ಬಾಬುಲ್ ಕೀ ದುವಾಯೇ ಲೇಕೆ ಜಾ.. ಸಸುರಾಲ್ ಮೆ ಇತನಾ ಪ್ಯಾರ್ ಮಿಲೆ..!
ನಾನು ಚಿಕ್ಕಂದಿನಲ್ಲಿ ನೋಡಿದ ಹಿಂದೀ ಚಿತ್ರ ನೀಲ್ ಕಮಲ್. ಅದರ ಒಂದು ದೃಶ್ಯ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಆ ದೃಶ್ಯದಲ್ಲಿ ತುಂಬಾನೇ ಪ್ರೀತಿ ಮಾಡುವ ಅಪ್ಪನು ತನ್ನ ಮಗಳನ್ನು ಮದುವೆ ಮಾಡಿ ಧಾರೆ ಎರೆದು ಗಂಡನ ಮನೆಗೆ ಕಳುಹಿಸಿಕೊಡುವಾಗ ಕಣ್ಣೀರು ಸುರಿಸುತ್ತಾನೆ. ತನ್ನ ಮಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಹೆದರುತ್ತಾನೆ. ತನ್ನ ಹೃದಯದ ಒಂದು ಭಾಗವನ್ನು ಕತ್ತರಿಸಿ ಕೊಟ್ಟಷ್ಟು ವೇದನೆ ಪಡುತ್ತಾನೆ.
ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಮಗಳು ಇಷ್ಟು ಬೇಗ ತನ್ನ ಭುಜದ ಎತ್ತರಕ್ಕೆ ಬೆಳೆದು ನಿಂತಳು ಅಂದರೆ ಅಪ್ಪನಿಗೆ ನಂಬಲು ಆಗುವುದೇ ಇಲ್ಲ! ಪ್ರೀತಿಯ ಮಗಳು ತನ್ನನ್ನು ಬಿಟ್ಟು ಗಂಡನ ಮನೆಗೆ ಹೊರಟು ನಿಂತ ಕ್ಷಣದಲ್ಲಿ ಅಪ್ಪನಿಗೆ ದುಃಖವನ್ನು ಸಹಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಆಗ ಬರುವ ಅರ್ಥಗರ್ಭಿತ ಹಾಡು ಇದು: ಬಾಬುಲ್ ಕೀ ದುವಾಯೆ..!
ಮಗಳೆ, ನಿನ್ನ ತಾಯಿಯ ಮನೆಯ ಆಶೀರ್ವಾದವನ್ನು ತೆಗೆದುಕೊಂಡು ಹೋಗು. ನಿನಗೆ ನಿನ್ನ ಗಂಡನ ಮನೆಯಲ್ಲಿ ಎಷ್ಟೊಂದು ಪ್ರೀತಿ ಸಿಗಬೇಕು ಅಂದರೆ ನಿನಗೆ ತಾಯಿಯ ಮನೆಯ ನೆನಪು ಆಗದೆ ಇರಲಿ! ಎಂದು ಅಪ್ಪ ಮಗಳನ್ನು ತಬ್ಬಿಕೊಂಡು ಹಣೆಗೆ ಒಂದು ಮುತ್ತು ಕೊಟ್ಟು ಆಶೀರ್ವಾದ ಮಾಡುವ ಸನ್ನಿವೇಶ ಅದು. ಆ ದೃಶ್ಯವು ನನ್ನನ್ನು ಕಾಡಿದಷ್ಟು ಬೇರೆ ಯಾವ ದೃಶ್ಯವೂ ಈವರೆಗೆ ಕಾಡಿಲ್ಲ!
ಅಪ್ಪ ಹೊರಗೆ ಅಳುವುದಿಲ್ಲ!
ಇದು ಪ್ರತಿಯೊಬ್ಬ ಒಳ್ಳೆಯ ಅಪ್ಪನ ಬದುಕಿನಲ್ಲಿ ಬರುವ ಅತ್ಯಂತ ನೋವಿನ ಪ್ರಸಂಗ. ಆ ಸಂದರ್ಭದಲ್ಲಿ ಹೆತ್ತ ಅಮ್ಮ ಕಣ್ಣೀರು ಸುರಿಸುತ್ತಾರೆ. ಆದರೆ ಪ್ರತಿಯೊಬ್ಬ ಅಪ್ಪನೂ ಒಳಗೊಳಗೇ ಅಳುತ್ತಾನೆ!
ಯಾಕೆಂದರೆ ಮಗಳು ಅಪ್ಪನ ನಿಜವಾದ ರಾಜಕುಮಾರಿ ಆಗಿರುತ್ತಾಳೆ. ನಿಜವಾದ ದೇವತೆ ಆಗಿರುತ್ತಾಳೆ. ಒಳ್ಳೆಯ ಗೆಳತಿ ಆಗಿರುತ್ತಾಳೆ. ಅಪ್ಪ ತನ್ನ ಗಂಡು ಮಕ್ಕಳನ್ನು ಪ್ರೀತಿ ಮಾಡುತ್ತಾನೆ. ಆದರೆ ಪ್ರತಿಯೊಂದು ಹೆಣ್ಣು ಮಗು ತನ್ನ ಅಪ್ಪನಿಗೆ ತುಂಬಾನೇ ಸ್ಪೆಷಲ್ ಆಗಿರುತ್ತಾಳೆ. ಯಾಕೆಂದರೆ ಅಪ್ಪನಿಗೆ ತನ್ನ ಮನದ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯ ಆಗುವಂತಹ ಒಂದು ಸೆಕ್ಯೂರ್ಡ್ ವೇದಿಕೆ ಅಂದರೆ ಅದು ಮಗಳು ಮಾತ್ರ!
ಮಗಳು ಎಂಬ ಪುಟ್ಟ ದೇವತೆ!
ಹೆಣ್ಣು ಮಗುವನ್ನು ಪಡೆಯುವ ಸೌಭಾಗ್ಯ ಎಲ್ಲ ಅಪ್ಪಂದಿರಿಗೆ ದೊರೆಯುವುದಿಲ್ಲ. ಜೀವನದಲ್ಲಿ ಒಂದಾದರೂ ಹೆಣ್ಣು ಮಗು ಬೇಕು ಎಂದು ಹಂಬಲ ಪಡುವ ಅಪ್ಪಂದಿರ ಸಂಖ್ಯೆ ಈಗ ಹೆಚ್ಚಾಗುತ್ತಿದೆ! ಹೆಣ್ಣು ಮಗು ಹುಟ್ಟಬೇಕು ಎಂದು ಹರಕೆ ಹೊರುವ ಅಪ್ಪಂದಿರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಗಂಡು ಮಕ್ಕಳು ತಮ್ಮ ಅಪ್ಪ-ಅಮ್ಮನನ್ನು ತುಂಬಾ ಪ್ರೀತಿ ಮಾಡಬಹುದು. ಆದರೆ ಹೆಣ್ಣು ಮಗು ಪ್ರೀತಿಸುವ ಪರಿಯೇ ಅದ್ಭುತ! ಹೆಣ್ಣು ಮಗುವಿಗೆ ಅಪ್ಪನೇ ಮೊದಲ ಹೀರೋ ಆಗಿರುತ್ತಾನೆ. ಅವಳು ತನ್ನ ಸಂಪರ್ಕಕ್ಕೆ ಬಂದ ಪ್ರತೀಯೊಬ್ಬ ಹುಡುಗನಲ್ಲಿಯೂ ತನ್ನ ಅಪ್ಪನನ್ನು ಹುಡುಕುತ್ತಾಳೆ.
ಕಣ್ಣ ರೆಪ್ಪೆಯ ಹಾಗೆ ಕಾಪಾಡುವ ಅಪ್ಪ!
ಮಗಳು ಬೆಳೆಯುತ್ತಾ ಪ್ರಾಯಕ್ಕೆ ಬಂದ ಹಾಗೆ ಅಪ್ಪ ಮಗಳ ಕಾವಲುಗಾರ ಆಗಿ ಬಿಡುತ್ತಾನೆ. ಮಗಳನ್ನು ಕಣ್ಣು ರೆಪ್ಪೆಯ ಹಾಗೆ ಕಾಯಲು ಆರಂಭ ಮಾಡುತ್ತಾನೆ. “ಇಲ್ಲ ಅಪ್ಪ, ನಾನು ಸಣ್ಣ ಮಗು ಅಲ್ಲ. ಎಲ್ಲಿ ಬೇಕಾದರೂ ಹೋಗಿ ಬರುತ್ತೇನೆ” ಎಂದು ಮಗಳು ಎಷ್ಟು ಹೇಳಿದರೂ ಆ ಅಪ್ಪನಿಗೆ ಅದು ಅರ್ಥವೇ ಆಗುವುದಿಲ್ಲ. ಮಗಳು ಎಲ್ಲಿಗಾದರೂ ಹೊರಗೆ ಹೋದರೆ ಅಪ್ಪ ಆತಂಕದಲ್ಲಿಯೇ ಮಲಗುತ್ತಾನೆ. ಒಬ್ಬ ಒಳ್ಳೆಯ ಹುಡುಗನನ್ನು ಹುಡುಕಿ ಅವನ ಕೈಯ್ಯಲ್ಲಿ ಮಗಳ ರಕ್ಷಣೆಯ ಭಾರವನ್ನು ಕೊಡುವವರೆಗೆ ಆತ ನೆಮ್ಮದಿಯಿಂದ ನಿದ್ದೆ ಮಾಡುವುದಿಲ್ಲ.
‘ಪ್ರೀತಿ ಇಲ್ಲದ ಮೇಲೆ ‘ ಧಾರಾವಾಹಿಯ ಅಪ್ಪ ಮಗಳ ಸಂವಾದ!
ನಾನು ನೋಡಿದ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ಅಪ್ಪ ಅನಂತನಾಗ್ ಮಗಳಾದ ಅಪರ್ಣಾಳನ್ನು ತನ್ನ ಕಾಲ ಮೇಲೆ ಮಲಗಿಸಿ ಆಡುವ ಮಾತುಗಳು ನನಗೆ ನಿಜವಾಗಿ ಗೀತೋಪದೇಶದ ಫೀಲಿಂಗ್ ನೀಡಿವೆ. ಹಲವು ಸಂಚಿಕೆಗಳಲ್ಲಿ ಪ್ರಸಾರವಾದ ಈ ಅಪ್ಪ ಮಗಳ ಸಂವಾದವನ್ನು ನಾನು ಕಣ್ಣು ರೆಪ್ಪೆ ಮಡಚದೆ ನೋಡಿ ಭಾವಸ್ಪರ್ಶಕ್ಕೆ ಒಳಗಾಗಿದ್ದೇನೆ. ಅಲ್ಲಿ ಅಪ್ಪ ತನ್ನ ಜೀವನದ ಸೋಲುಗಳನ್ನು ಮಗಳಿಗೆ ವಿವರಿಸುತ್ತಾ ಆಕೆಗೆ ಜೀವನದ ಮೌಲ್ಯಗಳ ಬುತ್ತಿಯನ್ನು ಕಟ್ಟಿ ಕೊಡುತ್ತಾನೆ.
ಮಗಳು ಜಾನಕಿ ಧಾರಾವಾಹಿಯ ಅಪ್ಪ ಮಗಳ ಪ್ರೀತಿ!
ನಾನು ಒಂದು ಸಂಚಿಕೆ ಕೂಡ ಮಿಸ್ ಮಾಡದೆ ಮೈ ಮರೆತು ನೋಡಿದ ಧಾರಾವಾಹಿ ಟಿ ಎನ್ ಸೀತಾರಾಂ ಅವರ ‘ಮಗಳು ಜಾನಕಿ’. ಅಲ್ಲಿ ತಂದೆ (ಸೀತಾರಾಂ) ಮತ್ತು ಮಗಳು (ಗಾನವಿ ಲಕ್ಷ್ಮಣ್) ಅವರ ಅವ್ಯಕ್ತವಾದ ಪ್ರೀತಿಯೇ ಇಡೀ ಧಾರಾವಾಹಿಯ ಅಂತರ್ಜಲ! ಆ ಧಾರಾವಾಹಿಯನ್ನು ನೋಡಿದ ಪ್ರತಿಯೊಬ್ಬ ಒಳ್ಳೆಯ ಅಪ್ಪ, ಪ್ರತಿಯೊಬ್ಬ ಒಳ್ಳೆಯ ಮಗಳು ಕಣ್ಣೀರು ಹಾಕಿದ ನೂರಾರು ನಿದರ್ಶನ ನಾನು ನೋಡಿದ್ದೇನೆ. ಪ್ರತ್ಯಕ್ಷ ನಾನೂ ಅದನ್ನು ಫೀಲ್ ಮಾಡಿಕೊಂಡಿದ್ದೇನೆ. ಇಂತಹ ಭಾವುಕ ಕ್ಷಣಗಳು ನನ್ನ ಮನಸನ್ನು ಕರಗಿಸಿವೆ.
ಆ ಭಾವುಕ ಕ್ಷಣ ಬಂದೇ ಬಿಟ್ಟಿತು!
ಆ ಕ್ಷಣ ಸಮೀಪ ಬಂದ ಹಾಗೆ ಅಪ್ಪ ಎಷ್ಟು ಮಾನಸಿಕವಾಗಿ ಸಿದ್ಧತೆ ಮಾಡಿದರೂ ಕೊನೆಗೆ ಕುಸಿಯುತ್ತಾನೆ. ಮಗಳು ಅಪ್ಪನನ್ನು ಮಾನಸಿಕವಾಗಿ ಪ್ರಿಪೇರ್ ಮಾಡುತ್ತಾಳೆ. ಅಪ್ಪ ಯಾರು ನಿರ್ಲಕ್ಷ್ಯ ಮಾಡಿದರೂ ಸಹಿಸಿಕೊಳ್ಳುತ್ತಾನೆ. ಆದರೆ ಮಗಳು ನಿರ್ಲಕ್ಷ್ಯ ಮಾಡಿದರೆ ಅದು ಅವನ ಸಾವಿಗೆ ಸಮ ಎಂದು ಭಾವಿಸುತ್ತಾನೆ. ಅಪ್ಪ ಮಗಳ ಕನಸನ್ನು ಪೂರ್ತಿ ಮಾಡಲು ಎಷ್ಟೇ ತ್ಯಾಗಕ್ಕೂ ಸಿದ್ಧನಾಗುತ್ತಾನೆ.
ಅಪ್ಪ ಮಗು ಆಗುತ್ತಾನೆ, ಮಗಳು ಅಮ್ಮ ಆಗುತ್ತಾಳೆ!
ಅವಳಿಗೂ ಅದು ಅತ್ಯಂತ ನೋವಿನ ಸಂಗತಿ ಆಗಿರುತ್ತದೆ. ಒಂದು ಕಡೆ ಹುಟ್ಟಿ ಬೆಳೆದ ಮನೆ, ಮನೆಯವರನ್ನು ಬಿಟ್ಟು ಹೋಗುವ ದುಃಖ. ಇನ್ನೊಂದೆಡೆ ಗಂಡನ ಮನೆಗೆ ಹೋಗಿ ಅಲ್ಲಿಯ ಮಂದಿಗೆ ಹೊಂದಾಣಿಕೆ ಆಗುವ ತುಮುಲ. ಈ ದ್ವಂದ್ವದಲ್ಲಿ ಇದ್ದರೂ ಅವಳಿಗೆ ತನ್ನ ಪ್ರೀತಿಯ ಅಪ್ಪನನ್ನು ಬಿಟ್ಟು ಹೋಗುವುದು ತುಂಬಾ ಕಷ್ಟ! ಎಷ್ಟೇ ತಡೆದರೂ ಹೊಸಿಲು ದಾಟಿ ಹೊರಗೆ ಹೋಗುವಾಗ ಅಣೆಕಟ್ಟು ಒಡೆದು ಹೋಗುತ್ತದೆ.
ಅಪ್ಪ ಈಗ ಪುಟ್ಟ ಮಗು ಆಗುತ್ತಾನೆ. ಮಗಳು ಅಮ್ಮ ಆಗುತ್ತಾಳೆ!
ಕಾಲ ಎಷ್ಟೇ ಮುಂದುವರಿದರೂ ಈ ದೃಶ್ಯ ಮಾತ್ರ ಬದಲಾಗುವುದಿಲ್ಲ!
- ರಾಜೇಂದ್ರ ಭಟ್ ಕೆ., ಜೇಸಿ ಅಂತಾರಾಷ್ಟ್ರೀಯ ತರಬೇತುದಾರರು