Site icon Vistara News

Happiness: ವಯಸ್ಸಾಗ್ತಿದೆ ಎಂಬ ಚಿಂತೆ ಬಿಟ್ಟು ಸಂತೋಷವಾಗಿರಲು ಟ್ವಿಂಕಲ್‌ ಖನ್ನಾ ಸೂತ್ರವಿದು!

twinkle khanna

ವಯಸ್ಸು ಏರಲು ಶುರುವಾಗುತ್ತಿದ್ದಂತೆ ಮುಖದಲ್ಲಿ, ಕೈಕಾಲುಗಳ ಚರ್ಮದಲ್ಲಿ ಸಣ್ಣಗೆ ಸುಕ್ಕು ಶುರುವಾಗುತ್ತದೆ. ಮಾರುಕಟ್ಟೆಯ ಯಾವ್ಯಾವುದೋ ಕ್ರೀಮು, ಸೀರಂ, ಸುಕ್ಕಿಗೆ ಒಳ್ಳೆಯದು ಎಂದುಕೊಂಡು ಹಚ್ಚುವ ತರಕಾರಿ ಹಣ್ಣುಗಳ ಪೇಸ್ಟ್‌ಗಳು, ಮನೆಮದ್ದುಗಳು ಯಾವುವೂ ಓಡುವ ಕಾಲಕ್ಕೆ ಅಡ್ಡಲಾಗಿ ನಿಲ್ಲಲಾರವು. ಮುಖದಲ್ಲೊಂದು ಚಂದನೆಯ ನಗು, ಆತ್ಮಸ್ಥೈರ್ಯ, ವಯಸ್ಸಾಗುತ್ತಿದ್ದಂತೆ ಕಣ್ಣುಗಳಲ್ಲಿ ಕಾಣುವ ಕಾಂತಿ ಆತ್ಮಸ್ಥೈರ್ಯ ಮಾತ್ರ ವಯಸ್ಸನ್ನೂ ಮೀರಿದ ಸುಕ್ಕನ್ನೂ ಮೀರಿದ ಶಕ್ತಿಯಾಗಿ ಗುರುತಿಸಲ್ಪಡುತ್ತದೆ. ವಯಸ್ಸಾಗಿ ಮಾಗುವ ಜೀವಗಳು ಇಷ್ಟು ಅರಿತುಕೊಂಡರೆ ಸಾಕು, ಬದುಕು ಬಂಗಾರ.

ʻಏಜಿಂಗ್‌ ಗ್ರೇಸ್‌ಫುಲೀʼ ಎಂಬುದೊಂದು ಟ್ರೆಂಡಿಂಗ್‌ ವಾಕ್ಯ ಸದ್ಯ ಸೆಲೆಬ್ರಿಟಿಗಳಲ್ಲೂ ಸಾಮಾನ್ಯವಾಗಿದೆ. ಮೇಕಪ್‌ ಇಲ್ಲದೆ, ಅಲ್ಲಲ್ಲಿ ನೆರಿಗೆಗಟ್ಟಿದ ಚರ್ಮ ಕಾಣುವಂತೆ, ಇಣುಕುವ ಬಿಳಿಕೂದಲು ಕಾಣುವಂತೆ ಸಾಮಾಜಿಕ ಜಾಲತಾಣದಲ್ಲಿ ನಟೀಮಣಿಯರು ಫೋಟೋ ಹಂಚಿಕೊಳ್ಳುವುದೂ ಕೂಡಾ ಈಗ ಟ್ರೆಂಡ್‌ ಆಗುತ್ತಿದೆ. ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಹೆಸರಿನಲ್ಲಿ ನಟಿಯರು, ಮೇಕಪ್‌ ಪರದೆಯನ್ನು ಸರಿಸಿ ನಾವಿರೋದೇ ಹೀಗೆ ಎಂದು ಧೈರ್ಯವಾಗಿ ಮುಖ ತೋರಿಸಲೂ ಆರಂಭಿಸಿದ್ದಾರೆ ಎಂಬುದು ಫ್ಯಾಷನ್‌ನ ಪ್ಲಾಸ್ಟಿಕ್‌ ಜಗತ್ತಿನಲ್ಲಿ ಸದ್ಯ ಬೀಸಿದ ಸುಂಟರಗಾಳಿ. ಇಂಥವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸುಂದರಿಯರ ಪೈಕಿ ಬಾಲಿವುಡ್‌ ನಟಿ ಟ್ವಿಂಕಲ್‌ ಖನ್ನಾ (twinkle khanna) ಕೂಡಾ ಒಬ್ಬರು.

ಲೇಖಕಿಯಾಗಿಯೂ ಗುರುತಿಸಿಕೊಂಡಿರುವ ಟ್ವಿಂಕಲ್‌ ಖನ್ನಾ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ತಮ್ಮ ಸುಕ್ಕನ್ನು ಪದಕ ಪಾರಿತೋಷಕಗಳಿಗೆ ಹೋಲಿಸಿ, ಸುಕ್ಕಿನ ಬಗ್ಗೆ ಚಿಂತಿಸುವ ಜೀವಕ್ಕೆ ತಮಾಷೆಗಾಗಿ ನಗುವರಳಿಸುವ ಮಾತಿನ ಸಿಂಚನ ನೀಡಿದ್ದಾರೆ. ಸುಕ್ಕೂ ಕೂಡಾ ಚಂದವೇ ಎಂದಿರುವ ಅವರು, ಒಂದು ಕಾಲದಲ್ಲಿ ಮರವನ್ನು ಹತ್ತಿದ, ಹುಡುಗರನ್ನೆಲ್ಲ ಅಟ್ಟಾಡಿಸಿ ಓಡಿಸಿದ ಸದ್ಯ ನಲುವತ್ತು ದಾಟಿದ ಹುಡುಗಿಯ ಮುಖದ ಸುಕ್ಕುಗಳು ಅವಕ್ಕೆಲ್ಲ ದಕ್ಕಿದ ಪಾರಿತೋಷಕಗಳೆಂಬಂತೆ ಅಂದುಕೊಳ್ಳಬೇಕು ಎಂದಿದ್ದಾರೆ. ಆ ಮೂಲಕ ವಯಸ್ಸೆಷ್ಟೇ ಆದರೂ ನಮ್ಮನ್ನು ನಾವೇ ಪ್ರೀತಿಸುವುದೆಂದರೆ ಹೀಗೆ ಎಂದೂ ಸುಕ್ಕಿನ ಬಗ್ಗೆ ತಲೆ ಬಿಸಿ ಮಾಡಿಕೊಂಡಿರುವ ಮಹಿಳೆಯರಿಗೆಲ್ಲರಿಗೂ ತಮಾಷೆಯಾಗಿ ಕಿವಿ ಮಾತು ಹೇಳಿದ್ದಾರೆ.

ʻವಯಸ್ಸು ಎಂಬುದೊಂದು ಗಣಿತಸ ಸಮಸ್ಯೆ. ಇದೊಂದು ದೊಡ್ಡ ಸಮಸ್ಯೆಯೇನಲ್ಲ. ನಾವು ಹಾಗೆ ಅಂದುಕೊಳ್ಳುತ್ತೇವೆ ಅಷ್ಟೇ. ಕೂಡಿಸಿ ಕಳೆಯುವ ಸಮಸ್ಯೆ ಇದಲ್ಲ. ಒಂದು ಕಾಲದಲ್ಲಿ ಹೀಗಿದ್ದೆವು ಅಂದುಕೊಂಡು ಭಾಗಿಸಕೊಂಡು ನೋಡುವುದೂ ಅಲ್ಲ. ಇದೊಂದು ಗುಣಾಕಾರದ ಸಮಸ್ಯೆʼ ಎಂದು ಸರಳವಾಗಿ ಎಲ್ಲರ ಸಮಸ್ಯೆಯನ್ನು ಬಿಡಿಸಿಟ್ಟಿದ್ದಾರೆ.

ಬದುಕು, ವಯಸ್ಸು ಸಾಗುತ್ತಾ ಹೋಗುವಾಗ, ನಿಮ್ಮೊಳಗಿನ ಎಲ್ಲವನ್ನೂ ಹಾಗೇ ಮುಂದುವರಿಸುತ್ತಾ ಹೋಗುತ್ತೀರಿ. ಇಲ್ಲಿ ಒಂದು ಬೇಸರ, ಒಂದು ಹತಾಶೆ, ಒಂದು ನೋವು ಅಥವಾ ಒಂದು ನಿಜವಾದ ಪ್ರೀತಿ, ಒಂದೇ ಯಶಸ್ಸು ಎಂದಿರುವುದಿಲ್ಲ. ಎಲ್ಲವೂ ಪರ್ವತದಷ್ಟು ಸೇರುತ್ತಾ ಹೋಗುತ್ತವೆ. ಬದುಕು ಇಂಥ ಅನುಭವಗಳ ಮೂಟೆ, ಎಲ್ಲವನ್ನೂ ಅನುಭವಿಸುತ್ತಾ ಸಾಗಬೇಕು ಎನ್ನುತ್ತಾರೆ ಅವರು.

ವಯಸ್ಸಾಗುತ್ತಾ ಆಗುತ್ತಾ ಚರ್ಮದ ಸುಕ್ಕುಗಳೂ ಈ ಎಲ್ಲ ಅನುಭವಗಳಿಂದ ನಮಗೆ ದಕ್ಕಿದ ಪಾರಿತೋಷಕಗಳೆಂದೇ ಅನಿಸುತ್ತದೆ. ಅಲ್ಲವೇ ಹೇಳಿ ಎಂದು ತನ್ನ ಸಾಮಾಜಿಕ ಜಾಲತಾಣದ ಫಾಲೋವರ್ಸ್‌ಗಳಿಗೇ ಮರುಪ್ರಶ್ನೆ ಹಾಕಿದ್ದಾರೆ. ಹಲವರು ಆಕೆಯ ಮಾತನ್ನು ಅನುಮೋದಿಸುವ ಜೊತೆಗೆ, ಇದಪ್ಪಾ ಮಾತು ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ನಮ್ಮನ್ನು ನಾವು ಪ್ರೀತಿಸುವುದೆಂದರೆ ಇದು. ನಾವು ಹೇಗಿದ್ದೇವೆಯೋ ಅದನ್ನು ಒಪ್ಪಿಕೊಂಡು ಖುಷಿಪಡುವುದು ಬದುಕಿನ ಅತ್ಯಂತ ಮುಖ್ಯ ಸಂತೋಷಗಳಲ್ಲಿ ಒಂದಾಗಬೇಕು ಎಂದಿದ್ದಾರೆ. ಇತ್ತೀಚೆಗೆ ಹೆಚ್ಚಾಗುತ್ತಿರುವ ಬಾಡಿ ಶೇಮಿಂಗ್‌ ವಿರುದ್ಧವೂ ಧ್ವನಿ ಎತ್ತಿರುವ ಟ್ವಿಂಕಲ್‌ ಖನ್ನಾ ಸೌಂದರ್ಯವೆಂದರೆ, ಅದಕ್ಕೆ ವಯಸ್ಸು, ದೇಹದಲ್ಲಿರುವ ನೆರಿಗೆ ಅಥವಾ ಬಣ್ಣಕ್ಕೆ ಸಂಬಂಧಿಸಿದ್ದಲ್ಲ. ನಮ್ಮನ್ನು ನಾವು ಒಪ್ಪಿ ಅಪ್ಪಿಕೊಳ್ಳುವುದಷ್ಟೇ ಸೌಂದರ್ಯ ಎಂದೂ ಸಂದರ್ಯ ಮೀಮಾಂಸೆ ಬರೆದಿದ್ದಾರೆ.

ಇದನ್ನೂ ಓದಿ: Happiness | ಜೀವನಪ್ರೀತಿಗೆ ಸ್ಫೂರ್ತಿ ಜಪಾನೀಯರ ಈ ಎಂಟು ಬದುಕಿನ ಸೂತ್ರಗಳು!

Exit mobile version