ಹದಿಹರೆಯದಿಂದ ಆರಂಭವಾಗುವ ಮೊಡವೆಯ ಸಮಸ್ಯೆ ಬಹುತೇಕರಿಗೆ ಬಹಳ ಕಾಲದವರೆಗೆ ಕಾಡುವ ಚರ್ಮದ ಸಮಸ್ಯೆ (Skin care). ಏನೇ ಮಾಡಿದರೂ ಮೊಡವೆಯನ್ನು ಹೊಡೆದೋಡಿಸಲು, ಮೊಡವೆಯಿಂದಾದ ಕಲೆಗಳ ವಿರುದ್ಧ ಹೋರಾಡಲು ಶ್ರಮ, ಸಮಯ ತೆಗೆದುಕೊಂಡಷ್ಟು ಬಹುಶಃ ಬೇರೆ ಸಣ್ಣಪುಟ್ಟ ಸಮಸ್ಯೆಗಳಿಗೆ ತಲೆಕೆಡಿಸಿಕೊಂಡವರು ಇರಲಿಕ್ಕಿಲ್ಲ. ಸಮಸ್ಯೆ ಸಣ್ಣದಾಗಿ ಕಂಡರೂ ಸೌಂದರ್ಯ ಸಮಸ್ಯೆಯಾದ್ದರಿಂದ, ಎಲ್ಲರಿಗೂ ತಾವು ಸುಂದರವಾಗಿ ಕಾಣಬೇಕೆಂಬ ಬಯಕೆ ಇರುವುದರಿಂದ ನಾನಾ ಪ್ರಯೋಗಗಳನ್ನು ಮನೆಮದ್ದುಗಳ ಮೂಲಕ, ವೈದ್ಯರ ಮೂಲಕ ಮಾಡುವವರೇ. ಬ್ಯೂಟಿಪಾರ್ಲರುಗಳಿಗೆ ಎಡತಾಕುವವರೇ. ಚರ್ಮದ ವೈದ್ಯರನ್ನೂ ಕಾಣುವವರೇ. ಆದರೂ, ಇದೊಂದು ಸಮಸ್ಯೆಗೆ ಸರಿಯಾದ ತೃಪ್ತಿಕರ ಪರಿಹಾರ ಕಂಡುಕೊಂಡವರೇ ಇಲ್ಲ!
ರೆಟಿನಾಲ್, ಸ್ಯಾಲಿಸಿಲಿಕ್ ಆಸಿಡ್ ಇರುವ ಕ್ರೀಮು ಸೀರಂಗಳು ವೈದ್ಯಕೀಯವಾಗಿ ಮೊಡವೆಯನ್ನು ಹೊಡೆದೋಡಿಸುವಲ್ಲಿ ಸಾಕಷ್ಟು ಪ್ರಯೋಜನ ನೀಡಿದರೂ, ದೇಹದೊಳಗಿನ ಆರೋಗ್ಯಕ್ಕೆ ಗಮನ ಕೊಡುವ ಮೂಲಕವೂ (health tips) ಹೊರಗಿನ ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡಬಹುದು. ಹೊರಗಿನ ಲೇಪಗಳು ಎಷ್ಟೇ ಇದ್ದರೂ ಒಳಗಿನ ಆರೋಗ್ಯ ಇಲ್ಲಿ ಬಹುಮುಖ್ಯವಾಗುತ್ತದೆ. ಚರ್ಮದ ಆರೋಗ್ಯಕ್ಕೆ ಸಂಬಂಧಿಸಿ ನಮ್ಮನ್ನು ಮೊಡವೆ, ಕಪ್ಪುಕಲೆಗಳಿಂದ ದೂರವಿರಿಸಬಲ್ಲ, ದಿನನಿತ್ಯ ಉಣ್ಣುವ ಹಣ್ಣು ತರಕಾರಿಗಳ ಡಿಟಾಕ್ಸ್ ಡ್ರಿಂಕ್‌ಗಳಿಂದಲೂ (Detox drinks) ಮುಖದ ಸೌಂದರ್ಯ ಇಮ್ಮಡಿಗೊಳಿಸಬೇಕೆಂಬ ಬಯಕೆಯಿದ್ದವರು, ಮೊಡವೆಯ ತೊಂದರೆಯಿಂದ ಶಾಶ್ವತವಾಗಿ ದೂರ ಇರಬೇಕೆಂದು ಬಯಸುವವರು ಈ ಡಿಟಾಕ್ಸ್ ಪಾನೀಯಗಳನ್ನು ನಿತ್ಯ ಸೇವಿಸಬಹುದು. ಜೊತೆಗೆ ಕಾರ್ಬೋನೇಟೆಡ್ ಡ್ರಿಂಕ್‌ಗಳು, ಪ್ಯಾಕ್ಡ್ ಜ್ಯೂಸ್‌ಗಳಿಂದ ದೂರವಿದ್ದು ಇಂತಹವುಗಳನ್ನೇ ಅಭ್ಯಾಸ ಮಾಡಿಕೊಂಡರೆ ಚರ್ಮ ಒಳಗಿನಿಂದಲೇ ಕಲೆರಹಿತವಾಗಿ ಕಳೆಕಳೆಯಾಗಿ ನಳನಳಿಸುತ್ತದೆ.
1. ಗ್ರೀನ್ ಟೀ: ಅತ್ಯಂತ ಪ್ರಖ್ಯಾತ ಬೆಳಗ್ಗಿನ ಪೇಯಗಳಲ್ಲಿ ಇದೂ ಒಂದು. ಹಾಗೆಯೇ ಅತ್ಯಂತ ಪರಿಣಾಮಕಾರಿ ಕೂಡಾ. ಇದರಲ್ಲಿ ನೈಸರ್ಗಿಕ ಆಂಟಿಓಕ್ಸಿಡೆಂಟ್‌ಗಳು ಇರುವುದರಿಂದ ಇದು ಚರ್ಮದ ಬಾವು, ಯುವಿ ರೇಡಿಯೇಷನ್ ಪರಿಣಾಮಗಳು ಹಾಗೂ ಕೆಂಪಾಗುವಿಕೆ ಮತ್ತಿತರ ತೊಂದರೆಗಳನ್ನು ನಿವಾರಿಸುತ್ತದೆ. ಗ್ರೀನ್ ಟೀ ನಮ್ಮ ಚರ್ಮಕ್ಕೆ ಬೇಕಾದ ನೀರನ್ನೂ ಪೂರೈಸುವ ಮೂಲಕ ಮುಖವನ್ನು ತಾಜಾ ಆಗಿಯೂ ಕಾಣುವಂತೆ ಮಾಡುತ್ತದೆ.
2. ಎಳನೀರು: ಎಳನೀರಿನಷ್ಟು ಉತ್ತಮ ನೈಸರ್ಗಿಕ ಪಾನೀಯ ಮತ್ತೊಂದಿಲ್ಲ. ಇದರಲ್ಲಿರುವ ವಿಟಮಿನ್ ಸಿ, ಆಂಟಿ ಓಕ್ಸಿಡೆಂಟ್‌ಗಳು, ವಿಟಮಿನ್ ಬಿ2, ಬಿ3, ಕ್ಯಾಲ್ಶಿಯಂ ಹಾಗೂ ಖನಿಜಾಂಶಗಳು ಚರ್ಮದ ಆರೋಗ್ಯಕ್ಕೆ ಬಹಳ ಮುಖ್ಯವಾದವುಗಳು. ಇದು ಚರ್ಮದ ಕೊಲಾಜೆನ್ ಉತ್ಪಾದನೆಯನ್ನು ಉದ್ದೀಪನಗೊಳಿಸುವ ಮೂಲಕ ಮುಖದ ನಿರಿಗೆಗಳನ್ನೂ ಕಡಿಮೆ ಮಾಡಿ ಯೌವನದ ಕಳೆಯನ್ನು ಜಿನುಗಿಸುತ್ತದೆ.
3. ನಿಂಬೆ ಹಾಗೂ ಜೇನುತುಪ್ಪ: ಉಗುರು ಬೆಚ್ಚಗಿನ ಬಿಸಿನೀರಿಗೆ ನಿಂಬೆಹಣ್ಣಿನ ರಸ ಹಾಗೂ ಜೇನುತುಪ್ಪ ಸೇರಿಸಿ ಕುಡಿಯುವುದು ತೂಕ ಇಳಿಸುವಲ್ಲಿ ಮುಖ್ಯ ಪಾತ್ರ ವಹಿಸುವಂತೆಯೇ ಚರ್ಮದ ಆರೋಗ್ಯಕ್ಕೂ ಉತ್ತಮ ಟಾನಿಕ್. ಇದರಲ್ಲಿರುವ ವಿಟಮಿನ್ ಸಿ ಮುಖದ ಚರ್ಮವನ್ನು ತಾಜಾ ಹಾಗೂ ಕೋಮಲವಾಗಿರಿಸುವುದಲ್ಲದೆ, ಜೇನುತುಪ್ಪವು ಮುಖದ ಚರ್ಮದಲ್ಲಿರುವ ಹೆಚ್ಚುವರಿ ತೈಲವನ್ನು ಹೊಡೆದೋಡಿಸುತ್ತದೆ.
4. ಕ್ಯಾರೆಟ್ ಹಾಗೂ ಬೀಟ್‌ರೂಟ್ ಜ್ಯೂಸ್: ಇವೆರಡೂ ಪೋಷಕಾಂಶಗಳ ಪವರ್‌ಹೌಸ್‌ಗಳು. ಪ್ರತಿದಿನವೂ ಇವೆರಡರ ಜ್ಯೂಸ್ ಕುಡಿದರೆ, ದೇಹದಲ್ಲಿ ನಿಜವಾದ ಬದಲಾವಣೆ ಖಂಡಿತವಾಗಿಯೂ ಗೋಚರಿಸಲಾರಂಭಿಸುತ್ತದೆ. ದೇಹದ ಕಶ್ಮಲಗಳನ್ನು ಇದು ಹೊಡೆದೋಡಿಸುವುದಲ್ಲದೆ, ಲಿವರ್ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. ಮುಖದ ಚರ್ಮದಲ್ಲೂ ಸಾಕಷ್ಟು ಬದಲಾವಣೆ ಕಾಣುತ್ತದೆ. ಮುಖವು ಹೆಚ್ಚು ಕೋಮಲ, ತಾಜಾ ಹಾಗೂ ಕಲೆರಹಿತವಾಗಿ, ಒಳಗಿನಿಂದ ಚರ್ಮಕ್ಕೆ ಹೊಳಪು ನೀಡಲು ಇದೊಂದು ಅದ್ಭುತ ಪೇಯ.
5. ದಾಳಿಂಬೆ ಜ್ಯೂಸ್: ದಾಳಿಂಬೆ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮವಾದ ಹಣ್ಣು. ಚರ್ಮದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಎ, ಇ ಹಾಗೂ ಸಿ ಮೂರೂ ಅಂಶಗಳೂ ಈ ಹಣ್ಣಿನಲ್ಲಿ ಇರುವುದರಿಂದ ಮುಖದಲ್ಲಿ ಕಪ್ಪು ಕಲೆಗಳಾಗುವುದನ್ನು ಇದು ತಡೆಯುತ್ತದೆ. ಚರ್ಮದಲ್ಲಿ ಆರೋಗ್ಯಕರ ಹೊಳಪು ಒಳಗಿನಿಂದಲೇ ಪ್ರತಿಫಲಿಸುತ್ತದೆ. ದಾಳಿಂಬೆ ಒಗರಿನಂತಾಗಿ ಇಷ್ಟವಾಗದಿದ್ದರೆ, ಕಿತ್ತಳೆಹಣ್ಣಿನ ಜ್ಯೂಸ್ ಕೂಡಾ ಕುಡಿಯಬಹುದು. ಇದೂ ದಾಳಿಂಬೆಯಂಥದ್ದೇ ಉಪಯೋಗವನ್ನು ನೀಡುವ ಇನ್ನೊಂದು ಹಣ್ಣು.
ಇದನ್ನೂ ಓದಿ: Health Tips: ಸಿಪ್ಪೆ ಎಂಬ ಪೋಷಕಾಂಶಗಳ ಪ್ಯಾಕೇಜ್: ತರಕಾರಿ ಹಣ್ಣುಗಳ ಸಿಪ್ಪೆಯನ್ನು ತಿಪ್ಪೆಗೆ ಎಸೆಯದಿರಿ!
6. ಅರಿಶಿನ ಹಾಲು: ಅರಿಶಿನವನ್ನು ಮೊಡವೆಯ ತೊಂದರೆಗಳಿಗೆ ಮುಖಕ್ಕೆ ಹಚ್ಚುವುದು ಭಾರತದಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದ ಮನೆಮದ್ದು. ಅರಿಶಿನದಲ್ಲಿರುವ ರೋಗನಿರೋಧಕ ಶಕ್ತಿ ಎಲ್ಲರಿಗೂ ತಿಳಿದಿರುವಂಥದ್ದೇ. ಬಿಸಿಹಾಲಿಗೆ ಅರಿಶಿನ ಹಾಕಿ ಕುಡಿಯುವುದು ದೇಹಾರೋಗ್ಯಕ್ಕೆ, ಶಕ್ತಿ ಚೈತನ್ಯಕ್ಕಷ್ಟೇ ಅಲ್ಲ, ಚರ್ಮದ ಆರೋಗ್ಯಕ್ಕೂ ಬಹಳ ಒಳ್ಳೆಯದು.
7. ಆಲೋವೆರಾ ಜ್ಯೂಸ್: ಮೊಡವೆ, ಕಪ್ಪುಕಲೆ, ಸುಕ್ಕು ಮೊದಲಾದ ತೊಂದರೆಗಳಿಗೆ ರಾಮಬಾಣವಾಗಿರುವ ಆಲೋವೆರಾ ಚರ್ಮದ ಆರೋಗ್ಯ ಕ್ಷೇತ್ರದಲ್ಲಿ ವ್ಯಾಹಕವಾಗಿ ಬಳಕೆಯಾಗುತ್ತದೆ. ಸೂರ್ಯ ಝಳದಿಂದ ಚರ್ಮವನ್ನು ರಕ್ಷಿಸುವ ಗುಣವನ್ನೂ ಇದು ಹೊಂದಿದ್ದು ಇದರ ಜ್ಯೂಸ್ ನಿತ್ಯ ಕುಡಿಯುವ ಮೂಲಕ ಹಲವಾರು ಚರ್ಮದ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
8. ಹಸಿರು ಜ್ಯೂಸ್: ಪಾಲಕ್, ಪುದಿನ, ಸೌತೆಕಾಯಿ ಮತ್ತಿತರ ಹಸಿರು ತರಕಾರಿ ಹಾಗೂ ಸೊಪ್ಪುಗಳ ಜ್ಯೂಸ್ ಕೂಡಾ ಒಳ್ಳೆಯದು, ತೂಕ ಕಡಿಮೆ ಮಾಡುವ ಡ್ರಿಂಕ್‌ಗಳಾಗಿ ಇವು ಕೆಲಸ ಮಾಡುವುದಲ್ಲದೆ, ಇವುಗಳಲ್ಲಿರುವ ಪೋಷಕಾಂಶಗಳು ಚರ್ಮವನ್ನು ಒಳಗಿನಿಂದಲೇ ಆರೋಗ್ಯವಾಗಿರಿಸುವ ಮೂಲಕ ನವ ಚೈತನ್ಯ ಚಿಮ್ಮಿಸುತ್ತವೆ.
ಇದನ್ನೂ ಓದಿ: Health tips: ಬಾಯಿಯ ದುರ್ವಾಸನೆಯೇ? ನಿಮ್ಮಲ್ಲೇ ಇವೆ ಪರಿಹಾರಗಳು!