುಡಿದ ಮಕ್ಕಳು ಕಿಶೋರಾವಸ್ಥೆಯಲ್ಲಿ ಬೊಜ್ಜು ಹಾಗೂ ತೂಕದ ಸಮಸ್ಯೆಗಳಗೆ ಅಷ್ಟಾಗಿ ತುತ್ತಾಗುವುದಿಲ್ಲ. ಇಷ್ಟೇ ಅಲ್ಲ, ಎದೆಹಾಲು ಕುಡಿದು ಬೆಳೆದ ಮಕ್ಕಳಿಗೆ ಮಧುಮೇಹದಂಥ ತೊಂದರೆಗಳಿಂದಲೂ ದೂರ ಇರುತ್ತಾರೆ.
ಇದನ್ನೂ ಓದಿ: ಸದಾ ನಗುತ್ತಿರುವಂತೆ ಕಾಣುವ ಈ ಮಗು ಇಂಟರ್‌ನೆಟ್ ಸ್ಟಾರ್; ಅಪರೂಪದ ಕಾಯಿಲೆಗೆ ಹೆದರಿದ ಪಾಲಕರು