Site icon Vistara News

Motivation: ಜಯಲಕ್ಷ್ಮಿ ಅವರ ಕನಸಿನ ಕೂಸು: ಈ ಕಪ್‌ನಲ್ಲಿ ಚಹಾ, ಕಾಫಿ ಕುಡಿದು ಕಪ್ಪನ್ನೇ ತಿನ್ನಿ!

motivation

ಹೊಸತು ಮಾಡುವ ಕನಸಿದ್ದರೆ, ಸಾಧಿಸಬೇಕೆಂಬ ಮನಸು ಇದ್ದರೆ ಮಾಡುವುದೇನೂ ಕಷ್ಟವಲ್ಲ. ಎಂತಹ ಕಷ್ಟದ ಸಂದರ್ಭದಲ್ಲೂ ಆಶಾಕಿರಣವೊಂದು ಗೋಚರಿಸುತ್ತದೆ ಎಂಬುದಕ್ಕೆ ಈಕೆ ಉದಾಹರಣೆ. ಶಿಕ್ಷಕಿ ಆಗಿದ್ದ ಆಂಧ್ರಪ್ರದೇಶದ ಟಿ. ಜಯಲಕ್ಷ್ಮಿ ಅನಿವಾರ್ಯವಾಗಿ ಕೆಲಸ ಬಿಟ್ಟಾಗ ಸೊನ್ನೆಯಿಂದ ಹೊಸ ಉದ್ದಿಮೆ ಆರಂಭಿಸಿ ಗೆದ್ದ ಕತೆಯಿದು.

ಕಾಫಿ ಅಥವಾ ಚಹಾವನ್ನು ಕುಡಿದು ಅದರ ಕಪ್‌ ಬಿಸಾಕದೆ ಹಾಗೆಯೇ ತಿಂದುಬಿಡುವ ಬಗ್ಗೆ ಯೋಚನೆ ಮಾಡಿ! ಅರೆ ವ್ಹಾ ಅನಿಸುತ್ತಿದೆಯಲ್ಲಾ? ಹೀಗೊಂದು ಯೋಚನೆ ಆಕೆಯ ತಲೆಯಲ್ಲಿ ನುಸುಳಿದ್ದೇ ತಡ, ತಕ್ಷಣ ಕಾರ್ಯಪ್ರವೃತ್ತರಾದ ಆಕೆ ಹುಟ್ಟುಹಾಕಿದ್ದು, ಕುಡಿದ ಕೂಡಲೇ ತಿನ್ನುವ ಕಪ್‌ಗಳನ್ನೇ ತಯಾರಿಸುವ ಸಂಸ್ಥೆಯನ್ನು. ಇಂತಹ ಕಪ್‌ಗಳು ಈ ಮೊದಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ, ಈಕೆ ಯೋಚನೆ ಮಾಡಿದ್ದು ಇನ್ನೂ ಒಂದು ಹೆಜ್ಜೆ ಮುಂದೆ. ಅದು, ಎಲ್ಲರಿಗೆ ಬೇಕಾಗಿದ್ದ ಆರೋಗ್ಯಕರ ಆಯ್ಕೆ.

ಎಡಿಬಲ್‌ ಅಂದರೆ ತಿನ್ನಬಹುದಾದ ಕಪ್‌ಗಳೇನೂ ತೀರಾ ಹೊಸ ಯೋಚನೆಯಲ್ಲ. ಪ್ಲಾಸ್ಟಿಕ್‌ಗೆ ಪರ್ಯಾಯವನ್ನು ಆಲೋಚಿಸಿದಾಗ ಬಂದ ಮಾದರಿಯಿದು. ಈಗಾಗಲೇ ಹಲವಾರು ಸಂಸ್ಥೆಗಳು ಆ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಿ, ಮಾರುಕಟ್ಟೆಗೆ ಬಿಟ್ಟಿವೆ ಕೂಡಾ. ಆದರೆ, ಅವೆಲ್ಲ ತಿನ್ನಬಹುದಾದರೂ ಆರೋಗ್ಯದ ವಿಷಯದಲ್ಲಿ ಅಷ್ಟೇನೂ ಒಳ್ಳೆಯ ಆಯ್ಕೆಯೇನಲ್ಲ. ಅದಕ್ಕಾಗಿಯೇ ಜಯಲಕ್ಷ್ಮಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆರೋಗ್ಯಕರ ಆಯ್ಕೆಯನ್ನು ಹುಡುಕಿದಾಗ, ಒಂದಿಷ್ಟು ಪ್ರಯೋಗಗಳನ್ನು ನಡೆಸಿದಾಗ ಕಂಡುಕೊಂಡದ್ದು ಅಕ್ಕಿ ಹಾಗೂ ರಾಗಿಯನ್ನು ಬಳಸಿಊ ಇಂತಹ ಕಪ್‌ಗಳನ್ನು ಮಾಡಬಹುದು ಎಂಬುದು. ಇದೇ ಆಕೆಯ ಯಶೋಗಾಥೆಯಾಯ್ತು.

ಈ ಸಣ್ಣ ಉದ್ಯಮದ ಹಿಂದೆ ಜಯಲಕ್ಷ್ಮಿ ಅವರ ಶ್ರಮ ಸಾಕಷ್ಟಿದೆ. ಏಳುಬೀಳುಗಳಿವೆ. ಯಾಕೆಂದರೆ, ದಾರಿ ತೋಚದಾದಾಗ ಕೈಹಿಡಿದ ಕೆಲಸವಿದು. ೨೦೨೦ರವರೆಗೆ ಜಯಲಕ್ಷ್ಮಿ ಅವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಯ ಪತಿ ಶ್ರೀನಿವಾಸ್‌ ರಾವ್‌ ಅವರು ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಲಿವರ್‌ ಸಂಬಂಧಿಸಿದ ಖಾಯಿಲೆಯಿಂದಾಗಿ ಪತಿಗೆ ಹಠಾತ್‌ ಶಸ್ತ್ರಚಿಕಿತ್ಸೆ ಮಾಡಿಸಿ ತಿಂಗಳುಗಟ್ಟಲೆ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿದಾಗ, ಪತಿಯ ಆರೋಗ್ಯ ನೋಡಿಕೊಳ್ಳಲು ಕೆಲಸ ಬಿಡಬೇಕಾಯಿತು. ಅದೇ ಸಮಯಕ್ಕೆ ಕೋವಿಡ್‌ ಕಾಲವೂ ಶುರುವಾಯಿತು. ಇಬ್ಬರೂ ಕೆಲಸ ಇಲ್ಲದೆ ಮನೆಯಲ್ಲಿರಬೇಕಾಗಿ ಬಂದಾಗ ಏನಾದರೊಂದು ಮನೆಯ ಆದಾಯದ ಮೂಲ ಹುಡುಕಲೇ ಬೇಕಾದ ಅನಿವಾರ್ಯತೆ ಇತ್ತು. ಅಷ್ಟರವರೆಗೆ ಉದ್ಯಮದ ಅನುಭವ ಇಲ್ಲದ ಶಿಕ್ಷಕಿ ಜಯಲಕ್ಷ್ಮಿ ತನ್ನದೇ ಆದ ಹೊಸದೊಂದು ಸಣ್ಣ ಉದ್ಯಮ ಆರಂಭಿಸುವ ಬಗೆ ಯೋಚಿಸಿ, ನಿತ್ಯವೂ ಜನರು ಚಹಾ ಕಾಫಿ ಕುಡಿಯುವ ಕಪ್‌ ಏಕೆ ತಯಾರಿಸಬಾರದು ಎಂದು ಅಂದುಕೊಂಡು ಆ ಉದ್ಯಮಕ್ಕೆ ಕೈಹಾಕಿದರಂತೆ.

#image_title

ಜಯಲಕ್ಷ್ಮಿ ಅವರೇ ಹೇಳುವಂತೆ, ಉದ್ಯಮಕ್ಕೆ ಕೈ ಹಾಕುವಾಗ ಯೋಚನೆ ಬಂದಿದ್ದು, ಏನಾದರೂ ಹೊಸತನ್ನು ಮಾಡಬೇಕು ಎಂಬುದು. ಜನರು ದಿನನಿತ್ಯ ಬಳಸುವಂಥದ್ದು ಎಂದರೆ ಚಹಾ ಕಾಫಿ. ಇಂದು ಚಹಾ ಕಾಫಿ ರಸ್ತೆ ಬದಿಯಲ್ಲಿ ಕುಡಿಯುವ ಹೆಸರಿನಲ್ಲಿ ಎಷ್ಟೊಂದು ಕಸ ಭೂಮಿಗೆ ಸುರಿಯುತ್ತೇವೆ. ಅದಕ್ಕಾಗಿ ಇದರ ಪ್ರಕೃತಿಸ್ನೇಹಿ ಕಪ್‌ಗಳನ್ನೇ ಯಾಕೆ ತಯಾರಿಸಬಾರದು ಎಂದುಕೊಂಡೆ. ಯುಟ್ಯೂಬ್‌ನಲ್ಲಿ ಈ ಬಗ್ಗೆ ವಿಡಿಯೋಗಳನ್ನೂ ನೋಡಿದ್ದೆ ಎನ್ನುತ್ತಾರೆ.

ಈಗಾಗಲೇ ಇರುವ ಇಂತಹ ಕಪ್‌ ತಯಾರಿಕಾ ಸಂಸ್ಥೆಯ ಫ್ರಾಂಚೈಸಿಯನ್ನು ತೆಗೆದುಕೊಳ್ಳುವ ಯೋಚನೆ ಮಾಡಿದರೂ, ಪ್ರಸ್ತುತ ಲಭ್ಯವಿರುವ ಕಪ್‌ಗಳಿಗಿಂತ ಹೆಚ್ಚು ಆರೋಗ್ಯಕರವಾದ ಕಪ್‌ ಮಾಡುವ ಯೋಚನೆ ಹುಟ್ಟಿದ್ದೇ ತನ್ನದೇ ಆದ ಸಂಸ್ಥೆ ತೆರೆಯುವತ್ತ ಪ್ರೇರೇಪಿಸಿತು ಎನ್ನುತ್ತಾರೆ ಜಯಲಕ್ಷ್ಮಿ. ಈ ಹಿನ್ನೆಲೆಯಲ್ಲಿ ಪಾಂಡಿಚೇರಿಯಿಂದ ಎಡಿಬಲ್‌ ಕಪ್‌ಗಳನ್ನು ತರಿಸಿಕೊಂಡು ನೋಡಿದಾಗ ಅವುಗಳೆಲ್ಲವೂ ಮೈದಾದಿಂದ ಮಾಡಿದ್ದೆಂದು ತಿಳಿದುಬಂತು. ಅದಕ್ಕಾಗಿಯೇ ಆರೋಗ್ಯಕರ ಆಯ್ಕೆ ನನ್ನ ಉದ್ದೇಶವಾಗಿದ್ದರಿಂದ ಹಾಗೂ ನಮ್ಮದೇ ರಾಜ್ಯದ ನಿತ್ಯೋಪಯೋಗಿ ಆರೋಗ್ಯಕರ ವಸ್ತುವಿನಿಂದ ಇದನ್ನು ತಯಾರಿಸಬೇಕೆಂದು ಬಯಸಿದ್ದೆ ಎನ್ನುತ್ತಾರೆ ಜಯಲಕ್ಷ್ಮಿ.

ಈ ಉದ್ಯಮ ಆರಂಭಿಸಲು ಜಯಲಕ್ಷ್ಮಿ ಅವರು ಪ್ರಧಾನಮಂತ್ರಿ ಫಾರ್ಮಲೈಸೇಶನ್‌ ಆಫ್‌ ಮೈಕ್ರೋ ಫುಡ್‌ ಪ್ರಾಸೆಸಿಂಗ್‌ ಎಂಟರ್ಪ್ರೈಸಸ್‌ ಯೋಜನೆಯ ಮೂಲಕ ಸಾಲ ತೆಗೆದುಕೊಂಡು, ಜೊತೆಗೆ ತನ್ನೆಲ್ಲಾ ಚಿನ್ನದ ಆಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಈ ಉದ್ಯಮ ಆರಂಭಿಸಿದರಂತೆ.

ಇದನ್ನೂ ಓದಿ: Viral news | ದಿನವೂ ಸಮುದ್ರತೀರದಲ್ಲಿ ಸ್ಫೂರ್ತಿದಾಯಕ ವಾಕ್ಯ ಬರೆಯಲು ಕೆಲಸ ಬಿಟ್ಟಳು!

ಆರಂಭದಲ್ಲಿ ಪ್ರಯೋಗ ಮಾಡಲು ಹೊರಟಾಗ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು ನಷ್ಟವಾಯಿತು. ಆದರೆ, ಸುಮಾರು ಎರಡು ತಿಂಗಳ ಸುದೀರ್ಘ ಪ್ರಯೋಗಗಳ ನಂತರ ರಾಗಿ ಹಾಗೂ ಅಕ್ಕಿಯ ಮಿಶ್ರಣದಿಂದ ಈ ಕಪ್‌ಗಳ್ನು ತಯಾರಿಸುವುದೆಂದು ಸರಿಯಾದ ಆಯ್ಕೆ ಎಂದು ಅಂತಿಮಗೊಳಿಸಲಾಯ್ತು. ಇದಾದ ನಂತರ ಇದಕ್ಕೆ ಸಂಬಂಧಿಸಿ ಬೆಂಗಳೂರು ಹಾಗೂ ಹೈದರಾಬಾದ್‌ಗಳಿಂದ ೨೦೨೧ರಲ್ಲಿ ಯಂತ್ರಗಳನ್ನೂ ಖರೀದಿಸಿದೆ ಎನ್ನುತ್ತಾರೆ ಜಯಲಕ್ಷ್ಮಿ.

ಈ ಎಡಿಬಲ್‌ ಕಪ್‌ಗಳು ಸುಮಾರು ೨೦ ನಿಮಿಷಗಳವರೆಗೆ ನೀರಿನಂಥ ವಸ್ತುಗಳನ್ನು ಹಿಡಿದಿಡಬಲ್ಲವು. ಚಹ ಅಥವಾ ಕಾಫಿ ಕುಡಿಯಲು ಇದು ಉತ್ತಮ ಆಯ್ಕೆ. ಈ ಕಪ್‌ಗಳೂ ಎರಡು ಬಗೆಯ ಗಾತ್ರಗಳಲ್ಲಿ ಲಭ್ಯವಿದ್ದು, ಒಂದು ೬೦ ಎಂಎಲ್‌ ಹಾಗೂ ಇನ್ನೊಂದು ೮೦ ಎಂಎಲ್‌ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಕಪ್‌ ೨.೫ ರೂಗಳಿಂದ ೩.೫ ರೂಗಳವರೆಗೆ ದರವಿದೆ.

ಈ ಕಪ್‌ಗಳು ಬೇರೆ ಬೇರೆ ಫ್ಲೇವರ್‌ಗಳಲ್ಲೂ ಲಭ್ಯವಿದೆಯಂತೆ. ಚಾಕೋಲೇಟ್‌, ಸ್ಟ್ರಾಬೆರಿ, ವೆನಿಲ್ಲಾ, ಏಲಕ್ಕಿ ಮತ್ತಿತರ ಆಯ್ಕೆಗಳಿವೆ. ಸದ್ಯ ಇವರ ಸಂಸ್ಥೆ ಪ್ರತಿ ದಿನ ೩೦೦೦- ೪೦೦೦ ಕಪ್‌ ತಯಾರು ಮಾಡುತ್ತಿದ್ದು ತಿಂಗಳಲ್ಲಿ ಸುಮಾರು ೩೦-೪೦ ಸಾವಿರ ಕಪ್‌ ತಯಾರಾಗುತ್ತದೆಯಂತೆ. ವರ್ಷಕ್ಕೆ ಸದ್ಯ ಏಳರಿಂದ ಹತ್ತು ಲಕ್ಷ ರೂಗಳವರೆಗೂ ಆದಾ ಬರುತ್ತಿದೆಯಂತೆ. ಕೇವಲ ಆಂಧ್ರಪ್ರದೇಶವಲ್ಲದೆ, ದೇಶದ ವಿವಿಧ ರಾಜ್ಯಗಳಿಂದಲೂ ಈ ಕಪ್‌ಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದೆಯಂತೆ. ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಯೂಟ್ಯೂಬ್‌ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ಹೆಚ್ಚು ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರಂತೆ. ಕೇವಲ ಚಹಾ ಕಾಫಿ ಕಪ್‌ಗಳಲ್ಲದೆ, ಐಸ್‌ಕ್ರೀಂ ಬೌಲ್‌ಗಳು, ಚಾಟ್‌ ತಿನ್ನುವ ಪ್ಲೇಟ್‌ ಹಾಗೂ ಬೌಲ್‌ಗಳು ಕೂಡಾ ಮಾಡುವ ಉದ್ದೇಶವಿದೆಯಂತೆ. ಕಷ್ಟದಲ್ಲಿರುವಾಗ ಹೊಸತರ ಕನಸು ಕಂಡರಷ್ಟೇ ಸಾಲದು, ಮಾಡುವ ಮನಸ್ಸೂ ಬೇಕು ಎಂಬುದಕ್ಕೆ ಜಯಲಕ್ಷ್ಮಿ ಅವರೇ ಉದಾಹರಣೆ.

ಇದನ್ನೂ ಓದಿ: Happiness | ಜೀವನಪ್ರೀತಿಗೆ ಸ್ಫೂರ್ತಿ ಜಪಾನೀಯರ ಈ ಎಂಟು ಬದುಕಿನ ಸೂತ್ರಗಳು!

Exit mobile version