Site icon Vistara News

Female pilots | ಅಮೆರಿಕಕ್ಕಿಂತಲೂ ದುಪ್ಪಟ್ಟು ಮಹಿಳಾ ಪೈಲಟ್‌ಗಳು ಭಾರತದಲ್ಲಿ!

pilot

ಮೂರು ದಶಕಗಳ ಹಿಂದೆ, ಅಂದರೆ ೧೯೮೯ರ ಸುಮಾರಿಗೆ, ನಿವೇದಿತಾ ಭಸಿನ್‌ ಅವರು ಭಾರತದಲ್ಲಿ ಮೊದಲ ಬಾರಿಗೆ ವಾಣಿಜ್ಯ ವಿಮಾನದ ಪೈಲಟ್‌ ಆಗಿ ಕಾರ್ಯನಿರ್ವಹಿಸಿದ್ದರು, ಮಾತ್ರವಲ್ಲ, ವಿಶ್ವದ ಕಿರಿಯ ವಾಣಿಜ್ಯ ವಿಮಾನ ಚಾಲಕರೆಂಬ ಹಿರಿಮೆಗೂ ಪಾತ್ರರಾಗಿದ್ದರು. ಆ ದಿನಗಳ ನೆನಪು ಸ್ಪಲ್ಪವೂ ಅಳಿಸದಂತೆ ಸ್ಪಷ್ಟವಾಗಿರುವ ನಿವೇದಿತ ಅವರಿಗೆ, ಮಹಿಳಾ ಚಾಲಕರನ್ನು ಕಂಡು ಪ್ರಯಾಣಿಕರು ಗಲಿಬಿಲಿಯಾಗದಂತೆ ಮಾಡಲು ಸಹೋದ್ಯೋಗಿಗಳು ಹೇಗೆ ತಮ್ಮನ್ನು ಕಾಕ್‌ಪಿಟ್‌ನೊಳಗೆ ತಳ್ಳುತ್ತಿದ್ದರು ಎಂಬುದೂ ನೆನಪಿದೆ. ಆದರೀಗ ವಿಮಾನಯಾನ ಕ್ಷೇತ್ರದಲ್ಲಿ ಪರಿಸ್ಥಿತಿ ಬಹಳ ಬದಲಾಗಿದ್ದು, ಒಟ್ಟು ಪೈಲಟ್‌ಗಳ ಪೈಕಿ ಶೇ. ೧೨.೪ರಷ್ಟು ಮಂದಿ ಮಹಿಳೆಯರು ಎಂಬುದು ಮಹತ್ವದ ಸಂಗತಿಯಾಗಿದೆ.

ಭಾರತದ ಮೊದಲ ವಾಣಿಜ್ಯ ಮಹಿಳಾ ಪೈಲಟ್‌ ನಿವೇದಿತಾ ಭಾಸಿನ್

ಆದರೆ ಇಲ್ಲೊಂದು ಚೋದ್ಯವೂ ಇದೆ. ವಿಶ್ವ ಆರ್ಥಿಕ ವೇದಿಕೆಯ ಪಟ್ಟಿಯಂತೆ, ಲಿಂಗ ಸಮಾನತೆಯನ್ನು ಸಾಧಿಸಿರುವ ೧೪೬ ದೇಶಗಳ ಪೈಕಿ ೧೩೫ನೇ ಸ್ಥಾನದಲ್ಲಿರುವ ಭಾರತ, ವೈಮಾನಿಕ ಕ್ಷೇತ್ರದಲ್ಲಿ ತನ್ನ ಮಹಿಳೆಯರಿಗೆ ಇಷ್ಟೊಂದು ಅವಕಾಶ ನೀಡಿರುವುದು ಹೇಗೆ? ವೈವಿಧ್ಯಮಯ ಸಿಬ್ಬಂದಿಗಳಿರುವ ಸಂಸ್ಥೆಗಳ ಕಾರ್ಯಕ್ಷಮತೆ ಹೆಚ್ಚು ಎಂಬುದು ಒಂದು ಸಾಮಾನ್ಯ ಅಂದಾಜು. ಇನ್ನೂ ಕೆಲವು ಅಧ್ಯಯನಗಳ ಪ್ರಕಾರ, ಮಹಿಳಾ ಪೈಲಟ್‌ಗಳಿರುವಲ್ಲಿ ಭದ್ರತಾ ಲೋಪದ ಸಾಧ್ಯತೆಗಳೂ ಕಡಿಮೆ. ಇದಲ್ಲದೆ, ಕೋವಿಡ್‌ ನಂತರದಿಂದ ಉಂಟಾಗಿರುವ ಚಾಲಕರು ಮತ್ತಿತರ ಸಿಬ್ಬಂದಿ ಕೊರತೆಯನ್ನು ತುಂಬಿಸಲು ಮಹಿಳೆಯರನ್ನು ನೇಮಿಸಿಕೊಳ್ಳುವುದು ಸೂಕ್ತ ಸಮಾಧಾನ. ಹೆಲಿಕಾಪ್ಟರ್‌ ಮತ್ತು ಸಾಗಾಣಿಕೆ ವಿಮಾನಗಳಿಗೆ ಮಹಿಳೆಯರ ನೇಮಕವನ್ನು ೯೦ರ ದಶಕದಲ್ಲೇ ಭಾರತೀಯ ವಾಯುಸೇನೆ ಆರಂಭಿಸಿತ್ತು. ಆದರೆ ಯುದ್ಧ ವಿಮಾನಗಳ ಚಾಲನೆಗೆ ಅವಕಾಶ ನೀಡಿರುವುದು ಈಗೊಂದು ವರ್ಷದಿಂದ ಈಚೆಗೆ.

ಬದಲಾದ ಸಾಮಾಜಿಕ ಪರಿಸ್ಥಿತಿಗಳು, ಕೌಟುಂಬಿಕ ನೆರವು, ಕಂಪನಿಗಳ ಬದಲಾದ ಮನಸ್ಥಿತಿಗಳು ಮುಂತಾದ ಕಾರಣಗಳಿಂದ ಈ ಕ್ಷೇತ್ರವನ್ನು ಪ್ರವೇಶಿಸಲು ಮಹಿಳೆಯರಿಗೆ ಸಾಧ್ಯವಾಗಿದೆ. ದುಬಾರಿಯೆನಿಸಿರುವ ವೈಮಾನಿಕ ಚಾಲನಾ ತರಬೇತಿ ಪಡೆಯಲು ಕೆಲವು ರಾಜ್ಯ ಸರಕಾರಗಳು ನೆರವು ನೀಡುತ್ತಿವೆ. ಹೊಂಡಾ ಮೋಟರ್ಸ್‌ ನಂತಹ ಸಂಸ್ಥೆಗಳು ೧೮ ತಿಂಗಳ ಸಂಪೂರ್ಣ ವಿದ್ಯಾರ್ಥಿ ವೇತನವನ್ನೂ ಮಹಿಳೆಯರಿಗೆ ನೀಡುತ್ತಿವೆ. ಇಂತಹ ಹಲವು ಕಾರಣಗಳಿಂದ, ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತದ ಒಟ್ಟು ಪೈಲಟ್‌ಗಳ ಪೈಕಿ ಶೇ. ೧೨.೪ ಮಂದಿ ಮಹಿಳೆಯರಿದ್ದರೆ, ಈ ಪ್ರಮಾಣ ಅಮೆರಿಕದಲ್ಲಿ ಶೇ. ೫.೫ ಮತ್ತು ಬ್ರಿಟನ್‌ನಲ್ಲಿ ೪.೭ರಷ್ಟಿದೆ.‌

ಇದನ್ನೂ ಓದಿ: ಮೊದಲ ಬಾರಿಗೆ ಮುಟ್ಟಿನ ಬಗ್ಗೆ ತಿಳಿದುಕೊಂಡ ಕ್ಷಣ ವಿವರಿಸಿದ ದೀಪಿಕಾ ಪಡುಕೋಣೆ

ಭಾರತದ ಅತಿದೊಡ್ಡ ವಾಣಿಜ್ಯ ವಿಮಾನಯಾನ ಸಂಸ್ಥೆ ಇಂಡಿಗೊ ತನ್ನ ಮಹಿಳಾ ಸಿಬ್ಬಂದಿಗೆ ಹಲವಾರು ಅನುಕೂಲಗಳನ್ನು ಕಲ್ಪಿಸಿರುವುದಾಗಿ ಹೇಳಿಕೊಂಡಿದೆ. ಪೈಲಟ್‌ ಮತ್ತು ಇತರ ಸಿಬ್ಬಂದಿಗಳು ಗರ್ಭಾವಸ್ಥೆಯಲ್ಲಿ ಹಾರಾಟ ನಡೆಸುವ ಬದಲು, ಇತರ ಸೇವೆಗಳನ್ನು ಆಯ್ದುಕೊಳ್ಳಬಹುದು. ೨೬ ವಾರಗಳವರೆಗೆ ಸಂಬಳ ಸಹಿತ ತಾಯ್ತನದ ರಜೆ ನೀಡುವುದಲ್ಲದೆ, ಶಿಶುವಿಹಾರಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇಂಥ ಎಲ್ಲಾ ಸೌಲಭ್ಯಗಳನ್ನು ತಾನೂ ನೀಡುತ್ತಿರುವುದಾಗಿ ಟಾಟಾ ಮತ್ತು ಸಿಂಗಪೂರ್‌ ಏರ್‌ವೇಸ್‌ ಜಂಟಿ ಒಡೆತನದ ವಿಸ್ತಾರ ವಿಮಾನಯಾನ ಸಂಸ್ಥೆ ಹೇಳಿಕೊಂಡಿದೆ. ಇದಲ್ಲದೆ, ಮಹಿಳಾ ಸಿಬ್ಬಂದಿಯನ್ನು ಪಿಕ್-ಡ್ರಾಪ್‌ ಮಾಡುವ ವ್ಯವಸ್ಥೆಯನ್ನು ಹಲವಾರು ಸಂಸ್ಥೆಗಳು ಹೊಂದಿದ್ದು, ಹಲವು ಬಗೆಯಲ್ಲಿ ಸುರಕ್ಷತೆಯನ್ನು ಗಮನದಲ್ಲಿ ಇರಿಸಿಕೊಳ್ಳಲಾಗುತ್ತಿದೆ ಎಂಬುದು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವು ಮಹಿಳೆಯರ ಅಭಿಪ್ರಾಯ.

ಇನ್ನು ಕೌಟುಂಬಿಕವಾಗಿಯೂ ಮಹಿಳೆಯರಿಗೆ ಮೊದಲಿಗಿಂತ ಹೆಚ್ಚಿನ ಬೆಂಬಲ ದೊರೆಯುತ್ತಿದೆ. ಬೆಂಗಳೂರಿನಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ಹಾರಿದ ಮೊದಲ ತಡೆರಹಿತ ಮತ್ತು ಮಹಿಳಾ ಸಿಬ್ಬಂದಿಯನ್ನು ಮಾತ್ರವೇ ಹೊಂದಿದ್ದ ವಿಮಾನದ ಪೈಲಟ್‌ ಆಗಿದ್ದ ಜೋಯಾ ಅಗರ್ವಾಲ್‌ ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿಕೊಳ್ಳುವುದು ಹೀಗೆ- ʻನಮ್ಮ ಪಾಲಕರಿಂದ ಬೆಂಬಲ ದೊರೆಯುತ್ತಿರುವುದು ರಹಸ್ಯವೇನಲ್ಲ. ಇದರಿಂದ ನನ್ನಂಥ ಮಹಿಳೆಯರು ಐದು ದಿನಗಳ ಕಾಲ ಸ್ಯಾನ್‌ಪ್ರಾನ್ಸಿಸ್ಕೊ ಗೂ ಹೋಗಿ-ಬರಬಹುದು, ಮನೆಯಲ್ಲೇನಾಗುತ್ತಿದೆ ಎಂಬ ಚಿಂತೆಯನ್ನು ಬಿಟ್ಟು. ನಮಗೆ ಆ ಸೌಲಭ್ಯವಿದೆʼ

ಸಾಮಾನ್ಯ ವೈಮಾನಿಕ ಅಪಘಾತಗಳಲ್ಲಿ ಪುರುಷ ಅಥವಾ ಮಹಿಳಾ ಪೈಲಟ್‌ಗಳಿದ್ದರೆ ಆಗುವ ವ್ಯತ್ಯಾಸದ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿತ್ತು. ೧೯೮೩ರಿಂದ ೧೯೯೭ವರೆಗಿನ ವಿಮಾನ ಮತ್ತು ಹೆಲಿಕಾಪ್ಟರ್‌ ಅಪಘಾತಗಳ ಅಧ್ಯಯನ ನಡೆಸಿದಾಗ, ಪುರುಷ ಚಾಲಕರಿಗಿಂತ ಮಹಿಳಾ ಚಾಲಕರು ಹೆಚ್ಚು ಜಾಗರೂಕತೆಯಿಂದ ಕಾರ್ಯನಿರ್ವಹಿಸುವುದು ಸಾಬೀತಾಗಿದೆ.

ಇದನ್ನೂ ಓದಿ: ಎನ್‌ಸಿಸಿಯಿಂದ ಸೂಪರ್ ಮಾಡೆಲ್‌, ನೃತ್ಯದಿಂದ ಕನ್ನಡ ಹೀರೋಯಿನ್:‌ ಇದು ಆಶಾ ಭಟ್‌ ಲೈಫ್‌ ಸ್ಟೋರಿ

Exit mobile version