ಅಮ್ಮನೆಂಬ ಕೆಲಸ ಎಷ್ಟು ಸಂತೋಷ ಹಾಗೂ ತೃಪ್ತಿದಾಯಕವೋ ಅಷ್ಟೇ ಕಷ್ಟವೂ ಜವಾಬ್ದಾರಿಯುತ ಕೆಲಸವೂ ಹೌದು. ಮಗುವಿಗೆ ಅಮ್ಮನಿಂದಲೂ ಅಪ್ಪನಿಂದಲೂ ದಕ್ಕುವ ಬಹಳಷ್ಟು ಅಂಶಗಳು ಕೇವಲ ಅಮ್ಮನೇ ಕೊಡಬೇಕಾಗಿ ಬರುವುದು ಇನ್ನೂ ಕಷ್ಟದ್ದು. ಸಿಂಗಲ್ ಪೇರೆಂಟಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ, ಮತ್ತು ಅತಿ ಸಾಮಾನ್ಯವಾಗಿರುವ ವಿಚಾರವೇ ಆಗಿದ್ದರೂ, ಮಗುವೊಂದನ್ನು ಒಬ್ಬಳೇ ಬೆಳೆಸುವುದು ನಿಜವಾಗಿಯೂ ಚಾಲೆಂಜಿಂಗ್ ಕೆಲಸವೇ ಸರಿ!
ಹೆಚ್ಚುತ್ತಿರುವ ಡಿವೋರ್ಸ್ ಪ್ರಕರಣಗಳು, ಇದ್ದಕ್ಕಿದ್ದಂತೆ ಸಂಭವಿಸುವ ದುರ್ಘಟನೆಗಳು ಸೇರಿದಂತೆ ಹಲವಾರು ಸಂದರ್ಭಗಳು ಇಬ್ಬರ ಮೇಲಿದ್ದ ಜವಾಬ್ದಾರಿಯನ್ನು ಒಬ್ಬರಿಗೆ ಹಸ್ತಾಂತರಿಸಿಬಿಡುತ್ತದೆ. ಹೀಗಿದ್ದಾಗ, ಇದ್ದಕ್ಕಿದ್ದಂತೆ ಅಮ್ಮನಾಗಿ, ಅಪ್ಪನಾಗಿ ನಿರ್ವಹಿಸಬೇಕಾದ ಎಲ್ಲ ಕೆಲಸಗಳೂ ಒಬ್ಬರ ಹೆಗಲಿಗೆ ಬಿದ್ದು ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗುತ್ತದೆ. ತಾವಾಗಿ ತಂದುಕೊಳ್ಳುವುದಲ್ಲವಾದರೂ, ಇಂದಿನ ಸಮಾಜದಲ್ಲಿ ಮಹಿಳೆಯರು ದಿಟ್ಟವಾಗಿ ಸಿಂಗಲ್ ಪೇರೆಂಟಿಂಗ್ ಕಡೆ ಮುಖ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಇದು ಸಂಬಂಧಗಳಲ್ಲಿ ಇಂದಿನ ಬದಲಾದ ಆದ್ಯತೆಗಳನ್ನು ಬಿಡಿಸಿ ಹೇಳುತ್ತಿದೆ.
೧. ಹಣಕಾಸು ಮತ್ತು ವೃತ್ತಿ: ತಮ್ಮ ಮಕ್ಕಳನ್ನು ಪ್ರೀತಿಸುವ ಯಾವ ಹೆತ್ತವರೇ ಆಗಲಿ ಕಷ್ಟ ಪಟ್ಟಾದರೂ ತನಗಿಂದ ಚಂದದ ಜೀವನ ಅವರದಾಗಲಿ ಎಂಬ ನಿಸ್ವಾರ್ಥದಿಂದ ಬೆಳೆಸಲು ಬಯಸುವುದು ಮಾನವ ಸಹಜ ಗುಣ. ಹಾಗೆಯೇ ತಮ್ಮ ಮಕ್ಕಳು ಆಸೆಪಟ್ಟ ವಸ್ತುಗಳಿಂದ ಹಿಡಿದು ಅವರು ಕಲಿಯಲಿಚ್ಛಿಸಿದ ಕೋರ್ಸುಗಳವರೆಗೆ ಮಕ್ಕಳಿಗೆ ಬೇಕಾದ್ದನ್ನೆಲ್ಲ ಅವರಿಗೆ ಸಿಗುವಂತೆ ಮಾಡಲು ತಾನು ಕಷ್ಟಪಟ್ಟು ದುಡಿಯಲು ಬಯಸುತ್ತಾರೆ. ಸಿಂಗಲ್ ಪೇರೆಂಟಿಂಗ್ ಸಂದರ್ಭ, ಈ ಒತ್ತಡ ಇನ್ನೂ ಹೆಚ್ಚುತ್ತದೆ. ಇಬ್ಬರ ಹೆಗಲು ಒಂದೇ ಆಗಿರುವ ಸಂದರ್ಭ ಮಕ್ಕಳ ಪ್ರತಿ ಬೇಕು ಬೇಡಗಳನ್ನು ಗಮನಿಸುತ್ತಾ ಅವರ ಜೀವನದ ಮಹತ್ವದ ಮೈಲುಗಲ್ಲುಗಳನ್ನು ಅನುಭವಿಸುತ್ತಾ ಮನೆಯ ಆರ್ಥಿಕ ಅಗತ್ಯಗಳನ್ನು ಪೂರೈಸಲು ರಾತ್ರಿ ಹಗಲು ಕೆಲಸ ಮಾಡುವುದು ಒಬ್ಬರೇ ಇದ್ದಾಗ ಬಲು ಚಾಲೆಂಜಿಂಗ್!
೨.ಜವಾಬ್ದಾರಿ: ಪ್ರತಿಯೊಬ್ಬ ಸಿಂಗಲ್ ತಾಯಿಯೂ ಅನುಭವಿಸುವ ದೊಡ್ಡ ಚಾಲೆಂಜ್ ಎಂದರೆ ಮಗುವಿನ ಎಲ್ಲ ಜವಾಬ್ದಾರಿಯನ್ನು ತಾನೊಬ್ಬಳೇ ಹೊರಬೇಕಾಗಿ ಬರುವುದು. ಮಗುವೊಂದನ್ನು ಜವಾಬ್ದಾರಿಯುತ ಉತ್ತಮ ಪ್ರಜೆಯನ್ನಾಗಿ ಬೆಳೆಸುವುದು, ತಪ್ಪಿದಲ್ಲಿ ತಿದ್ದಿ ನಡೆಸುವುದು, ಮಗುವಿನ ಪ್ರತಿ ಹಂತದಲ್ಲೂ ತಾನಿದ್ದೇನೆ ಎಂಬಂತೆ ಗಟ್ಟಿಯಾಗಿ ನಿಲ್ಲುವುದು ಪ್ರತಿ ಅಮ್ಮನಿಗೂ ಚಾಲೆಂಜಿಂಗ್. ಇಲ್ಲಿ ಸುತ್ತಮುಲಿನವರು, ಗೆಳೆಯರು, ಸಂಬಂಧಿಗಳು ಸಲಹೆಗೆ, ಸಹಾಯಕ್ಕೆ ಇದ್ದರೂ ಅಂತಿಮವಾಗಿ ಮಗುವಿನ ಸಂಬಂಧೀ ನಿರ್ಧಾರಗಳಿಗೆ ತಾಯಿಯೇ ಅಂತಿಮ.
೩.ಅಪರಾಧಿ ಪ್ರಜ್ಞೆ: ಮಗುವಿನ ಅಪ್ಪನೊಂದಿಗಿನ ಸಂಬಂಧದಿಂದ ಹೊರಬಂದಿರುವ ನೋವಿನಿಂದ ಅಥವಾ ದುರ್ಘಟನೆಯಿಂದ ಕಳೆದುಕೊಂಡಿದ್ದಾದರೆ ಆ ದುಃಖದಿಂದ ಹೊರಬಂದು ಮಗುವನ್ನು ಬೆಳೆಸುವುದು ಅತ್ಯಂತ ಕಠಿಣ ಜವಾಬ್ದಾರಿ. ತನಗಾದ ನೋವನ್ನು ಕಾಣಿಸದಂತೆ, ಮಗುವಿನ ಭವಿಷ್ಯದ ಬಗ್ಗೆ ಯೋಚಿಸುವುದು, ತನ್ನ ನಿರ್ಧಾರಗಳ ಫಲದಿಂದ ಈ ಪರಿಸ್ಥಿತಿ ಎದುರಿಸಬೇಕಾಯಿತೇ/ ಮಗುವಿಗೆ ದಕ್ಕಬೇಕಾದ ಪ್ರೀತಿಯಿಂದ ವಂಚಿಸಿದೆನೇ ಎಂಬಿತ್ಯಾದಿ ಅಪರಾಧೀ ಪ್ರಜ್ಞೆಯಿಂದ ನರಳುವುದು, ಹಾಗೂ ಈ ಸಂಬಂಧ ಮಗುವಿನ ಬೇಸರಗಳಿದ್ದರೆ ಅದರ ನೋವಿನಲ್ಲಿ ತಾನಿದ್ದೇನೆ ಎಂದು ತೋರಿಸಬೇಕಾದ ಕಾಳಜಿ ಎಲ್ಲವೂ ಮಾನಸಿಕವಾಗಿ ಒಬ್ಬ ಸಿಂಗಲ್ ಪೇರೆಂಟ್ ತಾಯಿಯನ್ನು ಹೈರಾಣಾಗಿಸಿಬಿಡುವ ಸಂಭವವಿದೆ.
ಇದನ್ನೂ ಓದಿ: ಅಂದು ಜಸ್ಟ್ ಪಾಸ್, ಇಂದು ಐಎಎಸ್: ಭರೂಚ್ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಸ್ಫೂರ್ತಿದಾಯಕ ಕಥೆ
೪. ಸಾಮಾಜಿಕ ಜೀವನ: ಇಬ್ಬರ ಜವಾಬ್ದಾರಿ ಒಬ್ಬರ ಹೆಗಲ ಮೇಲೆ ಬಿದ್ದ ಮೇಲೆ ಖಂಡಿತವಾಗಿಯೂ ಸಾಮಾಜಿಕ ಜೀವನದಲ್ಲಿ ಏರುಪೇರಾಗುತ್ತದೆ. ತನ್ನ ಗೆಳೆಯರು, ಗೆಳತಿಯರು, ಪ್ರವಾಸ, ಪಾರ್ಟಿ ಇತ್ಯಾದಿಗಳಿಗೆ ತನ್ನ ಖುಷಿಗಳಿಗೆ ಸಮಯ ಹೊಂದಿಸುವುದು ಖಂಡಿತ ಕಷ್ಟವಾಗಬಹುದು.
೫. ಹೊಸ ಪ್ರೀತಿ: ಬಹಳಷ್ಟು ಸಲ ಏಕಾಕಿತನ ಕಾಡಬಹುದು. ತನಗಾಗಿ ಮಿಡಿಯುವ ತನ್ನ ಕೆಲಸಗಳಿಗೆ ಹೆಗಲು ನೀಡುವ ಅಥವಾ ತನ್ನ ತುಮುಲಗಳಿಗೆ ಕಿವಿಯಾಗುವ, ಪ್ರೀತಿಸುವ ಇನ್ನೊಂದು ಜೀವ ತನಗಾಗಿ ಇರಬೇಕು ಎಂದು ಬಯಸುವುದು ಮಾನವ ಸಹಜ ಗುಣ. ಆಕೆ ಮತ್ತೆ ಪ್ರೀತಿಯಲ್ಲಿ ಬೀಳುವುದು ಮನುಷ್ಯಳಾಗಿ ಮಾಡುವುದು ತಪ್ಪಲ್ಲದೇ ಇರಬಹುದು. ಆದರೆ, ಅಮ್ಮನಾಗಿ ಆಕೆಯ ಇಂತಹ ಆಸಕ್ತಿಗಳು ಮಗುವಿನ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಬಹುದು. ಇಂತಹ ಅಸಹಾಯಕತೆ ಆಕೆಯನ್ನೂ ಮಾನಸಿಕವಾಗಿ ಜರ್ಜರಿತಳನ್ನಾಗಿ ಮಾಡಬಹುದು.
೬. ಅಭದ್ರತೆ: ಸಿಂಗಲ್ ಆಗಿ ಮಗುವನ್ನು ಬೆಳೆಸುವುದು ಜೀವನದುದ್ದಕ್ಕೂ ಹಲವು ಅಭದ್ರತೆಗಳನ್ನು ಕಾಡುವಂತೆ ಮಾಡಬಹುದು. ಮಗುವಿಗೆ ಅಪ್ಪನ ಪ್ರೀತಿ ದಕ್ಕದಂತಾಗುವಲ್ಲಿ ತಾನೂ ಕಾರಣವೇ?, ಸರಿಯಾಗಿ ಬೆಳೆಸುತ್ತಿದ್ದೇನೆಯೇ? ಅಪ್ಪನಿಲ್ಲ ಎಂಬ ಕಾರಣಕ್ಕೆ ಮಗು ಹೊರಗಿನವರಿಂದ ಮೂದಲಿಕೆಗಳನ್ನು ಕೇಳಬೇಕಾಗುತ್ತಿದೆಯೇ? ಇತ್ಯಾದಿ ಇತ್ಯಾದಿ ಭಾವಗಳು ಯಾವಾಗಲೂ ಕಾಡುತ್ತಲೇ ಇರಬಹುದು. ಒಂದು ದಿನ ತಾನು ಅದ್ಭುತವಾಗಿ ಮಗುವನ್ನು ಒಬ್ಬಳೇ ಬೆಳೆಸಿಬಿಟ್ಟೆ ಎಂದು ಹೆಮ್ಮೆ ಪಡುವ ದಿನ ಬರಬಹುದಾದರೂ, ಜೀವನದುದ್ದಕ್ಕೂ ಇಂತಹ ಅಭದ್ರತೆಗಳು ಕಾಡದೆ ಇರದು.
ಇದನ್ನೂ ಓದಿ: ಹಿಮಚ್ಛಾದಿತ ಪರ್ವತಗಳ ನಡುವೆ 56 ಗಂಟೆಗಳಲ್ಲಿ 430 ಕಿ.ಮೀ cycling, ಮಹಿಳೆಯಿಂದ ಗಿನ್ನಿಸ್ ದಾಖಲೆ