ವೈದ್ಯ ಜಗತ್ತು ಎಷ್ಟೇ ಮುಂದುವರಿದರೂ ಬಹುತೇಕ ಹೆಣ್ಣುಮಕ್ಕಳು ತಮ್ಮ ತಿಂಗಳ ಮುಟ್ಟಿನ ಸಂದರ್ಭ ನೋವು ಅನುಭವಿಸುವುದು (Menstrual Cramp) ಮಾತ್ರ ತಪ್ಪಿಲ್ಲ. ಋತುಚಕ್ರದ ಮೊದಲ ಎರಡರಿಂದ ಮೂರು ದಿನಗಳು ಅಸಾಧ್ಯ, ಸೊಂಟ ನೋವು, ಹೊಟ್ಟೆ ನೋವು ಅನುಭವಿಸುವ ಮಂದಿ ಅನೇಕರು. ಕೆಲವರಿಗೆ ಸಣ್ಣ ಪ್ರಮಾಣದ ನೋವಿದ್ದರೆ, ಇನ್ನೂ ಕೆಲವರಿಗೆ ತಡೆಯಲಸಾಧ್ಯವಾದ ನೋವು. ಹೇಳಿಕೊಳ್ಳಲಾಗದ ಸಂಕಟದಿಂದ ಅನೇಕರು ಹೊಟ್ಟೆ ಹಿಡಿದುಕೊಂಡೇ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಾರೆ. ಪ್ರತೀ ತಿಂಗಳು ಅಳುವವರಿಗೆ ಸಮಾಧಾನ ಮಾಡುವವರಾರು ಹೇಳಿ ಎಂದುಕೊಂಡು ಇದು ಪ್ರಕೃತಿ ನಿಯಮ ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡು ನೋವು ನುಂಗುತ್ತಾರೆ.
ಪುರುಷರಿಗೆ ಈ ನೋವಿನ ಆಳ ಅರ್ಥವಾಗದೆ ಇರಬಹುದು. ಆದರೆ, ಪ್ರತಿ ಐದು ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಅತ್ಯಂತ ಹೆಚ್ಚಿನ ನೋವು ಈ ಸಂದರ್ಭದಲ್ಲೇ ಇರುತ್ತದೆ ಹಾಗೂ ಅದು ಅವರ ನಿತ್ಯದ ಕಾಯಕದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂಬುದನ್ನೂ ಸಂಶೋಧನೆಗಳೂ ಕೂಡಾ ಪುಷ್ಟೀಕರಿಸಿವೆ. ಗರ್ಭಕೋಶದ ಸುತ್ತಮುತ್ತಲ ಮಾಂಸಖಂಡಗಳ ಸೆಳೆತ ಕೆಲವರಲ್ಲಿ ಮೊದಲ ದಿನ ಮಾತ್ರ ಇದ್ದರೆ ಇನ್ನೂ ಕೆಲವರಲ್ಲಿ ಎರಡರಿಂದ ಮೂರು ದಿನಗಳವರೆಗೂ ಇರುತ್ತದೆ. ಅಂದರೆ, ಒಳಗೇನೋ ಗರ್ಭಕೋಶಕ್ಕೆ ಸಂಬಂಧಿಸಿದ ತೊಂದರೆ ಇದೆ ಎಂದೇ ಇದರ ಅರ್ಥವಲ್ಲ. ಕೆಲವರಿಗೆ ಇರಬಹುದು, ಇನ್ನೂ ಕೆಲವರಿಗೆ ಇಲ್ಲದೆಯೂ ಇರಬಹುದು. ಹಾಗಾಗಿ ಹಿಂದಿನಿಂದಲೂ ಇಂಥ ನೋವುಗಳಿಗೆ ಮನೆಯಲ್ಲೇ ಹಿರಿಯರು ಹೇಳಿದ ಕೆಲವು ಮನೆಮದ್ದುಗಳನ್ನು ಮಾಡುವ ಮೂಲಕ ನೋವು ಶಮನ ಮಾಡಿಕೊಳ್ಳುವ ಅಥವಾ ಕೆಲವೊಮ್ಮೆ ನೋವು ನಿವಾರಕ ಗುಳಿಗೆಗಳ ಮೂಲಕ ನೋವು ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡುವುದು ಸಾಮಾನ್ಯ. ಹಾಗಾದರೆ ಬನ್ನಿ, ಯಾವೆಲ್ಲ ಮನೆಮದ್ದುಗಳ ಮೂಲಕ (Menstrual Cramp Home Remedies) ಋತುಚಕ್ರದ ಸಂದರ್ಭದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.
1. ಎಳ್ಳೆಣ್ಣೆಯಲ್ಲಿ ಅಭ್ಯಂಗ ಮಾಡುವ ಪದ್ಧತಿ ಆಯುರ್ವೇದದಲ್ಲಿದೆ. ಈ ಅಭ್ಯಂಗದಿಂದ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ. ಅಂತಹ ಸಮಸ್ಯೆಗಳ ಪೈಕಿ ಇದೂ ಕೂಡಾ ಒಂದು. ಎಳ್ಳೆಣ್ಣೆಯನ್ನು ಋತುಚಕ್ರದ ದಿನಗಳಲ್ಲಿ ಹೊಟ್ಟೆ ಹಾಗೂ ಕೆಳಹೊಟ್ಟೆಯ ಸುತ್ತ ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೆ ನೋವಿನಿಂದ ಸಾಕಷ್ಟು ಆರಾಮ ದೊರೆಯುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.
2. ಮೆಂತ್ಯ ಕಾಳುಗಳು ತೂಕ ಇಳಿಕೆ, ಪಿತ್ತಕೋಶ, ಕಿಡ್ನಿ, ಚರ್ಮ, ಕೂದಲಿಗೆ ಒಳ್ಳೆಯದು ಎಂಬ ವಿಚಾರ ನಮಗೆ ತಿಳಿದಿದೆ. ಆದರೆ ಇದೇ ಮೆಂತ್ಯಕಾಳು ಋತುಚಕ್ರದ ಸಂದರ್ಭದ ನೋವಿಗೂ ಒಳ್ಳೆಯದೆಂದು ಗೊತ್ತೇ? ಹೌದು. ಋತುಚಕ್ರದ ನೋವಿನ ದಿನಗಳಲ್ಲಿ ಸುಮಾರು 1 ಗಂಟೆಗಳ ಕಾಲ ಮೆಂತ್ಯ ಕಾಳನ್ನು ನೆನೆಸಿಟ್ಟು ಅದನ್ನು ಸೇವಿಸುವುದರಿಂದ ಈ ನೋವನ್ನು ಶಮನ ಮಾಡಿಕೊಳ್ಳಬಹುದು.
3. ಬಿಸಿಯಾದ ದ್ರವಾಹಾರ ಸೇವಿಸುವುದರಿಂದ ಹಾಗೂ ಬಿಸಿಬಿಸಿ ಹಬೆಯಾಡುವ ಸ್ನಾನ ಮಾಡುವುದರಿಂದಲೂ ನೋವಿಗೆ ಕೊಂಚ ಪರಿಹಾರ ಕಾಣಬಹುದು. ಬಿಸಿಬಿಸಿ ಶುಂಠಿ ಕರಿಮೆಣಸಿನ ಚಹಾ, ಪುದಿನ ಚಹಾ, ಗ್ರೀನ್ ಚಹಾ, ಜೀರಿಗೆ ಕಷಾಯ ಇತ್ಯಾದಿಗಳನ್ನೂ ಕುಡಿಯುವ ಮೂಲಕ ನೋವು ಕೊಂಚ ಹಗುರಾಗಬಹುದು. ಶುಂಠಿಗೆ ಪ್ರೊಸ್ಟಾಗ್ಲಾಂಡಿನ್‌ನ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ. ಅಷ್ಟೇ ಅಲ್ಲ, ಶುಂಠಿಯು ಏರುಪೇರಾಗಿರುವ ಋತುಚಕ್ರವನ್ನೂ ಸಮತೋಲನಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಜೀರಿಗೆಯು ರಿಲ್ಯಾಕ್ಸ್ ಮಾಡುವ ಗುಣವಿದ್ದು, ಈ ಸಂದರ್ಭದಲ್ಲಿ ಸೊಂಟ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಆರಾಮ ನೀಡುತ್ತದೆ.
4. ನಿಮ್ಮ ಋತುಚಕ್ರದ ದಿನಕ್ಕೆ ಸುಮಾರು ಒಂದು ವಾರ ಮೊದಲೇ ದಿನವೂ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಮುನ್ನಾದಿನವೇ ನೆನೆಸಿಟ್ಟ ದ್ರಾಕ್ಷಿ ಹಾಗೂ ಕೇಸರಿಯನ್ನು ತಿನ್ನಿ.
5. ನಿಮ್ಮ ನಿತ್ಯದ ಆಹಾರದಲ್ಲಿ ದಿನವೂ ಒಂದು ಮುಷ್ಟಿಯನ್ನಾದರೂ ಮೊಳಕೆ ಕಾಳುಗಳನ್ನು ಬೇಯಿಸಿ ತಿನ್ನಿ.
6. ವಾರದಲ್ಲಿ ಎರಡು ಬಾರಿಯಾದರೂ ಸಿಹಿಗೆಣಸು, ಸುವರ್ಣ ಗಡ್ಡೆ ಇತ್ಯಾದಿ ಗಡ್ಡೆಗೆಣಸುಗಳನ್ನು ಆಹಾರದಲ್ಲಿ ಬಳಸಿ.
7. ನಿತ್ಯವೂ ವ್ಯಾಯಾಮ ಮಾಡಿ. ವಾರಕ್ಕೆ ೧೫೦ ನಿಮಿಷವಾದರೂ ನಡೆಯಿರಿ. ಋತುಚಕ್ರದ ಸಂದರ್ಭವೂ ಸಾಧ್ಯವಾದಲ್ಲಿ ಕೆಲವು ಸರಳ ಆಸನಗಳನ್ನೂ ಮಾಡಬಹುದು. ಉದಾಹರಣೆಗೆ ಬಟರ್‌ಫ್ಲೈ ಪೋಸ್.
8. ಕ್ಯಾಲ್ಶಿಯಂ ಮಾತ್ರೆಯನ್ನು ಪ್ರತಿನಿತ್ಯವೂ ರಾತ್ರಿ ಮಲಗುವ ಮುನ್ನ ತಿನ್ನಿ. ತೆಗೆದುಕೊಳ್ಳುವ ಮುನ್ನ ಈ ಬಗ್ಗೆ ವೈದ್ಯರಿಂದ ಸಲಹೆ ಪಡೆಯಿರಿ.
ಇದನ್ನೂ ಓದಿ: Menopause and Bone Loss: ಋತುಸ್ರಾವ ನಿಂತ ಬಳಿಕ ಮೂಳೆ ದುರ್ಬಲವಾಗುವುದು ಈ ಕಾರಣಕ್ಕೆ