ತಂದೆಯೊಬ್ಬ ತನ್ನ ಮಗಳಿಗೆ ಬದುಕಲು ಅಗತ್ಯ ಬೇಕಾಗಿರುವ ಅಡುಗೆಯೆಂಬ ಲೈಫ್ ಸ್ಕಿಲ್ ಕಲಿಸಿದ್ದೇ ಆತನಿಗೀಗ ದೊಡ್ಡ ಸಮಸ್ಯೆಯಾಗಿದೆ. ಮಗಳಿಗೆ ಅಡುಗೆ ಕಲಿಸಿದ್ದಕ್ಕಾಗಿ ಈಗ ತಂದೆ ಯದ್ವಾತದ್ವಾ ತನ್ನ ಮಗಳ ಶಾಲೆಯಿಂದ ಬೈಗಳು ತಿಂದಿದ್ದಾನಂತೆ! ಹಾಗಂತ ಆ ಅಪ್ಪ ಈಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಸಂಕಟ ತೋಡಿಕೊಂಡಿದ್ದಾನೆ.
ಇದು ಓದಲು ಸಣ್ಣ ಸಮಸ್ಯೆಯಂತೆ ಕಂಡರೂ ವಿಷಯ ಗಂಭೀರವೇ! ವಿಷಯ ನಡೆದುದಿಷ್ಟು. ಆತನೇ ಹೇಳುವಂತೆ, “ನಾನೊಬ್ಬ ಸಿಂಗಲ್ ಅಪ್ಪ. ನನಗೆ ಮೇರಿ ಎಂಬ ಮಗಳೊಬ್ಬಳಿದ್ದಾಳೆ. ಮೇರಿಯ ಅಮ್ಮ ಆಕೆ ಎರಡು ವರ್ಷದವಳಿದ್ದಾಗ ತೀರಿಕೊಂಡಳು. ಅಷ್ಟರವರೆಗೆ ಮೇರಿಯ ಎಲ್ಲ ಕೆಲಸಗಳನ್ನೂ ನನ್ನ ಹೆಂಡತಿಯೇ ನೋಡಿಕೊಳ್ಳುತ್ತಿದ್ದಳು. ಆಕೆಯ ಸಾವಿನ ನಂತರ ಇದು ಸಂಪೂರ್ಣವಾಗಿ ನನ್ನ ಹೆಗಲಿಗೆ ಬಂತು. ನನಗೆ ತಿಳಿವಿರುವ ಹಾಗೆ ನಾನು ನನ್ನ ೧೪ನೇ ವಯಸ್ಸಿನಲ್ಲಿ ಅಡುಗೆ ಮಾಡಲು ಕಲಿತಿದ್ದೆ. ನಮ್ಮನ್ನು ಹಾಗೂ ನಮ್ಮ ಜೊತೆ ಇರುವವರನ್ನು ಸಂತೋಷವಾಗಿ ಇಡಲು ಅಡುಗೆ ಗೊತ್ತಿರುವುದು ಅತ್ಯಂತ ಅವಶ್ಯಕ. ನನ್ನ ಮಗಳು ಸಣ್ಣವಳಿದ್ದಾಗಿಂದ ನಾನು ಅಡುಗೆ ಮಾಡುವುದನ್ನು ನೋಡಿ ಆಕೆಯೂ, ಆಕೆಯ ನಾಲ್ಕನೇ ವಯಸ್ಸಿನಲ್ಲಿಯೇ ಆಸಕ್ತಿ ತೋರಿಸಿ ಸಣ್ಣಪುಟ್ಟ ಸಹಾಯ ಮಾಡಲು ಆರಂಭಿಸಿದ್ದಳು. ಹೀಗಾಗಿ ಸುಮಾರು ೧೨ ವರ್ಷ ಆಕೆಗೆ ನಾನೇ ಪ್ರತಿ ಬುಧವಾರ, ಒಂದಿಷ್ಟು ಹಣ ಕೊಟ್ಟು ಅಂಗಡಿಗೆ ಹೋಗಿ ಸಾಮಾನುಗಳನ್ನುಖರೀದಿಸಲು ತಿಳಿಸಿ, ರಾತ್ರಿಯ ಅಡುಗೆ ಮಾಡಲು ಹೇಳಲು ಆರಂಭಿಸಿದೆ. ಅದನ್ನವಳು ಪ್ರೀತಿಯಿಂದಲೇ ಮಾಡುತ್ತಾಳೆ. ಅವಳು ಅಡುಗೆಯಲ್ಲಿ ಈಗೆಷ್ಟು ಪರಿಣತಿ ಹೊಂದಿದ್ದಾಳೆಂದರೆ, ರಾತ್ರಿಯ ಊಟಕ್ಕೆ ಪರ್ಫೆಕ್ಟ್ ಆಗಿ ಇದ್ದ ಸಾಮಾನುಗಳ ಬಳಕೆಯಿಂದ ರುಚಿಕಟ್ಟಾಗಿ ಅಡುಗೆ ಮಾಡುತ್ತಾಳೆ. ಜೊತೆಗೆ ಕೊನೆಯಲ್ಲಿ ತಿನ್ನಲು ಸಿಹಿತಿನಿಸನ್ನೂ ಮಾಡಿಡುತ್ತಾಳೆ.
ಅವಳು ತುಂಬ ಸಣ್ಣವಳಿದ್ದಾಗ ಅಡುಗೆಯ ಬಗ್ಗೆ ನನ್ನ ಬಳಿ ಮಾತಾಡುತ್ತಾ, ʻಅಪ್ಪಾ, ನೀನೇಕೆ ಯಾವಾಗಲೂ ಅಡುಗೆ ಮಾಡುತ್ತಿ?ʼ ಎಂದು ಪ್ರಶ್ನೆ ಕೇಳಿದ್ದಳು. ಆಗ ನಾನು, ʻನಮ್ಮ ಜೊತೆಗಿರುವವರನ್ನು ಸಂತೋಷವಾಗಿಡಲು, ಆರೋಗ್ಯವಾಗಿಡಲು ಅಡುಗೆ ಮಾಡ್ತೇನೆ ಪುಟ್ಟಾʼ ಎಂದಿದ್ದೆ. ಹಾಗೆ ನೋಡಿದರೆ, ನನ್ನ ಹೆಂಡತಿಯನ್ನು ಮದುವೆಗೂ ಮೊದಲು ಇಂಪ್ರೆಸ್ ಮಾಡಲು ಅಡುಗೆಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದ್ದೆ.
ಹೀಗಾಗಿ, ನಮ್ಮ ಮನೆಯಲ್ಲಿ ಆಕೆ ಏನೇ ಹೊಸ ರೆಸಿಪಿ ಟ್ರೈ ಮಾಡಿದರೂ, ನಾನು ಬಾಯಿ ಚಪ್ಪರಿಸಿ ತಿಂದರೆ ಆಕೆ, ʻಅಪ್ಪಾ, ನಿನಗೆ ಇಷ್ಟವಾದರೆ ನನ್ನ ಅವನಿಗೂ (ಆಕೆಯ ಕ್ರಶ್) ಇಷ್ಟವಾದೀತು ಅಲ್ವಾʼ ಎಂದು ನಗುತ್ತಾಳೆ. ಆಗ ನಾವಿಬ್ಬರೂ ಮನಸೋ ಇಚ್ಛೆ ನಗುತ್ತಿದ್ದೆವು. ಇಂತಹ ಸುಂದರ ಗಳಿಗೆಗಳು ಸಾಗುತ್ತಿದ್ದ ಸಂದರ್ಭ ಇತ್ತೀಚೆಗೆ ಆಕೆಯ ಶಾಲೆಯಲ್ಲಿ ವಿಷಯವೊಂದನ್ನು ಆಯ್ಕೆ ಮಾಡಬೇಕಿದ್ದಾಗ ಆಕೆ, ʻಹೋಮ್ ಕುಕ್ಕಿಂಗ್ʼ ಆಯ್ಕೆ ಮಾಡಿದ್ದಳು. ಆಗ ಟೀಚರ್, ʻನೀವು ಯಾಕೆ ಅಡುಗೆ ಕಲಿಯಬೇಕು?ʼ ಎಂದು ಕೇಳಿದಾಗ ನನ್ನ ಮಗಳು, ʻನನ್ನ ಭವಿಷ್ಯದ ಗಂಡ ಹಾಗೂ ಮಕ್ಕಳನ್ನು ಸಂತೋಷವಾಗಿಡಲು ನಾನು ಅಡುಗೆ ಕಲಿಯುತ್ತೇನೆʼ ಎಂದಿದ್ದಳಂತೆ. ಇದು ದೊಡ್ಡ ಸುದ್ದಿಯಾಗಿ, ಟೀಚರು ಪ್ರಾಂಶುಪಾಲರಿಗೂ ಈ ವಿಷಯ ಮುಟ್ಟಿಸಿ, ಈ ಬಗ್ಗೆ ಸಾಕಷ್ಟು ಮೀಟಿಂಗ್ ನಡೆದು ಕೊನೆಗೆ ಮರುದಿನ ನನಗೆ ಶಾಲೆಯಿಂದ ಕರೆ ಬಂತು.
ʻನೀವು ನಿಮ್ಮ ಮಗಳನ್ನು ಕೆಟ್ಟದಾಗಿ ಬೆಳೆಸಿದ್ದೀರಿ. ಮಗಳನ್ನು ಗಂಡನ ಮನೆಯಲ್ಲಿ ಅಡುಗೆ ಮಾಡಿಕೊಂಡು ಬಿದ್ದಿರು ಎಂದು ಹೇಳಿದ್ದೀರಿʼ ಎಂದು ಆ ಮಹಿಳಾವಾದಿ ಟೀಚರ್ ನನ್ನ ಜೊತೆ ವಾಗ್ವಾದ ಮಾಡಿದ್ದಾರೆ. ಶಾಲೆಯಲ್ಲಿ ಇದೀಗ ಇದೇ ವಿಷಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಇದು ನನ್ನ ನೆಮ್ಮದಿಯನ್ನು ಹಾಳು ಮಾಡಿದೆ. ಈಗ ಹೇಳಿ ನಾನು ನನ್ನ ಮಗಳಿಗೆ ಅಡುಗೆ ಕಲಿಸಿದ್ದು ತಪ್ಪೇ?” ಎಂದು ಪ್ರಶ್ನೆ ಕೇಳಿದ್ದಾನೆ.
ಇದನ್ನೂ ಓದಿ | Life guide | ಜೀವನದಲ್ಲಿ ಸಫಲರಾಗಲು ಬೆನ್ನಿಗೆ ಬೇಕು ಇಂಥ ಮಾರ್ಗದರ್ಶಕರು!
ಇದಕ್ಕೆ ಹಲವರು ಉತ್ತರ ನೀಡಿದ್ದು, ಒಬ್ಬರು, ʻಇಲ್ಲಿ ಟೀಚರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನೀವು ಮಗಳನ್ನು ಅಡುಗೆ ಕಲಿಯಲು ಒತ್ತಾಯಿಸಿದ್ದೀರಿ ಹಾಗೂ ಇದು ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗುವಾಗ ಅವಶ್ಯ ಬೇಕಾಗುತ್ತದೆ ಎಂದು ಆಕೆಯ ತಲೆಯಲ್ಲಿ ತುಂಬಿದ್ದೀರಿ ಎಂಬಂತೆ ಟೀಚರ್ ಅರ್ಥ ಮಾಡಿಕೊಂಡಿದ್ದಾರೆ. ಆದರೆ ನಿಮ್ಮ ಮಗಳು ಸಣ್ಣವಳಿದ್ದಾಗಿಂದ ಗಂಡಸಾಗಿ ನೀವೇ ಅಡುಗೆಯಿಂದ ಹಿಡಿದು ಎಲ್ಲವನ್ನೂ ನಿಭಾಯಿಸಿರುವ ಕಾರಣ ಇಲ್ಲಿ ಅಂತಹ ಪ್ರಶ್ನೆಗಳೇ ಬರುವುದಿಲ್ಲ. ತಲೆಕೆಡಿಸಿಕೊಳ್ಳಬೇಡಿʼ ಎಂದಿದ್ದಾರೆ.
ಇನ್ನೊಬ್ಬರು, ʻಇಲ್ಲಿ ನಿಮ್ಮ ಮಗಳು ಅಡುಗೆಯನ್ನು ಇಷ್ಟಪಟ್ಟು ಮಾಡಿದರೆ ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಅದಲ್ಲದೆ, ಕೆಲವು ಮಹಿಳೆಯರು, ಮದುವೆಯಾದ ಮೇಲೆ ಕೆಲಸಕ್ಕೆ ಹೋಗಲು ಇಷ್ಟಪಡುವುದಿಲ್ಲ ಕೂಡಾ. ಮನೆಯಲ್ಲೇ ಇದ್ದು, ಮನೆಯ ಸಮಾಚಾರಗಳನ್ನು ನೋಡಿಕೊಳ್ಳಲು ಬಯಸುತ್ತಾರೆ. ಅದರಲ್ಲೇನೂ ತಪ್ಪಿಲ್ಲ, ಅವರವರ ಇಷ್ಟಕ್ಕೆ ಬಿಟ್ಟಿದ್ದುʼ ಎಂದಿದ್ದಾರೆ.
ಮತ್ತೊಬ್ಬರು, ʻಮನೆಯವರಿಗಾಗಿ ಅಡುಗೆ ಮಾಡುವುದು, ಎಲ್ಲರೂ ಸಂತೋಷದಿಂದಿರುವುದು ಬದುಕಿನಲ್ಲಿ ಬಹಳ ಮುಖ್ಯ. ನಾವು ಮಾಡಿದ ಅಡುಗೆಯನ್ನು ಮನೆಯವರು ಇಷ್ಟಪಟ್ಟು ತಿನ್ನುತ್ತಿದ್ದರೆ ಎಷ್ಟು ಖುಷಿ ಆಗುತ್ತದಲ್ಲವೇ? ಹಾಗಾಗಿ ಹೆಚ್ಚು ತಲೆಬಿಸಿ ಬೇಡ. ಬದುಕು ಸಿಂಪಲ್, ಅಡುಗೆ ಮಾಡಿ, ಮನೆಯವರಿಗೂ ಕೊಡಿ, ನೀವೂ ತಿನ್ನಿ, ಸಂತೋಷದಿಂದಿರಿ” ಎಂದಿದ್ದಾರೆ ಎಂಬಲ್ಲಿಗೆ ಸಿಂಗಲ್ ಅಪ್ಪ ಈಗ ಶಾಂತನಾಗಿದ್ದಾನೆ.
ಇದನ್ನೂ ಓದಿ | ವರ್ಕ್ ಫ್ರಂ ಮೌಂಟೇನ್: ಇಲ್ಲೆಲ್ಲಾ ಪ್ರವಾಸ ಮಾಡುತ್ತಾ ಕೆಲಸ ಮಾಡಿ!