Site icon Vistara News

Women’s Day 2024: ಮೀನಾ ಬಿಂದ್ರಾರ ಕನಸಿನ ಕೂಸು ‘ಬೀಬಾ’ ಪ್ರತಿ ಮಹಿಳೆಗೂ ಸ್ಫೂರ್ತಿಕತೆ!

meena bindra biba

ಮಹಿಳೆಯರು (Women’s Day 2024) ಇಂದು ಕಾಲಿಡದ ಕ್ಷೇತ್ರವಿಲ್ಲ. ಪುಟ್ಟ ಕನಸೊಂದನ್ನು ಕಂಡು ಅದನ್ನು ಬಹುಕೋಟಿ ಉದ್ಯಮವನ್ನಾಗಿ ಬೆಳೆಸುವ ಚಾಕಚಕ್ಯತೆಯೂ ಮಹಿಳೆಗಿದೆ ಎಂಬುದನ್ನು ಸಾಧಿಸಿ ತೋರಿಸಿದ ಮಹಿಳಾ ಉದ್ಯಮಿಗಳು ಇಂದು ನಮ್ಮ ನಡುವೆ ಅನೇಕರಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟು ತಮ್ಮ ಕನಸಿನ ಪ್ರಪಂಚವನ್ನು ವಿಸ್ತರಿಸಿ ಎಲ್ಲರನ್ನು ತಮ್ಮತ್ತ ನೋಡುವಂತೆ ಮಾಡಿದ ಮಹಿಳೆಯರ ಕತೆಗಳಿಂದು ಹಲವರಿಗೆ ಸ್ಫೂರ್ತಿಯಾಗಿದೆ. ಇಂತಹ ಕತೆಗಳಲ್ಲಿ ಬೀಬಾ ಬ್ರ್ಯಾಂಡ್‌ನ ಕತೆಯೂ ಒಂದು.
ಬಹಳಷ್ಟು ಮಂದಿ ಬೀಬಾ ಹೆಸರಿನ ಬ್ರ್ಯಾಂಡ್‌ನ ಬಟ್ಟೆಗಳನ್ನು ಧರಿಸಿರಬಹುದು. ಶಾಪಿಂಗ್‌ ಮಾಲ್‌ಗಳಲ್ಲಿ, ಬೀಬಾ ಔಟ್‌ಲೆಟ್‌ನಲ್ಲಿ ಖರೀದಿಸಿರಬಹುದು.

ಜನಪ್ರಿಯ ಬ್ರಾಂಡ್

ಮಹಿಳಾ ಫ್ಯಾಷನ್‌ ಜಗತ್ತಿನಲ್ಲಿ ಬೀಬಾ ಹೆಸರು ಸಾಕಷ್ಟು ಹೆಸರು ಮಾಡಿರುವ ಬ್ರ್ಯಾಂಡ್‌. ಇಂಥ ಬ್ರ್ಯಾಂಡ್‌ ಒಂದು ಕೇವಲ ೮ ಸಾವಿರ ರೂಪಾಯಿಗಳ ಹೂಡಿಕೆಯಿಂದ ಆರಂಭವಾಗಿದ್ದು ಎಂದರೆ ನಂಬುತ್ತೀರಾ? ಹೌದು ನಂಬಲೇಬೇಕು. ಈ ಬೀಬಾದ ಯಶಸ್ಸಿನ ಹಿಂದೆ ಮೀನಾ ಬಿಂದ್ರಾ ಎಂಬ ಯಶಸ್ವೀ ಮಹಿಳಾ ಉದ್ಯಮಿಯ ಹಗಲಿರುಳಿನ ಶ್ರಮವಿದೆ.
ಬೀಬಾ ಬ್ರ್ಯಾಂಡ್‌ನ ಸಂಸ್ಥಾಪಕಿ ಮೀನಾ ಬಿಂದ್ರಾ. ಈ ಬ್ರ್ಯಾಂಡ್‌ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಕೋಟಿ ವಹಿವಾಟು ನಡೆಸುವ ಭಾರತೀಯ ಸಾಂಪ್ರದಾಯಿಕ ಫ್ಯಾಷನ್‌ ದಿರಿಸುಗಳ ಬ್ರ್ಯಾಂಡ್‌. ಇದು ಆರಂಭವಾದ ಕತೆ, ಬಹುಶಃ ಕನಸು ಕಾಣುವ ಪ್ರತಿಯೊಬ್ಬ ಮಹಿಳೆಗೂ ಸ್ಪೂರ್ತಿ. ಮನಸ್ಸು ಮಾಡಿದರೆ, ಶ್ರಮ ಪಟ್ಟರೆ, ಗುರಿ ಅಚಲವಾಗಿದ್ದರೆ, ಮಹಿಳೆ ಏನೂ ಮಾಡಬಹುದು ಎಂಬುದಕ್ಕೆ ಸಾಕ್ಷಿ.

ಇಪ್ಪತ್ತನೇ ವಯಸ್ಸಿನಲ್ಲಿ ಆರಂಭ

ತನ್ನ 20ನೇ ವಯಸ್ಸಿನಲ್ಲಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರೈಸಿದ ಮೀನಾ ಬಿಂದ್ರಾಗೆ ಎಲ್ಲರಂತೆ ಶಿಕ್ಷಣದ ನಂತರ ಮದುವೆಯಾಗಿ ಗಂಡನ ಮನೆಗೆ ಸೇರಿಕೊಂಡರು. ಎಲ್ಲರಂತೆ, ಮನೆಯ ಕೆಲಸ, ಇಬ್ಬರು ಮಕ್ಕಳ ಜವಾಬ್ದಾರಿಗಳಿದ್ದ ಮೀನಾ, ತಮ್ಮ ಆಸಕ್ತಿಗೂ ಕೊಂಚ ಸಮಯ ಕೊಡುತ್ತಿದ್ದರಂತೆ. ಬಟ್ಟೆಗಳ ಡಿಸೈನಿಂಗ್‌ ಮತ್ತಿತರ ಕೆಲಸಗಳನ್ನು ಬಿಡುವಿನ ಸಮಯದಲ್ಲಿ ಮನೆಯಲ್ಲೇ ಮಾಡುತ್ತಿದ್ದ ಮೀನಾ ಇದನ್ನು ಉದ್ದಿಮೆಯಾಗಿ ಪರಿವರ್ತಿಸುವ ಕನಸು ಕಂಡರು. ಆದರೆ, ಕೈಯಲ್ಲಿ ದುಡ್ಡಿರಲಿಲ್ಲ. ಸ್ವಂತದ್ದೊಂದು ಬ್ಯಾಂಕ್‌ ಖಾತೆಯೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ಗಂಡ ಬ್ಯಾಂಕ್‌ ಒಂದರಿಂದ ಎಂಟು ಸಾವಿರ ರೂಪಾಯಿಗಳ ಸಾಲ ಮಾಡಿ ಈ ಬ್ರ್ಯಾಂಡ್‌ನ ಕನಸಿಗೆ ಬೆನ್ನೆಲುಬಾಗಿ ನಿಂತರು. 1987ರಲ್ಲಿ ಬೀಬಾ ಆರಂಭವಾದದ್ದು ಹೀಗೆ. ಅಂದಿನಿಂದ ಇಂದಿನವರೆಗೆ ಬೀಬಾ ಮತ್ತೆ ಹಿಂತಿರುಗಿ ನೋಡಿಲ್ಲ.
2004ರಲ್ಲಿ ಬೀಬಾ ತನ್ನ ಮೊದಲ ಔಟ್‌ಲೆಟ್‌ ಅನ್ನು ಮುಂಬೈನಲ್ಲಿ ತೆರೆಯಿತು. ನಂತರ ಒಂದಾದ ನಂತರ ಒಂದು ಔಟ್‌ಲೆಟ್‌ಗಳನ್ನು ತೆರೆಯುತ್ತಾ ಸಾಗಿದ ಬೀಬಾ ಪ್ರಸಿದ್ಧಿಯ ಉತ್ತುಂಗಕ್ಕೇರಿತು. 2012ರಲ್ಲಿ ಬೀಬಾದ ವಾರ್ಷಿಕ ವಹಿವಾಟು 300 ಕೋಟಿ ರೂಪಾಯಿಗಳಿಗೇರಿತು. 2020ರಲ್ಲಿ ಇದು ದುಪ್ಪಟ್ಟಾಗಿ, 600 ಕೋಟಿಗೇರಿತು!

ದೇಶಾದ್ಯಂತ ಔಟ್ ಲೆಟ್

ಪ್ರಸ್ತುತ ಬೀಬಾಕ್ಕೆ ಭಾರತದುದ್ದಕ್ಕೂ 79 ನಗರಗಳಲ್ಲಿ 180 ಔಟ್‌ಲೆಟ್‌ಗಳಿವೆ. ಜೊತೆಗೆ 275ಕ್ಕೂ ಹೆಚ್ಚು ಮಲ್ಟಿ ಬ್ರ್ಯಾಂಡ್‌ ಶೋರೂಂಗಳಲ್ಲಿ ತನ್ನ ಸ್ಥಾನ ಗಿಟ್ಟಿಸಿದೆ. ಸದ್ಯ ವಾರ್ಷಿಕ 750 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಇದು ಭಾರತದ ಸಾಂಪ್ರದಾಯಿಕ ಫ್ಯಾಷನ್‌ ದಿರಿಸಿನ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಗಿಟ್ಟಿಸಿಕೊಂಡಿದೆ. ಅಷ್ಟೇ ಅಲ್ಲ, ಫ್ಯಾಷನ್‌ ಜಗತ್ತಿನಲ್ಲಿ ಸಾಕಷ್ಟು ಪ್ರಶಸ್ತಿಯ ಕಿರೀಟವನ್ನೂ ತನ್ನ ಮುಡಿಗೇರಿಸಿದೆ.
ಬಾಲಿವುಡ್‌ನ ಹಲವು ಚಲನಚಿತ್ರಗಳಿಗೆ ದಿರಿಸನ್ನೂ ಒದಗಿಸಿರುವ ಬೀಬಾ, ಅಮಿತಾಬ್‌ ಬಚ್ಚನ್‌ ನಟನೆಯ ಬಾಗ್‌ಬನ್‌, ಹೃತಿಕ್‌ ರೋಷನ್‌ ನಟನೆಯ ನ ತುಮ್‌ ಜಾನೋ ನ ಹಮ್‌ ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡಿದ ಹೆಗ್ಗಳಿಕೆಯೂ ಇದೆ. ಸದ್ಯ, ಮೀನಾ ಭಾರತದ ಶ್ರೀಮಂತ ಮಹಿಳಾ ಉದ್ಯಮಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕನಸು ಕಂಡರೆ, ದೊಡ್ಡ ಕನಸನ್ನೇ ಕಾಣಬೇಕು, ಅಷ್ಟೇ ಅಲ್ಲ, ಅದನ್ನು ನನಸಾಗಿಸಲು ಧೈರ್ಯ, ಸ್ಪೂರ್ತಿಯಾಗುವುದು ಇಂಥ ಯಶಸ್ವೀ ಮಹಿಳೆಯೇ ಎಂಬುದಕ್ಕೇ ನೇರ ನಿದರ್ಶನ ಮೀನಾ ಬಿಂದ್ರಾ!

ಇದನ್ನೂ ಓದಿ: Women’s Day 2024: ಮನೆಯ ಕಸದಿಂದ ಗೊಬ್ಬರ ತಯಾರಿಸುವ ಯಂತ್ರ; ಇದು ಮಹಿಳೆಯೊಬ್ಬರ ಆವಿಷ್ಕಾರ!

Exit mobile version