ನವ ದೆಹಲಿ: ಗಂಡು ಹೆಣ್ಣು ಸಮಾನರು ಎಂದು ಭಾಷಣ ಮಾಡುವುದಲ್ಲ, ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು. ಈ ಆಶಯ ಹೊಂದಿದ ನವಜೋಡಿಯೊಂದು, ಈಗ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ನಿನ್ನನ್ನು ಬಿಟ್ಟು ಹೋಗುವುದಿಲ್ಲ ಎಂದು ವಾಗ್ದಾನ ಮಾಡುತ್ತಾ ಒಂದಾದ ಈ ವಧೂವರರು, ಏಳು ಹೆಜ್ಜೆಗಳ ನಂತರ ಸಮಾನತೆಯ ಕಡೆಗೆ ಎಂಟನೆಯ ಹೆಜ್ಜೆ ಇರಿಸಿದ್ದಾರೆ.
ಏನಿದು ಸುದ್ದಿ ಎಂದು ಯೋಚಿಸುತ್ತಿದ್ದೀರಾ?, ಇರಿ ಹೇಳ್ತೀವಿ. ಮದುವೆಯೊಂದರಲ್ಲಿ ವಧು ವರನ ಕಾಲಿಗೆ ಬಿದ್ದು, ಆಶೀರ್ವಾದ ಪಡೆಯುವುದು ಸಾಮಾನ್ಯ. ಹೀಗೆ ಆ ವಧು ಕೂಡ ವರನಕಾಲಿಗೆ ಬೀಳುತ್ತಾಳೆ. ಆ ನಂತರ ವರ ಕೂಡ ವಧುವಿನ ಕಾಲಿಗೆ ಬೀಳುತ್ತಾನೆ. ಇದನ್ನು ನೋಡಿದವರೆಲ್ಲಾ ಆಶ್ಚರ್ಯಗೊಳ್ಳುತ್ತಾರೆ. ಗಂಡು-ಹೆಣ್ಣು ಸಮಾನರು ಎಂದಾದ ಮೇಲೆ ಇದರಲ್ಲಿ ತಪ್ಪೇನು ಎಂಬುದು ನವಜೋಡಿಯ ಪ್ರಶ್ನೆ.
ಇನ್‌ಸ್ಟಾಗ್ರಾಂ ಬ್ಲಾಗರ್ ದಿತಿ ರಾಯ್ ಹೀಗೆ ವರ ವಧುವಿನ ಕಾಲಿಗೆ ಬೀಳುವ ವಿಡಿಯೋ ಹಂಚಿಕೊಂಡಿದ್ದಾರೆ. ವಧು ಮಾತ್ರವೇ ವರನ ಕಾಲಿಗೆ ಬೀಳುವ ಸಂಪ್ರದಾಯವಿರುವ ಸಮಾಜದಲ್ಲಿ, ಮದುಮಗನ ಈ ವರ್ತನೆಗೆ ಬಹಳಷ್ಟು ಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿರುವ ದಿತಿ ರಾಯ್, ಬ್ಯಾಂಕ್ ವಿಶ್ಲೇಷಕರಾಗಿದ್ದು, ಜೀವನಶೈಲಿ, ಫ್ಯಾಷನ್ ಬಗ್ಗೆಯೂ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ʻಎ ಕೋರ್ ಮೆಮೊರಿʼ ಎಂಬ ಶೀರ್ಷಿಕೆಯನ್ನು ಹೊತ್ತ ಈ ವೀಡಿಯೋದ ವಿವರಣೆಯಲ್ಲಿ, ʻನಮ್ಮ ಪುರೋಹಿತರು ಇದನ್ನು ಒಂದಿಷ್ಟೂ ಮೆಚ್ಚಲಿಲ್ಲ. ಆದರೆ ವಿವಾಹ ಮಹೋತ್ಸವದ ಅಂತ್ಯದಲ್ಲಿ, ʻನೀನು ಅದೃಷ್ಟವಂತ ಹುಡುಗಿʼ ಎಂದು ಅವರು ನನಗೆ ಹೇಳಿದರುʼ ಎಂದು ವಧು ಹೇಳಿಕೊಂಡಿದ್ದಾರೆ. ಇದಕ್ಕೊಬ್ಬ ವೀಕ್ಷಕ, ʻಚಿಂತೆ ಬೇಡ. ಪುರೋಹಿತರೇನೂ ನಿಮ್ಮೊಂದಿಗೆ ಬದುಕುವುದಿಲ್ಲʼ ಎಂದು ಸಮಾಧಾನ ಹೇಳಿದ್ದಾರೆ. ʻಇಂದು ಇಂಟರ್ನೆಟ್‌ನಲ್ಲಿ ಕಂಡು ಅತ್ಯಂತ ಸುಂದರ ದೃಶ್ಯವಿದು ನಿನಗೆ ಮುತ್ತಿನಂಥ ಹುಡುಗ ಸಿಕ್ಕಿದ್ದಾನೆʼ ಎಂದು ಇನ್ನೊಬ್ಬರು ಮದುಮಗಳಿಗೆ ಹರಸಿದ್ದಾರೆ. ಹೀಗೆ ಇನ್ನೂ ಬಹಳಷ್ಟು ಮಂದಿ ವರನ ಈ ವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು. ವಧೂವರರಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ| ಅತ್ತೆ ಮನೆಗೆ ಹೊರಟು ನಿಂತ ಆ ಕ್ಷಣ ಅಪ್ಪ ಮಗುವಾಗುತ್ತಾನೆ, ಮಗಳು ಅಮ್ಮನಾಗ್ತಾಳೆ!