ಮಹಿಳೆ ಪ್ರತಿ ಕುಟುಂಬದ ಕಣ್ಣು. ಕುಟುಂಬದ ಪ್ರತಿ ಸದಸ್ಯನ ಆರೋಗ್ಯದ ಉಸ್ತುವಾರಿ, ಕೀಲಿಕೈ ಆಕೆಯ ಜವಾಬ್ದಾರಿಯೂ ಆಗಿರುತ್ತದೆ. ಆದರೆ ಆಕೆಯ ಆರೋಗ್ಯವನ್ನು ಗಮನಿಸುವವರಾರು ಎಂಬ ಪ್ರಶ್ನೆ ಇಲ್ಲಿ ಬರದೇ ಇರುವುದಿಲ್ಲ. ಹಾಗೆ ನೋಡಿದರೆ, ಪ್ರತಿ ಮಹಿಳೆಯ ಆರೋಗ್ಯವೂ ಆಕೆಯ ಜೀವಿತಾವಧಿಯಲ್ಲಿ ಬದಲಾವಣೆ ಕಾಣುತ್ತಾ ಹೋಗುತ್ತದೆ. ಆರೋಗ್ಯದ ವಿಚಾರಕ್ಕೆ ಬಂದರೆ, ಪ್ರತಿ ದಶಕವೂ ಆಕೆಯ ಜೀವನದ ಮೈಲಿಗಲ್ಲು. ಇಂದು ಸುಶಿಕ್ಷಿತ ಮಹಿಳೆಗೆ ತನ್ನ ಆರೋಗ್ಯದ ಬಗ್ಗೆ ಯಾವೆಲ್ಲ ವಯಸ್ಸಿನಲ್ಲಿ ಕಾಳಜಿ ತೆಗೆದುಕೊಳ್ಳಬೇಕೆಂಬ ಅರಿವಿದೆ. ಆದರೆ, ಆಕೆಯೂ, ಕುಟುಂಬದ ಆರೋಗ್ಯದ ಜೊತೆಗೆ ವೃತ್ತಿ ಬದುಕನ್ನೂ ಹೆಗಲ ಮೇಲೆ ಹೊತ್ತುಕೊಂಡು ತನ್ನ ಆರೋಗ್ಯವನ್ನು ಕಡೆಗಣಿಸುತ್ತಾಳೆ. ಆದರೆ, ಮಹಿಳೆ ಕುಟುಂಬದ ಆರೋಗ್ಯದ ಜೊತೆಗೆ ಮುಖ್ಯವಾಗಿ ತನ್ನ ಆರೋಗ್ಯದ ಬಗ್ಗೆ ಗಮನ (health tips) ಕೊಡಬೇಕಿದೆ. ಪುರುಷರ ಆರೋಗ್ಯಕ್ಕಿಂತ ಮಹಿಳೆಯ ಆರೋಗ್ಯ ಕೊಂಚ ಭಿನ್ನ. ಆಕೆಯಲ್ಲಿ ಹಾರ್ಮೋನಿನ ವೈಪರೀತ್ಯ ಸೇರಿದಂತೆ ಸಂತಾನೋತ್ಪತ್ತಿಯ ಪ್ರಮುಖ ಜವಾಬ್ದಾರಿಯೂ ಇರುವುದರಿಂದ ಆಕೆಯ ದೇಹಾರೋಗ್ಯ ಕಾಲಕಾಲಕ್ಕೆ ಬದಲಾವಣೆ ಕಾಣುತ್ತದೆ. ಹಾಗಾಗಿ, ಅವುಗಳ ಬಗ್ಗೆ ಗಮನ ಅತೀ ಅಗತ್ಯ. ಒಳ್ಳೆಯ ಜೀವನಶೈಲಿ, ಪೋಷಕಾಂಶಯುಕ್ತ ಆಹಾರ ಆಕೆಗೆ ಅತ್ಯಂತ ಅಗತ್ಯ. ನಿರ್ಲಕ್ಯ್ಷ ಮಾಡಿದರೆ, ಆಕೆಯನ್ನು ಸದಾ ಮೌನವಾಗಿ ಕಾಡುವ ಅನಾರೋಗ್ಯಗಳು ಇವು.
1. ರಕ್ತಹೀನತೆ: ಇದು ಕೇಳಲು ಬಹು ಸರಳವಾದ ಸಮಸ್ಯೆ. ಸಮಸ್ಯೆಯೇ ಅಲ್ಲ ಎಂಬಂತೆ ಮಹಿಳೆಯರು ನಡೆದುಕೊಳ್ಳುವುದುಂಟು. ಕಿಶೋರಾವಸ್ಥೆಗೆ ಕಾಲಿಟ್ಟ ತಕ್ಷಣ ಹುಡುಗಿಯರ ದೇಹದಲ್ಲಾಗುವ ಹಾರ್ಮೋನ್ ಬದಲಾವಣೆಯ ಸಮಯದಲ್ಲಿ ಸಾಕಷ್ಟು ಪೋಷಕಾಂಶಗಳು ದೇಹಕ್ಕೆ ಲಭ್ಯವಾಗದಿದ್ದರೆ ಅಂಥ ಸಮಯದಲ್ಲಿ ಬಹುವಾಗಿ ಕಾಡುವ ಸಮಸ್ಯೆ. ಇದರಿಂದ ನಿಃಶಕ್ತಿ ಉಂಟಾಗುತ್ತದೆ. ಹಾಗಾಗಿ ಮಹಿಳೆಯರು ಬಲವರ್ಧನೆಗೆ ಸರಿಯಾದ ಪೋಷಕಾಂಶಯುಕ್ತ ಆಹಾರವನ್ನು ಎಲ್ಲ ವಯಸ್ಸಿನಲ್ಲೂ ಸೇವಿಸಬೇಕು. ಎಲ್ಲ ಬಗೆಯ ತರಕಾರಿ, ಹಣ್ಣುಗಳು, ಕಬ್ಬಿಣಾಂಶಯುಕ್ತ ಆಹಾರ ಸೇವಿಸಬೇಕು.
2. ತಿನ್ನುವ ಸಮಸ್ಯೆ: ಕಿಶೋರಾವಸ್ಥೆ ಬಂದ ಕೂಡಲೇ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಜಾಗೃತರಾಗುತ್ತಾರೆ. ಹಾರ್ಮೋನಿನ ಸಮಸ್ಯೆಯಿಂದಾಗಿ ಚರ್ಮದ ಸಮಸ್ಯೆ ಸೇರಿದಂತೆ ಸೌಂದರ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೆಚ್ಚಾದ ತೂಕ, ಬದಲಾಗುವ ಚರ್ಮ ಎಲ್ಲದಕ್ಕೆ ಸಮಾಜದಿಂದ ಎದುರಾಗುವ ಮಾತಿನ ಬಗ್ಗೆ ಹೆಚ್ಚು ಚಿಂತೆ ಆರಂಭವಾಗುತ್ತದೆ. ಅದಕ್ಕಾಗಿಯೇ ಹೆಣ್ಣುಮಕ್ಕಳಿಗೆ ಪಾಸಿಟಿವ್ ಮನಸ್ಥಿತಿಯನ್ನು ಈ ವಯಸ್ಸಿನಿಂದಲೇ ಕಲಿಸಬೇಕಿದೆ. ಜೊತೆಗೆ ಈ ಎಲ್ಲ ಆರೋಗ್ಯವನ್ನು ಸಾಧಿಸಲು ಸಣ್ಣ ವಯಸ್ಸಿನಲ್ಲಿಯೇ ಒಳ್ಳೆಯ ಆಹಾರ, ತಾಜಾ ಹಣ್ಣು ತರಕಾರಿಗಳ ಸೇವನೆಯೂ ಬಹಳ ಮುಖ್ಯವಾಗುತ್ತದೆ.
3. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್/ಡಿಸೀಸ್ (ಪಿಸಿಒಡಿ): ಸಮಸ್ಯೆ ಮೊದಲಿನಿಂದಲೇ ಅನೇಕರಿಗೆ ಇದ್ದರೂ ಬಹಳಷ್ಟು ಮಂದಿಗೆ ಅರಿವಿಗೆ ಬರುವುದು ಮದುವೆಯ ನಂತರವೇ. ಮದುವೆಯಾಗಿ ಮಕ್ಕಳಾಗುವಲ್ಲಿ ಸಮಸ್ಯೆಗಳು ಅರಿವಿಗೆ ಬಂದಾಗ ಬಹಳಷ್ಟು ಮಂದಿಗೆ ಈ ಸಮಸ್ಯೆಗೆ ಮೂಲ ಕಾರಣ ಪಿಸಿಒಡಿ ಎಂಬುದು ಗೊತ್ತಾಗುತ್ತದೆ. ಇದರಿಂದ ಬೊಜ್ಜು ಬರುವುದು, ಹಾರ್ಮೋನಿನ ಸಮಸ್ಯೆ, ಮೂಡು ಏರುಪೇರು, ಅತಿಯಾದ ಮೊಡವೆ ಸಮಸ್ಯೆ, ಋತುಚಕ್ರದಲ್ಲಿ ಏರುಪೇರು ಇತ್ಯಾದಿ ಸಮಸ್ಯೆಗಳು ಬರುತ್ತದೆ. ಇದಕ್ಕಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಹಾಗೂ ಜಂಕ್‌ನಿಂದ ದೂರವಿರುವುದು, ಉತ್ತರ ಜೀವನಪದ್ಧತಿ ಒಳ್ಳೆಯದು.
4. ಎಲುಬಿನ ತೊಂದರೆ: 30 ದಾಟಿದ ಕೂಡಲೇ ಮಹಿಳೆಯರ ಮೂಳೆ ಶಕ್ತಿಗುಂದಲು ಆರಂಭಿಸುತ್ತದೆ. ಹೀಗಾಗಿ ಕ್ಯಾಲ್ಶಿಯಂ ಅಗತ್ಯ ಮಹಿಳೆಗಿದೆ. ಹಾಲು, ಪನೀರ್, ಮೊಸರು ಇತ್ಯಾದಿ ಡೈರಿ ಉತ್ಪನ್ನಗಳ ಸೇವನೆ ಮಹಿಳೆಗೆ ಅತ್ಯಂತ ಅಗತ್ಯ. 40, 50 ಆಗುತ್ತಿದ್ದಂತೆ ಏಲುಬಿನ ಸವೆತದಂತಹ ತೊಂದರೆಗಳು ನಿಚ್ಚಳವಾಗಿ ಕಾಣತೊಡಗುತ್ತದೆ.
5. ತೂಕದಲ್ಲಿ ಹೆಚ್ಚಳ: ಮಹಿಳೆಯರ ದೇಹದಲ್ಲಿ ಪುರುಷರ ದೇಹಕ್ಕಿಂತ ಹೆಚ್ಚು ಕೊಬ್ಬು ಶೇಖರಣೆಯಾಗುತ್ತದೆ. ಇದರಿಂದಾಗಿಯೇ ಅಧಿಕ ರಕ್ತದೊತ್ತಡ, ಹೃದಯದ ತೊಂದರೆಗಳು, ಮಧುಮೇಹದಂತಹ ಸಮಸ್ಯೆ ಆಕೆಯನ್ನು ಕಾಡುತ್ತವೆ. ಹಾಗಾಗಿ ನಿಯಮಿತ ವ್ಯಾಯಾಮ ಆಕೆಗೆ ಅತ್ಯಂತ ಅಗತ್ಯ.
6. ಋತುಬಂಧ: ಮೆನೋಪಾಸ್ ಅಥವಾ ಋತುಬಂಧ ಮಹಿಳೆಯನ್ನು ಕಾಡುವ ಇನ್ನೊಂದು ಸಮಸ್ಯೆ. ಈ ಸಮಯದಲ್ಲಿ ಆಕೆಯಲ್ಲಾಗುವ ಹಾರ್ಮೋನ್ ವೈಪರೀತ್ಯದಿಂದಾಗಿ ಆಕೆಯ ಆರೋಗ್ಯ ಕುಸಿಯುತ್ತದೆ. ಶಕ್ತಿ ಕುಂದುತ್ತದೆ. ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ.
ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!
7. ಹೃದಯದ ತೊಂದರೆ: ಋತುಬಂಧದ ನಂತರ ಮಹಿಳೆಯಲ್ಲಿ ಹೃದಯದ ಸಮಸ್ಯೆಗಳು ಉಂಟಾಗುವ ಸಂಭವ ಹೆಚ್ಚು. ತೂಕದಲ್ಲಾಗುವ ಹೆಚ್ಚಳವೂ ಇದಕ್ಕೆ ಕಾರಣ. ಪ್ರತಿದಿನವೂ ವ್ಯಾಯಾಮ, ನಡಿಗೆ, ಉತ್ತಮ ಆಹಾರ ಸೇವನೆ ಬಹಳ ಮುಖ್ಯ.
8 ಮಧುಮೇಹ: ಋತುಬಂಧ ನೇರವಾಗಿ ಮಧುಮೇಹಕ್ಕೆ ಕಾರಣವಲ್ಲದಿದ್ದರೂ, ಈ ವಯಸ್ಸಿನ ನಂತರ ದೇಹದಲ್ಲಾಗುವ ಬದಲಾವಣೆ, ತೂಕದ ಹೆಚ್ಚಳ, ರಕ್ತದೊತ್ತಡ ಇತ್ಯಾದಿಗಳು ಮಧುಮೇಹಕ್ಕೆ ಕಾರಣವಾಗುತ್ತದೆ. ಸರಿಯಾದ ಸಮಯಕ್ಕೆ ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ.
9. ಮಾನಸಿಕ ಸಮಸ್ಯೆಗಳು: ಖಿನ್ನತೆ ಹಾಗೂ ಒತ್ತಡ ಮಹಿಳೆಯರು ಎದುರಿಸುವ ಸಾಮಾನ್ಯ ಮಾನಸಿಕ ಸಮಸ್ಯೆಗಳು. ವಯಸ್ಸಾಗುತ್ತಿದ್ದಂತೆ ಕಂಡುಬರುವ ಸಮಸ್ಯೆಗಳಿವು. ಆಂಟಿ ಆಕ್ಸಿಡೆಂಟ್‌ಯುಕ್ತ ಆಹಾರಗಳ ಸೇವನೆ ಇದಕ್ಕೆ ಬಹಳ ಮುಖ್ಯ. ಕಾರ್ಬೋಹೈಡ್ರೇಟ್‌ಯುಕ್ತ ಆಹಾರ ಕೂಡಾ ಅಷ್ಟೇ ಮುಖ್ಯ. ಇವು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಅಗತ್ಯ.
ಇದನ್ನೂ ಓದಿ: Health Tips: ಗ್ಯಾಸ್, ಹೊಟ್ಟೆಯುಬ್ಬರ ಸಮಸ್ಯೆಯ ನಿಯಂತ್ರಣಕ್ಕೆ ಸುಲಭೋಪಾಯಗಳು!